More

    ಕರೊನಾ ಸೇನಾನಿಗಳಿಗೆ ಸೌಲಭ್ಯ ಕಲ್ಪಿಸಿ

    ಸವದತ್ತಿ: ಕರೊನಾ ಸೇನಾನಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ದಿಂದ ಶುಕ್ರವಾರ ತಹಸೀಲ್ದಾರ್ ಪ್ರಶಾಂತ ಪಾಟೀಲ ಅವರ ಮೂಲಕ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು. ಕೋವಿಡ್-19 ಸೋಂಕಿನಿಂದ ಹಲವು ಶಸ್ತ್ರಚಿಕಿತ್ಸಾ ತಜ್ಞರು, ಶುಶ್ರೂಷಕರು, ನೈರ್ಮಲ್ಯ ಸಿಬ್ಬಂದಿ ಬಲಿಯಾಗಿದ್ದಾರೆ. ಇದರಿಂದ ಕೆಲ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕರೊನಾ ವೈರಸ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

    ಇವರಿಗೆ ಹೆಚ್ಚು ಸೌಕರ್ಯ ಒದಗಿಸಬೇಕು. ಸಿಬ್ಬಂದಿಗೆ ಸುರಕ್ಷತೆಗಾಗಿ ಪಿಪಿಇ ಕಿಟ್‌ಗಳನ್ನು ಒದಗಿಸಬೇಕು. ಕರ್ತವ್ಯ ನಿರತ ಸಿಬ್ಬಂದಿ ಮೃತರಾದಲ್ಲಿ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕೋವಿಡ್-19 ಸೋಂಕಿತ ಸಿಬ್ಬಂದಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಸಿಐಟಿಯು ಸಂಘಟನೆ ಅಧ್ಯಕ್ಷ ಎಲ್.ಎಸ್. ನಾಯಕ, ಉಪಾಧ್ಯಕ್ಷ ಶ್ರೀಕಾಂತ ಹಟ್ಟಿಹೊಳಿ, ಎಫ್.ಎಂ. ನದಾಫ ಇತರರು ಇದ್ದರು.

    ಬೈಲಹೊಂಗಲ ವರದಿ: ತಾಲೂಕು ಸಿ.ಐ.ಟಿ.ಯು. ಘಟಕದ ವತಿಯಿಂದ ಕರೊನಾ ಸೇನಾನಿಗಳ ವಿವಿಧ ಬೇಡಿಕೆ ಈಡೇರಿಸಲು ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ಸಮಿತಿಯ ಮುಖಂಡರಾದ ರುದ್ರಗೌಡ ಪಾಟೀಲ ಮಾತನಾಡಿ, ಕರೊನಾ ವೈರಸ್ ತಡೆಗಟ್ಟುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕರೊನಾ ಸೇನಾನಿಗಳಿಗೆ ಪಿಪಿಇ ಕಿಟ್ ಸೇರಿದಂತೆ ಇತರ ಸುರಕ್ಷಾ ಸಾಧನಗಳನ್ನು ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು. ವಿದ್ಯಾ ಕಮ್ಮಾರ, ವಿಜಯಾ ಕಲಾದಗಿ, ಸುನೀತಾ ಅಂಟಿನ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts