More

    ಅವಶ್ಯಕತೆ ಇರುವೆಡೆ ಲಲಿತ ಕಲೆಗಳ ಪರೀಕ್ಷಾ ಕೇಂದ್ರ: ಗಂಗೂಬಾಯಿ ಹಾನಗಲ್ ವಿವಿ ಕುಲಪತಿ ನಾಗೇಶ್ ಬೆಟ್ಟಕೋಟೆ ಮಾಹಿತಿ

    ದಾವಣಗೆರೆ: ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಲಲಿತ ಕಲೆಗಳ ಪರೀಕ್ಷಾ ಕೇಂದ್ರ ತೆರೆಯಲಾಗುವುದು ಎಂದು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ಬೆಟ್ಟಕೋಟೆ ಹೇಳಿದರು.

    ದಾವಣಗೆರೆ ದೃಶ್ಯಕಲಾ ಕಾಲೇಜಿನಲ್ಲಿ ಶನಿವಾರ ರಾಜ್ಯ ಮಟ್ಟದ ಪರೀಕ್ಷೆಗಳ ಪರೀಕ್ಷಕರ, ಮಾರ್ಗದರ್ಶಕರ, ಗುರುಗಳ ದಾಖಲಾತಿ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

    ಶಿಕ್ಷಕರ ನೋಂದಣಿ ದಾಖಲೆ ಪರಿಶೀಲನೆ ಪೂರ್ಣಗೊಂಡ ಬಳಿಕ ಪರೀಕ್ಷಾ ಕೇಂದ್ರ ನಿಗದಿ ಪ್ರಕ್ರಿಯೆ ಆರಂಭವಾಗಲಿದೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಡಿ ಕಳೆದ ಸಾಲಿನಲ್ಲಿ ಪರೀಕ್ಷೆ ಬರೆದು ಅನುತ್ತೀರ್ಣರಾದವರ ಫಲಿತಾಂಶ ದಾಖಲಾತಿ ವಿವಿಗೆ ಹಸ್ತಾಂತರವಾದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.

    ಅವಶ್ಯಕತೆ ಇರುವೆಡೆ ಲಲಿತ ಕಲೆಗಳ ಪರೀಕ್ಷಾ ಕೇಂದ್ರ: ಗಂಗೂಬಾಯಿ ಹಾನಗಲ್ ವಿವಿ ಕುಲಪತಿ ನಾಗೇಶ್ ಬೆಟ್ಟಕೋಟೆ ಮಾಹಿತಿ

    ದಾಖಲಾತಿ ಪರಿಶೀಲನೆ
    ರಾಜ್ಯದಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿ ಹಾಗೂ ಶಿಕ್ಷಕರ ದಾಖಲಾತಿ ಪರಿಶೀಲನೆ ನಡೆಯುತ್ತಿದೆ. ಶನಿವಾರ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ನೋಂದಾಯಿತರ ದಾಖಲಾತಿ ಪರಿಶೀಲನೆ ಮಾಡಲಾಯಿತು.

    ಈಗಾಗಲೇ ಮೈಸೂರು, ಮಂಗಳೂರು, ಧಾರವಾಡ, ಶಿವಮೊಗ್ಗ, ದಾವಣಗೆರೆ ವಿಭಾಗಗಳಲ್ಲಿ ವಿಶ್ವ ವಿದ್ಯಾಲಯದ ತಾಂತ್ರಿಕ ವರ್ಗ ಸ್ವತಃ ತೆರಳಿ ಪರಿಶೀಲನೆ ಕೈಗೊಂಡಿದೆ. ಏ. 17 ರ ಬಳಿಕ ಬೆಂಗಳೂರಿನಲ್ಲಿ ದಾಖಲಾತಿ ಪರಿಶೀಲನೆ ನಂತರ ಎಲ್ಲೆಡೆಯ ಅಂಕಿ ಸಂಖ್ಯೆ ಕ್ರೋಡೀಕರಿಸಿ ಪರೀಕ್ಷಾ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಬೆಟ್ಟಕೋಟೆ ತಿಳಿಸಿದರು.

    ಸ್ನಾತಕ, ಸ್ನಾತಕೋತ್ತರ ಪರೀಕ್ಷೆ
    ವಿವಿಯಿಂದ ಮೊದಲ ಬಾರಿಗೆ ಜೂನಿಯರ್, ಸೀನಿಯರ್, ವಿದ್ವತ್ ಅಲ್ಲದೆ, ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 17,670 ಮಂದಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಪರೀಕ್ಷಾ ಕಾರ್ಯಕ್ಕಾಗಿ ಸಾಫ್ಟ್ೃವೇರ್ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ ಹೆಸರು ನೋಂದಾಯಿಸಿಕೊಂಡ 3560 ಶಿಕ್ಷಕರು, ಅದರಲ್ಲಿ ಪರೀಕ್ಷಕರಾಗಲು ಸಿದ್ಧರಿರುವವರ ದಾಖಲಾತಿ ಪರಿಶೀಲನೆ ನಡೆಸಲಾಗಿದೆ ಎಂದರು.

    40 ಸಂಸ್ಥೆಗಳ ಒಡಂಬಡಿಕೆ :
    ಛತ್ತೀಸ್‌ಗಢದ ಇಂದಿರಾಗಾಂಧಿ ಸಂಗೀತ ವಿವಿ ನಂತರ ದೇಶದಲ್ಲಿ ಸಂಗೀತಕ್ಕಾಗಿ ಕಾರ್ಯಪ್ರವೃತ್ತವಾದ ವಿವಿ ಎಂದರೆ ಅದು ಕರ್ನಾಟಕದ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಎಂದು ಕುಲಪತಿ ಹೇಳಿದರು.

    ಇದರ ಕಾರ್ಯವಿಧಾನದ ಬಗ್ಗೆ ರಾಜ್ಯಪಾಲರು ಒಪ್ಪಿದ ಬಳಿಕ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಗುರುಕುಲ ಹಾಗೂ ಅಕಾಡೆಮಿಕ್ ಒಳಗೊಂಡ ಹೈಬ್ರೀಡ್ ರೀತಿಯಲ್ಲಿ ವಿವಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ 40 ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಬೆಂಗಳೂರಿನ ಹೆಸರಾಂತ ಸಂಗೀತ ಶಾಲೆಗಳು ಸೇರಿವೆ ಎಂದು ಮಾಹಿತಿ ನೀಡಿದರು.

    ನೀತಿ ಸಂಹಿತೆ ಮುಗಿದ ಬಳಿಕ ಪರೀಕ್ಷೆ
    ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿದ್ದ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯನ್ನು ಈ ವರ್ಷ ವಿವಿ ವಹಿಸಿಕೊಂಡಿದೆ. ಚುನಾವಣೆ ನೀತಿಸಂಹಿತೆ ಮುಗಿಯುತ್ತಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಕುಲಪತಿ ಪ್ರೊ. ನಾಗೇಶ್ ಬೆಟ್ಟಕೋಟೆ ತಿಳಿಸಿದರು.

    ಪ್ರಸಕ್ತ ಸಾಲಿನಲ್ಲಿ ಪರೀಕ್ಷೆಯನ್ನು ಹೆಚ್ಚು ವೃತ್ತಿಪರವಾಗಿ ನಡೆಸಲಾಗುತ್ತಿದ್ದು, ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts