More

    ಲಸಿಕೆಗೆ ಕೌಂಟ್​ಡೌನ್: ಕೊವ್ಯಾಕ್ಸಿನ್, ಕೋವಿಶೀಲ್ಡ್ ತುರ್ತು ಬಳಕೆಗೆ ಓಕೆ; ಶೀಘ್ರ ಜನರಿಗೆ ಲಭ್ಯ

    ನವದೆಹಲಿ: ವಿಶ್ವವನ್ನು ಕಾಡುತ್ತಿರುವ ಕರೊನಾ ಮಹಾಮಾರಿ ನಿವಾರಣೆಗೆ ಭಾರತದಲ್ಲಿ ತಯಾರಾಗಿರುವ ಎರಡು ಲಸಿಕೆಗಳ ತುರ್ತು ಬಳಕೆಗೆ ತಜ್ಞರ ಸಮಿತಿ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಭಾರತ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಕೂಡ ಭಾನುವಾರ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಮೂಲಕ ಕರೊನಾ ಲಸಿಕೆಗಾಗಿ ಭಾರತದ ಕಾಯುವಿಕೆ ಅಂತ್ಯಗೊಂಡಂತಾಗಿದೆ. ಜತೆಗೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಬಹುತೇಕ ನಿರ್ಣಾಯಕ ಹಂತಕ್ಕೆ ತಲುಪಿದೆ.

    ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಜಂಟಿಯಾಗಿ ತಯಾರಿಸಿರುವ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್ ಹಾಗೂ ಆಕ್ಸ್​ಫರ್ಡ್-ಅಸ್ಟ್ರಾಜೆನಿಕಾದ ಕೋವಿಶೀಲ್ಡ್ ತುರ್ತು ಬಳಕೆಗೆ ಭಾನುವಾರ ಅನುಮೋದನೆ ಸಿಕ್ಕಿದೆ. ದೇಶಾದ್ಯಂತ ಶನಿವಾರ ಲಸಿಕೆ ನೀಡಿಕೆ ತಾಲೀಮು ಯಶಸ್ವಿ ಯಾಗಿ ನಡೆದಿರುವ ಕಾರಣ ಅತಿ ಶೀಘ್ರದಲ್ಲೇ ಈ ಲಸಿಕೆಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.

    ಯಾವಾಗ ಬಳಕೆಗೆ ಸಿಗಬಹುದು?: ಈಗಷ್ಟೇ ಭಾರತೀಯ ಔಷಧ ಪ್ರಾಧಿಕಾರ ಲಸಿಕೆಗಳಿಗೆ ಅನುಮತಿ ನೀಡಿದೆ. ಲಸಿಕೆ ಉತ್ಪಾದಕ ಕಂಪನಿಯಿಂದ ಕೇಂದ್ರ ಸರ್ಕಾರ ಇವುಗಳನ್ನು ಖರೀದಿ ಮಾಡಿ, ನಿಗದಿತ ಲಸಿಕಾ ಕೇಂದ್ರಕ್ಕೆ ರವಾನೆ ಮಾಡಬೇಕು. ನಂತರ ಲಸಿಕೆ ಪ್ರಕ್ರಿಯೆ ಆರಂಭವಾಗಲಿದೆ.

    ಲಸಿಕೆಗೆ ಕೌಂಟ್​ಡೌನ್: ಕರೊನಾ ವಿರುದ್ಧ ಹೋರಾಟದ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಬಳಿಕ ಸಾರ್ವಜನಿಕರು ಲಸಿಕೆ ಪಡೆಯಬಹುದು. ಹೀಗಾಗಿ ಇನ್ನು ಒಂದೆರಡು ವಾರದಲ್ಲಿ ಲಸಿಕೆ ಬಳಕೆಗೆ ಸಿಗುವ ಸಾಧ್ಯತೆ ಇದೆ.

    • ಫೈಜರ್, ಆಸ್ಟ್ರಾಜೆನಿಕಾ ಲಸಿಕೆಗೆ ಅಮೆರಿಕ, ಬ್ರಿಟನ್ ಸಹಿತ ಹಲವು ದೇಶಗಳು ಈಗಾಗಲೇ ಒಪ್ಪಿಗೆ ನೀಡಿವೆ.
    • ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿ ಫೈಜರ್ ಕೂಡ ಮನವಿ ಸಲ್ಲಿಸಿದ್ದು, ಇದರ ಪರಿಶೀಲನೆ ಬಾಕಿ ಇದೆ.
    • ವಿಶ್ವದಲ್ಲಿ 200ಕ್ಕೂ ಹೆಚ್ಚು ಸಂಸ್ಥೆಗಳು ಕರೊನಾ ಲಸಿಕೆ ಸಂಶೋಧನೆ, ಪ್ರಯೋಗ ನಡೆಸುತ್ತಿವೆ
    • ಈವರೆಗೆ ಜಾಗತಿಕವಾಗಿ ಮೂರು ಲಸಿಕೆಗಳಿಗೆ ಮಾತ್ರ ಅಧಿಕೃತ ಅನುಮೋದನೆ ಸಿಕ್ಕಿದೆ. ಇದರಲ್ಲಿ ಎರಡು ಲಸಿಕೆ ಭಾರತದಲ್ಲೇ ಉತ್ಪಾದನೆ ಆಗಲಿದೆ ಎಂಬುದು ಗಮನಾರ್ಹ.

    ಶೇ. 110 ಸುರಕ್ಷಿತ: ಎರಡೂ ಲಸಿಕೆಗಳು ಶೇ. 110ರಷ್ಟು ಸುರಕ್ಷಿತವಾಗಿವೆ. ಔಷಧ ಸುರಕ್ಷತೆ ಕುರಿತು ಒಂದು ಅಂಶದಷ್ಟು ಅನುಮಾನವಿದ್ದರೂ ನಾವು ಅನುಮೋದನೆ ನೀಡುತ್ತಿರಲಿಲ್ಲ ಎಂದು ಡಿಸಿಜಿಐ ವಿ.ಜಿ. ಸೋಮಾನಿ ಹೇಳಿದ್ದಾರೆ. ಕೋವಿಶೀಲ್ಡ್ ಶೇಕಡ 70.42ರಷ್ಟು ಪರಿಣಾಮಕಾರಿಯಾಗಿದೆ. ಕೊವ್ಯಾಕ್ಸಿನ್ ಸುರಕ್ಷಿತವಾಗಿದ್ದು, ರೋಗನಿರೋಧಕತೆಯನ್ನು ಅಗಾಧವಾಗಿ ಹೆಚ್ಚಿಸುತ್ತದೆ. ಈ ಲಸಿಕೆಯಿಂದ ದೇಹದಲ್ಲಿ ದುರ್ಬಲತೆ ಉಂಟಾಗುತ್ತದೆ ಎಂಬುದು ವದಂತಿ ಮಾತ್ರ. ಇವುಗಳಿಗೆ ಕಿವಿಗೊಡಬೇಡಿ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

    ಮೇಕ್ ಇನ್ ಇಂಡಿಯಾ

    ವಿಶ್ವದ ಬಹುತೇಕ ರಾಷ್ಟ್ರಗಳು ಸುರಕ್ಷಿತವಾದ ಕರೊನಾ ಲಸಿಕೆ ಪಡೆಯಲು ಪರದಾಡುತ್ತಿರುವ ನಡುವೆಯೇ ಎರಡು ಲಸಿಕೆಗೆ ಭಾರತ ಒಪ್ಪಿಗೆ ನೀಡಿರುವುದು ಮಹತ್ವದ ಸಂಗತಿಯಾಗಿದೆ. ಈ ಎರಡೂ ಲಸಿಕೆಗಳು ಭಾರತದಲ್ಲೇ ತಯಾರಾಗಲಿದ್ದು, ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕಾರಿಯಾಗಿವೆ. ಜತೆಗೆ ಸ್ವದೇಶಿಯಾಗಿ ಲಸಿಕೆ ತಯಾರಿಸುವುದರಿಂದ ವೆಚ್ಚ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಪ್ರಸ್ತುತ 20ಕ್ಕೂ ಅಧಿಕ ದೇಶಗಳು ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿದ್ದು, ಅಮೆರಿಕ, ಬ್ರಿಟನ್ ಹೊರತುಪಡಿಸಿ ಬಹುತೇಕ ರಾಷ್ಟ್ರಗಳು ಔಷಧವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿವೆ.

    ಕಡ್ಡಾಯ ಅಲ್ಲ: ಕರೊನಾ ಲಸಿಕೆಯನ್ನು ಪಡೆಯುವುದು ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಮುನ್ನೆಚ್ಚರಿಕೆ ದೃಷ್ಟಿಯಿಂದ ಲಸಿಕೆ ತೆಗೆದುಕೊಂಡರೆ ಉತ್ತಮ ಎಂಬುದು ತಜ್ಞರ ಅಭಿಪ್ರಾಯ.

    ಇಸ್ಲಾಂಗೆ ವಿರೋಧವಿಲ್ಲ: ಕರೊನಾ ಲಸಿಕೆಗಳಲ್ಲಿ ಹಂದಿಯ ಕೊಬ್ಬಿನಂಶ ಇದ್ದರೂ ಇಂಥ ಲಸಿಕೆಯನ್ನು ಮಾನವ ಜೀವ ಉಳಿಸಲು ಬಳಸಬಹುದು ಎಂದು ಜಮಾತ್-ಎ-ಇಸ್ಲಾಮಿ ಹಿಂದ್ ಸ್ಪಷ್ಟಪಡಿಸಿದೆ. ಯುಎಇ ಅತ್ಯುನ್ನತ ಧಾರ್ವಿುಕ ಮಂಡಳಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.

    ಪ್ರಕ್ರಿಯೆ ಹೇಗೆ?

    • ಒಟ್ಟು 2 ಡೋಸ್ ತೆಗೆದುಕೊಳ್ಳಬೇಕು
    • 4ವಾರಗಳ ಅಂತರದಲ್ಲಿ ಪ್ರತಿ ಡೋಸ್ ಪಡೆಯಬೇಕು
    • 2ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಗ್ರಹಿಸಿಡಬೇಕು

    ವಿಜ್ಞಾನಿಗಳು ಮತ್ತು ಕರೊನಾ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆಗಳು. ತುರ್ತು ಬಳಕೆಗೆ ಅನುಮತಿ ಸಿಕ್ಕಿರುವ ಎರಡೂ ಲಸಿಕೆಗಳು ಭಾರತದಲ್ಲೇ ತಯಾರಾಗಿರುವುದು ಹೆಮ್ಮೆಯ ವಿಚಾರ. ಕರೊನಾ ನಿಯಂತ್ರಣ ವಿಚಾರದಲ್ಲಿ ಇದು ಮಹತ್ವದ ತಿರುವು. ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವತ್ತ ವೈಜ್ಞಾನಿಕ ಸಮುದಾಯ ಮುಂದಡಿಯಿಟ್ಟಿದೆ.

    | ನರೇಂದ್ರ ಮೋದಿ ಪ್ರಧಾನಿ

    ಎರಡೂ ಲಸಿಕೆಗಳ ಅನುಮೋದ ನೆಗೆ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸುವೆ. ರಾಜ್ಯದಲ್ಲಿ ಲಸಿಕೆ ಲಭ್ಯವಾದ ಕೂಡಲೇ ವಿತರಣೆಗೆ ಸರ್ವಸನ್ನದ್ದರಾಗಿದ್ದೇವೆ.

    | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

    ಕರ್ನಾಟಕದಲ್ಲಿ ಸಿದ್ಧತೆ…

    • ಲಸಿಕೆ ಸಿಕ್ಕ ಕೂಡಲೇ ಯಾವುದೇ ಕ್ಷಣದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ವಿತರಿಸಲು ಸಮರ್ಪಕವಾಗಿ ತಯಾರಿ ಮಾಡಿಕೊಳ್ಳಲಾಗಿದೆ.
    • ಲಸಿಕೆಯನ್ನು ಸಂಗ್ರಹಿಸಲು ವಾಕ್ ಇನ್ ಫ್ರೀಜರ್ ಗುರುತಿಸಲಾಗಿದೆ. ಲಸಿಕಾ ಕೇಂದ್ರಗಳನ್ನು ಮ್ಯಾಪಿಂಗ್ ಮಾಡಲಾಗಿದೆ.
    • ಸಿಬ್ಬಂದಿ ತರಬೇತಿ ಮುಗಿದಿದೆ. ವೈದ್ಯರು, ಅರೆ ವೈದ್ಯಕೀಯ, ಡಿ ಗ್ರೂಪ್ ನೌಕರರವರೆಗೆ ಎಲ್ಲಾ ಹಂತದಲ್ಲೂ ನಿಗದಿಪಡಿಸಲಾಗಿದೆ.
    • ಯಾರ ಜವಾಬ್ದಾರಿ ಏನೆಂದು ಜಿಲ್ಲೆ, ತಾಲೂಕು ತಂಡ ರಚನೆಯಾಗಿದೆ. ಎಲ್ಲೂ ಓವರ್ ಲ್ಯಾಪ್ ಆಗದಂತೆ ನೀಲಿನಕ್ಷೆ ಸಿದ್ಧಮಾಡಿಸಲಾಗಿದೆ.
    • ಲಸಿಕೆ ವಿತರಣಾ ಪೂರ್ವಾಭ್ಯಾಸ ಮಾಡಿದ್ದು, ಎಲ್ಲೂ ಕೂಡ ದೋಷ ಕಾಣಿಸಿಲ್ಲ. ಮೊದಲು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ.
    • ಡೇಟಾ ಬ್ಯಾಂಕ್ ಸಿದ್ಧಪಡಿಸಿದ್ದು, ಎಸ್​ಎಂಎಸ್ ಮೂಲಕ ಸಂಬಂಧಪಟ್ಟವರಿಗೆ ಎಲ್ಲಿ? ಯಾವ ಸಮಯಕ್ಕೆ ವರದಿ ಮಾಡಿಕೊಳ್ಳಬೇಕೆಂದು ಮಾಹಿತಿ ರವಾನೆಯಾಗಲಿದೆ.
    • ಪ್ರತಿ ಲಸಿಕಾ ಕೇಂದ್ರದ ಪ್ರವೇಶದಿಂದ ಹೊರ ಬರುವವರೆಗೆ ಯಾವೆಲ್ಲ ಚಟುವಟಿಕೆ ಯಾರು ಮಾಡಬೇಕೆಂಬುದು ನಿರ್ಧಾರವಾಗಿದೆ.

    ಪೂರ್ವ ತಯಾರಿ ಹೇಗಿತ್ತು?

    • ಕಳೆದ 2 ತಿಂಗಳಿನಿಂದ ಕೇಂದ್ರದ ಆರೋಗ್ಯ ಇಲಾಖೆ ರಾಜ್ಯದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ.
    • ಕೇಂದ್ರವು ಈ ಕಾರ್ಯಾ ಚರಣೆಗೆ ಆಪ್ ಅಭಿವೃದ್ಧಿಪಡಿಸಿದ್ದು, ಅವರು ಕೇಳಿದ ಮಾಹಿತಿ ಕಡ್ಡಾಯವಾಗಿ ಕಳಿಸಲಾಗಿದೆ.
    • 2ದಿನಕ್ಕೊಮ್ಮೆ ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮಾಡಿದ್ದು, ಸಣ್ಣ ಸಣ್ಣ ಮಾಹಿತಿಯನ್ನೂ ಪಡೆದು ಕೊಂಡಿದ್ದಾರೆ.
    • ಲಸಿಕೆ ವಿತರಣೆಗೆ ಮಾನವ ಸಂಪನ್ಮೂಲ ಸಿದ್ಧಮಾಡಿ ಕೊಳ್ಳಲಾಗಿದ್ದು, ಅವರಿಗೆ ತರಬೇತಿಯನ್ನೂ ಸಹ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts