More

    ಕರೊನಾ ತಪ್ಪು ಸಂದೇಶ ನೀಡಿದರೆ ಕೇಸ್

    ಬೆಳಗಾವಿ: ಕರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ನೀಡಿದರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಸೂಚನೆ ನೀಡಿದರು.

    ನಗರದ ಜಿಪಂ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಕರೊನಾ ವೈರಸ್ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯಲ್ಲಿ ಅವರು ಎಚ್ಚರಿಕೆ ನೀಡಿದರು.

    ಕರೊನಾ ಸೋಂಕನ್ನು ಸಾಮಾಜಿಕ ಸಮಸ್ಯೆ ಎಂದು ಭಾವಿಸಿ ಅದನ್ನು ನಿಯಂತ್ರಣ ಮಾಡಬೇಕು. ಆದರೆ, ಈ ವಿಷಯದಲ್ಲಿ ಜನರಲ್ಲಿ ಭಯ ಉಂಟು ಮಾಡುವ ಇತರ ತಪ್ಪು ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಕಲಬುರ್ಗಿ ಜಿಲ್ಲೆಯಲ್ಲಿ ಮೊದಲ ಸಾವು ಉಂಟಾಗಿರುವ ಹಿನ್ನೆಲೆಯಲ್ಲಿ ಎಲ್ಲ ಕಡೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಆರೋಗ್ಯ ಇಲಾಖೆ ಜತೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಮಾಹಿತಿ ಸಂಗ್ರಹಿಸಿ: ಯಾವುದೇ ವ್ಯಕ್ತಿಗೆ ಆರೋಗ್ಯದ ತೊಂದರೆಯಾದರೆ ಸಾಮಾನ್ಯವಾಗಿ ಜನರು ಖಾಸಗಿ ವೈದ್ಯರ ಹತ್ತಿರ ಹೋಗಿ ಆರೋಗ್ಯ ತಪಾಸಣೆ ಮಾಡಿಸುತ್ತಾರೆ. ಅದಕ್ಕಾಗಿ ಕರೊನಾ ವೈರಸ್ ಲಕ್ಷಣಗಳು ಇರುವ ರೋಗಿಗಗಳು ಖಾಸಗಿ ಆಸ್ಪತ್ರೆಗಳಲ್ಲಿ ಬಂದರೆ ಆ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು. ಅಲ್ಲದೆ, ವೈದ್ಯಕೀಯ ತಪಾಸಣೆ ಮಾಡಿಸಿಕೊಂಡ ಬಳಿಕ ವೈದ್ಯರು ಔಷಧ ಬರೆದಿರುವ ರಸೀತಿ ತಂದರೆ ಮಾತ್ರ ಔಷಧ ಅಂಗಡಿಗಳವರು ಔಷಧ ನೀಡಬೇಕು ಎಂದು ಹೇಳಿದರು.

    ಸಮಾರಂಭ ಬೇಡ: ಹೋಟೆಲ್‌ಗಳಲ್ಲಿ ವಿದೇಶದಿಂದ ಪ್ರವಾಸಿಗರು ಬಂದು ವಾಸ ಮಾಡಿದರೆ ಹೋಟೆಲ್ ಮಾಲೀಕರು ಅವರ ಮಾಹಿತಿಯನ್ನು ನೀಡಬೇಕು. ವಿದೇಶದಿಂದ ಭಾರತೀಯರು ಬಂದರೆ ಟ್ರಾವೆಲರ್ಸ್‌ಗಳು ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ಒದಗಿಸಬೇಕು. ಕರೊನಾ ಸೋಂಕು ಯಾರಿಗಾದರೂ ಇದ್ದರೆ ಅಂಥವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅವರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುವುದು. ಜತೆಗೆ ಸೋಂಕಿತರ ಮೇಲೆ ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಸ್ಪತ್ರೆಯಲ್ಲಿ ಐಸೂಲೇಷನ್ ವಾರ್ಡ್ ನಿರ್ಮಾಣ ಮಾಡಲಾಗಿದೆ.

    ಕರೊನಾ ವೈರಸ್ ತಡೆಯಲು ಸಾಧ್ಯವಾದಷ್ಟು ಸಾರ್ವಜನಿಕ ಸಮಾರಂಭಗಳನ್ನು ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಆರೋಗ್ಯ ಇಲಾಖೆಯ ವಿಭಾಗೀಯ ಅಧಿಕಾರಿ ಡಾ. ಸಿದ್ಧಲಿಂಗಯ್ಯ, ಪೊಲೀಸ್ ಆಯುಕ್ತ ಲೋಕೇಶಕುಮಾರ್, ಮಾಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮುನ್ಯಾಳ ಇತರರು ಇದ್ದರು.

    ಗ್ರಾಮ ಪಂಚಾಯಿತಿಗಳು ಮುಂಜಾಗ್ರತಾ ಕ್ರಮ ವಹಿಸಲಿ

    ಜಿಪಂ ಸಿ.ಇ.ಒ. ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ಕರೊನಾ ಸೋಂಕು ಹರಡದಂತೆ ತಡೆಯಲು ತಾಲೂಕು ಆಸ್ಪತ್ರೆಯವರು ಲೈಸನ್ಸ್ ಹೊಂದಿರುವ ಕ್ಲಿನಿಕ್‌ಗಳ ಮಾಲೀಕರ ಸಭೆ ನಡೆಸಬೇಕು. ಅವರ ಕ್ಲಿನಿಕ್‌ಗಳಿಗೆ ಬರುವ ರೋಗಿಗಳ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಮಾಡುವುದು ಪ್ರತಿಯೊಬ್ಬ ವೈದ್ಯರ ಕೆಲಸವಾಗಿದೆ. ಗ್ರಾಪಂಗಳು ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಔಷಧ ಅಂಗಡಿಗಳುವರು ವೈದ್ಯರ ರಶೀದಿ ಇಲ್ಲದೆ ಔಷಧ ನೀಡಿದರೆ ಅಂಥವರ ಲೈಸನ್ಸ್ ರದ್ದು ಮಾಡಲಾಗುವುದು. ಇನ್ನು, ಕರೊನಾ ಪ್ರಕರಣಗಳು ಕಂಡು ಬಂದರೆ 104 ಸಹಾಯವಾಣಿಗೆ ಕರೆ ಮಾಡುವಂತೆಯೂ ಅವರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts