More

    ಸಲಹೆಗಳಿಂದಲೇ ಸಂಕಷ್ಟ: ಹಗಲಿರುಳು ಕರೊನಾ ಪರಿಹಾರ, ಪ್ರಚಾರಕ್ಕೆ ಹಲವರ ಪೈಪೋಟಿ 

    ಬೆಂಗಳೂರು: ಕರೊನಾ ಮಹಾಮಾರಿ ಬೆನ್ನತ್ತಿರುವ ಸಂದರ್ಭದಲ್ಲಿ ಬಡವರಿಗೆ ಉಚಿತ ಹಾಲು, ಬಸ್ ಪ್ರಯಾಣ ಸೌಲಭ್ಯ, ವಿದ್ಯುತ್ ಬಿಲ್ ಪಾವತಿಗೆ ಕಾಲಾವಕಾಶ ವಿಸ್ತರಣೆ, ಕಟ್ಟಡ ಕಾರ್ವಿುಕರಿಗೆ ಒಂದು ಸಾವಿರ ರೂ. ನೆರವು, ಹೆಚ್ಚುವರಿಯಾಗಿ ಪಡಿತರ ವಿತರಣೆ, ಕಿಸಾನ್ ಸಮ್ಮಾನ್ ಹಣ ಪಾವತಿಯಂತಹ ದಿಟ್ಟ ತೀರ್ಮಾನ ಕೈಗೊಳ್ಳುವ ಮೂಲಕ ಜನಮೆಚ್ಚುಗೆ ಗಳಿಸಿರುವ ರಾಜ್ಯ ಸರ್ಕಾರ ಮತ್ತೊಂದೆಡೆ ಅಧಿಕಾರಿಗಳ ದೂರದೃಷ್ಟಿರಹಿತ ಸಲಹೆ, ಶಿಫಾರಸುಗಳನ್ನು ಜಾರಿಗೆ ತರಲು ಹೋಗಿ ತೀವ್ರ ಮುಜುಗರಕ್ಕೀಡಾಗುವಂತಾಗಿದೆ.

    ಆರೋಗ್ಯ ಕಾಳಜಿ ಮತ್ತು ಆರ್ಥಿಕತೆ ವಿಚಾರದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ನಿರಂತರವಾಗಿ ಪ್ರತ್ಯೇಕ ಸಲಹೆ, ಶಿಫಾರಸು ಮಾಡುತ್ತಿದ್ದಾರೆ. ಪರಿಣಾಮ ಇಂತಹ ವೈರುಧ್ಯಪೂರ್ಣ ಅಭಿಪ್ರಾಯಗಳಿಂದಾಗಿ ಸರ್ಕಾರ ಪುನಃ ಪುನಃ ತೀರ್ಮಾನ ಬದಲಿಸುವಂತಾಗಿದೆ. ಸ್ಪಂದನೆ ಕಾರ್ಯಾಚರಣೆಯಲ್ಲಿ ಒಂದೆಡೆ ಜನಸಾಮಾನ್ಯರಿಂದ ಮೆಚ್ಚುಗೆ, ಬೆಂಬಲ ಪಡೆಯುತ್ತಿರುವ ಸರ್ಕಾರ ಈ ಬೆಳವಣಿಗೆ ಗಳಿಂದಾಗಿ ತೀವ್ರ ಟೀಕೆಗೆ ಗುರಿಯಾಗುವಂತಾಗಿದೆ.

    ಇದನ್ನೂ ಓದಿ: ಕರೊನಾ ಶಂಕಿತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಹೈಡ್ರಾಮ ಸೃಷ್ಟಿಸಿ ಪೇದೆಗಳಿಬ್ಬರು ಪರಾರಿ

    ಅಧಿಕಾರಿಗಳ ಮುಂದಾಲೋಚನೆರಹಿತ ಸಲಹೆಗಳು ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಇನ್ನೂ ಹೇಳಬೇಕೆಂದರೆ ಸರ್ಕಾರಕ್ಕೆ ಎಲ್ಲ ರೀತಿ ಸಹಕಾರ ನೀಡುತ್ತ ಬಂದಿದ್ದ ಪ್ರತಿಪಕ್ಷಗಳು ಸರ್ಕಾರದ ಇಕ್ಕಟ್ಟಿನ ಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಇಷ್ಟಾದರೂ ಪ್ರಮುಖ ಖಾತೆ ಹೊಂದಿದ ಸಚಿವರು ತಮಗೂ ಸರ್ಕಾರದ ನಿರ್ಧಾರಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಮತ್ತು ಜವಾಬ್ದಾರಿ ತೆಗೆದುಕೊಳ್ಳದಿ ರುವುದರಿಂದ ಟೀಕೆ, ಟಿಪ್ಪಣಿಗಳ ಗರಿಯೆಲ್ಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಿರೀಟಕ್ಕೇ ಸೇರ್ಪಡೆಯಾಗುವಂತಾಗಿದೆ.

    ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಆರಂಭದಿಂದಲೂ ಕರೊನಾ ನಿರ್ವಹಣೆ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತ ಬಂದಿದೆ. ಜತೆಗೆ ಡಾ.ವಿ.ಕೆ.ಸುದರ್ಶನ್ ಸಮಿತಿ ಕೂಡ ತನಗೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಈ ನಡುವೆ ಸರ್ಕಾರದ ಅಧಿಕಾರಿಗಳ ನಡುವೆ ಮುಂದಾಲೋಚನೆ ಕೊರತೆ ಎದ್ದುಕಾಣಿಸಿದೆ.

    ವರ್ಗಾವಣೆ ಡ್ರಾಮಾ: ಈ ಹಿಂದೆ ಏ.18ರಂದು ಲಾಕ್​ಡೌನ್ ಸಡಿಲಿಸಿ ವಾಹನ ಓಡಾಟಕ್ಕೆ ಅವಕಾಶ ನೀಡಲು ಶಿಫಾರಸು ಮಾಡಿದ್ದೂ ರಾಜ್ಯದ ಇಬ್ಬರು ಪ್ರಮುಖ ಹಿರಿಯ ಅಧಿಕಾರಿಗಳು. ಸಹಜವಾಗಿ ಅವರ ಮಾತನ್ನು ಅನುಸರಿಸಿದ ಸರ್ಕಾರ ವಿರೋಧ ವ್ಯಕ್ತವಾದ ಬಳಿಕ ಹಿಂಪಡೆಯಿತು. ರೆಡ್ ಝೋನ್​ನಲ್ಲಿದ್ದ ಕಲಬುರಗಿಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಅಲ್ಲಿನ ಜಿಲ್ಲಾಧಿಕಾರಿ ಶರತ್ ಅವರನ್ನು ವರ್ಗಾವಣೆ ಮಾಡಿ ಬಳಿಕ ಎರಡು ತಾಸಲ್ಲೇ ನಿರ್ಧಾರ ಹಿಂಪಡೆಯಲಾಯಿತು.

    ರೈತರ ತರಕಾರಿಯನ್ನು ಸರ್ಕಾರವೇ ಕೊಳ್ಳುವ ಬಗ್ಗೆಯೂ ಅಧಿಕಾರಿಗಳು ಸರ್ಕಾರದ ಹಾದಿ ತಪ್ಪಿಸಿದ್ದು, ಈವರೆಗೂ ಪರಿಸ್ಥಿತಿ ಸರಿಪಡಿಸಲಿಲ್ಲ. ಅಂತರ ಜಿಲ್ಲಾ ಪ್ರಯಾಣಕ್ಕೆ ಒಂದು ಬಾರಿಗೆ ಅವಕಾಶ ನೀಡುವ ಬಗ್ಗೆಯೂ ಗೊಂದಲ ಪರಿಹಾರವಾಗಿಲ್ಲ. ಲಾಕ್​ಡೌನ್ ಆರಂಭದಲ್ಲಿ ಕಾರ್ವಿುಕರು ನೂರಾರು ಕಿಲೋಮೀಟರ್ ನಡೆದು ಹೋಗದಂತೆ ತಡೆಯುವ ಎಲ್ಲ ಸಾಧ್ಯತೆಗಳಿದ್ದರೂ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತರು. ಈಗಲೂ ಸಹ ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಸಮಸ್ಯೆ ಸೃಷ್ಟಿಯಾಗುತ್ತಲೇ ಇದೆ.

    ಇದನ್ನೂ ಓದಿ: VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!

    ಶನಿವಾರ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಾಗ ವ್ಯವಸ್ಥೆ ಮಾಡಬೇಕಾದ್ದು ಯಾವ ಇಲಾಖೆ ಎಂಬ ಗೊಂದಲ ಇಟ್ಟುಕೊಂಡು ಅಧಿಕಾರಿಗಳು ಕಚೇರಿಯಲ್ಲೇ ಕುಳಿತಿದ್ದರು. ಸಚಿವರೂ ಸಹ ಗಮನ ಕೊಡದೇ ಹೋದರು. ಬಸ್ ನಿಲ್ದಾಣಕ್ಕೆ ಆಗಮಿಸಿದವರಿಗೆ ಯಾವ ಇಲಾಖೆ ವ್ಯವಸ್ಥೆ ಮಾಡಬೇಕು? ಕಾರ್ವಿುಕ ಇಲಾಖೆಯೋ? ಸಾರಿಗೆ ಇಲಾಖೆಯೋ? ಎಂಬುದನ್ನೂ ಸ್ಪಷ್ಟ ಮಾಡಿಕೊಳ್ಳಲು ಅಧಿಕಾರಿಗಳು ತಯಾರಿರಲಿಲ್ಲ.

    ರಾಜಧಾನಿಯಲ್ಲಿ ಲಾಕ್​ಡೌನ್ ಪಾಸ್ ವಿತರಣೆ ಬಗೆಯೂ ಆರಂಭದಲ್ಲೇ ತಿಕ್ಕಾಟ ನಡೆದಿತ್ತು. ರಾಜಕೀಯ ಒತ್ತಡಕ್ಕೆ ಸಾವಿರ ಸಂಖ್ಯೆಗಳಲ್ಲಿ ಖಾಸಗಿ ಕಂಪನಿಗಳಿಗೆ ಪಾಸ್ ಹಂಚಿ ಬಳಿಕ ಪರಿಸ್ಥಿತಿ ನಿಯಂತ್ರಿಸುತ್ತಿಲ್ಲ ಎಂದು ಪೊಲೀಸರ ಮೇಲೆ ಹಿರಿಯ ಅಧಿಕಾರಿಗಳೇ ಹರಿಹಾಯ್ದರು.

    ಒಟ್ಟಾರೆ ‘ಸಲಹೆಗಾರ’ರ ದೂರದೃಷ್ಟಿರಹಿತ ಶಿಫಾರಸುಗಳು, ಕಾಳಜಿ ವಹಿಸದ ಸಚಿವರ ಉದಾಸೀನತೆ ಸರ್ಕಾರಕ್ಕೆ ದುಬಾರಿಯಾಗಿ ಪರಿಣಮಿಸುವಂತಾಗಿದೆ. ಆರ್ಥಿಕತೆಗೆ ಒತ್ತು ನೀಡಲು ಲಾಕ್​ಡೌನ್ ಸಡಿಲಿಕೆ ಮಾಡಬೇಕೆಂಬ ಅಧಿಕಾರಿಗಳ ಒಂದು ತಂಡದ ಒತ್ತಡ, ಆರೋಗ್ಯದ ಬಗ್ಗೆ ಕಾಳಜಿಗಾಗಿ ನಿಯಂತ್ರಣ ಅನಿವಾರ್ಯ ಎಂಬ ಇನ್ನೊಂದು ತಂಡದ ಸಲಹೆ ಸರ್ಕಾರವನ್ನು ಹೈರಾಣ ಮಾಡಿದೆ.

    ಬಸ್ ಸಂಚಾರ ಗೊಂದಲ

    ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಹಣ ಕೊಟ್ಟು ಪ್ರಯಾಣ ಮಾಡುವವರಿಗೆ ಅವಕಾಶ ಮಾಡಿಕೊಡುವುದೆಂದು ಸಂಪುಟದಲ್ಲೂ ತೀರ್ವನವಾಯಿತು. ಆದರೆ, ಈ ರೀತಿ ಬಸ್ ಸಂಚಾರ ಆರಂಭಿಸಿದಾಗ ಎದುರಾಗುವ ಸವಾಲುಗಳ ಬಗ್ಗೆ ಅಧಿಕಾರಿಗಳು ಮುಂದಾಲೋಚಿಸಲಿಲ್ಲ. ಪರಿಣಾಮ ಸಾವಿರಾರು ಮಂದಿ ಬಸ್​ನಿಲ್ದಾಣಕ್ಕೆ ನುಗ್ಗಿಬಂದರು. ಬಸ್ ಪ್ರಯಾಣಕ್ಕೆ ದುಪ್ಪಟ್ಟು ಹಣ ಕೇಳಿದಾಗ ಕಣ್ಣೀರಿಟ್ಟರು. ಪರಿಣಾಮ ಸರ್ಕಾರ ಕೈಕೈಹಿಸುಕಿಕೊಂಡು ಅವರೆಲ್ಲರನ್ನೂ ಉಚಿತವಾಗಿ ಕಳಿಸಿಕೊಡುವಂತಾಯಿತು. ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಲ್ಲಿ ಕಡಿಮೆ ಪ್ರಯಾಣಿಕರನ್ನು ಕರೆದೊಯ್ಯುವುದು ಮತ್ತು ನಿಗದಿತ ಸ್ಥಳ ತಲುಪಿದ ಬಳಿಕ ಬಸ್ ಖಾಲಿಯಾಗಿ ಬೆಂಗಳೂರಿಗೆ ಮರಳಬೇಕೆಂಬ ಅಂದಾಜಿನಲ್ಲೇ ಪ್ರಯಾಣ ದರ ನಿಗದಿ ಮಾಡಿದ್ದರಲ್ಲಿ ತಪ್ಪಿಲ್ಲವಾದರೂ, ಕೈಯಲ್ಲಿ ಕಾಸಿಲ್ಲದ ಜನರ ಕತೆ ಬಗ್ಗೆ ಅಧಿಕಾರಿಗಳು ಚಿಂತಿಸಲಿಲ್ಲ. ಪರಿಣಾಮ ಸರ್ಕಾರ ಬೆಲೆ ತೆರಬೇಕಾಯಿತು.

    ಇದನ್ನೂ ಓದಿ: ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಸರಣಿ ಎಡವಟ್ಟುಗಳು

    • ಏ.18ರಂದು ಲಾಕ್​ಡೌನ್ ಸಡಿಲಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಬಳಿಕ ಆದೇಶ ವಾಪಸ್ ಪಡೆಯಲಾಯಿತು
    • ನಡೆದುಹೋಗುತ್ತಿದ್ದ ನೂರಾರು ಕಾರ್ವಿುಕರನ್ನು ತಡೆಯುವ ಪ್ರಯತ್ನ ಆಗಲಿಲ್ಲ
    • ರಾಜಕೀಯ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿ ಪಾಸ್ ಹಂಚಿದ್ದು
    • ಹೊರ ರಾಜ್ಯಗಳಲ್ಲಿರುವ ರಾಜ್ಯದ ನಿವಾಸಿಗಳನ್ನು ಕರೆತರಲು ಉದಾಸೀನ

    | ಶ್ರೀಕಾಂತ್ ಶೇಷಾದ್ರಿ 

    ಬೆಂಗಳೂರಿಗರಿಗೆ ಕರೊನಾ ಕಲಿಸುತ್ತಿದೆ ವಿಚಿತ್ರ ನೈತಿಕತೆ ಪಾಠ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts