More

    ರೋಗ ನಿರೋಧಕ ಶಕ್ತಿ ಹೆಚ್ಚಳವೇ ಅಸ್ತ್ರ

    ಹರೀಶ್ ಮೋಟುಕಾನ ಮಂಗಳೂರು
    ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ದಿನಚರ್ಯ, ಋತುಚರ್ಯ ಪಾಲನೆ, ಆಹಾರ, ವಿಹಾರದ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಕರೊನಾ ಗೆಲ್ಲಲು ಇರುವ ಮೊದಲ ಅಸ್ತ್ರ.

    -ಇದು ಮಂಗಳೂರಿನ ಕೊಂಚಾಡಿಯ ಆಯುರ್ವೇದ ವೈದ್ಯ ಡಾ.ನವೀನ್ ಕುಮಾರ್ ಅವರ ಸಲಹೆ.
    ಬೆಳಗ್ಗೆ ಬೇಗನೆ ಏಳುವುದು, ರಾತ್ರಿ ಬೇಗನೆ ಮಲಗುವುದು, ದೇಹ ಹಾಗೂ ಮನಸ್ಸನ್ನು ಶುಚಿತ್ವದಲ್ಲಿಟ್ಟುಕೊಳ್ಳುವುದು ಅತೀ ಅವಶ್ಯ. ಉಳಿದಂತೆ ಸರ್ಕಾರದ ಸೂಚನೆಯಂತೆ ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾ ವೈರಾಣು ಹರಡದಂತೆ ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ. ಅವರ ಜತೆಗಿನ ಮಾತುಕತೆಯ ಪೂರ್ಣಪಾಠ ಇಲ್ಲಿದೆ.

    ವೈದ್ಯರ ಸೂಚನೆ ಪಾಲಿಸಿ
    ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಆಹಾರಗಳನ್ನು ಸೇವಿಸಬೇಕು. ಆಯುರ್ವೇದ ವೈದ್ಯರು ಸೂಚಿಸುವ ಕಷಾಯಗಳನ್ನು ಕುಡಿಯಬೇಕು. ಮಳೆಗಾಲದಲ್ಲಿ ಹೆಚ್ಚು ಶೀತ ಆಗದ ಆಹಾರ ಪದಾರ್ಥ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಇದ್ದರೆ ಯಾವುದೇ ಕಾಯಿಲೆಗಳು ಬಾಧಿಸುವುದಿಲ್ಲ. ರಾತ್ರಿ ವೇಳೆ ಉತ್ತಮ ನಿದ್ದೆ ದೇಹದ ಆರೋಗ್ಯ ಕಾಪಾಡಲು ಸಹಕಾರಿ.

    ಮಾನಸಿಕ ಧೈರ್ಯ ಮುಖ್ಯ
    ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಮಾನಸಿಕ ಧೈರ್ಯವೂ ಅತೀ ಅವಶ್ಯ. ವೈದ್ಯರು ಧೈರ್ಯ ತುಂಬಿಸಿ ಕಳುಹಿಸಿದರೆ, ಮನೆಯಲ್ಲಿ ಟಿವಿಯಲ್ಲಿ ಭಯ ಹುಟ್ಟಿಸುವ ಸುದ್ದಿಗಳನ್ನು ವೀಕ್ಷಿಸಿದಾಗ ಧೈರ್ಯ ಕಳೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ. ಕರೊನಾ ಸುದ್ದಿಗಳನ್ನು ವೈಭವೀಕರಿಸಿ ನೀಡುವ ಬದಲು ಮಾಹಿತಿಯನ್ನಷ್ಟೇ ನೀಡಬೇಕು. ಜನರಲ್ಲಿ ಧೈರ್ಯ ತುಂಬಿಸುವ ಕೆಲಸ ನಡೆಯಬೇಕಿದೆ. ಇಲ್ಲದಿದ್ದರೆ ಜನರು ಖಿನ್ನತೆಗೆ ಜಾರುವ ಅಪಾಯವೂ ಇದೆ.

    ಮನೆಯಲ್ಲಿ ಸಂತೋಷವಾಗಿರಿ
    ಮನೆಯಲ್ಲಿ ಹಿರಿಯರು, ಮಕ್ಕಳೊಂದಿಗೆ ಬೆರೆತು ಅವರನ್ನು ಗೌರವಾದರಗಳಿಂದ ಕಾಣುವಂತಾಗಬೇಕು. ಮನೆಯಲ್ಲಿ ಸಂತೋಷದ ವಾತಾವರಣ ಇದ್ದಾಗ ದೇಹದ ರೋಗ ನಿರೋಧಕ ಶಕ್ತಿಯೂ ಹೆಚ್ಚಳವಾಗುತ್ತದೆ. ಗಲಾಟೆಗಳು ಹೆಚ್ಚಾದರೆ ಮನಸ್ಸು ಸ್ಥಿಮಿತ ಕಳೆದುಕೊಳ್ಳುತ್ತದೆ. ಕೆಲವೊಮ್ಮೆ ದುರ್ಘಟನೆಗಳೂ ಸಂಭವಿಸಬಹುದು. ಆದ್ದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿ ಮನೆಯಲ್ಲಿ ಸಂತೋಷ, ನೆಮ್ಮದಿಯಿಂದ ಇರಬೇಕು.

    ರಾಜ್ಯದಲ್ಲಿ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದೃಢಪಡುತ್ತಿದ್ದರೂ, ಸಾವು ಪ್ರಮಾಣ ತೀರಾ ಕಡಿಮೆ ಇದೆ. ಆದ್ದರಿಂದ ಜನರು ಭಯ ಪಡುವ ಅಗತ್ಯವಿಲ್ಲ. ಮುಂಜಾಗ್ರತೆ ವಹಿಸಬೇಕು. ಆಯುರ್ವೇದದಲ್ಲಿ 3 ಸಾವಿರ ವರ್ಷಗಳ ಹಿಂದೆಯೇ ಹೇಳಿದಂತೆ ಭಾರತೀಯರು ಜೀವನ ಶೈಲಿ ಅನುಸರಿಸಿದ ಹಿನ್ನೆಲೆಯಿಂದ ರೋಗ ನಿರೋಧಕ ಶಕ್ತಿ ಉತ್ತಮವಾಗಿದೆ. ಪ್ರಸ್ತುತ ವಿದೇಶಿ ಸಂಸ್ಕೃತಿ, ಜೀವನ ವಿಧಾನ ಅನುಸರಿಸುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ.
    – ಡಾ.ನವೀನ್ ಕುಮಾರ್ ಕೊಂಚಾಡಿ. ಆಯುರ್ವೇದ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts