More

    ಗ್ರಾಮಾಂತರ ಜಿಲ್ಲಾಧಿಕಾರಿಗೆ ಕರೊನಾ; ಶಕ್ತಿಸೌಧ ಗಢಗಢ; ಜಿಲ್ಲಾಡಳಿತ ಭವನಕ್ಕೂ ಕಾಲಿಟ್ಟ ಮಾರಿ

    ಬೆಂಗಳೂರು ಗ್ರಾಮಾಂತರ: ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗೆ ಕರೊನಾ ದೃಢಪಟ್ಟಿದೆ. ಕಳೆದೆರಡು ದಿನದಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಗಂಟಲುದ್ರವ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಸೋಂಕು ದೃಢಪಟ್ಟಿರುವುದರಿಂದ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಕ್ತಿ ಸೌಧದಲ್ಲಿ ಢವಢವ: ಜಿಲ್ಲಾಡಳಿತ ಭವನಕ್ಕೂ ಕಾಲಿಟ್ಟ ಕರೊನಾದಿಂದ ಶಕ್ತಿಸೌಧದಲ್ಲಿ ಭಯ ಆರಂಭವಾಗಿದೆ. ಅಧಿಕಾರಿಗೆ ಕರೊನಾ ದೃಢಪಡುತ್ತಿದ್ದಂತೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.
    ಇಡೀ ಜಿಲ್ಲಾಡಳಿತ ಭವನಕ್ಕೆ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಕಂದಾಯ ಇಲಾಖೆ ಹಾಗೂ ಜಿಪಂನ 37ಕ್ಕೂ ಹೆಚ್ಚು ಇಲಾಖೆಗಳಲ್ಲಿನ ಸಿಬ್ಬಂದಿಗೆ ಆತಂಕ ಶುರುವಾಗಿದೆ.

    ಜಿಲ್ಲಾಡಳಿತ ಭವನ ಸೀಲ್‌ಡೌನ್?: ಜಿಲ್ಲಾಡಳಿತ ಭವನದ ಎದುರೆ ಇರುವ ವಿಶ್ವನಾಥಪುರ ಠಾಣೆ ಈಗಾಗಲೇ ಸೀಲ್‌ಡೌನ್ ಆಗಿದೆ. ಜಿಲ್ಲಾಡಳಿತ ಭವನದಲ್ಲಿ ಕೆಲ ಸಿಬ್ಬಂದಿಗೆ ಕರೊನಾ ಲಕ್ಷಣ ಕಂಡುಬಂದಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನ ಸೀಲ್‌ಡೌನ್ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ತಿಳಿದುಬಂದಿದೆೆ.

    ಅಧಿಕಾರಿ ವರ್ಗದಲ್ಲಿ ಆತಂಕ: ಸೋಂಕಿತ ಅಧಿಕಾರಿ ಜತೆ ಯಾವಾಗಲೂ ನೇರ ಸಂಪರ್ಕದಲ್ಲಿದ್ದ ನಾಲ್ಕು ತಾಲೂಕುಗಳ ತಹಸೀಲ್ದಾರ್, ಎಸಿ ಹಾಗೂ ಇಲಾಖೆಗಳ ಉಪನಿರ್ದೇಶಕ ಅಧಿಕಾರಿಗಳು ಹಾಗೂ ಕೆಳಹಂತದ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.

    ಟ್ರಾವೆಲ್ ಹಿಸ್ಟರಿ ಕಗ್ಗಂಟು: ಜಿಲ್ಲಾಧಿಕಾರಿ ಪ್ರವಾಸಿ ಮಂದಿರ ಸೇರಿ ಎಲ್ಲ ಕಡೆಗಳಲ್ಲೂ ಸಂಚರಿಸಿದ್ದಾರೆ. ಕಚೇರಿ ಕೆಲಸಗಳೊಂದಿಗೆ ಕೋವಿಡ್ ವಿಶೇಷ ಕೆಲಸದಲ್ಲೂ ಪ್ರತಿದಿನ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಾವೆಲ್ ಹಿಸ್ಟರಿ ಪತ್ತೆಹಚ್ಚುವುದು ಕಗ್ಗಂಟಾಗಿದೆ. ಇದರ ಜತೆಗೆ ಕಾರ್ಯನಿಮಿತ್ತ ಪ್ರತಿನಿತ್ಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿ ಬಂದಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಸೋಂಕಿತರ ಟ್ರಾವೆಲ್ ಹಿಸ್ಟರಿ ಜಾಡು ಹಿಡಿಯುವುದು ಸವಾಲಿನ ಕೆಲಸವಾಗಿದೆ. ಡಿಸಿ ಕಾರು ಚಾಲಕ ಹಾಗೂ ಗನ್‌ಮ್ಯಾನ್ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳಾಗಿದ್ದಾರೆ.

    ಸಾರ್ವಜನಿಕರಲ್ಲೂ ಆತಂಕ: ಗ್ರಾಮಾಂತರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ. ಈಗಾಗಲೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿಗಳಿಬ್ಬರಲ್ಲಿ ಕರೊನಾ ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದೆ. ಪ್ರತಿದಿನ ನೂರಾರು ಸಾರ್ವಜನಿಕರು ಭೇಟಿ ನೀಡುವ ಜಿಲ್ಲಾಡಳಿತ ಭವನದಲ್ಲಿ ಕರೊನಾತಂಕ ತೀವ್ರವಾಗಿದ್ದು, ಸಾರ್ವಜನಿಕರಲ್ಲೂ ಢವಢವ ಶುರುವಾಗಿದೆ.

    ಕೆಂಪೇಗೌಡ ಪುತ್ಥಳಿ ಟೆನ್ಷನ್: ಜೂ.27ರಂದು ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಕಂಚಿನ ಪುತ್ಥಳಿ ಶಂಕುಸ್ಥಾಪನೆ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಜಿಲ್ಲಾಧಿಕಾರಿ ಕಾರ್ಯಕ್ರಮದಲ್ಲಿ ಸಾಕಷ್ಟು ಓಡಾಟ ನಡೆಸಿದ್ದಾರೆ. ಮುಖ್ಯಮಂತ್ರಿಯಾದಿಯಾಗಿ ರಾಜ್ಯದ ಹಲವು ಸಚಿವರು, ಮುಖಂಡರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.

    ಇಂಥ ಸಂದರ್ಭದಲ್ಲಿ ಯಾರೂ ಎದೆಗುಂದಬಾರದು. ಧೈರ್ಯವಾಗಿ ಪರಿಸ್ಥಿತಿ ಎದುರಿಸಬೇಕು. ಆದಷ್ಟು ಬೇಗ ಗುಣಮುಖನಾಗಿ ಸೇವೆಗೆ ಹಿಂತಿರುಗುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ.
    ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ

    ಜಿಲ್ಲಾಡಳಿತ ಭವನವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಇಲ್ಲಿನ ಪ್ರತಿ ಸಿಬ್ಬಂದಿಗೂ ಕರೊನಾ ಟೆಸ್ಟ್ ನಡೆಸಲು ಸಿದ್ಧತೆ ಆರಂಭವಾಗಿದೆ. ಪರಿಸ್ಥಿತಿ ಆಧರಿಸಿ ಸೀಲ್‌ಡೌನ್ ಪ್ರಕ್ರಿಯೆ ನಡೆಯಲಿದೆ.
    ಡಾ.ಜಗದೀಶ್ ಕೆ.ನಾಯಕ್, ಅಪರ ಜಿಲ್ಲಾಧಿಕಾರಿ

    ಕರೊನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನ ಜಿಲ್ಲಾಡಳಿತ ಭವನ ಸೀಲ್‌ಡೌನ್ ಮಾಡುವುದು ಅಗತ್ಯವಿದೆ. ಜಿಲ್ಲೆಯ ಮೂಲೆಮೂಲೆಗಳಿಂದ ಹಾಗೂ ಬೆಂಗಳೂರಿನಿಂದ ಪ್ರತಿದಿನ ಸಾವಿರಾರು ಸಿಬ್ಬಂದಿ ಬರುವುದರಿಂದ ಸೋಂಕಿನ ಅಪಾಯವಿದೆ.
    ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts