More

    ಜಿಲ್ಲೆಯಲ್ಲಿ ಕಾಂಗ್ರೆಸ್ ಹಿಡಿತ, ಬಿಜೆಪಿಗೆ ಹಿನ್ನಡೆ

    ದಾವಣಗೆರೆ : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೋಟೆಯನ್ನು ಕಾಂಗ್ರೆಸ್ ನುಚ್ಚುನೂರು ಮಾಡಿದೆ. ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6ರಲ್ಲಿ ಗೆಲ್ಲುವ ಮೂಲಕ ಹಿಡಿತ ಸಾಧಿಸಿದೆ.
     2018ರಲ್ಲಿ ಬಿಜೆಪಿ 5, ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿ ಕೈ ಪಾಳಯ ಮೇಲುಗೈ ಸಾಧಿಸಿ ಕಮಲ ಪಡೆಯನ್ನು ಒಂದು ಅಂಕಿಗೆ ಕಟ್ಟಿಹಾಕಿದೆ. ಮತ್ತೆ ಖಾತೆ ತೆರೆಯುವ ಜೆಡಿಎಸ್ ಕನಸು ನನಸಾಗಿಲ್ಲ.
     ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ, 92 ವರ್ಷದ ಡಾ.ಶಾಮನೂರು ಶಿವಶಂಕರಪ್ಪ ಪುನರಾಯ್ಕೆಯಾಗಿದ್ದು 6ನೇ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಸೋಲು ಕಂಡಿದ್ದಾರೆ.
     ದಾವಣಗೆರೆ ಉತ್ತರದಲ್ಲಿ ಮಾಜಿ ಸಚಿವ, ಕಾಂಗ್ರೆಸ್‌ನ ಎಸ್.ಎಸ್. ಮಲ್ಲಿಕಾರ್ಜುನ್ ಕಳೆದ ಬಾರಿಯ ಸೋಲಿನಿಂದ ಹೊರ ಬಂದಿದ್ದು ಬಿಜೆಪಿಯ ಲೋಕಿಕೆರೆ ನಾಗರಾಜ್ ಅವರನ್ನು ಪರಾಭವಗೊಳಿಸಿ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
     ಹೈವೋಲ್ಟೇಜ್ ಕ್ಷೇತ್ರವಾದ ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ ಪರಾಭವಗೊಂಡಿದ್ದು ಕಾಂಗ್ರೆಸ್‌ನ ಡಿ.ಜಿ. ಶಾಂತನಗೌಡ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
     ಅಡಕೆನಾಡು ಚನ್ನಗಿರಿಯಲ್ಲಿ ಹೊಸ ಮುಖ, ಕಾಂಗ್ರೆಸ್‌ನ ಬಸವರಾಜ ಶಿವಗಂಗಾ ಗೆಲುವು ಸಾಧಿಸಿದ್ದಾರೆ. ಪ್ರಬಲ ಪೈಪೋಟಿ ನೀಡಿದ್ದ ಪಕ್ಷೇತರ ಅಭ್ಯರ್ಥಿ, ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಮಲ್ಲಿಕಾರ್ಜುನ್ ಸೋಲು ಕಂಡಿದ್ದಾರೆ. ಬಿಜೆಪಿಯ ಎಚ್.ಎಸ್. ಶಿವಕುಮಾರ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
     ಹರಿಹರದಲ್ಲಿ ಬಿಜೆಪಿಯ ಮಾಜಿ ಶಾಸಕ ಬಿ.ಪಿ. ಹರೀಶ್, ಕಾಂಗ್ರೆಸ್‌ನ ಶ್ರೀನಿವಾಸ್ ನಂದಿಗಾವಿ ಅವರನ್ನು ಸೋಲಿಸಿದ್ದು, ಜೆಡಿಎಸ್‌ನ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ 3ನೇ ಸ್ಥಾನ ಪಡೆದಿದ್ದಾರೆ.
     ಮಾಯಕೊಂಡದಲ್ಲಿ ಕಾಂಗ್ರೆಸ್‌ನ ಕೆ.ಎಸ್. ಬಸವಂತಪ್ಪ ಗೆಲುವು ದಾಖಲಿಸಿದ್ದಾರೆ. ಅವರಿಗೆ ಬಿಜೆಪಿಯ ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಪಕ್ಷೇತರ ಅಭ್ಯರ್ಥಿ ಪುಷ್ಪಾ ವಾಗೀಶಸ್ವಾಮಿ ಪ್ರಬಲ ಪೈಪೋಟಿ ನೀಡಿದ್ದರು.
     ಜಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಪಿಯ ಎಸ್.ವಿ. ರಾಮಚಂದ್ರಗೆ ಸೋಲಾಗಿದ್ದು ಕಾಂಗ್ರೆಸ್‌ನ ದೇವೇಂದ್ರಪ್ಪ ಚುನಾಯಿತರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ, ಮಾಜಿ ಶಾಸಕ ಎಚ್.ಪಿ. ರಾಜೇಶ್ 3ನೇ ಸ್ಥಾನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts