More

    ಕೋವಿಡ್ ನಿಯಮ ಉಲ್ಲಂಘಿಸಿ ದಂಡ ಪಾವತಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ಇಲ್ವಾ- ಸರ್ಕಾರಕ್ಕೆ ಹೈ ಕೋರ್ಟ್ ಪ್ರಶ್ನೆ

    ಬೆಂಗಳೂರು: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದಂಡ ಪಾವತಿಸಿರುವ ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗಳ ವಿರುದ್ಧ ‘ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ’ ನಿಯಮಗಳ ಪ್ರಕಾರ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

    ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.
    ‘ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ-2020’ರ ನಿಯಮಗಳ ಪ್ರಕಾರ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಪ್ರಕರಣಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, 50 ಸಾವಿರದಿಂದ 2 ಲಕ್ಷದ ವರೆಗೆ ದಂಡ ವಿಧಿಸುವ ಜತೆಗೆ, 3 ತಿಂಗಳಿಂದ 5 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿದೆ. ಚುನಾವಣಾ ರ‌್ಯಾಲಿ ಸೇರಿ ಹಲವು ಪ್ರಕರಣಗಳಲ್ಲಿ ಗಣ್ಯರು ಹಾಗೂ ರಾಜಕಾರಣಿಗಳು ನಿಯಮ ಉಲ್ಲಂಘನೆ ಮಾಡಿದ್ದಾರೆ. ಮಾಸ್ಕ್ ಧರಿಸದಿರುವುದು, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳದಿರುವುದು ವ್ಯಾಪಕವಾಗಿ ಕಂಡು ಬಂದಿದೆ. ಹೀಗಿರುವಾಗ ಅವರ ವಿರುದ್ಧ ಕಾಯ್ದೆಯ ನಿಯಮಗಳ ಅನುಸಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

    ಕೆಲವರ ವಿರುದ್ಧ ಮಾತ್ರ ಎನ್‌ಸಿಆರ್ ದಾಖಲಿಸಿ, ಸಣ್ಣ ಮೊತ್ತದ ದಂಡವನ್ನು ವಿಧಿಸಲಾಗಿದೆ. ದಂಡ ಕಟ್ಟಿದ್ದಾರೆಂದರೆ, ಅವರ ವಿರುದ್ಧದ ಆರೋಪ ಒಪ್ಪಿಕೊಂಡಂತಾಗುತ್ತದೆ. ಆದರೂ ಅವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ಕಾಯ್ದೆಯ ಅನುಸಾರ ಕ್ರಮ ಕೈಗೊಂಡಿಲ್ಲವೇಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ, ಕಾಯ್ದೆ ಅಡಿ ಕ್ರಮ ಜರುಗಿಸುವ ಕುರಿತು ಮುಂದಿನ ವಿಚಾರಣೆ ವೇಳೆ ನಿಲುವು ತಿಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು. ಇದೇ ವೇಳೆ, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳ ರ‌್ಯಾಲಿಗೆ ಪೊಲೀಸರು ಅನುಮತಿ ನೀಡುತ್ತಾರೆ. ಆದ್ದರಿಂದ, ರ‌್ಯಾಲಿ ಸಂದರ್ಭಗಳಲ್ಲಿ ನಿಯಮ ಪಾಲನೆಯಾಗದಿದ್ದರೆ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಪೊಲೀಸರೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಪೀಠ, ವಿಚಾರಣೆಯನ್ನು ನ.19ಕ್ಕೆ ಮುಂದೂಡಿತು.

    ಮಾರ್ಷಲ್ಗಳ ವೇತನ ಪಾವತಿಗೆ ಸೂಚನೆ: ವಿಚಾರಣೆ ವೇಳೆ, ಬಿಬಿಎಂಪಿ ಮಾರ್ಷಲ್ಗಳಿಗೆ ವೇತನ ಪಾವತಿಸದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೀಠ, ಕೂಡಲೇ ಮಾರ್ಷಲ್ಗಳಿಗೆ ಸಂಬಳ ಪಾವತಿಸುಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾರ್ಷಲ್ಗಳು ಕೋವಿಡ್ ನಿಯಮಗಳನ್ನು ಜಾರಿ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದ, ಅವರಿಗೆ ಆಗಸ್ಟ್‌ನಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಶೀಘ್ರವಾಗಿ ಪಾವತಿಸಬೇಕು. ಇನ್ನು ಮುಂದೆ ವೇತನ ಪಾವತಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿಗೆ ನಿರ್ದೇಶಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts