More

    ಸೋಂಕು ತಗುಲಿದ್ದು ತಿಳಿಯದೆ ಸಮಸ್ಯೆ?

    ಮಂಗಳೂರು/ಬಂಟ್ವಾಳ: ಕರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಗೆ ಹಿಂದೆಯೂ ಅಸ್ತಮಾ ಸಮಸ್ಯೆಯಿತ್ತು. ಅದರಿಂದಾಗಿಯೇ ಅವರು ಕರೊನಾ ಸೋಂಕಿಗೆ ಸುಲಭ ತುತ್ತಾಗಿರಬಹುದು, ಸೋಂಕು ತಗುಲಿರುವುದು ಗೊತ್ತಾಗುವಾಗ ವಿಳಂಬವಾಗುವುದಕ್ಕೂ ಅಸ್ತಮಾ ಇದ್ದುದು ಕಾರಣವಾಗಿರಬಹುದು. ಇವೆಲ್ಲದರಿಂದಾಗಿ ಪ್ರಾಣ ಕಳೆದುಕೊಳ್ಳುವಂತಾಯಿತು ಎನ್ನುವುದು ಆರೋಗ್ಯ ಇಲಾಖೆ ಮೂಲಗಳು ಹೇಳುವ ಮಾಹಿತಿ.

    ಮಹಿಳೆಯ ಮಗ ದುಬೈನಿಂದ ಮಾರ್ಚ್ 16ರಂದು ಆಗಮಿಸಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಮಗ ಆರೋಗ್ಯವಂತರಾಗಿದ್ದರೆ, ಕರೊನಾ ಸೋಂಕು ಕೆಲವೊಮ್ಮೆ ಗೊತ್ತಾಗದೇ ಹೋಗುವ ಸಾಧ್ಯತೆ ಇದೆ. ಮನೆಯೊಳಗಿರುವ ಸದಸ್ಯರು ಅತ್ಯಂತ ಎಚ್ಚರವಾಗಿರಬೇಕು, ಮಗನೇ ಆಗಿದ್ದರೂ ಹತ್ತಿರ ಹೋಗದಿರುವುದು ಸೂಕ್ತ. ಆದರೆ ಹತ್ತಿರದ ಸಂಪರ್ಕ ಇದ್ದರೆ ಹಿರಿಯರು ಕರೊನಾಗೆ ಸುಲಭ ತುತ್ತಾಗಿ ಬಿಡುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.

    ಬಂಟ್ವಾಳದ ಪ್ರಕರಣದಲ್ಲಿ ಮಗನಿಂದ ತಾಯಿಗೆ ಸೋಂಕು ತಗುಲಿರುವ ಸಾಧ್ಯತೆ ಹೆಚ್ಚು. ಕ್ವಾರಂಟೈನ್ 14 ದಿನಕ್ಕೆ ಸಾಕು ಎನ್ನುವುದು ನಿಜವಾದರೂ ಕೆಲವೊಂದು ಪ್ರಕರಣದಲ್ಲಿ ಗರಿಷ್ಠ 39 ದಿನಗಳ ಬಳಿಕ ಹರಡಿರುವ ಉದಾಹರಣೆಯೂ ಇದೆ. ಮಹಿಳೆಗೆ ಮೊದಲೇ ಅಸ್ತಮಾ ಇದ್ದುದು, ಸೋಂಕಿನ ವಿಚಾರ ತಡವಾಗಿ ವರದಿಯಾಗಿದ್ದು, ಇದೆಲ್ಲವೂ ಸಾವಿಗೆ ಕಾರಣಗಳಾಗಿರಬಹುದು ಎನ್ನುತ್ತಾರೆ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು.

    3 ಕಿ.ಮೀ. ಇಂಟೆನ್ಸಿವ್ ಬಫರ್ ಜೋನ್
    ಬಂಟ್ವಾಳ ಪೇಟೆ ಸೀಲ್‌ಡೌನ್ ಮುಂದುವರಿಕೆ
    ಬಂಟ್ವಾಳ ಪೇಟೆಯ ಮಹಿಳೆಯೊಬ್ಬರು ಕರೊನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮುಂದುವರಿದಿದೆ. ಪೇಟೆಯ ಮಧ್ಯೆ ಇರುವ ಯಾರೂ ಮನೆಯಿಂದ ಹೊರಬರುತ್ತಿಲ್ಲ. ಭಾನುವಾರ ರಾತ್ರಿ ಪೇಟೆಯ ಪ್ರಮುಖ ರಸ್ತೆಯನ್ನು ಬ್ಯಾರಿಕೇಡ್ ಮತ್ತು ಮಣ್ಣು ರಾಶಿ ಹಾಕುವ ಮೂಲಕ ಬಂದ್ ಮಾಡಲಾಯಿತು.

    ಜಿಲ್ಲಾಡಳಿತ ಸೂಚನೆಯಂತೆ ಪುರಸಭೆ, ಆರೋಗ್ಯ ಇಲಾಖೆ, ಪೊಲೀಸ್, ತಾಲೂಕು ಆಡಳಿತ ಸಹಿತ ನಾನಾ ಸರ್ಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿ ನಿಗಾ ಇರಿಸಿದ್ದು, ಸಾರ್ವಜನಿಕರಿಗೆ ಅವಶ್ಯವಿರುವ ವಸ್ತುಗಳನ್ನು ಮನೆಮನೆಗೆ ಒದಗಿಸುವ ವ್ಯವಸ್ಥೆ ಮಾಡಲಿದೆ. ಹೆದ್ದಾರಿಯಲ್ಲಷ್ಟೇ ಅಗತ್ಯವಿರುವ ಅತಿ ಅವಶ್ಯವಿರುವ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಮೃತ ಮಹಿಳೆಯ ಮನೆ ಸುತ್ತಮುತ್ತಲಿನ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಏರಿಯಾ, ಸೋಂಕಿನ ಮನೆಯಿಂದ ಸುಮಾರು 3 ಕಿ. ಮೀ ಸುತ್ತಲೂ ಇಂಟೆನ್ಸಿವ್ ಬಫರ್ ಜೋನ್, ಬಿ.ಸಿ.ರೋಡ್ ಸೇರಿದಂತೆ ಸುಮಾರು ಐದಾರು ಕಿ.ಮೀ. ವ್ಯಾಪ್ತಿಯ ಭಾಗ ಬಫರ್ ಜೋನ್ ಎಂದು ಗುರುತಿಸಲಾಗಿದೆ. ಸೋಂಕಿತ ಮಹಿಳೆ ಇದ್ದ ಮನೆಯ ಸುತ್ತಮುತ್ತಲಿನ ಮನೆಗಳ ನಿವಾಸಿಗಳ ಆರೋಗ್ಯ ತಪಾಸಣೆ ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

    ವೈದ್ಯರ ಮೇಲೆ ಪ್ರಕರಣ ದಾಖಲು: ಮೃತಪಟ್ಟ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಖಾಸಗಿ ಕ್ಲಿನಿಕ್ ವೈದ್ಯರ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದ್ದು, ಸಂಬಂಧಿಸಿದ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಕರೊನಾ ಹರಡುವಿಕೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ತಾಲೂಕು ವೈದ್ಯಾಧಿಕಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ವೈದ್ಯರ ಸಹಿತ 34 ಮಂದಿ ಕ್ವಾರಂಟೈನ್: ಸಂಸದ ನಳಿನ್ ಮಾಹಿತಿ
    ಕರೊನಾ ಸೋಂಕಿನಿಂದ ಬಂಟ್ವಾಳದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಒಟ್ಟು 34 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಮಹಿಳೆಯ ಮನೆಯವರು, ಸಂಬಂಧಿಕರು ಸೇರಿ 28 ಮಂದಿ ಹಾಗೂ ಚಿಕಿತ್ಸೆ ನೀಡಿದ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಸಹಿತ 6 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಸಂಸದ ನಳಿನ್‌ಕುಮಾರ್ ಕಟೀಲು ತಿಳಿಸಿದರು.

    ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದಲ್ಲಿ ಸೋಮವಾರ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
    ಜಿಲ್ಲೆಯಲ್ಲಿ ಮಹಿಳೆ ಮೃತ ಪ್ರಕರಣ ಕಂಡುಬಂದ ಬಳಿಕ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಜನರು ಕಾಯಿಲೆಗಳ ಕುರಿತು ಮಾಹಿತಿ ನೀಡದೆ ಹೆಚ್ಚಿನ ಸೋಂಕು ದೃಢ ಪ್ರಕರಣಗಳು ಕಂಡುಬರುತ್ತಿವೆ. ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಈ ಮಹಿಳೆ ಸ್ಥಳೀಯವಾಗಿ ಚಿಕಿತ್ಸೆ ಪಡೆದು ಕಾಯಿಲೆ ಉಲ್ಬಣಿಸಿದ ಬಳಿಕ ಮಂಗಳೂರು ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.

    ಮಹಿಳೆಯ ಟ್ರಾವೆಲ್ ಹಿಸ್ಟರಿಯ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರತಿ 2 ದಿನಕ್ಕೊಮ್ಮೆ ಪಿಡಿಒಗಳ ಜತೆ ಶಾಸಕರು ವಿಡಿಯೋ ಕಾನ್ಫರೆನ್ಸ್ ನಡೆಸಿ ಗ್ರಾಮೀಣ ಭಾಗದ ಸ್ಥಿತಿ ತಿಳಿದುಕೊಳ್ಳಲಿದ್ದಾರೆ. ಆಶಾ ಕಾರ್ಯಕರ್ತೆಯರು ಬಂಟ್ವಾಳದ ಪ್ರತಿ ಮನೆ, ವ್ಯಕ್ತಿಗಳ ಪೂರ್ಣ ರೀತಿಯ ಸರ್ವೇ ನಡೆಯಲಿದ್ದು, ಪೊಲೀಸ್ ಇಲಾಖೆ ಮೂಲಕ ಕಾನೂನನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗುವುದು. ಸೀಲ್‌ಡೌನ್ ಆಗಿರುವ ಬಂಟ್ವಾಳದ ಜನತೆಗೆ ತೊಂದರೆಯಾಗದ ರೀತಿಯಲ್ಲಿ ಆಹಾರ ವಸ್ತುಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

    ಬಂಟ್ವಾಳದಲ್ಲಿಯೂ ಕೇಂದ್ರೀಕೃತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಬಿ.ಸಿ.ರೋಡು, ಮೆಲ್ಕಾರ್, ಕಲ್ಲಡ್ಕ, ಬಂಟ್ವಾಳಕ್ಕೆ ಪ್ರತ್ಯೇಕ ಕೇಂದ್ರಗಳನ್ನು ಮಾಡಿ ಮೈದಾನದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಅನುಮತಿ ಪಡೆದ ವಸ್ತುಗಳನ್ನು ಮಾರಾಟ ಮಾಡದಿದ್ದರೆ ಅವರ ಪರವಾನಗಿ ರದ್ದು ಮಾಡಲಾಗುತ್ತದೆ ಎಂದರು.
    ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಜತೆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts