More

    ಗೋ ಸಾಗಾಟ ತಡೆ ಕೇಸ್ ವಾಪಸ್ ಚಿಂತನೆ

    ಮಂಗಳೂರು/ಉಡುಪಿ: ಗೋ ಅಕ್ರಮ ಸಾಗಾಟಕ್ಕೆ ತಡೆ ಹಾಗೂ ಗೋಸಾಗಾಟ ನಡೆಸಿದವರ ಮೇಲೆ ಹಲ್ಲೆ ನಡೆಸಿರುವಂತಹ ಪ್ರಕರಣ ಹಿಂಪಡೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪಶುಸಂಗೋಪನೆ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಗೋಸಂರಕ್ಷಣೆಗಾಗಿ ಕಾರ್ಯಕರ್ತರು ಗೋಸಾಗಾಟ ತಡೆದ ವೇಳೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೆ ಅದನ್ನು ತೆರವುಗೊಳಿಸಬೇಕು ಎಂದಿದ್ದೇನೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ. ಗೃಹಸಚಿವರ ಜತೆಗೆ ಚರ್ಚಿಸಬೇಕಿದೆ ಎಂದರು.

    ಜಾಗೃತಿ ಮೂಡಿಸಿ: ಕೃಷಿ ಪ್ರಧಾನ ರಾಷ್ಟ್ರ ಭಾರತದಲ್ಲಿ ಗೋಮಾತೆಗೆ ದೇವರ ಸ್ಥಾನ ನೀಡಿದ್ದು, ಗೋರಕ್ಷಣೆ ನಮ್ಮೆಲ್ಲರ ಸಂಕಲ್ಪವಾಗಿದೆ. ಇದರ ಭಾಗವಾಗಿಯೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದೆ. ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪೊಲೀಸ್, ಕಂದಾಯ ಇಲಾಖೆಯಿಂದ ಇದಕ್ಕೆ ಸಹಕಾರ ಬೇಕು. ಕಾಯ್ದೆಯಲ್ಲಿ ದಂಡ ಪ್ರಮಾಣ ಹೆಚ್ಚಾಗಿದೆ. 13 ವರ್ಷಕ್ಕಿಂತ ಮೇಲ್ಪಟ್ಟ ಜಾನುವಾರುಗಳನ್ನು ವೈದ್ಯರ ಪ್ರಮಾಣಪತ್ರ ಇದ್ದರೆ ಮಾತ್ರ ವಧಿಸಲು ಸಾಧ್ಯವಿದೆ. ಯಾವುದೇ ಕಾರಣಕ್ಕೂ ಹಸು ಕಸಾಯಿಖಾನೆ ಸೇರಬಾರದು. ದೂರು ಬಂದಾಗ ಪೊಲೀಸರು ತಕ್ಷಣ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕಿದೆ ಎಂದರು.

    ತಾಲೂಕಿಗೊಂದು ಗೋಶಾಲೆ: ಬೀಡಾಡಿ ಜಾನುವಾರುಗಳ ಪಾಲನೆಗಾಗಿ ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ ಸರ್ಕಾರಿ ಗೋಶಾಲೆಗಳನ್ನು ತೆರೆಯುವ ಚಿಂತನೆ ಸರ್ಕಾರಕ್ಕಿದೆ. ಮುಖ್ಯಮಂತ್ರಿಗಳಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಚವ್ಹಾಣ್ ತಿಳಿಸಿದರು. ಗೋಶಾಲೆಗಳಿಗೂ ಪ್ರಸ್ತುತ ನೀಡುತ್ತಿರುವ ಅನುದಾನ ಹೆಚ್ಚಳಕ್ಕೆ ಯತ್ನಿಸಲಾಗುವುದು. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಬಜೆಟ್‌ನಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ಹಾಲು ಕುಡಿಯಲಿಲ್ಲವೇ ವಿರೋಧ ಯಾಕೆ?: ಕಾಂಗ್ರೆಸ್‌ನವರು ಗೋಹತ್ಯಾ ನಿಷೇಧ ಕಾಯ್ದೆ ವಿರೋಧಿಸುತ್ತಿದ್ದಾರೆ. ಅವರು ದನದ ಹಾಲು, ಮೊಸರು ತುಪ್ಪ ಸೇವಿಸಿಲ್ಲವೇ? ಮೂಕಪ್ರಾಣಿ ಹತ್ಯೆ ತಡೆಯುವ ಕಾಯ್ದೆಗೆ ವಿರೋಧ ಸೂಚಿಸುವುದು ಯಾಕೆ ಎಂದು ಚವ್ಹಾಣ್ ಪ್ರಶ್ನಿಸಿದರು.

    ವಿಶೇಷ ಕೋರ್ಟ್, ಆಯೋಗ, ವಾರ್‌ರೂಂ: ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ವಿಶೇಷ ಕೋರ್ಟ್ ರಚಿಸಲಾಗುವುದು. ಮುಂದಿನ ದಿನಗಳಲ್ಲಿ ಗೋಸೇವಾ ಆಯೋಗ ರಚಿಸಲಾಗುತ್ತದೆ. ಜನತೆ ದೂರು ನೀಡಲು ಬೆಂಗಳೂರಿನಲ್ಲಿ ವಾರ್‌ರೂಂ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಗೋಹತ್ಯೆ ನಿಷೇಧ ಮಾಹಿತಿಗೆ ಗ್ರಾಮಸಭೆ: ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸರಿಯಾಗಿ ತಿಳಿದುಕೊಂಡು ಅನುಷ್ಠಾನ ಮಾಡುವ ಜವಾಬ್ದಾರಿ ಇಲಾಖೆ ಅಧಿಕಾರಿಗಳದ್ದಾಗಿದೆ. ಪ್ರತಿ ಗ್ರಾಮಗಳಲ್ಲಿ ಅಧಿಕಾರಿಗಳು ಪ್ರತ್ಯೇಕ ಗ್ರಾಮಸಭೆಗಳನ್ನು ಆಯೋಜಿಸಿ ಕಾಯ್ದೆ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ನೀಡಿ, ಹೈನುಗಾರರ ಇತರೆ ಸಮಸ್ಯೆಗಳನ್ನು ಆಲಿಸಬೇಕು ಎಂದು ಸಚಿವ ಚವ್ಹಾಣ್ ಸೂಚಿಸಿದರು.

    ಪಶುಚಿಕಿತ್ಸಾ ಆಂಬುಲೆನ್ಸ್: ರಾಜ್ಯದಲ್ಲೇ ಮೊದಲ ಬಾರಿಗೆ ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ಆಂಬುಲೆನ್ಸ್ ಆರಂಭಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಆಂಬುಲೆನ್ಸ್‌ಗೆ ಸಚಿವ ಚವ್ಹಾಣ್ ಚಾಲನೆ ನೀಡಿದರು. ಸುಸಜ್ಜಿತ ಆಂಬುಲೆನ್ಸ್‌ನಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರಕ್ರಿಯಾ ಘಟಕ, ಪ್ರಯೋಗಶಾಲೆ, ಸ್ಕಾೃನಿಂಗ್ ಉಪಕರಣ ಅಳವಡಿಕೆ ಅವಕಾಶವಿದೆ. 250 ಲೀಟರ್ ನೀರಿನ ಟ್ಯಾಂಕ್, ಶಸ್ತ್ರಚಿಕಿತ್ಸಾ ಟೇಬಲ್, ಎಸಿ ವ್ಯವಸ್ಥೆ, ವೈದ್ಯರು, ಸಿಬ್ಬಂದಿಗೆ ಆಸನ, ವಾಶ್ ಬೇಸಿನ್, ಎಲ್‌ಇಡಿ ಲೈಟ್, ಆಮ್ಲಜನಕ ಸಪೋರ್ಟ್ ವ್ಯವಸ್ಥೆ, ಫೈರ್ ಎಕ್ಸ್‌ಟಿಂಗ್ವಿಷರ್, ಸರ್ಜಿಕಲ್ ಕಿಟ್, ಪೋಸ್ಟ್‌ಮಾರ್ಟಂ ಕಿಟ್ ಮತ್ತಿತರ ಉಪಕರಣ ವ್ಯವಸ್ಥೆ ಇದೆ. ಇದಕ್ಕಾಗಿ ಪಶುಪಾಲಕರ ಸಹಾಯವಾಣಿ 1962 ವ್ಯವಸ್ಥೆಯನ್ನೂ ಮಾಡಲಾಗಿದೆ. 15 ಜಿಲ್ಲೆಗಳಲ್ಲಿ ಆರಂಭಿಸಲಾಗಿದ್ದು, ಮುಂದೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಕುದ್ರೋಳಿಯಲ್ಲಿ ನಾಕಾಬಂಧಿ: ಕುದ್ರೋಳಿ ಭಾಗದ ಹಲವು ದಾರಿಗಳ ಮೂಲಕ ರಾತ್ರಿ ಗೋಸಾಗಾಟ ಆಗುವ ಬಗ್ಗೆ ದೂರುಗಳಿವೆ. ಕುದ್ರೋಳಿ ಬಳಿ ಪೊಲೀಸರು ಸರಿಯಾಗಿ ನಾಕಾಬಂದಿ ನಡೆಸಬೇಕು. ಹೀಗೆ ಮಾಡಿದರೆ ಒಂದು ತಿಂಗಳಲ್ಲೇ ಶೇ.60ರಷ್ಟು ಅಕ್ರಮ ಚಟುವಟಿಕೆ ಹತ್ತಿಕ್ಕಬಹುದು ಎಂದು ಸಚಿವ ಚವ್ಹಾಣ್ ಪೊಲೀಸರಿಗೆ ಪ್ರತ್ಯೇಕವಾಗಿ ಸೂಚಿಸಿದರು. ಜಿಲ್ಲೆಯಲ್ಲಿ ಕಾರ್ಯಾಚರಿಸುವ ಪ್ರಿವೆನ್ಷನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ತಂಡದ ಸದಸ್ಯರಿಗೆ ಐಡಿ ಕಾರ್ಡ್ ನೀಡಬೇಕು. ಇಲ್ಲವಾದರೆ ಅವರ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂದು ಸೂಚನೆಯಿತ್ತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts