More

    ಎರಡಂಕಿಗೆ ಏರಿದ ಕರೊನಾ ಪಾಸಿಟಿವ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕರೊನಾ ಪ್ರಕರಣಗಳಿಗೆ ಮತ್ತೆ ಮೂರು ಸೇರ್ಪಡೆಗೊಂಡಿದ್ದು ಒಟ್ಟು ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

    ಶನಿವಾರ ಬಂದಿರುವ 43 ವರದಿಗಳಲ್ಲಿ 40 ನೆಗೆಟಿವ್ ಆಗಿದ್ದು, 3 ಮಾತ್ರ ಪಾಸಿಟಿವ್ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ರೋಗಿ ನಂ.10 ಉಡುಪಿ ಜಿಲ್ಲೆ ಕಾರ್ಕಳ ಮೂಲದ 63 ವರ್ಷದ ಮಹಿಳೆ. ಇವರು ದುಬೈನಿಂದ ಮಾರ್ಚ್ 21ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು. ಅವರಿಗೆ ಬಳಿಕ ರೋಗ ಲಕ್ಷಣಗಳು ಕಾಣಿಸಿದ್ದರಿಂದ ಗಂಟಲು ದ್ರವದ ಮಾದರಿಯನ್ನು ಏ.2ರಂದು ಸಂಗ್ರಹಿಸಿ ಕಳುಹಿಸಲಾಗಿತ್ತು. ಶನಿವಾರ ಬಂದ ವರದಿಯಂತೆ ಕರೊನಾ ದೃಢಪಟ್ಟಿದೆ.

    ರೋಗಿ ನಂ.11 ಬಂಟ್ವಾಳದ ತುಂಬೆ ಗ್ರಾಮದ 43 ವರ್ಷದ ವ್ಯಕ್ತಿ. ಇವರು ಮಾರ್ಚ್ 11ರಂದು ದೆಹಲಿಗೆ ಪ್ರಯಾಣಿಸಿ, 22ರಂದು ಹಿಂದಿರುಗಿದ್ದರು. ಏ.2ರಂದು ರಕ್ತದ ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಿದ್ದು, ಸೋಂಕು ದೃಢಪಟ್ಟಿದೆ. ರೋಗಿ ನಂ.12 ತೊಕ್ಕೊಟ್ಟು ಮೂಲದ 52ರ ಹರೆಯದವರು. ಇವರು ಫೆ.6ರಂದು ಮುಂಬೈ, ಅಲ್ಲಿಂದ ದೆಹಲಿಗೆ ಪ್ರಯಾಣಿಸಿದ್ದರು. 20ರಂದು ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ್ದರು. ಇವರ ಗಂಟಲು ದ್ರವ ಪರೀಕ್ಷೆ ಏ.2ರಂದು ನಡೆಸಿದ್ದು, ವರದಿಯಂತೆ ಕರೊನಾ ದೃಢಪಟ್ಟಿದೆ. ರೋಗಿ ನಂ.11 ಹಾಗೂ 12 ಇಬ್ಬರೂ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದ್ದು ಸದ್ಯ ವೆನ್ಲಾಕ್‌ಗೆ ಸ್ಥಳಾಂತರಿಸಲಾಗಿದೆ. ಶನಿವಾರ 27 ಮಂದಿಯ ತಪಾಸಣೆ ಕೈಗೊಳ್ಳಲಾಗಿದ್ದು, ಇದುವರೆಗೆ 38,545 ಮಂದಿಯ ತಪಾಸಣೆ ನಡೆಸಲಾಗಿದೆ. 4629 ಮಂದಿಯನ್ನು ಮನೆಯಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ. 1057 ಮಂದಿ ಈಗಾಗಲೇ 28 ದಿನಗಳ ದಿಗ್ಬಂಧನ ಪೂರೈಸಿದ್ದು, ಯಾವುದೇ ರೋಗ ಲಕ್ಷಣ ಕಾಣಿಸಿಲ್ಲ. ಶನಿವಾರ 28 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.

    ಮ್ಯಾಗಿ, ಮೊಟ್ಟೆ ಬೇಕೆಂದು ಪಿಎಂಒಗೆ ಟ್ವೀಟ್!: ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಅನೇಕರು ಸಮಸ್ಯೆಗೆ ಸಿಲುಕಿರಬಹುದು. ಆದರೆ ಉತ್ತರ ಭಾರತ ಮೂಲದ ವಿದ್ಯಾರ್ಥಿನಿ ಲಾಕ್‌ಡೌನ್‌ನಿಂದಾಗಿ ತನಗೆ ಮೊಟ್ಟೆ ಹಾಗೂ ಮ್ಯಾಗಿ ಬೇಕು ಎಂದು ನೇರವಾಗಿ ಪ್ರಧಾನ ಮಂತ್ರಿ ಕಚೇರಿಗೆ ಟ್ವೀಟ್ ಮಾಡಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಸೌಮ್ಯಾ ಸಿಂಗ್ ಎಂಬಾಕೆ ಮಾರ್ಚ್ 31ರಂದು ಎಲ್ಲ ಅಂಗಡಿ ಮುಚ್ಚಿದ್ದರಿಂದ ತನಗೆ ಮೊಟ್ಟೆ ಹಾಗೂ ಮ್ಯಾಗಿ ಬೇಕು ಎಂದು ಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ ರಾಜ್ಯ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಈ ಮಾಹಿತಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಾರ್‌ರೂಂಗೆ ರವಾನಿಸಿದ್ದರು. ಅಲ್ಲಿನ ತಂಡ ವಿದ್ಯಾರ್ಥಿನಿಯ ಫೋನ್ ನಂಬರ್ ಸಂಪರ್ಕಿಸಿ ಉಚಿತವಾಗಿ 12 ಮೊಟ್ಟೆ, ಮ್ಯಾಗಿ ಪ್ಯಾಕೆಟ್ ವಿತರಿಸಿದ್ದಾರೆ.

    ಮುಂದುವರಿಯಲಿದೆ ಲಾಕ್‌ಡೌನ್: ಸದ್ಯದ ಮಾಹಿತಿ ಪ್ರಕಾರ ಲಾಕ್‌ಡೌನ್ ಏ.14ರವರೆಗೂ ಯಥಾಸ್ಥಿತಿಯಂತೆ ಮುಂದುವರಿಯಲಿದ್ದು, ಖಾಸಗಿ ವಾಹನ ಸಂಚಾರಕ್ಕೆ ಪೂರ್ಣ ನಿಷೇಧ ಹೇರಲಾಗಿದೆ. ಬ್ಯಾಂಕ್‌ಗಳು ತಮ್ಮ ಸಿಬ್ಬಂದಿಯ ಪಟ್ಟಿ ಹಾಗೂ ಅವರ ಮನೆಯಿಂದ ಬ್ಯಾಂಕ್‌ಗೆ ಹೋಗುವ ರೂಟ್ ಮ್ಯಾಪ್ ಕಡ್ಡಾಯವಾಗಿ ಸಲ್ಲಿಸಬೇಕು. ದ್ವಿಚಕ್ರ ಮತ್ತು ಕಾರುಗಳು ಪಾಸ್ ಇಲ್ಲದೆ ಸಂಚರಿಸಿದರೆ ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಅತಿ ತುರ್ತು ವೈದ್ಯಕೀಯ ಸೇವೆಗಳಾದ ಡಯಾಲಿಸಿಸ್, ಕೀಮೋಥೆರಪಿ ಹಾಗೂ ಗರ್ಭಿಣಿಯರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಕಂಟ್ರೋಲ್ ರೂಮ್ ಉಚಿತ ಸಹಾಯವಾಣಿ 1077ಕ್ಕೆ ಕರೆ ಮಾಡಿದರೆ ಅಥವಾ 9483908000ಗೆ ಮೆಸೇಜ್ ಮಾಡಿದರೆ ಒಂದು ದಿನದ ತುರ್ತು ವೈದ್ಯಕೀಯ ಪಾಸ್ ವಿತರಿಸಲಾಗುವುದು. ಇತರ ವೈದ್ಯಕೀಯ ಸೇವೆ ಬೇಕಾದರೆ 1077 ಅಥವಾ 108ಕ್ಕೆ ಕರೆ ಮಾಡಿದರೆ ಆಂಬುಲೆನ್ಸ್ ಕಳುಹಿಸಲಾಗುವುದು.

    ಪಡಿತರಕ್ಕೆ ಇಂದು ರಜೆ ಇಲ್ಲ: ನ್ಯಾಯಬೆಲೆ ಅಂಗಡಿಗಳಿಗೆ ಏಪ್ರಿಲ್ 5, 6 ಹಾಗೂ 7ರಂದು ರಜೆ ಇರುವುದಿಲ್ಲ, ಎಂದಿನಂತೆ ಪಡಿತರ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕ್ವಾರಂಟೈನ್‌ನಲ್ಲಿ 500ಕ್ಕೂ ಅಧಿಕ ಮನೆ: ಬಂಟ್ವಾಳ: ತುಂಬೆ ಗ್ರಾಮದ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಯಾರೂ ಮನೆಯಿಂದ ಹೊರ ಬಾರದಂತೆ ಪೊಲೀಸರು ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಿದ್ದಾರೆ.

    ಸೋಂಕು ದೃಢಪಟ್ಟಿರುವುದು ಖಚಿತಗೊಳ್ಳುತ್ತಿದ್ದಂತೆ ತಹಸೀಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಏ.5ರಿಂದ ಆಶಾ ಕಾರ್ಯಕರ್ತೆಯರು ಭೇಟಿ ನೀಡಲಿದ್ದಾರೆ. ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಹಕಾರ ನೀಡಬೇಕು ಎಂದು ಮಂಗಳೂರು ಕ್ಷೇತ್ರ ಶಾಸಕ ಯು.ಟಿ.ಖಾದರ್ ಮನವಿ ಮಾಡಿದ್ದಾರೆ. ಸೋಂಕು ದೃಢಪಟ್ಟವರ ಜತೆ ಸಂಪರ್ಕದಲ್ಲಿದ್ದವರು ಸ್ವಯಂಪ್ರೇರಿತರಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪ್ರಸ್ತುತ ಕ್ವಾರಂಟೈನ್‌ನಲ್ಲಿರುವ ಮನೆಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗ್ರಾಮಸ್ಥರು ಈಗಾಗಲೇ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದೂ ಶಾಸಕರು ತಿಳಿಸಿದ್ದಾರೆ.

    ಕಾಸರಗೋಡಿನ ಮತ್ತೆ 6 ಮಂದಿಗೆ ಸೋಂಕು: ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 6 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ಖಚಿತವಾಗಿದೆ. ಉಳಿದಂತೆ ಕೇರಳ ರಾಜ್ಯದ ಕಣ್ಣೂರು, ಪಾಲಕ್ಕಾಡ್, ಎರ್ನಾಕುಳಂ, ಆಲಪ್ಪುಳ, ಕೊಲ್ಲಂ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

    ಕೇರಳದಲ್ಲಿ ಶನಿವಾರ ಎಂಟು ಮಂದಿಯ ತಪಾಸಣಾ ವರದಿಯಲ್ಲಿ ನೆಗೆಟಿವ್ ಕಂಡುಬಂದಿದೆ. ಒಟ್ಟು 306 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, 50 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. 257 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
    ಕಾಸರಗೋಡಿನಲ್ಲಿ ಶನಿವಾರ ವೈರಸ್ ಪತ್ತೆಯಾದವರಲ್ಲಿ ಮೂವರು ದುಬೈಯಿಂದ ಬಂದವರು. ನಿಜಾಮುದ್ದೀನ್ ತಬ್ಲಿಘಿ ಸಮ್ಮೇಳನಕ್ಕೆ ತೆರಳಿದ್ದ ಒಬ್ಬರಿಗೆ ಸೋಂಕು ತಗುಲಿದೆ. ಉಳಿದ ಇಬ್ಬರಿಗೆ ರೋಗ ಬಾಧಿತರ ಸಂಪರ್ಕದಿಂದ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು 10563 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 10368 ಮಂದಿ ಮನೆಗಳಲ್ಲಿ, 195 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಶನಿವಾರ 42 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ.

    ಉಡುಪಿಯಲ್ಲಿ 4 ನೆಗೆಟಿವ್: ಉಡುಪಿ: ಜಿಲ್ಲಾಡಳಿತ ಶನಿವಾರ ಸ್ವೀಕರಿಸಿದ ಎಲ್ಲ 4 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. 6 ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 41 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ. ಶನಿವಾರಕ್ಕೆ 15 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ದಾಖಲಾದ ಜಿಲ್ಲೆಯ ಕರೊನಾ ಸೋಂಕಿತ ಮಹಿಳೆಯ ಸಂಪರ್ಕವಾದ 32 ಮಂದಿಯನ್ನು ಇಲಾಖೆಯಿಂದ ಗುರುತಿಸಲಾಗಿದೆ. ಇವರೆಲ್ಲರಿಗೂ, 14 ದಿನಗಳ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ನಿಗಾ ಇಟ್ಟಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸೋಂಕಿತ ವ್ಯಕ್ತಿಯ ಕುಟುಂಬಕ್ಕೆ ಗೃಹಬಂಧನ: ಉಳ್ಳಾಲ: ತೊಕ್ಕೊಟ್ಟಿನ ವಸತಿ ಸಮುಚ್ಚಯದ ವ್ಯಕ್ತಿಗೆ ಕೊವಿಡ್ 19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಗೃಹಬಂಧನದಲ್ಲಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

    ಮಾ.15ರಂದು ಮುಂಬೈನಿಂದ ನಿಜಾಮುದ್ದೀನ್‌ಗೆ ಪ್ರಯಾಣ ಬೆಳೆಸಿದ್ದ ತೊಕ್ಕೊಟ್ಟು ನಿವಾಸಿ ಮಾ.20ರಂದು ಹಿಂದೆ ಬಂದಿದ್ದಾರೆ. ತಲುಪಿದ್ದರು. ಅಲ್ಲಿಂದ ಚೆಂಬುಗುಡ್ಡೆ ಮಸೀದಿಯಲ್ಲಿ ನಮಾಜಿಗೆ ತೆರಳಿದ್ದರು. ಮರುದಿನ ಲಾಕ್‌ಡೌನ್ ಘೋಷಣೆಯಾದ ಬಳಿಕ ಮಾ.31ರಂದು ಮಾರ್ನಮಿಕಟ್ಟೆಯ ರೇಷನ್ ಅಂಗಡಿಗೆ ತೆರಳಿದ್ದರು. ಉಳ್ಳಾಲ ಪೊಲೀಸರು ಆರೋಗ್ಯ ಇಲಾಖೆ ಮುಖೇನ ವ್ಯಕ್ತಿಯನ್ನು ವಶಕ್ಕೆ ಪಡೆದು ಯೇನೆಪೋಯ ಆಸ್ಪತ್ರೆ ಎದುರಿನ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಇರಿಸಿದ್ದರು. ಏ.1, 2ರಂದು ಎರಡು ದಿನಗಳ ಕಾಲ ಇರಿಸಲಾಗಿದ್ದು, ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ದೊರೆತ ವರದಿಯಲ್ಲಿ ಕೋವಿಡ್ 19 ಸೋಂಕು ದೃಢವಾದ ಹಿನ್ನೆಲೆಯಲ್ಲಿ ವೆನ್ಲಾಕ್‌ಗೆ ಸ್ಥಳಾಂತರಿಸಿದ್ದಾರೆ.

    ಇದೇ ವೇಳೆ ಅವರ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು ಪತ್ನಿ ಮತ್ತು ಮಗಳು ಮನೆಯಿಂದ ಹೊರಹೋಗದಂತೆ ಎಚ್ಚರಿಸಿದ್ದಾರೆ. ವಸತಿ ಸಮುಚ್ಚಯದಲ್ಲಿರುವವರು ಹೊರಗೆ ಹೋಗುವುದನ್ನೂ ತಡೆಯುವಂತೆ ಪಹರೇದಾರನಿಗೆ ಸೂಚಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಭಾನುವಾರ ಜಿಲ್ಲಾಧಿಕಾರಿ ತೀರ್ಮಾನ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.

    ದೆಹಲಿಗೆ ಹೋಗಿದ್ದಾತನಿಗೆ ಹೋಮ್ ಕ್ವಾರಂಟೈನ್: ಗಂಗೊಳ್ಳಿ: ದೆಹಲಿಗೆ ಹೋಗಿ ಬಂದಿದ್ದಾನೆ ಎನ್ನಲಾಗಿರುವ ಗಂಗೊಳ್ಳಿಯ ವ್ಯಕ್ತಿಯೋರ್ವನನ್ನು ಶನಿವಾರ ಕುಂದಾಪುರದ ಹೋಮ್ ಕ್ವಾರಂಟೈನ್‌ಗೆ ಸೇರಿಸಲಾಗಿದೆ.

    ಸ್ಥಳೀಯ ಮಸೀದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಿಂಗಳ ಹಿಂದೆ ದೆಹಲಿಗೆ ಹೋಗಿ ಬಂದಿದ್ದು ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಹಾಗೂ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ಈ ವ್ಯಕ್ತಿ ಉಳಿದುಕೊಂಡಿರುವ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.ಈತ ಆರೋಗ್ಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕು ಆರೋಗ್ಯಾಧಿಕಾರಿ ಸೂಚನೆಯಂತೆ ಕುಂದಾಪುರದಲ್ಲಿರುವ ಹೋಮ್ ಕ್ವಾರಂಟೈನ್‌ಗೆ ಕರೆದೊಯ್ಯಲಾಗಿದೆ.

    ದೆಹಲಿಗೆ ಹೋದ 43 ಮಂದಿ ಕ್ವಾರಂಟೈನ್: ಮಂಗಳೂರು: ಇದುವರೆಗೆ ದಕ್ಷಿಣ ಕನ್ನಡದಲ್ಲಿ ದೆಹಲಿಯ ತಬ್ಲಿಘೀ ಸಮಾವೇಶಕ್ಕೆ ಹೋಗಿ ಬಂದ 43 ಮಂದಿಯನ್ನು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಆಗಿ ಇರಿಸಲಾಗಿದೆ. ಎಲ್ಲರ ಗಂಟಲು ದ್ರವದ ಮಾದರಿ ಕಳುಹಿಸಲಾಗಿದ್ದು, ಶನಿವಾರ ಆಗಮಿಸಿದ 8 ವರದಿಗಳಲ್ಲಿ ಎರಡು ಪಾಸಿಟಿವ್ ಆಗಿ ದೃಢಪಟ್ಟಿದೆ.

    ಮೊದಲ ಪಟ್ಟಿಯಲ್ಲಿ ದೆಹಲಿ ಸಮಾವೇಶಕ್ಕೆ ಹೋಗಿಬಂದ 29 ಮಂದಿಯ ಹೆಸರು ಬಂದರೆ ಆ ಬಳಿಕ 14 ಮಂದಿಯ ಹೆಸರು ಬಂದಿತ್ತು, ಅವರೆಲ್ಲರನ್ನೂ ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಆಗಿರುವ ಇಬ್ಬರ ಜತೆ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಕ್ವಾರಂಟೈನ್ ಮಾಡುವ ಕೆಲಸ ನಡೆಯುತ್ತಿದೆ. ಇವರಲ್ಲಿ 50 ವರ್ಷ ಮೇಲ್ಪಟ್ಟವರನ್ನು ಹೈರಿಸ್ಕ್ ಹಾಗೂ ಕೆಳಗಿನವರನ್ನು ಲೋ ರಿಸ್ಕ್ ಆಗಿ ಕ್ವಾರಂಟೈನ್ ಮಾಡಲಾಗುತ್ತದೆ. ಇನ್ನು ಕಾರ್ಕಳ ಮೂಲದ ಮಹಿಳೆ ಮಾರ್ಚ್ 21ರಂದು ದುಬೈನಿಂದ ವಿಮಾನದಲ್ಲಿ ಇತರ 8 ಮಂದಿಯೊಂದಿಗೆ ಆಗಮಿಸಿದ್ದರು, ಆಕೆ 63 ವರ್ಷದವರು ಎನ್ನುವ ಕಾರಣಕ್ಕಾಗಿ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಕ್ವಾರಂಟೈನ್ ಮಾಡಿ, ಇಎಸ್‌ಐ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. 12ನೇ ದಿನ ಗಂಟಲಿನ ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ಆಕೆಯ ವರದಿ ಮಾತ್ರ ಪಾಸಿಟಿವ್ ಆಗಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts