More

    ಕರೊನಾದಿಂದ ಮೃತರು 17 ಮಾತ್ರ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಕೋವಿಡ್ ಏರಿಕೆ ಹಂತದಲ್ಲಿ ಸಾವಿನಲ್ಲೂ ಏರಿಕೆಯಾಗಿ ಗಮನ ಸೆಳೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುದ್ಧ ಕರೊನಾದಿಂದಲೇ ಮೃತರಾದವರು ಕೇವಲ 17 ಮಂದಿ.
    ಜಿಲ್ಲೆಯಲ್ಲಿ ಕೋವಿಡ್ ಬಂದು ಒಂದು ವರ್ಷ ಆದ ಬಳಿಕ ಒಟ್ಟು ಸಾವಿನ ಸಂಖ್ಯೆ 742 ಆಗಿದ್ದು, ಇವುಗಳನ್ನು ವೈದ್ಯರ ತಂಡ ಡೆತ್ ಆಡಿಟ್ ಮಾಡಿ ವಿಶ್ಲೇಷಣೆಗೊಳಪಡಿಸಿದೆ. ಅದರಂತೆ ಕೋವಿಡ್ ಸಾವನ್ನೂ ವರ್ಗೀಕರಣಗೊಳಿಸಲಾಗಿದೆ. ಅದರಲ್ಲಿ ಕೋವಿಡ್-19ನಿಂದ ಸಾವು 17, ಕೋ ಇನ್ಸಿಡೆಂಟಲ್ ಸಾವು 188, ಅಸೋಸಿಯೇಟೆಡ್ ಸಾವು 533, ನಾನ್ ಕೋವಿಡ್ ಸಾವು 2, ಪೋಸ್ಟ್ ಕೋವಿಡ್ ಸಾವು 1 ಹಾಗೂ ಹೋಂ ಐಸೊಲೇಶನ್ ಸಾವು 1 ಎಂದು ಪ್ರತ್ಯೇಕಿಸಲಾಗಿದೆ.

    ಕೋ ಇನ್ಸಿಡೆಂಟಲ್ ಸಾವು ಎಂದರೆ ಕೋವಿಡ್ ಇದ್ದವರು ಬಳಿಕ ಬೇರೆ ರೀತಿಯಲ್ಲಿ ಮೃತಪಟ್ಟಿರುವುದು. ಉದಾಹರಣೆಗೆ ಅಪಘಾತಕ್ಕೊಳಗಾಗಿ ಮೃತಪಟ್ಟರೆ ಅದು ಕೂಡ ಕೋವಿಡ್‌ಗೇ ಸೇರ್ಪಡೆಯಾಗಿದೆ. ಅಸೋಸಿಯೇಟೆಡ್ ಎಂದರೆ ಕೋಮಾರ್ಬಿಡ್ ಅಥವಾ ಇತರ ಕಾಯಿಲೆಗಳಿರುವವರು (ಉದಾ: ಡಯಾಬಿಟಿಸ್, ಹೃದ್ರೋಗ, ರಕ್ತದೊತ್ತಡ) ಅದರೊಂದಿಗೆ ಕೋವಿಡ್ ಸೇರಿ ಮೃತಪಟ್ಟವರು.

    ಗಂಡಸರು ಜಾಸ್ತಿ: ದ.ಕ. ಜಿಲ್ಲೆಯ ಮೃತರ ವಿವರಗಳನ್ನು ವಿಶ್ಲೇಷಿಸಿದಾಗ ಒಟ್ಟು ಮೃತ 742ರಲ್ಲಿ ಪುರುಷರು 520 ಆಗಿದ್ದರೆ ಮಹಿಳೆಯರ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆ, 222 ಮಾತ್ರ. ಇನ್ನು ಅವರ ವಯೋಮಾನ ನೋಡಿದರೆ ಸಾರ್ವತ್ರಿಕವಾಗಿ ಇರುವಂತೆಯೇ 40 ವರ್ಷ ಮೇಲ್ಪಟ್ಟವರಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ.

    ಹೋಂ ಐಸೊಲೇಶನ್‌ನಲ್ಲಿ ಒಂದು ಸಾವು: ಸಾಮಾನ್ಯವಾಗಿ ಹೋಂ ಐಸೊಲೇಶನ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲದವರಿಗೆ ಮಾತ್ರವೇ ಇರಲು ಅವಕಾಶ. ಆದರೆ ಕೊವಿಡ್‌ನಿಂದ ಚೇತರಿಸಿಕೊಂಡವರೊಬ್ಬರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

    ದ.ಕ. ಕೋವಿಡ್ ಮೃತರ ಲೆಕ್ಕ:
    ವಯಸ್ಸು ಮಹಿಳೆ ಪುರುಷ
    0-5 1 2
    5-10 0 0
    11-15 0 1
    16-20 1 0
    21-30 3 7
    31-40 11 35
    41-50 22 54
    51-60 40 106
    61-70 69 163
    71-80 50 112
    81-90 22 38
    91+ 3 2
    ಒಟ್ಟು 222 520
    …………………..
    ಮಾನಸಿಕ ಒತ್ತಡ ದೂರ: ಈ ವರ್ಷದಿಂದೀಚೆಗೆ ಪ್ರಕರಣಗಳು ಬಂದಿರುವುದು ಕಡಿಮೆಯಾಗಿದೆ, ಹಾಗಾಗಿ ಸಾವಿನ ಸಂಖ್ಯೆಯೂ ಕಡಿಮೆ. ಜನವರಿಯಲ್ಲಿ 3, ಫೆಬ್ರವರಿಯಲ್ಲಿ 1 ಹಾಗೂ ಮಾರ್ಚ್‌ನಲ್ಲಿ ಇದುವರೆಗೆ 2 ಮಂದಿ ಮೃತಪಟ್ಟಿದ್ದಾರೆ.
    ಸಕ್ರಿಯ ಕೋವಿಡ್ ಪ್ರಕರಣಗಳು ಏರಿಕೆ ಹಾದಿಯಲ್ಲಿದ್ದರೂ, 500 ಆಸುಪಾಸಿನಲ್ಲೇ ಇದೆ. ಇವರಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 100ರಷ್ಟು ಮಾತ್ರ. ಬೆರಳೆಣಿಕೆ ಮಂದಿ ಮಾತ್ರ ವೆಂಟಿಲೇಟರ್‌ನಲ್ಲಿದ್ದಾರೆ.
    ರೋಗಿಗಳೀಗ ಹಿಂದಿಗಿಂತ ಹೆಚ್ಚು ಆರಾಮದಲ್ಲಿದ್ದಾರೆ. ಯಾಕೆಂದರೆ ಬಹುತೇಕ ಮಂದಿ ಹೋಂ ಐಸೊಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ತಮ್ಮವರೊಂದಿಗೆ ಇರುವುದಕ್ಕೆ, ಮಾತನಾಡುವುದಕ್ಕೆ ಸಾಧ್ಯ, ಮನೆಯ ಆಹಾರವೂ ಸಿಗುವುದರಿಂದ ಯಾವುದೇ ಮಾನಸಿಕ ಹಿಂಸೆ ಇರುವುದಿಲ್ಲ ಎನ್ನುತ್ತಾರೆ ಕೊವಿಡ್ ವೈದ್ಯರು.

    ಉಡುಪಿಯಲ್ಲಿ ನಾಲ್ವರು ಮಾತ್ರ ಸಾವು: ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಹೆಸರಿನಲ್ಲಿರುವ ಮರಣವನ್ನಪ್ಪಿದವರ ಒಟ್ಟು ಸಂಖ್ಯೆ 190. ಇದರಲ್ಲಿ ಕೇವಲ ಕರೊನಾ ಕಾರಣದಿಂದಲೇ ಮೃತಪಟ್ಟವರು ನಾಲ್ವರು ಮಾತ್ರ. ಒಟ್ಟು ಮೃತರಾದವರಲ್ಲಿ 139 ಪುರುಷರು ಮತ್ತು 51 ಮಂದಿ ಮಹಿಳೆಯರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts