More

    ಕರೊನಾ ಎರಡನೇ ಅಲೆಗೆ ಮಕ್ಕಳು, ಯುವಕರು ಹೈರಾಣ

    ವಿಜಯವಾಣಿ ವಿಶೇಷ ಹಾವೇರಿ

    ಕರೊನಾ 2ನೇ ಅಲೆ ಜಿಲ್ಲೆಯಲ್ಲಿ ದಿನೇದಿನೆ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿದ್ದಾರೆ.

    ಜಿಲ್ಲೆಯಲ್ಲಿ ಮಂಗಳವಾರದವರೆಗೆ ಮೊದಲ ಹಾಗೂ 2ನೇ ಅಲೆ ಸೇರಿ 18,817 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 16,364 ಜನ ಸೋಂಕಿನಿಂದ ಗುಣವಾಗಿದ್ದಾರೆ. ಇದರಲ್ಲಿ 2ನೇ ಅಲೆ ಆರಂಭಗೊಂಡ ಜನವರಿಯಿಂದ ಮೇ 26ರ ವರೆಗೆ 7,615 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆ 721. ಇನ್ನು 19ರಿಂದ 30 ವರ್ಷದೊಳಗಿನ 1,816 ಯುವಕರಿಗೆ ಪಾಸಿಟಿವ್ ಬಂದಿವೆ. ಒಟ್ಟಾರೆ 30 ವರ್ಷದೊಳಗಿನ 2,537 ಜನರಿಗೆ ಕೋವಿಡ್ ದೃಢಪಟ್ಟಿದೆ. ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎಂದು ಹೇಳಲಾಗುತ್ತಿದ್ದರೂ ಈಗಲೇ ಆ ವಯೋಮಾನದವರು ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುತ್ತಿರುವುದು ಆತಂಕಕಾರಿಯಾಗಿದೆ. ಇನ್ನು 31ರಿಂದ 40 ವರ್ಷ ವಯೋಮಾನದ 1,667 ಜನರಿಗೆ, 41ರಿಂದ 50 ವರ್ಷದವರೆಗಿನ 1,322 ಜನರಿಗೆ, 51ರಿಂದ 60 ವರ್ಷದ 1,039 ಜನರಿಗೆ ಹಾಗೂ 60 ವರ್ಷ ಮೇಲ್ಪಟ್ಟ 1,050 ಜನರಿಗೆ 2ನೇ ಅಲೆಯಲ್ಲಿ ಸೋಂಕು ತಗುಲಿದೆ.

    ಮೊದಲ ಹಾಗೂ 2ನೇ ಅಲೆ ಸೇರಿ 422 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 12 ಸಾವಿರದಷ್ಟಿದ್ದ ಪ್ರಕರಣ ಎರಡನೇ ಅಲೆಯಲ್ಲಿ 7,615 ಪಾಸಿಟಿವ್ ಕೇಸ್ ದೃಢಪಟ್ಟಿವೆ. ಮೊದಲ ಅಲೆಯಲ್ಲಿ 196 ಜನರು ಸೋಂಕಿಗೆ ಬಲಿಯಾಗಿದ್ದರು. ಈಗ ಕೇವಲ 45 ದಿನಗಳಲ್ಲಿ 230ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸೋಂಕು ಮತ್ತು ಸಾವು ಎರಡೂ ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಏರುತ್ತಿದೆ.

    ಪುರುಷರಲ್ಲಿಯೇ ಸೋಂಕು ಹೆಚ್ಚು: ಜಿಲ್ಲೆಯಲ್ಲಿ ಕರೊನಾ ಸೋಂಕು ಪುರುಷರಲ್ಲೇ ಅಧಿಕ ಎಂಬುದನ್ನು ಅಂಕಿಅಂಶ ಹೇಳುತ್ತವೆ. ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿರುವ 7,615 ಜನರಲ್ಲಿ 4,382 ಪುರುಷರಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ 3,233 ಮಹಿಳೆಯರಿಗೆ ಪಾಸಿಟಿವ್ ಬಂದಿದೆ. ಅಂದರೆ, ಮಹಿಳೆಯರಿಗಿಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪುರುಷರಲ್ಲಿ ಸೋಂಕು ದೃಢಪಟ್ಟಿದೆ. ಪುರುಷರು ಮನೆಯಿಂದ ಹೆಚ್ಚಾಗಿ ಹೊರಬರುತ್ತಿರುವುದೇ ಇದಕ್ಕೆ ಕಾರಣ. ಅಗತ್ಯ ವಸ್ತು ಖರೀದಿ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ಪುರುಷರು ಅನಿವಾರ್ಯವಾಗಿ ಹೊರಗೆ ಬರುತ್ತಿರುವುದರಿಂದ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗುಲಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಕಳವಳ ಉಂಟುಮಾಡಿದೆ. ಟೆಸ್ಟ್ ಮಾಡಿಸುವಲ್ಲಿ ವಿಳಂಬ, ವರದಿ ಬರುವುದು ತಡವಾಗುತ್ತಿರುವುದರಿಂದ ಗ್ರಾಮೀಣರು ಆಸ್ಪತ್ರೆಗೆ ದಾಖಲಾಗಲು ವಿಳಂಬವಾಗುತ್ತಿದೆ. ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಸೇರುತ್ತಿರುವುದರಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎನ್ನಲಾಗುತ್ತಿದೆ.

    ಜಿಲ್ಲೆಯಲ್ಲಿ ಕೋವಿಡ್ ಸೋಂಕು ತಗುಲಿದ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ನಿರ್ವಿುಸಲಾಗಿದೆ. ಅಲ್ಲದೆ, ಎಲ್ಲ ಸೋಂಕಿತರ ಚಿಕಿತ್ಸೆಗಾಗಿ ಬೆಡ್​ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಎಲ್ಲಿಯೂ ಬೆಡ್ ಇಲ್ಲ ಎಂಬ ಕೂಗು ಕೇಳಿಬರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

    | ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts