More

    ಜಿಲ್ಲೆಯಲ್ಲಿ ಕರೊನಾ ಕಲ್ಪಿತ ಲಸಿಕೆ ಪರೀಕ್ಷೆ ಯಶಸ್ವಿ

    ಗದಗ: ಜಿಲ್ಲೆಯ ಐದು ಆಸ್ಪತ್ರೆಗಳಲ್ಲಿ ಕರೊನಾ ಲಸಿಕೆ ಹಾಕುವ ಪ್ರಯೋಗಾರ್ಥಕ ಕಲ್ಪಿತ ಲಸಿಕೆ ಪರೀಕ್ಷೆ ಕಾರ್ಯ ಶುಕ್ರವಾರ ನಡೆಯಿತು.

    ಗದಗ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ತಾಲೂಕು ಆಸ್ಪತ್ರೆ ನರಗುಂದ, ಸಮುದಾಯ ಆರೋಗ್ಯ ಕೇಂದ್ರ ಲಕ್ಷ್ಮೇಶ್ವರ, ರೋಣ ತಾಲೂಕಿನ ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುಂಡರಗಿ ತಾಲೂಕಿನ ಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಾರ್ಥ ಕಲ್ಪಿತ ಲಸಿಕೆ ಪರೀಕ್ಷೆ ನಡೆಯಿತು. ಲಸಿಕೆ ಸಾಗಣೆಯಿಂದ ವ್ಯಕ್ತಿಗೆ ಹಾಕುವವರೆಗೆ ಪ್ರತಿ ಹಂತವನ್ನು ಜಿಲ್ಲಾ ಆರೋಗ್ಯ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸಿತು.

    ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ಅಂದಾಜು 9000 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಕಲ್ಪಿತ ಲಸಿಕೆ ಹಾಕುವ ಪ್ರಯೋಗಕ್ಕೆ ಪ್ರತಿ ಆಸ್ಪತ್ರೆಯಲ್ಲಿ ತಲಾ 25 ಕರೊನಾ ಸೇನಾನಿಗಳನ್ನು ಬಳಸಿಕೊಳ್ಳಲಾಯಿತು. ಲಸಿಕೆ ಹಾಕಿಸಿಕೊಳ್ಳುವವರು (ಸಾರ್ವಜನಿಕರು) ಮೊದಲು ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಇದಕ್ಕಾಗಿ ಕೋವಿನ್ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆ ಹಾಕಿ ದೃಢೀಕರಿಸಿಕೊಳ್ಳಬೇಕು. ನಂತರ ಲಸಿಕೆ ಹಾಕುವ ಸಮಯವನ್ನು ಕೋವಿನ್ ಆಪ್ ಹಂಚಿಕೆ ಮಾಡುತ್ತದೆ.

    ಮೂರು ಕೊಠಡಿಗಳು: ಗದಗ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಲ್ಪಿತ ಲಸಿಕೆ ಹಾಕುವ ಕಾರ್ಯದಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದ ಕರೊನಾ ಸೇನಾನಿಗಳಿಗೆ ಚುಚ್ಚುಮದ್ದು ಹಾಕಲಾಯಿತು. ಈ ಪ್ರಯೋಗಕ್ಕೆ ಕಾಯ್ದಿರಿಸಿದ (ವೇಟಿಂಗ್) ಕೊಠಡಿ, ವ್ಯಾಕ್ಸಿನೇಷನ್ (ಚುಚ್ಚುಮದ್ದು) ಕೊಠಡಿ ಮತ್ತು ಆಬ್ಸರ್ವೆಷನ್ (ನಿಗಾ) ಕೊಠಡಿಗಳನ್ನು ಸಿದ್ಧಪಡಿಸಲಾಗಿತ್ತು. ಪ್ರತಿ ಕೊಠಡಿಗೆ ಒಬ್ಬ ಪೊಲೀಸ್ ಪೇದೆ, ಕಂದಾಯ ಇಲಾಖೆ ಸಿಬ್ಬಂದಿ (ಗ್ರಾಮ ಲೆಕ್ಕಾಧಿಕಾರಿ), ಇಬ್ಬರು ಮಹಿಳಾ ಆರೋಗ್ಯ ಸಹಾಯಕಿಯರು, ಒಬ್ಬರು ಆಶಾ ಕಾರ್ಯಕರ್ತೆ ಸೇರಿ ಐವರ ತಂಡವನ್ನು ನಿಯೋಜಿಸಲಾಗಿತ್ತು.

    ಮೊದಲು ವೇಟಿಂಗ್ ಕೊಠಡಿಯಲ್ಲಿರುವ ಫಲಾನುಭವಿಗಳು ಕೋವಿನ್ ಆಪ್​ನಲ್ಲಿ ನೋಂದಣಿ ಮಾಡಿಕೊಂಡಿರುವುದು ಇತರೆ ದಾಖಲೆಗಳನ್ನು ಪರಿಶೀಲಿಸಲಾಯಿತು. ನಂತರ ಒಬ್ಬೊಬ್ಬರನ್ನು ಚುಚ್ಚುಮದ್ದು ಕೊಠಡಿಗೆ ಕಳಿಸಿ, ಲಸಿಕೆ ಹಾಕಿಸಿ ಆಬ್ಸರ್ವೆಷನ್ (ನಿಗಾ) ಕೊಠಡಿಗೆ ಕಳಿಸಲಾಗುತ್ತಿತ್ತು. ಲಸಿಕೆ ಹಾಕಿಸಿಕೊಂಡವರ ಮೇಲೆ 30 ನಿಮಿಷ ನಿಗಾ ವಹಿಸಲಾಗಿತ್ತು. ಈ ಸಮಯದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾದರೆ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು. ಹೀಗೆ 25 ಕರೊನಾ ಸೇನಾನಿಗಳಿಗೆ ಲಸಿಕೆ ಹಾಕುವ ಕಲ್ಪಿತ (ಡ್ರೖೆರನ್) ಕಾರ್ಯ ಅಚ್ಚುಕಟ್ಟಾಗಿ ಜರುಗಿತು.

    ಗದಗ ಮೆಡಿಕಲ್ ಕಾಲೇಜ್​ನ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ ಕಲ್ಪಿತ ಲಸಿಕೆ ಹಾಕುವ ಕಾರ್ಯವನ್ನು ವೀಕ್ಷಿಸಿತು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ ಬಸರೀಗಿಡದ, ಜಿಲ್ಲಾ ಶಸ್ತ್ರಚಿಕತ್ಸಕ ಡಾ. ಬಿ.ಸಿ. ಕರಿಗೌಡರ, ಡಾ. ಆರ್.ಕೆ. ಗೊಜನೂರ, ಡಾ. ಎಸ್.ಎಸ್. ನೀಲಗುಂದ ಇತರರಿದ್ದರು.

    ಕರೊನಾ ಲಸಿಕೆ ಹಾಕುವ ಡ್ರೖೆರನ್ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆಯಿತು. ಲಸಿಕೆ ಹಾಕುವ ಪ್ರಕ್ರಿಯೆ ಹೊರತುಪಡಿಸಿ ಉಳಿದ ಎಲ್ಲ ಕಾರ್ಯವನ್ನೂ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.
    | ಡಾ. ಎಸ್.ಎಸ್. ನೀಲಗುಂದ, ಆರೋಗ್ಯಾಧಿಕಾರಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts