More

    VIDEO| ಕೋವಿಡ್​-19 ಮುನ್ನೆಚ್ಚರಿಕ್ಕೆ ವಹಿಸಿ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ: ಶ್ರೀ ಶ್ರೀಶೈಲ ಜಗದ್ಗುರುಗಳು

    ಬೆಂಗಳೂರು: ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ” ಎಂಬ ಕವಿವಾಣಿಯಂತೆ ನಾವು ಆರೋಗ್ಯವಾಗಿದ್ದರೆ ಮತ್ತು ಜೀವಂತವಾಗಿದ್ದರೆ ಇಂತಹ ಹಲವಾರು ಯುಗಾದಿಯ ಹಬ್ಬಗಳನ್ನು ಆಚರಿಸಬಹುದು. ಭಾರತದೇಶದಲ್ಲಿ ಕೋವಿಡ್​-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಅದನ್ನು ನಿಯಂತ್ರಿಸಲು ನಾವೆಲ್ಲ ಕಡ್ಡಾಯವಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

    ಕೇಂದ್ರ ಸರಕಾರ ಹಾಗೂ ಎಲ್ಲಾ ರಾಜ್ಯ ಸರಕಾರಗಳು ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕಾಗಿಯೇ ನಮ್ಮೆಲ್ಲರಿಗೆ ಯಾವುದೇ ಕಾರಣಕ್ಕೂ ತಮ್ಮ ತಮ್ಮ ಮನೆಗಳಿಂದ ಹೊರಬರಬೇಡಿ ಎಂದು ನಿಷೇಧಾಜ್ಞೆಯನ್ನು ಹೊರಡಿಸಿ ಕರ್ಫ್ಯೂ ಜಾರಿ ಮಾಡಿದೆ. ದೇಶದ ಪ್ರತಿಯೊಬ್ಬರೂ ಇದನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ಸಾರ್ವಜನಿಕರಿಗೆ ಈ ಮೂಲಕ ಕರೆ ಕೊಡುತ್ತಿದ್ದೇವೆ ಎಂದರು.

    ದೇಶದಲ್ಲಿ ಈಗ ಎರಡನೇ ಹಂತದಲ್ಲಿರುವ ಕರೊನಾ ವೈರಸ್ ಮೂರನೇ ಹಂತಕ್ಕೆ ಹೋಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಒಂದು ವೇಳೆ ಮೂರನೇ ಹಂತಕ್ಕೆ ತಲುಪಿದರೆ ಮನುಷ್ಯರ ಮಾರಣಹೋಮವೇ ಆರಂಭವಾಗಬಹುದು. ಭಾರತವು ಮತ್ತೊಂದು ಇಟಲಿ ಆಗಬಾರದು. ಆದ್ದರಿಂದ ಯುಗಾದಿ ಹಬ್ಬದ ನೆಪದಲ್ಲಿ ಹಣ್ಣು, ಕಾಯಿ, ಪೂಜಾಸಾಮಗ್ರಿ ಮುಂತಾದ ವಸ್ತುಗಳನ್ನು ಖರೀದಿಸಲೂ ಕೂಡ ಯಾರೂ ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲಿರುವ ಸಾಮಗ್ರಿಗಳನ್ನು ಮಾತ್ರ ಬಳಸಿ ಆರೋಗ್ಯಕರವಾದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಂಕ್ಷಿಪ್ತವಾಗಿ ಯುಗಾದಿ ಹಬ್ಬವನ್ನು ಆಚರಿಸಿ ಎಂದು ಸಲಹೆ ನೀಡದರು.

    ನಾವು ಇಂದು ಉತ್ಸಾಹದಿಂದ ವ್ಯಾಪಕವಾದ ಯುಗಾದಿ ಹಬ್ಬವನ್ನು ಆಚರಿಸಲು ಮುಂದಾದರೆ ಮುಂದೊಮ್ಮೆ ಈ ಯುಗಾದಿ ಹಬ್ಬವೇ ನಮ್ಮ ಪಾಲಿಗೆ ಅಗಾಧವಾದ ಮಾರಿ ಹಬ್ಬವಾಗಬಹುದು. ನಮ್ಮ ಸಾಮಾನುಗಳ ಕ್ರಯ-ವಿಕ್ರಯವು ಕರೊನಾ ವೈರಸ್ ಹರಡುವ ಮಾಧ್ಯಮವಾಗಬಾರದು. ಆದ್ದರಿಂದ ಮನೆಯಲ್ಲಿಯೇ ಇದ್ದು ಸರ್ವರೂ ಸಂಕ್ಷಿಪ್ತ ಯುಗಾದಿ ಹಬ್ಬವನ್ನು ಆಚರಿಸಬೇಕೆಂದು ಈ ಮೂಲಕ ದೇಶದ ಸರ್ವ ಜನರಿಗೆ ವಿಶೇಷವಾಗಿ ಕರ್ನಾಟಕದ ಜನರಿಗೆ ಕರೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.

    ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೂಡ ಈ ವೈರಸ್ ನಿಯಂತ್ರಣಕ್ಕಾಗಿ ಮಹಾ ಮೃತ್ಯುಂಜಯ ಹೋಮ, ಜಪ, ತಪ ಮುಂತಾದ ಪೂಜೆಗಳು ಏಕಾಂತದಲ್ಲಿ ನಿರಂತರ ನಡೆದಿರುತ್ತದೆ. ಇದಲ್ಲದೆ ಭಾರತದಲ್ಲಿ ಭವ್ಯ ಜಾತ್ರೆಯಂದು ಪ್ರಸಿದ್ಧವಾದ ಶ್ರೀಶೈಲದ ಯುಗಾದಿ ಜಾತ್ರೆಯನ್ನು ಕೂಡ ಇಲ್ಲಿ ಅತ್ಯಂತ ಸಂಕ್ಷಿಪ್ತವಾಗಿ ಅತ್ಯಂತ ಸರಳವಾಗಿ ಮತ್ತು ಏಕಾಂತವಾಗಿ ಆಚರಿಸಲಾಗುತ್ತದೆ. ಇದನ್ನೇ ಮಲ್ಲಯ್ಯನ ಭಕ್ತರು ಕೂಡ ತಮ್ಮ ಗ್ರಾಮಗಳಲ್ಲಿ ಮನೆಗಳಲ್ಲಿ ಅನುಸರಿಸಬೇಕು. ಶ್ರೀಶೈಲದಲ್ಲಿ ಜಾತ್ರೆ ನಡೆಯಲಿಲ್ಲ ಜಾತ್ರೆಯಲ್ಲಿ ನಾವು ಪಾಲ್ಗೊಳ್ಳಲಿಲ್ಲ ಎಂದು ಯಾರು ಅಸಮಾಧಾನ ತಾಳಬಾರದು. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸರ್ವರೂ ಸಮಾಧಾನದಿಂದ ಆತ್ಮ ನಿಯಂತ್ರಣ ಪೂರ್ವಕ ಈ ಮಹಾರೋಗವನ್ನು ಎದುರಿಸೋಣ ಎಂದು ತಿಳಿಸಿದ್ದಾರೆ.

    ಸರ್ವರಿಗೂ ನೂತನ ಶಾರ್ವರಿ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು. ಸರ್ವರಿಗೂ ಸರಳ ಯುಗಾದಿ ಆಚರಣೆಗೆ ಸುಸ್ವಾಗತಗಳು ಎಂದು ಕೊನೆಯಲ್ಲಿ ಹೇಳಿದ್ದಾರೆ.

    ಮಾಯ್ಕಾರ ಮಾದಪ್ಪ ವಿಶೇಷ ಸಂಚಿಕೆ ಬಿಡುಗಡೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಶುಭಹಾರೈಕೆ | ವಿಜಯವಾಣಿ ಪ್ರಯತ್ನಕ್ಕೆ ಗೃಹ ಸಚಿವರ ಶ್ಲಾಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts