More

    ಇಬ್ಬರು ಶಿಕ್ಷಕರಿಗೆ ಕರೊನಾ ಪಾಸಿಟಿವ್

    ರಾಣೆಬೆನ್ನೂರ: ಶಾಲೆಗಳು ಆರಂಭಗೊಂಡ ಮೂರು ದಿನಗಳ ಬಳಿಕ ಸರ್ಕಾರಿ ಶಾಲೆಯ ಒಬ್ಬರು ಮತ್ತು ಖಾಸಗಿ ಶಾಲೆಯ ಒಬ್ಬರು ಶಿಕ್ಷಕರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಮಕ್ಕಳು ಹಾಗೂ ಪಾಲಕರಲ್ಲಿ ಆತಂಕ ಸೃಷ್ಟಿಸಿದೆ.

    ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಕಮದೋಡ ಗ್ರಾಮ ಬಳಿಯ ಖಾಸಗಿ ಶಾಲೆಯ ಶಿಕ್ಷಕರೊಬ್ಬರಿಗೆ ಕರೊನಾ ಸೋಂಕು ತಗುಲಿದೆ. ಹೀಗಾಗಿ ಎರಡೂ ಶಾಲೆಗಳನ್ನು ಸೋಮವಾರ ಸೀಲ್​ಡೌನ್ ಮಾಡಲಾಗಿದೆ. ಶಾಲೆಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷಕುಮಾರ ಹಾಗೂ ಬಿಇಒ ಗುರುಪ್ರಸಾದ ಭೇಟಿ ನೀಡಿ ಪರಿಶೀಲಿಸಿದರು.

    ಪಾಲಕರಲ್ಲಿ ಆತಂಕ: ಶಿಕ್ಷಕಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕ್ಕಕುರುವತ್ತಿ ಶಾಲೆಯಲ್ಲಿ ಸೋಮವಾರ ಮಕ್ಕಳು ಮತ್ತು ಶಿಕ್ಷಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಶಾಲೆ ಆರಂಭಗೊಂಡಾಗಿನಿಂದ 6 ಶಿಕ್ಷಕರು ಹಾಗೂ 23 ಮಕ್ಕಳು ಹಾಜರಾಗಿದ್ದರು. ಮೂರು ದಿನಗಳ ಬಳಿಕ ವರದಿ ಬಂದಿದ್ದರಿಂದ ಮಕ್ಕಳ ಪಾಲಕರು ಸೇರಿದಂತೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

    ಖಾಸಗಿ ಶಾಲೆ ಆರಂಭಗೊಂಡ ದಿನದಿಂದ ಎರಡ್ಮೂರು ಮಕ್ಕಳು ಮಾತ್ರ ಬಂದಿದ್ದರು. ಅಲ್ಲದೆ ಪಾಸಿಟಿವ್ ಬಂದಿರುವ ಶಿಕ್ಷಕಿ ರಜೆ ಮೇಲಿದ್ದರು. ಹೀಗಾಗಿ ಇತರರಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆಯಿದೆ. ಆದರೂ ಶಾಲೆಯ ಎಲ್ಲ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

    ನಿಯಮ ಪಾಲಿಸದ ಶಿಕ್ಷಕರು: ಸರ್ಕಾರದ ನಿಯಮಾವಳಿ ಪ್ರಕಾರ, ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಶಿಕ್ಷಕರು 72 ಗಂಟೆಯೊಳಗೆ ನೆಗೆಟಿವ್ ವರದಿಯೊಂದಿಗೆ ಶಾಲೆಗೆ ಹಾಜರಾಗಬೇಕು. ಆದರೆ, ತಾಲೂಕಿನ ಚಿಕ್ಕ ಕುರುವತ್ತಿ ಶಾಲೆ ಸೇರಿ ಯಾವ ಶಾಲೆಯಲ್ಲೂ ಸರ್ಕಾರದ ನಿಯಮಾವಳಿ ಪಾಲನೆಯಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಎಲ್ಲ ಶಾಲೆಯ ಶಿಕ್ಷಕರು ಕೋವಿಡ್-19 ಪರೀಕ್ಷೆಗೆ ಸ್ವ್ಯಾಬ್ ನೀಡಿದ್ದಾರೆ. ಆದರೆ, ವರದಿ ಬರುವುದು ವಿಳಂಬವಾಗಿದೆ. ಹೀಗಾಗಿ ಬಹುತೇಕ ಶಿಕ್ಷಕರು ವರದಿ ಬರುವ ಮುನ್ನವೇ ಶಾಲೆಗೆ ಹಾಜರಾಗಿದ್ದಾರೆ.

    ಬಿಇಒಗೆ ತರಾಟೆ…

    ಚಿಕ್ಕಕುರುವತ್ತಿ ಗ್ರಾಮಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಅವರನ್ನು ಗ್ರಾಮಸ್ಥರು ಹಾಗೂ ಪಾಲಕರು ತರಾಟೆಗೆ ತೆಗೆದುಕೊಂಡರು. ಕೋವಿಡ್-19 ವರದಿ ಬಾರದೆ ಶಿಕ್ಷಕರನ್ನು ಹೇಗೆ ಶಾಲೆಗೆ ಕಳುಹಿಸಿದ್ದೀರಿ? ಶಾಲೆಗಳಲ್ಲಿ ಕರೊನಾ ನಿಯಮ ಪಾಲಿಸಿಲ್ಲ. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಯಾರು ಜವಾಬ್ದಾರರು? ಎಂದು ಪಾಲಕರಾದ ಸುರೇಶ ಚನ್ನಗೌಡ್ರ, ಬಸವರಾಜ ಹಲಗೇರಿ, ಮೇಘರಾಜ ಇತರರು ಆಕ್ರೋಶ ವ್ಯಕ್ತಪಡಿಸಿದರು. ಈ ವರ್ಷ ಶಾಲೆಗಳನ್ನು ಸಂಪೂರ್ಣ ಬಂದ್ ಮಾಡಬೇಕು ಎಂದೂ ಒತ್ತಾಯಿಸಿದರು.

    ಚಿಕ್ಕಕುರುವತ್ತಿ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಯ ತಲಾ ಒಬ್ಬ ಶಿಕ್ಷಕರಿಗೆ ಕರೊನಾ ಪಾಸಿಟಿವ್ ಬಂದಿದೆ. ಎರಡೂ ಶಾಲೆಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಶಿಕ್ಷಕರು ಕಡ್ಡಾಯವಾಗಿ ಕೋವಿಡ್-19 ನೆಗೆಟಿವ್ ವರದಿ ಪಡೆದುಕೊಂಡು ಶಾಲೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಪಾಸಿಟಿವ್ ದೃಢಪಟ್ಟವರು ಶಾಲೆಗೆ ಹಾಜರಾದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲಾಗುವುದು.
    | ಗುರುಪ್ರಸಾದ, ಬಿಇಒ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts