More

    ಕೇಂದ್ರ ನಿಲುವಿನಿಂದ ಮೂಡಿತು ಆಶಾಭಾವ

    ಕರೊನಾ ವಾರಿಯರ್ಸ್ ರಕ್ಷಣೆಗೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಕಾನೂನು ರೂಪಿಸಿದ್ದು, ಇನ್ನು ಮುಂದೆ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ, ಅವರ ಕಾರ್ಯಾನಿರ್ವಹಣೆಗೆ ಅಡ್ಡಿಪಡಿಸುವವರ ಮೇಲೆ ಜಾಮೀನು ರಹಿತ ಅಪರಾಧವಾಗಲಿದೆ. ತಪ್ಪಿತಸ್ಥರಿಗೆ 6 ತಿಂಗಳಿಂದ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶ ಸಿಗಲಿದೆ. ಈ ಬಗ್ಗೆ ವಿಜಯವಾಣಿ ಕರಾವಳಿಯ ಕರೊನಾ ವಾರಿಯರ್ಸ್ ಅಭಿಪ್ರಾಯವನ್ನು ಇಲ್ಲಿ ಕಲೆ ಹಾಕಿದೆ.

    ಸಿಗಲಿದೆ ಸುರಕ್ಷೆ
    ಸಾಂಕ್ರಾಮಿಕ ಕಾಯಿಲೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಮುಂಚೂಣಿಯಲ್ಲಿ ಕಾರ್ಯವೆಸಗುವ ಆರೋಗ್ಯ ಸಿಬ್ಬಂದಿಗಳಿಗೆ ಬಹಳಷ್ಟು ಬಲ ಬಂದಿದೆ. ಅದರಲ್ಲೂ ಕೊವಿಡ್‌ನಂತಹ ಸಾಂಕ್ರಾಮಿಕ ಕಾಯಿಲೆಯ ಸಂಪರ್ಕ ಶೋಧದಲ್ಲಿ ತೊಡಗುವಾಗ ಹಲ್ಲೆ, ಶೋಷಣೆಗೊಳಗಾಗುವವರಿಗೆ ಇದರಿಂದ ಸುರಕ್ಷೆ ದೊರಕಲಿದೆ. 7ವರ್ಷ ಜೈಲು, 5 ಲಕ್ಷದ ವರೆಗೂ ದಂಡ, ಅಲ್ಲದೆ ವರ್ಷದೊಳಗೆ ನ್ಯಾಯಾಂಗ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಬೇಕು ಎನ್ನುವಂತಹ ಬಿಗಿಯಾದ ಕಾನೂನು ತಂದಿರುವುದು ನಿಜಕ್ಕೂ ಶ್ಲಾಘನೀಯ.
    ಡಾ.ಸತೀಶ್ ಭಟ್, ಅಧ್ಯಕ್ಷರು, ಮೆಡಿಕೊ ಲೀಗಲ್ ಸೆಲ್, ವೈದ್ಯಕೀಯ ಕನ್ಸಲ್ಟೆಂಟ್‌ಗಳ ಸಂಘ, ಮಂಗಳೂರು

    ಹಲ್ಲೆ ಪ್ರಕರಣಗಳು ಕಡಿಮೆ ಆಗಬಹುದು
    ಇದುವರೆಗೆ ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಹಲ್ಲಿಲ್ಲದ ನಿಯಮವಾಗಿತ್ತು. ಈಗ ಅದಕ್ಕೆ ಹಲ್ಲು ಬಂದಂತಾಗಿದೆ. ಇದನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ನಿಜಕ್ಕೂ ಅಭಿನಂದನಾರ್ಹ. ವೈದ್ಯರ ಸಮುದಾಯ ಎಷ್ಟೋ ದಶಕಗಳಿಂದ ಇಂತಹ ಕಾನೂನಿಗೆ ಒತ್ತಾಯಿಸುತ್ತಾ ಬಂದಿದ್ದೆವು. ವೈದ್ಯರ ಮೇಲಿನ ಹಲ್ಲೆಯಂತಹ ಪ್ರಕರಣಗಳು ಇದರಿಂದ ಕಡಿಮೆಯಾಗಬಹುದು.
    ಡಾ.ಅಣ್ಣಯ್ಯ ಕುಲಾಲ್, ಐಎಂಎ ಮಂಗಳೂರು ಅಧ್ಯಕ್ಷರು

    ಕೆಲಸ ಮಾಡಲು ಇನ್ನಷ್ಟು ಶಕ್ತಿ
    ಕರೊನಾ ವಿರುದ್ಧ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ. ಹಲವು ಕಡೆ ಕರ್ತವ್ಯಕ್ಕೆ ಅಡ್ಡಿಪಡಿಸಿ ನಮ್ಮಥವರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆದಿವೆ. ಇದರಿಂದ ಕೆಲ ಪ್ರದೇಶಗಳಿಗೆ ಹೋಗುವಾಗ ಭಯವಾಗುತ್ತದೆ. ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ಕಠಿಣ ಕಾನೂನು ಜಾರಿ ಮಾಡುತ್ತಿರುವ ಸುದ್ದಿ ಕೇಳಿ ಕೆಲಸ ಮಾಡಲು ಇನ್ನಷ್ಟು ಶಕ್ತಿ ಬಂದಿದೆ. ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಗೌರವ ನೀಡಿದೆ. ನೈತಿಕ ಸ್ಥೈರ್ಯ ತುಂಬಿ ಕೆಲಸ ಮಾಡಲು ಪ್ರೇರಣೆ ನೀಡಿದೆ. ದುಷ್ಕರ್ಮಿಗಳನ್ನು ಮಟ್ಟಹಾಕಲು ಹೊಸ ಕಾನೂನು ಜಾರಿಯಾಗುವುದು ಖುಷಿಯ ವಿಚಾರ.
    -ಅನಿತಾ ಗಣೇಶ್, ಆಶಾ ಕಾರ್ಯಕರ್ತೆ, ನರಿಕೊಂಬು

    ನಮ್ಮ ಭವಿಷ್ಯದ ಕಡೆಗೂ ಸ್ಪಂದಿಸಲಿ
    ಕಾನೂನು ರೂಪಿಸಿರುವುದು ಸಂತೋಷ. ಆದರೆ ಅದರ ಜತೆಗೆ ನಮ್ಮ ಭವಿಷ್ಯದ ಕಡೆಗೂ ಸರ್ಕಾರ ಯೋಜನೆ ರೂಪಿಸಲು ಇದು ಸಕಾಲ. ಆಶಾ ಕಾರ್ಯಕರ್ತೆಯರು ದಿನವಿಡೀ ಬಿಸಿಲಿನಲ್ಲಿ ನಡೆದುಕೊಂಡು ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಅವರಿಗೆ ಸಿಗುವ ವೇತನ 4 ಸಾವಿರ ರೂ. ಮಾತ್ರ. ಲಾಕ್‌ಡೌನ್ ಆಗಿರುವುದರಿಂದ ಹೋಗಲು ಬಸ್ ಇಲ್ಲ. ತಿಂಡಿ ತಿನ್ನಲು ಹೊಟೇಲ್‌ಗಳಿಲ್ಲ. ಮನೆಗಳಲ್ಲಿ ನೀರು ಕೇಳಿ ಕುಡಿಯಲು ಕರೊನಾ ಭಯ. ಹಲವು ಆಶಾ ಕಾರ್ಯಕರ್ತೆಯರು ಅಸೌಖ್ಯಕ್ಕೀಡಾಗಿದ್ದಾರೆ. ಒಬ್ಬರು ಬಿದ್ದು ತಲೆಗೆ ಏಟಾಗಿ ಆಸ್ಪತ್ರೆಯಲ್ಲಿದ್ದಾರೆ. ನಮ್ಮ ಕುಟುಂಬ, ಮಕ್ಕಳನ್ನು ಬಿಟ್ಟು ಕರ್ತವ್ಯದಲ್ಲಿ ತೊಡಗಿದ್ದೇವೆ. ಅದಕ್ಕೆ ಪೂರಕವಾಗಿ ನಮಗೂ ಸರ್ಕಾರದಿಂದ ಆರ್ಥಿಕ ಬೆಂಬಲ ಬೇಕಿದೆ.
    -ವಿಜಯಲಕ್ಷ್ಮೀ ದೊಡ್ಡಮಣಿ, ಉಪಾಧ್ಯಕ್ಷೆ, ಕೇಂದ್ರ ಆಶಾ ಕಾರ್ಯಕರ್ತೆಯರ ಸಂಘ

    ರಕ್ಷಣೆ ಕಾಯ್ದೆಗೆ ತಿದ್ದುಪಡಿ ಮುಖ್ಯ
    ದೇಶದ ಪರಿಸ್ಥಿತಿ ಅವಲೋಕಿಸಿದರೆ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರ ರಕ್ಷಣೆಗೆ ಇರುವ ಕಾಯ್ದೆಗೆ ತಿದ್ದುಪಡಿ ಅವಶ್ಯ. ಆದರೆ ನಾನು ಕಾರ್ಯನಿರ್ವಹಿಸುತ್ತಿರುವ ಪ್ರದೇಶದಲ್ಲಿ ದಾದಿಯರಿಗೆ ಸಾರ್ವಜನಿಕರ ಕಡೆಯಿಂದ ಉತ್ತಮ ಬೆಂಬಲ ಇದೆ.
    ಸುನೀತಾ ಕನ್ನಡ್ಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಕುಕ್ಕುಜಡ್ಕ

    ಮನಸ್ಥೈರ್ಯ ಹೆಚ್ಚಲಿದೆ
    ಆಸ್ಪತ್ರೆಗಳಲ್ಲಿ ವೈದ್ಯರ, ದಾದಿಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕಾನೂನು ನಮಗೆ ಧೈರ್ಯದಿಂದ ಕೆಲಸ ಮಾಡಲು ಪ್ರೇರಣೆ ನೀಡಿದೆ. ಕರೊನಾ ಹರಡುತ್ತಿರುವ ಸಂದರ್ಭ ವೈದ್ಯರು, ನರ್ಸ್‌ಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವೈದ್ಯರು, ದಾದಿಯರು ರೋಗಿಗಳ ಪ್ರಾಣ ಉಳಿಸಲು ಪ್ರಯತ್ನಿಸುತ್ತಾರೆ. ಕೆಲ ಸಂದರ್ಭ ಯಾವುದೋ ಕಾರಣದಿಂದ ಸಾವು ಸಂಭವಿಸಿದರೆ ಅದನ್ನು ವೈದ್ಯರು, ದಾದಿಯರ ನಿರ್ಲಕ್ಷೃ ಎಂದು ಆರೋಪಿಸಿ ಹಲ್ಲೆಗೆ ಮುಂದಾಗುವ ಪ್ರವೃತ್ತಿ ಹೆಚ್ಚಿದೆ. ಪ್ರಾಮಾಣಿಕವಾಗಿದ್ದರೂ ಸುಳ್ಳು ಆರೋಪಗಳು ಬಂದಾಗ ಬೇಸರವಾಗುತ್ತದೆ. ನೂತನ ಕಾನೂನು ಇಂತಹ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ಮೂಲಕ ಕೆಲಸ ಮಾಡಲು ಹೆಚ್ಚಿನ ಪ್ರೇರಣೆ ಒದಗಿಸಲಿದೆ.
    -ಲತಾ ಎಸ್.ಗೌಡ ನರ್ಸ್, ಮಂಗಳೂರು

    ಸುಗ್ರೀವಾಜ್ಞೆಯಿಂದ ಭರವಸೆ
    ಕೊವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಅಪಾಯಕಾರಿ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅನೇಕ ಕಡೆ ಅವರ ಮೇಲೆ ಹಲ್ಲೆ ಇನ್ನಿತರ ಘಟನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯಿಂದ ವೈದ್ಯರಿಗೆ ಭರವಸೆ ಹುಟ್ಟಿಸಿದೆ. ಈಗಿನ ಕಾನೂನನ್ನು ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಮಾತ್ರವಲ್ಲದೆ ಇತರ ಸಮಯಕ್ಕೂ ವಿಸ್ತರಿಸಬೇಕು. ಇದರಿಂದ ವೈದ್ಯರ ಮಾನಸಿಕ ಸ್ಥೈರ್ಯ ಹೆಚ್ಚಲಿದೆ.
    – ಡಾ.ಜನಾರ್ದನ ಪ್ರಭು, ಮಕ್ಕಳ ತಜ್ಞ, ಹೈಟೆಕ್ ಆಸ್ಪತ್ರೆ, ಉಡುಪಿ

    ವಿದೇಶಗಳಲ್ಲಿ ವೈದ್ಯರ ಮೇಲಿನ ಹಲ್ಲೆ ತಡೆಯಲು ಕಠಿಣ ಕಾನೂನುಗಳಿವೆ. ಇತ್ತೀಚೆಗೆ ಭಾರತದಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣ ಹೆಚ್ಚುತ್ತಿವೆ. ಕಾನೂನು ಕಠಿಣ ಮಾಡಬೇಕು ಎಂಬುದು ಭಾರತೀಯ ವೈದ್ಯರ ಸಂಘದ ಪ್ರಮುಖ ಬೇಡಿಕೆ. ಸಾಂಕ್ರಾಮಿಕ ರೋಗ ಸಂದಭ ದರ್ಲ್ಲಿ ವೈದ್ಯರು ಇಂಥ ಘಟನೆಗಳಿಗೆ ಹೆದರಿ ಮನೆಯಲ್ಲಿದ್ದರೆ ದೇಶದ ಪರಿಸ್ಥತಿ ಏನಾಗಬಹುದು ಎಂಬುದನ್ನು ಯೋಚಿಸಬೇಕು. ರೋಗಿಗಳಿಗೆ ಅನ್ಯಾಯವಾಗಿದ್ದರೆ ನ್ಯಾಯ ಪಡೆಯಲು ಅನೇಕ ದಾರಿಗಳಿವೆ. ಕೇಂದ್ರ ಸರ್ಕಾರ ಈ ಕಾನೂನು ಸಮರ್ಪಕವಾಗಿ ಜಾರಿ ಮಾಡಿದರೆ ವೈದ್ಯಕೀಯ ಕ್ಷೇತ್ರಕ್ಕೆ ಯುವ ಜನಾಂಗವನ್ನು ಆಕರ್ಷಿಸಲು ಸಾಧ್ಯ.
    – ಡಾ.ಸಿ.ಎಸ್. ಚಂದ್ರಶೇಖರ್, ಆಡಳಿತ ನಿರ್ದೇಶಕರು, ಆದರ್ಶ ಆಸ್ಪತ್ರೆ, ಉಡುಪಿ

    ಹೊಸ ಕಾನೂನು ಜಾರಿಯಿಂದ ತಾತ್ಕಾಲಿಕವಾಗಿ ಅನುಕೂಲವಾಗಲಿದೆ. ವೈದ್ಯರ ಪ್ರಮುಖ ಬೇಡಿಕೆಯಂತೆ ಈ ಕಾನೂನು ಎಲ್ಲ ಸಂದರ್ಭಕ್ಕೂ ಅನ್ವಯವಾಗುವಂತಿರಬೇಕು. ಇದರಿಂದ ಕಠಿಣ ಪರಿಸ್ಥತಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯರಿಗೆ ಆತ್ಮವಿಶ್ವಾಸ ಮೂಡುತ್ತದೆ. ಕಾನೂನನ್ನು ಸಮರ್ಪಕವಾಗಿ ಜಾರಿ ಮಾಡಬೇಕು.
    – ಡಾ. ಶಶಿಕಿರಣ್ ಉಮಾಕಾಂತ್
    ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಡಾ. ಟಿಎಂಎ ಪೈ ಆಸ್ಪತ್ರೆ

    ಜನರ ಆರೋಗ್ಯದ ಕಾಳಜಿ ವಹಿಸಿದವರ ಮೇಲೆ ಹಲ್ಲೆ ಸಲ್ಲ. ಇದೊಂದು ಬೇಜವಾಬ್ದಾರಿ ವರ್ತನೆ. ಹೀಗಾಗಿ ಕೇಂದ್ರ ಸರ್ಕಾರ ಕಾನೂನು ಮೂಲಕ ಇದನ್ನು ನಿಯಂತ್ರಿಸಲು ಹೊರಟಿರುವುದು ಉತ್ತಮ ಬೆಳವಣಿಗೆ. ರೋಗಿಗಳು ಅಥವಾ ಸಂಬಂಧಿಕರು ಘಟನೆಯನ್ನು ವಿಮರ್ಶಿಸದೆ ಏಕಾಏಕಿ ವೈದ್ಯರು ಹಾಗೂ ನರ್ಸ್‌ಗಳ ಮೇಲೆ ಹಲ್ಲೆಗೆ ಮುಂದಾಗುವುದನ್ನು ನೋಡಿದ್ದೇವೆ. ಸಮಾಜದ ಸ್ವಾಸ್ಥೃಕ್ಕೆ ಹೋರಾಟ ಮಾಡುವವರ ರಕ್ಷಣಗೆ ಕಾನೂನು ಬಲ ಅಗತ್ಯ.
    – ಚೈತ್ರಾ ಶೆಟ್ಟಿ, ನರ್ಸ್, ಕೆಎಂಸಿ ಮಣಿಪಾಲ

    ಕಾನೂನು ಬಲವಿದ್ದರೆ ಆರೋಗ್ಯ ಸಿಬ್ಬಂದಿ ಫೀಲ್ಡ್‌ಗೆ ಹೋಗಿ ಕೆಲಸ ಮಾಡಲು ಧೈರ್ಯ ಬರುತ್ತದೆ. ಕರೊನ ರೋಗ ತಡೆಗಟ್ಟಲು ಕ್ವಾರೆಂಟೈನ್‌ಗೆ ಒಳಪಡಿಸುವಾಗ ನಮ್ಮನ್ನು ಅನುಮಾನದಿಂದಲೇ ನೋಡುತ್ತಾರೆ. ಕೆಲವೊಮ್ಮೆ ಮಾಹಿತಿ ಕೊಡಲು ನಿರಾಕರಿಸುತ್ತಾರೆ. ವಿದೇಶದಿಂದ ಬಂದವರು ಹಾಗೂ ಯಾರಿಗಾದರೂ ಜ್ವರ ಇದೆಯೇ ಎಂದು ತಿಳಿಯಲು ಆಶಾ ಕಾರ್ಯಕರ್ತೆಯರು ಒಬ್ಬರೇ ಮನೆ ಮನೆಗೆ ಹೋಗುವುದರಿಂದ ಅಪಾಯವೂ ಇರುತ್ತದೆ. ಇಂಥ ಸಂದರ್ಭದಲ್ಲಿ ಕಾನೂನು ರಕ್ಷಣೆ ಅಗತ್ಯ.
    – ಸುಜಾತಾ, ಆಶಾ ಕಾರ್ಯಕರ್ತೆ, ಉಡುಪಿ

    ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಕ್ಲಿಷ್ಟ ಸಮಯದಲ್ಲಿ ಜನರ ಆರೋಗ್ಯಕ್ಕಾಗಿ ಹೋರಾಡುತ್ತಿರುವ ವೈದ್ಯರಿಗೆ ನೈತಿಕ ಬೆಂಬಲ ನೀಡಿದಂತಾಗಿದೆ. ಇದನ್ನು ಎಲ್ಲ ಸಂದರ್ಭಕ್ಕೂ ಅನ್ವಯವಾಗುವಂತೆ ರೂಪಿಸಬೇಕು ಎಂಬುದು ಭಾರತೀಯ ವೈದ್ಯಕೀಯ ಸಂಘದ ಬೇಡಿಕೆ. ದೀರ್ಘಾವಧಿಗೆ ಇದರಿಂದ ಪ್ರಯೋಜನವಾಗಲಿದೆ.
    – ಡಾ.ಉಮೇಶ್ ಪ್ರಭು, ಅಧ್ಯಕ್ಷ, ಐಎಂಎ ಉಡುಪಿ-ಕರಾವಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts