More

    ಕರೊನಾ ಸಮರಕ್ಕೆ ಎನ್‌ಎಸ್‌ಎಸ್ ಟೀಂ

    ಪಿ.ಬಿ.ಹರೀಶ್ ರೈ ಮಂಗಳೂರು

    ಸ್ವಚ್ಛತೆ, ಪರಿಸರ ಸಂರಕ್ಷಣೆ, ಶ್ರಮದಾನ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿದ್ಯಾರ್ಥಿ ಸ್ವಯಂಸೇವಕರು ಈಗ ಕರೊನಾ ವಿರುದ್ಧ ಸಮರಕ್ಕೂ ಕೈಜೋಡಿಸಿದ್ದಾರೆ. ಮಂಗಳೂರು ವಿವಿಯ ವಿವಿಧ ಕಾಲೇಜುಗಳ 6,800 ಮಂದಿ ಸೇರಿದಂತೆ ರಾಜ್ಯದಲ್ಲಿ 1,03,800 ವಿದ್ಯಾರ್ಥಿಗಳು ಕರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಲು ಹೆಸರು ನೋಂದಾಯಿಸಿದ್ದಾರೆ.

    ಕರೊನಾ ವಿರುದ್ಧ ಸಂಘಟಿತ ಹೋರಾಟಕ್ಕೆ ಕೇಂದ್ರ ಸರ್ಕಾರ ಆರೋಗ್ಯ ರಕ್ಷಣಾ ಕಾರ್ಯಕರ್ತರ ಬೃಹತ್ ಪಡೆ ರಚಿಸಿದ್ದು, ಸ್ವಯಂ ಸೇವಕರಿಗೆ ಸೇವೆ ಸಲ್ಲಿಸಲು ವಿವಿಧ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿದೆ. ನಿವೃತ್ತ ಯೋಧರು, ಎನ್‌ಸಿಸಿ, ಎನ್‌ಎಸ್‌ಎಸ್, ಎನ್‌ವೈಕೆ ಸ್ವಯಂಸೇವಕರು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕರೊನಾ ವಾರಿಯರ್ಸ್ ವೆಬ್‌ಸೈಟ್ ಮೂಲಕ ಹೆಸರು ನೋಂದಾಯಿಸಿ ಸೇವೆಗೆ ಅಣಿಯಾಗಿದ್ದಾರೆ.
    ದೇಶದಲ್ಲಿ ಒಟ್ಟು 13.67 ಲಕ್ಷ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಸುಮಾರು 5 ಲಕ್ಷ ಎನ್ನೆಸ್ಸೆಸ್ ವಿದ್ಯಾರ್ಥಿ ಸ್ವಯಂಸೇವಕರಿದ್ದು, ಈ ಪೈಕಿ 1.03 ಲಕ್ಷ ಮಂದಿ ಕರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಪಡಿತರ ವಿತರಣೆ, ಮಾಸ್ಕ್ ವಿತರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಿತ ವಿವಿಧ ಸೇವೆಗೆ ಎನ್ನೆಸ್ಸೆಸ್ ವಿದ್ಯಾರ್ಥಿಗಳನ್ನು ಬಳಸಲಾಗುತ್ತಿದೆ.

    ಪೂರ್ವ ತರಬೇತಿ
    ಯುನಿಸೆಫ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿವಿ ವತಿಯಿಂದ ಕರೊನಾ ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ 150 ಎನ್‌ಎಸ್‌ಎಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗಿತ್ತು. ಲಾಕ್‌ಡೌನ್ ಆಗುವ ಮೊದಲೇ ಈ ತರಬೇತಿ ನಡೆದಿತ್ತು. ಲಾಕ್‌ಡೌನ್ ಬಳಿಕ ಝೂಮ್ ಆ್ಯಪ್ ಮೂಲಕ 3,500 ಮಂದಿ ವಿದ್ಯಾರ್ಥಿ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿತ್ತು. ಈಗ ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪೂರೈಸಿದ್ದಾರೆ.

    ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವಯಂಸ್ಪೂರ್ತಿಯಿಂದ ಕರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳ ಸ್ಪಂದನೆಗೆ ಯುನಿಸೆಫ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ. ಸದ್ಯ ಅಗತ್ಯ ಇರುವ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಾತ್ರ ಜಿಲ್ಲಾಡಳಿತ ಎನ್ನೆಸ್ಸೆಸ್ ಸ್ವಯಂಸೇವೆಯನ್ನು ಬಳಸುತ್ತಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಕೆಲಸಕ್ಕೆ ವಿದ್ಯಾರ್ಥಿ ಸ್ವಯಂಸೇವಕರು ನೆರವಾಗುತ್ತಿದ್ದಾರೆ.
    – ಡಾ.ಗಣನಾಥ ಎಕ್ಕಾರು, ರಾಜ್ಯ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ

    ದ.ಕ, ಉಡುಪಿ, ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳ 6,800 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಆಸಕ್ತಿ ಇದ್ದರೂ ಇಂಟರ್‌ನೆಟ್ ಸಮಸ್ಯೆಯಿಂದ ನೋಂದಣಿ ಸಾಧ್ಯವಾಗಿಲ್ಲ. ಸದ್ಯ ಕೊಡಗು ಜಿಲ್ಲೆಯಲ್ಲಿ 10 ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇವೆ ನೀಡುತ್ತಿದ್ದಾರೆ. ಉಡುಪಿ ಜಿಲ್ಲಾಡಳಿತ ವಿದ್ಯಾರ್ಥಿ ಸ್ವಯಂ ಸೇವಕರ ವಿವರ ಪಡೆದಿದೆ.
    -ನಾಗರತ್ನ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts