More

    ಹಲವೆಡೆ ಸಿಲುಕಿದ ಮಂಗಳೂರಿಗರು

    ಮಂಗಳೂರು: ದಕ್ಷಿಣ ಕನ್ನಡ ಮೂಲದ ಐವರು ಪ್ರಸ್ತುತ ವಿವಿಧ ದೇಶ/ರಾಜ್ಯಗಳಲ್ಲಿ ಕರೊನಾ ಕಾರಣದಿಂದ ಸಿಲುಕಿಕೊಂಡಿದ್ದಾರೆ.
    ಮಂಗಳೂರು ಮೂಲದ, ಕ್ರೂಸ್ ನೌಕೆ ಗ್ರಾೃಂಡ್‌ಪ್ರಿನ್ಸೆಸ್‌ನಲ್ಲಿ ಸಿಲುಕಿಕೊಂಡ 131 ಭಾರತೀಯರಲ್ಲಿ ಮಂಗಳೂರು ಮೂಲದ ನಟೇಶ್ ಬಂಗೇರ ಹಾಗೂ ಇನ್ನೋರ್ವರು ಸೇರಿದ್ದಾರೆ. ಪ್ರಸ್ತುತ ಸ್ಯಾನ್‌ಫ್ರಾನ್ಸಿಸ್ಕೊಗೆ ಇವರಿರುವ ಕ್ರೂಸ್ ನೌಕೆಯನ್ನು ಸ್ಥಳಾಂತರಿಸಲಾಗಿದ್ದು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

    ಇವರೆಲ್ಲರನ್ನೂ ಕರೆತರುವುದಕ್ಕೆ ಚಾರ್ಟರ್ ವಿಮಾನವನ್ನು ಒಮ್ಮೆ ಕಳುಹಿಸಲಾಗಿತ್ತಾದರೂ ಕೊರೊನಾ ಇಲ್ಲ ಎನ್ನುವ ಸರ್ಟಿಫಿಕೇಟ್ ಇಲ್ಲದೆ ಬರುವಂತಿಲ್ಲ ಎಂಬ ನಿಯಮದಿಂದಾಗಿ ಅವರನ್ನು ಮತ್ತೆ ನೌಕೆಗೇ ಬಿಡಲಾಗಿತ್ತು.
    ಈ ಬಗ್ಗೆ ಈಗಾಗಲೇ ಭಾರತ ಸರ್ಕಾರ ಹಾಗೂ ಅಮೆರಿಕದಲ್ಲಿರುವ ಭಾರತದ ರಾಯಭಾರಿ ಕಚೇರಿ ಟ್ವೀಟ್ ಮಾಡಿ, ಅವರನ್ನು ಕರೆತರುವ ಭರವಸೆ ವ್ಯಕ್ತಪಡಿಸಿದೆ. ಕರೊನಾ ಹಿನ್ನೆಲೆಯಲ್ಲಿ 14 ದಿನ ಕ್ವಾರಂಟೈನ್‌ನಲ್ಲಿ ಕಡ್ಡಾಯವಾಗಿ ಇರಲೇ ಬೇಕಾಗುತ್ತದೆ, ನಾವು ಹಡಗಿನ ಆಡಳಿತ ಹಾಗೂ ಯುಎಸ್ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ, ಕ್ವಾರಂಟೈನ್ ಮುಗಿಯುತ್ತಿದ್ದಂತೆಯೇ ಭಾರತೀಯ ಸಿಬ್ಬಂದಿಯನ್ನು ಕರೆತರಲು ಕ್ರಮ ವಹಿಸಲಾಗುವುದು ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

    ಮೊದಲು ಸ್ವಲ್ಪ ಆತಂಕವಿತ್ತು, ಈಗ ಸರ್ಕಾರ ಸ್ಪಂದಿಸಿರುವುದರಿಂದ ಅದು ದೂರವಾಗಿದೆ, ಸೋದರ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ, ಅವರಿಗೆ ಸಮಸ್ಯೆಯಾಗಿಲ್ಲ ಎಂದು ನಟೇಶ್ ಸೋದರ ಬಬಿನ್ ‘ವಿಜಯವಾಣಿ’ಗೆ ತಿಳಿಸಿದರು.

    ಸುರತ್ಕಲ್ ಮೂಲದ ವಿದ್ಯಾರ್ಥಿನಿ
    ಇರಾನ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಸುರತ್ಕಲ್ ಮೂಲದ ವಿದ್ಯಾರ್ಥಿನಿ ಶ್ರೀಮಧು ಎರಡು ದಿನಗಳ ಹಿಂದೆಯಷ್ಟೇ ವಿಮಾನ ಮೂಲಕ ಇತರ ವಿದ್ಯಾರ್ಥಿಗಳೊಂದಿಗೆ ದೆಹಲಿಗೆ ಬಂದಿಳಿದಿದ್ದು, ಸೋಂಕು ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಕರೊನಾ ತಪಾಸಣೆಯಲ್ಲಿ ನೆಗೆಟಿವ್ ಬಂದಿದೆ, ಆದರೆ ಕ್ವಾರಂಟೈನ್ ಮುಗಿದ ಬಳಿಕವೇ ಮನೆಗೆ ಬರಬಹುದಾಗಿದೆ. ಮಣಿಪಾಲದಲ್ಲಿ ಕ್ಲಿನಿಕಲ್ ವೈರಾಲಜಿ ಕಲಿತ ಬಳಿಕ ಇಟಲಿಯಲ್ಲಿ ಪಿಎಚ್‌ಡಿ ಮಾಡಲು 5 ತಿಂಗಳ ಹಿಂದೆ ತೆರಳಿದ್ದರು. ಅಲ್ಲಿ ಕರೊನಾ ಭೀತಿ ಎದುರಾದ ಹಿನ್ನೆಲೆಯಲ್ಲಿ ಮರಳಿ ಬರುವುದಕ್ಕೆ ಮುಂದಾದಾಗ ಸರ್ಕಾರದಿಂದ ಸೂಕ್ತ ಸ್ಪಂದನ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಕೆಎಂಸಿ ವಿದ್ಯಾರ್ಥಿಗಳು
    ಮಂಗಳೂರಿನ ಕೆಎಂಸಿಯ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಗಳಾದ ನವೀನ್ ಮಲ್ಯ ಹಾಗೂ ಮಹಿಮಾ ಗುಪ್ತ ಮಲೇಷ್ಯಾದ ಇಂಟರ್‌ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಗೆ ತೆರಳಿದ್ದು ಬರಲಾಗದೆ ಸಿಲುಕಿಕೊಂಡಿದ್ದಾರೆ. ಒಂದು ತಿಂಗಳ ಕಾರ್ಯಾಗಾರಕ್ಕೆ ಹೋದವರು ಈಗ ವಿಮಾನಗಳು ರದ್ದಾಗಿರುವುದರಿಂದ ಬರಲಾಗುತ್ತಿಲ್ಲ. ಮಾ.12ರಂದು ಇವರು ಮಲೇಷ್ಯಾದಲ್ಲಿ ಇಳಿದಿದ್ದು ಏ.9ರಂದು ಮರಳಬೇಕಿತ್ತು. ಕರೊನಾದಿಂದ ಮಲೇಷ್ಯಾದಲ್ಲೇ ಸಿಲುಕಿಕೊಳ್ಳುವ ಭೀತಿ ಎದುರಾದ ಹಿನ್ನೆಲೆಯಲ್ಲಿ ಅದಕ್ಕೆ ಮೊದಲೇ ಬರುವ ಇರಾದೆಯಿದ್ದರೂ ಬರಲಾಗುತ್ತಿಲ್ಲ. ಈ ವಿದ್ಯಾರ್ಥಿಗಳ ಬಗ್ಗೆಯೂ ವಿದೇಶಾಂಗ ಸಚಿವರು ಟ್ವೀಟ್ ಮಾಡಿ ನೆರವಾಗುವುದಾಗಿ ತಿಳಿಸಿದ್ದಾರೆ.

    ಕಾಸರಗೋಡಿನಲ್ಲಿ 409 ಮಂದಿ ಮೇಲೆ ನಿಗಾ
    ಕಾಸರಗೋಡು: ಕರೊನಾ ಖಚಿತಗೊಂಡ ವ್ಯಕ್ತಿಯ ಸಂಪರ್ಕದಲ್ಲಿದ್ದ 42 ಮಂದಿಯನ್ನು ಪತ್ತೆ ಮಾಡಿ ಅವರ ಮೇಲೆ ನಿಗಾ ಇರಿಸಲಾಗಿದೆ. ಜಿಲ್ಲೆಯಲ್ಲಿ ಕರೊನಾ ವೈರಸ್‌ನ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ ಒಟ್ಟು 409 ಮಂದಿ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಇವರಲ್ಲಿ 9 ಮಂದಿ ಆಸ್ಪತ್ರೆಗಳಲ್ಲೂ, 400 ಮಂದಿ ತಮ್ಮ ಮನೆಗಳಲ್ಲಿಯೂ ಇದ್ದಾರೆ. 25 ಮಂದಿಯ ರಕ್ತದ ಮಾದರಿಯನ್ನು ತಪಾಸಣೆಗೆ ರವಾನಿಸಲಾಗಿದೆ. 42 ಮಂದಿಯ ತಪಾಸಣಾ ವರದಿ ಇನ್ನಷ್ಟೆ ಲಭಿಸಬೇಕಾಗಿದೆ.

    ಕೇರಳದಲ್ಲಿ ಹೊಸ ಪ್ರಕರಣವಿಲ್ಲ
    ಕಾಸರಗೋಡು: ರಾಜ್ಯದಲ್ಲಿ ಕರೊನಾ ವೈರಸ್‌ನ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 25,603 ಮಂದಿ ಮೇಲೆ ನಿಗಾ ಇರಿಸಲಾಗಿದ್ದು, ಇವರಲ್ಲಿ 25,366 ಮಂದಿ ಮನೆಗಳಲ್ಲಿ ಹಾಗೂ 237 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಬುಧವಾರ ಶಂಕಿತ 57 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 7861ಮಂದಿ ಹೊಸದಾಗಿ ನಿಗಾದಲ್ಲಿದ್ದಾರೆ. 4622 ಮಂದಿಯಲ್ಲಿ ವೈರಸ್ ಲಕ್ಷಣಗಳಿಲ್ಲ. 2,550 ಮಂದಿಯ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಇದರಲ್ಲಿ 2140 ಫಲಿತಾಂಶ ನೆಗೆಟಿವ್ ಆಗಿದೆ. ಮತ್ತಷ್ಟು ಮಂದಿಯನ್ನು ತಪಾಸಣೆಗೆ ಒಳಪಡಿಸುವ ಮೂಲಕ ವೈರಸ್ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

    ಶಂಕಿತ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಗೆ ದಾಖಲು
    ವಿಟ್ಲ: ಕತಾರ್‌ನಿಂದ ಆಗಮಿಸಿದ್ದ ಕಂಬಳಬೆಟ್ಟು ಮೂಲದ ವ್ಯಕ್ತಿ ಕರೊನಾ ಶಂಕೆಯಲ್ಲಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾರ್ಚ್ 7ರಂದು ವಿದೇಶದಿಂದ ಆಗಮಿಸಿದ್ದು, ಶೀತ ಹಾಗೂ ಕೆಮ್ಮು ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಾಗಲು ಸೂಚಿಸಲಾಗಿತ್ತು. ಆದರೆ ಮನೆಗೆ ಹೋಗಿ ಬುಧವಾರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಹೋಗಿದ್ದು, ವಿವಿಧ ತಪಾಸಣೆಗೆ ಸೂಚಿಸಿದ ಹಿನ್ನೆಲೆ ಅಲ್ಲಿಂದ ವಿಟ್ಲ ಸರ್ಕಾರಿ ಆಸ್ಪತ್ರೆಗೆ ತೆರಳಲು ಮುಂದಾಗಿದ್ದಾರೆ. ಇದು ತಪ್ಪಿಸಿಕೊಂಡು ಹೋಗಿದ್ದಾರೆಂದು ಸುದ್ದಿಯಾಗಿ ವಿಟ್ಲಕ್ಕೆ ಆಗಮಿಸುತ್ತಿದ್ದಂತೆ, ವಿಶೇಷ ಆಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ.

    ದುಬೈಯಿಂದ ದೇವರ ದರ್ಶನಕ್ಕೆ ಬಂದ ಕುಟುಂಬ ವಾಪಸ್
    ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬುಧವಾರ ದುಬೈನಿಂದ ಬಂದ ಕುಟುಂಬವೊಂದನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ. ದುಬೈಯಿಂದ ಭಾರತಕ್ಕೆ ಬಂದವರನ್ನು 14 ದಿನ ನಿಗಾದಲ್ಲಿ ಇರಿಸಬೇಕಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡರು. ಕಿನ್ನಿಗೋಳಿಯ ದಾಮಸ್ಕಟ್ಟೆಯಲ್ಲಿ ವಿದೇಶದಿಂದ ಎರಡು ವಾರದ ಹಿಂದೆ ಬಂದ ವ್ಯಕ್ತಿಯೋರ್ವರಿಗೆ ಕರೊನಾ ಲಕ್ಷಣಗಳು ಗೋಚರಿಸಿದ್ದು, ತಪಾಸಣೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

    ಸರ್ಕಾರಕ್ಕೆ ಸಹಕಾರ ನೀಡಲು ಖಾದರ್ ಮನವಿ
    ಮಂಗಳೂರು: ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕರೊನಾ ಪ್ರಸರಣ ನಿಯಂತ್ರಣ ಸಂಬಂಧ ಹಾಕಿರುವ ನಿಯಮಾವಳಿಗಳನ್ನೂ ಜನರು ಪಾಲಿಸುವ ಮೂಲಕ ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಮನವಿ ಮಾಡಿದರು.
    ಬುಧವಾರ ಸುದ್ದಿಗೋಷ್ಠಿಯಲ್ಲಿ ವಿನಂತಿ ಮಾಡಿದ ಅವರು, ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರಿಗೆ, ರೈಲ್ವೇ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಗಳಲ್ಲಿಯೂ ತಪಾಸಣೆ ಮಾಡಬೇಕು. ಗಡಿ ಪ್ರದೇಶಗಳಿಂದ ಬರುವ ಪ್ರಯಾಣಿಕರನ್ನೂ ಟೋಲ್‌ಗೇಟ್‌ನಲ್ಲಿ ಆರೋಗ್ಯ ತಪಾಸಣೆ ನಡೆಸಬೇಕು. ಪ್ರವಾಸ ಅಥವಾ ಸಾರ್ವಜನಿಕವಾಗಿ ಪಾಲ್ಗೊಳ್ಳುವ ಬದಲು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದರು.
    ವಿದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿ ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ ಹಲವು ಜನರಿದ್ದಾರೆ. ಸಮಸ್ಯೆ ಎದುರಿಸುತ್ತಿರುವ ಇಂತಹ ಅನೇಕರು ತೊಂದರೆಯಲ್ಲಿರುವ ಸಾಧ್ಯತೆ ಇದ್ದು, ಈ ಬಗ್ಗೆ ವಿದೇಶಿ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಹೊಂದಿ ಅಲ್ಲಿನ ಭಾರತೀಯರಿಗೆ ನೆರವು ನೀಡುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿ ನೇಮಕಕ್ಕೆ ಸರ್ಕಾರವನ್ನು ಕೋರಲಾಗಿದೆ ಎಂದರು.
    ಕರೊನಾ ವೈರಸ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಮಂದಿ ಸೋಂಕಿಗೆ ಒಳಗಾಗುವುದರಿಂದ ಇದಕ್ಕೆ ನೀಡುವ ಚಿಕಿತ್ಸಾ ವೆಚ್ಚವನ್ನು ಆಯುಷ್ಮಾನ್ ಭಾರತ್ ಯೋಜನಾ ವ್ಯಾಪ್ತಿಗೆ ಸೇರಿಸಬೇಕು. ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

    ಕಾಸರಗೋಡಿಗೆ ಕೋಳಿ, ಮೊಟ್ಟೆ ಸಾಗಾಟ ನಿಷೇಧ
    ಕಾಸರಗೋಡು: ಜಿಲ್ಲೆಯಲ್ಲಿ ಹಕ್ಕಿಜ್ವರ ಹರಡುವ ಭೀತಿ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ಮಾಂಸದ ಕೋಳಿ, ಕೋಳಿ ಮೊಟ್ಟೆ ಸಹಿತ ಕೋಳಿಯ ವಿವಿಧ ಉತ್ಪನ್ನಗಳನ್ನು ಜಿಲ್ಲೆಗೆ ತರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. ಅಕ್ರಮ ಸಾಗಾಟ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಕೋಳಿ ಗೊಬ್ಬರ ಸಾಗಾಟಕ್ಕೂ ಈ ಆದೇಶ ಅನ್ವಯವಾಗಲಿದ್ದು, ಗಡಿ ಪ್ರದೇಶಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲ್ಲಿಕೋಟೆ ಹಾಗೂ ಮಲಪ್ಪುರಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಸಾವಿರಾರ ಕೋಳಿಗಳ ಮಾರಣಹೋಮ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

    ಗಡಿ ತಪಾಸಣೆ ಚುರುಕು
    ಮಂಗಳೂರು: ಸರ್ಕಾರದ ಆದೇಶದ ಅನ್ವಯ, ಕರೊನಾ ಪಸರಿಸದಂತೆ ದ.ಕ.ಜಿಲ್ಲೆಯಲ್ಲೂ ನಿರ್ಬಂಧ ದಿನದಿಂದ ದಿನಕ್ಕೆ ಬಿಗಿಗೊಳಿಸಲಾಗುತ್ತಿದ್ದು, ರೈಲ್ವೇ ನಿಲ್ದಾಣ, ಕೇರಳ-ಕರ್ನಾಟಕ ಗಡಿಯ ತಲಪಾಡಿಯಲ್ಲಿ ತೀವ್ರ ತಪಾಸಣೆ ಕಾರ್ಯ ನಡೆಯುತ್ತಿದೆ. ಗಡಿಭಾಗ ತಲಪಾಡಿಯ ಟೋಲ್‌ಗೇಟ್ ಸಮೀಪದಲ್ಲೂ ತಪಾಸಣಾ ಕೇಂದ್ರ ತೆರೆಯಲಾಗಿದ್ದು ಕೇರಳ ಕಡೆಗೆ ಹೋಗುವ ಬರುವವರ ತಪಾಸಣೆ ಕೈಗೊಳ್ಳಲಾಗುತ್ತಿದೆ.
    ಮಂಗಳೂರು ಸೆಂಟ್ರಲ್/ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರದಿಂದ ರೈಲಿನಲ್ಲಿ ಆಗಮಿಸುವವರ ತಪಾಸಣೆ ನಡೆಸಲಾಗುತ್ತಿದೆ. ಎರಡು ಕಡೆಗಳಲ್ಲೂ ರಾಜ್ಯ ಆರೋಗ್ಯ ಇಲಾಖೆ ನಿಯೋಜಿಸಿದ ನಾಲ್ವರು ಅಧಿಕಾರಿಗಳಲ್ಲದೆ ಅವರ ನೆರವಿಗೆ ರೈಲ್ವೇ ಆರೋಗ್ಯ ವಿಭಾಗದ ಸಿಬ್ಬಂದಿ ಮತ್ತು ಗೃಹರಕ್ಷಕದಳದ ಸಿಬ್ಬಂದಿಯೂ ಸೇರಿದ್ದಾರೆ. ಬೆಳಗ್ಗಿನಿಂದ ರಾತ್ರಿ ಕೊನೆಯ ರೈಲು ಬರುವವರೆಗೂ ತಪಾಸಣೆ ನಡೆಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆಯೇ ತೀವ್ರ ಇಳಿಮುಖವಾಗಿದ್ದು, ಬರುವವರು ಸ್ವಯಂ ಆಗಿ ತಪಾಸಣಾ ಡೆಸ್ಕ್ ಮುಂದೆ ನಿಂತು ಪರೀಕ್ಷೆಗೆ ಬರುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿ ಕಿಶನ್ ಬಂಗೇರ ‘ವಿಜಯವಾಣಿ’ಗೆ ತಿಳಿಸಿದರು.

    ಬೀಚ್‌ಗಳಿಗೂ ಪ್ರವೇಶ ನಿರಾಕಣೆ
    ಪಣಂಬೂರು ಬೀಚ್‌ನಲ್ಲಿ ಕಳೆದ ಮೂರು ದಿನಗಳಿಂದಲೇ ಜನರು ಬರುವುದು ಕಡಿಮೆಯಾಗಿದೆ, ಸ್ಥಳೀಯರೇ ಹೆಚ್ಚಾಗಿ ಬರುತ್ತಿದ್ದರು, ಈಗ ಪ್ರವಾಸಿಗರೂ ಇಲ್ಲ, ಸ್ಥಳೀಯರೂ ಬರುತ್ತಿಲ್ಲ, ಯಾರಾದರೂ ಫೋನ್ ಮೂಲಕ ವಿಚಾರಿಸಿದರೂ ಬರದಂತೆ ಹೇಳುತ್ತೇವೆ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ ಹೇಳುತ್ತಾರೆ. ತಣ್ಣೀರುಬಾವಿ ಬೀಚ್, ಸುರತ್ಕಲ್ ಬೀಚ್‌ಗಳಲ್ಲೂ ಪೊಲೀಸರು ಜನರನ್ನು ಬಾರದಂತೆ ಸೂಚಿಸುತ್ತಿದ್ದಾರೆ. ಬೆಂಗ್ರೆಯ ಬ್ರೇಕ್ ವಾಟರ್ ಹಾಗೂ ಬೀಚ್‌ಗಳಿಗೆ ಭೇಟಿ ನೀಡದಂತೆ ಸ್ಥಳೀಯರೇ ಜನರ ಮನವೊಲಿಸುತ್ತಿದ್ದಾರೆ.

    ದೇವಸ್ಥಾನ ಖಾಲಿ ಖಾಲಿ
    ದೇವಸ್ಥಾನಗಳಲ್ಲಿ ಜನರ ಸಂಖ್ಯೆ ತೀವ್ರ ಇಳಿಮುಖವಾಗಿದೆ. ನಗರದ ಕದ್ರಿ, ಗೋಕರ್ಣನಾಥೇಶ್ವರ, ಶರವು, ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಎಲ್ಲ ಸೇವೆ ರದ್ದುಗೊಂಡಿದ್ದು ದರ್ಶನಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ. ಕದ್ರಿಯಲ್ಲಿ ಕೆರೆಗೆ ಇಳಿಯದಂತೆಯೂ ನಿರ್ಬಂಧಿಸಲಾಗಿದೆ. ನಗರಾದ್ಯಂತ ಜನರ ಸಂಚಾರ ಇಳಿಮುಖವಾಗಿದ್ದು ಎಂದಿನಂತೆಯೇ ಮಾಲ್, ಸಿನಿಮಾ ಮಂದಿರಗಳು ಮುಚ್ಚಿದ್ದವು. ಮಾಲ್‌ಗಳಲ್ಲಿರುವ ಸೂಪರ್‌ಸ್ಟೋರ್‌ಗಳನ್ನು ಮಾತ್ರ ಜನರಿಗೆ ಅವಶ್ಯಕ ವಸ್ತುಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ತೆರೆಯಲಾಗಿತ್ತು.

    ತಾತ್ಕಾಲಿಕವಾಗಿ ರೈಲು ರದ್ದು
    ಕರೊನಾ ಹಿನ್ನೆಲೆಯಲ್ಲಿ ನಂ 02198/02197 ಜಬಲ್ಪುರ ಜಂಕ್ಷನ್-ಕೊಯಂಬತ್ತೂರು ಜಂಕ್ಷನ್-ಜಬಲ್ಪುರ ಜಂಕ್ಷನ್ ರೈಲುಗಳ ಓಡಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಮಾರ್ಚ್ 21 ಹಾಗೂ 28ರಂದು 02198 ಜಬಲ್ಪುರದಿಂದ ಹೊರಡಬೇಕಾದ ರೈಲು ಹಾಗೂ ಮಾರ್ಚ್ 23, 30ರಂದು 02197 ಕೊಯಮತ್ತೂರು ಜಂಕ್ಷನ್‌ನಿಂದ ಹೊರಡಬೇಕಾಗಿದ್ದ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

    ದ.ಕ.ದಲ್ಲಿ 632 ಮಂದಿಯ ತಪಾಸಣೆ
    ದ.ಕ.ಜಿಲ್ಲೆಯಲ್ಲಿ ಕರೊನಾ ಶಂಕೆಯಲ್ಲಿ ಬುಧವಾರ ಒಟ್ಟು 632 ಮಂದಿಯ ತಪಾಸಣೆ ಕೈಗೊಳ್ಳಲಾಗಿದೆ.
    ಹೊರಭಾಗಗಳಿಂದ ಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೂಚನೆ ಮೇರೆಗೆ ಈವರೆಗೆ ಮನೆಗಳಲ್ಲೇ 689 ಮಂದಿ ಉಳಿದುಕೊಂಡಿದ್ದಾರೆ. 8 ಮಂದಿಯ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದ್ದು, ಬುಧವಾರ 3 ಗಂಟಲಿನ ಕೋಶ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇಬ್ಬರನ್ನು ನಿಗಾ ಇರಿಸುವುದಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಟ್ಟು 14 ಮಾದರಿಗಳ ವರದಿ ಬಂದಿದ್ದು ಎಲ್ಲವೂ ನೆಗೆಟಿವ್.
    ಆಶಾ ಕಾರ್ಯಕರ್ತೆಯರು ಬುಧವಾರ 55,241 ಮನೆಗಳಿಗೆ ಭೇಟಿಯಿತ್ತು 2,12, 693 ಮಂದಿಯನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರನ್ನು ಮನೆಯಲ್ಲೇ ಇರುವಂತೆ ಮಾಹಿತಿ ನೀಡಲಾಗಿದೆ.
    ಮಂಗಳೂರು ವಿಮಾನ ನಿಲ್ದಾಣ ಮೂಲಕ ಹೊರತು ಪಡಿಸಿ ಇತರ ಮಾರ್ಗವಾಗಿ ವಿದೇಶದಿಂದ ಆಗಮಿಸಿ ಜಿಲ್ಲೆಯಲ್ಲಿ ವಾಸ್ತವ್ಯ ಇರುವವರನ್ನು ಮನೆಯಲ್ಲೇ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.

    ವಿಮಾನದಲ್ಲಿ ಸೋಂಕಿತನ ಸಹಪ್ರಯಾಣಿಕರು ಸೇಫ್
    ಬುಧವಾರದಿಂದ ದುಬೈಯಿಂದ ಆಗಮಿಸಿದವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗುತ್ತಿದೆ. ದುಬೈನಿಂದ ಮಾ.13ರಂದು ಆಗಮಿಸಿದ್ದ ಕಾಸರಗೋಡಿನ ವ್ಯಕ್ತಿಗೆ ಕರೊನಾ ಪಾಸಿಟಿವ್ ಇರುವ ಹಿನ್ನೆಲೆಯಲ್ಲಿ ವಿಮಾನದಲ್ಲಿ ಅವರ ಸಂಪರ್ಕಕ್ಕೆ ಬಂದ ಮಂಗಳೂರಿನ ಮಂದಿಯನ್ನು ತಪಾಸಣೆ ಮಾಡಲಾಗಿದ್ದು, ಅವರ‌್ಯಾರಿಗೂ ರೋಗಲಕ್ಷಣಗಳಿಲ್ಲ. ಆದರೂ ಅವರನ್ನು ಮನೆಯಲ್ಲೇ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಬಿ.ವಿ. ತಿಳಿಸಿದ್ದಾರೆ.

    ಉಡುಪಿಯಲ್ಲಿ ಮತ್ತೆ ಐವರು ಶಂಕಿತರು ಆಸ್ಪತ್ರೆಗೆ
    ಉಡುಪಿ: ಜಿಲ್ಲೆಯಲ್ಲಿ ಬುಧವಾರ ಮತ್ತೆ ಐವರು ಕರೊನಾ ಶಂಕಿತರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಮೂವರು ಉಡುಪಿ ಜಿಲ್ಲಾಸ್ಪತ್ರೆ, ಓರ್ವ ಮಣಿಪಾಲ ಕೆಎಂಸಿ ಮತ್ತು ಮತ್ತೊಬ್ಬ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಐಸೊಲೇಟೆಡ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕಿತ ರೋಗಿಗಳ ಗಂಟಲು ದ್ರವ ಶಿವಮೊಗ್ಗ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳಿಸಲಾಗಿದೆ. ದಾಖಲಾದವರ ಪೈಕಿ ಇಬ್ಬರು ದುಬೈಯಿಂದ ಆಗಮಿಸಿದ್ದು, ಮತ್ತಿಬ್ಬರು ಕತಾರ್ ಮತ್ತು ಓರ್ವ ಬಹರೇನ್‌ನಿಂದ ಭಾರತಕ್ಕೆ ಬಂದವರಾಗಿದ್ದಾರೆ. ಮೂರು ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುಬೈನಿಂದ ಆಗಮಿಸಿದ ಗರ್ಭಿಣಿ ಗಂಟಲು ದ್ರವ ಪರೀಕ್ಷೆ ವೈದ್ಯರ ಕೈ ಸೇರಿದ್ದು, ನೆಗೆಟಿವ್ ಬಂದಿದೆ. ಮಂಗಳವಾರ ದಾಖಲಾದ ಐವರು ಶಂಕಿತರ ವೈದ್ಯಕೀಯ ವರದಿ ಇನ್ನಷ್ಟೇ ಕೈಸೇರಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರಚಂದ್ರ ಸೂಡ ತಿಳಿಸಿದ್ದಾರೆ.

    ಎರಡು ದಿನ ಬೆಂಗ್ಳೂರು ವಿಮಾನ ರದ್ದು
    ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ ಏರ್ ಇಂಡಿಗೊ ವಿಮಾನಗಳನ್ನು ಎರಡು ದಿನಗಳ ಕಾಲ ರದ್ದುಗೊಳಿಸಲಾಗಿದೆ.
    ಬೆಂಗಳೂರಿನಿಂದ ಮಂಗಳೂರಿಗೆ ಬೆಳಗ್ಗೆ 8.35ಕ್ಕೆ, 12.10ಕ್ಕೆ ಹಾಗೂ ರಾತ್ರಿ 7.30ಕ್ಕೆ ಬಂದಿಯುವ ವಿಮಾನಗಳು ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕ್ರಮವಾಗಿ ಬೆಳಗ್ಗೆ 9.05,ಮಧ್ಯಾಹ್ನ 1 ಹಾಗೂ ರಾತ್ರಿ 8ಕ್ಕೆ ಹೊರಡುವ ವಿಮಾನಗಳು ರದ್ದಾಗಿರುವುದಾಗಿ ವಿಮಾನ ನಿಲ್ದಾಣ ನಿರ್ದೇಶಕರು ತಿಳಿಸಿದ್ದಾರೆ.

    31ರವರೆಗೆ ಚರ್ಚ್ ಮಾಸ್ ರದ್ದು
    ಮಂಗಳೂರು: ಧರ್ಮ ಪ್ರಾಂತ್ಯದ ಎಲ್ಲ ಚರ್ಚ್‌ಗಳಲ್ಲಿ ನಿಗದಿತ ಸಮಯದಲ್ಲಿ ನಡೆಯುವ ಎಲ್ಲ ಬಲಿಪೂಜೆಗಳನ್ನು ರದ್ದುಗೊಳಿಸಲಾಗಿದೆ ಎಂದು ಬಿಷಪ್ ಡಾ.ಪೀಟರ್ ಪಾವ್ಲೃ್ ಸಲ್ದಾನಾ ತಿಳಿಸಿದ್ದಾರೆ.
    ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಸೂಚನೆಯನ್ನು ಅನುಸರಿಸಿ ಇಗರ್ಜಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ಮಾ.31ರವರೆಗೆ ರದ್ದುಗೊಳಿಸಲಾಗಿದೆ. ಸಾರ್ವಜನಿಕರ ಆರೋಗ್ಯಕ್ಕೆ ಒತ್ತು ನೀಡಿ ಕರೊನಾ ಸೋಂಕಿನಿಂದ ದೂರವಿರುವುದಕ್ಕಾಗಿ ಚರ್ಚ್‌ಗಳಿಗೆ ಜನರು ಗುಂಪಾಗಿ ಬರುವುದನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣಗಳಿಗಾಗಿ ಆಗಮಿಸಿದರೂ ವ್ಯಕ್ತಿಗಳಿಂದ ಪರಸ್ಪರ ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಬಿಷಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts