More

    ಮತ್ತೆ ಐದು ಮಂದಿ ಆಸ್ಪತ್ರೆಗೆ ದಾಖಲು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಹಾಗೂ ಉಡುಪಿಯಲ್ಲಿ ಓರ್ವ ಶನಿವಾರ ಕರೊನಾ ರೋಗ ಲಕ್ಷಣ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ವೈದ್ಯಕೀಯ ವರದಿಗಳಿಗೆ ಕಾಯಲಾಗುತ್ತಿದೆ.

    ಮಂಗಳೂರಿನಲ್ಲಿ ವಿಮಾನ ಹಾಗೂ ಕಾರ್ಗೊ ಹಡಗು ಸಹಿತ ವಿವಿಧ ಸಂಚಾರ ಮಾರ್ಗಗಳ ಮೂಲಕ ಪ್ರಯಾಣಿಸಿದ 836 ಜನರನ್ನು ಶನಿವಾರ ಸ್ಕ್ರೀನಿಂಗ್ ನಡೆಸಲಾಗಿದೆ. ವೈದ್ಯರ ತಂಡದ ಸೂಚನೆಯಂತೆ ಶಂಕಿತ ನಾಲ್ವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
    8 ಜನರ ಗಂಟಲು ದ್ರವದ ಮಾದರಿಗಳನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಶನಿವಾರ ಕೈಸೇರಿದ ಎಲ್ಲ 4 ಮಂದಿಯ ಸ್ಯಾಂಪಲ್‌ಗಳ ಫಲಿತಾಶ ನೆಗೆಟಿವ್ ಬಂದಿದೆ. 60 ಮಂದಿ ವಿದೇಶಿ ಪ್ರಯಾಣಿಕರು ಜಿಲ್ಲಾಡಳಿತ ನಿರ್ದೇಶನದಂತೆ ಮನೆಯಲ್ಲೇ ಉಳಿದಿದ್ದು (ಇದು ಕಡ್ಡಾಯ) ವೈದ್ಯರ ನಿಗಾದಲ್ಲಿದ್ದಾರೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.

    ಮತ್ತಿಬ್ಬರ ಮೇಲೆ ನಿಗಾ: ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಆಗಮಿಸುವವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಶುಕ್ರವಾರ ಆಸ್ಟ್ರೇಲಿಯಾ ಮತ್ತು ಇರಾನ್‌ನಿಂದ ಆಗಮಿಸಿದ ಇಬ್ಬರನ್ನು ಎರಡು ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಿ ತಪಾಸಣೆಗೆ ಗುರಿ ಪಡಿಸಲಾಗಿದೆ. ಈ ಬಗ್ಗೆ ವೈದ್ಯಕೀಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯಾಧಿಕಾರಿ ಡಾ.ರಾಜೇಶ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ನಡೆದ ಸಭೆಗೆ ಮಾಹಿತಿ ನೀಡಿದರು.
    ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಹೊರ ರಾಜ್ಯಗಳ ಪ್ರಯಾಣಿಕರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಇಲ್ಲಿಯೂ ಹೆಲ್ಪ್‌ಡೆಸ್ಕ್ ತೆರೆಯಲಾಗಿದೆ. ಸೋಂಕಿನ ಕುರಿತಂತೆ ನೆರೆಯ ಕೇರಳ ರಾಜ್ಯ ಜೊತೆ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗಿದೆ. ಇದುವರೆಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ತಿಳಿಸಿದರು.
    ಇದುವರೆಗೆ ವಿದೇಶದಿಂದ ವಿಮಾನದಲ್ಲಿ ಆಗಮಿಸಿದ ಸುಮಾರು 27 ಮಂದಿಯ ಗಂಟಲು ದ್ರಾವಣದ ಸ್ಯಾಂಪಲ್‌ನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ 17 ಮಂದಿಯ ವರದಿ ನೆಗೆಟಿವ್ ಬಂದಿದೆ. ಉಳಿದ ಸ್ಯಾಂಪಲ್‌ಗಳ ವರದಿ ಬರಲು ಬಾಕಿ ಇದೆ ಎಂದರು.

    ಉಡುಪಿಯಲ್ಲಿ ಮೂವರ ವರದಿಯೂ ನೆಗೆಟಿವ್
    ಉಡುಪಿ: ಮಣಿಪಾಲ ಕೆಎಂಸಿ 05ಹಾಗೂ ಉಡುಪಿ ಜಿಲ್ಲಾಸ್ಪತೆಯಲ್ಲಿ ಶಂಕಿತ ಕರೊನಾ ವೈರಸ್ ಲಕ್ಷಣದಿಂದ ದಾಖಲಾದ ಮೂವರಿಗೆ ವೈರಸ್ ಸೋಂಕು ಇಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
    ಶುಕ್ರವಾರ ಶಿವಮೊಗ್ಗ ಪ್ರಯೋಗಾಲಯಗಳಿಗೆ ಕಳುಹಿಸಲಾದ ಮೂವರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳು ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಶುಕ್ರವಾರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ದುಬೈ ನಿವಾಸಿ ಮಣಿಪಾಲ ವೈದ್ಯಕೀಯ ವಿದ್ಯಾರ್ಥಿ, ಜಿಲ್ಲಾಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದ ಶಿರ್ವ ಮೂಲದ ಯುವಕ ಹಾಗೂ ಶಿವಮೊಗ್ಗ ಜಿಲ್ಲೆ ಸಾಗರ ನಿವಾಸಿ 68 ವರ್ಷದ ಮಹಿಳೆಯಲ್ಲಿ ಕರೊನ ಸೋಂಕು ದೃಢಪಟ್ಟಿಲ್ಲ. ಮಹಿಳೆಯ ಮಾದರಿಯನ್ನು ಮೂರನೇ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮೂರು ಸಲವೂ ನೆಗೆಟಿವ್ ವರದಿ ಬಂದಿವೆ ಎಂದು ಡಿಎಚ್‌ಒ ವಿಜಯವಾಣಿಗೆ ತಿಳಿಸಿದ್ದಾರೆ.

    ಕಾಪು ಯುವಕ ದಾಖಲು: ಕರೊನಾ ವೈರಸ್ ಶಂಕಿತ ಮತ್ತೊಬ್ಬ ಯುವಕ ಉಡುಪಿ ಜಿಲ್ಲಾಸ್ಪತ್ರೆ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ ಎಂದು ಡಿಎಚ್‌ಒ ಮಾಹಿತಿ ನೀಡಿದ್ದಾರೆ. ಕಾಪು ನಿವಾಸಿಯಾಗಿರುವ ಯುವಕ ಜರ್ಮನಿಗೆ ತೆರಳಿ ಕೆಲದಿನಗಳು ತಂಗಿದ್ದರು. ಜರ್ಮನಿಯಿಂದ ಇತ್ತೀಚೆಗೆ ಊರಿಗೆ ಆಗಮಿಸಿದ ಅವರಿಗೆ ಶೀತ, ಕೆಮ್ಮು ಬಾಧೆಯಿಂದ ನರಳುತಿದ್ದರು. ಅವರೇ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಅದರಂತೆ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಗಂಟಲಿನ ದ್ರವನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮೃತಪಟ್ಟ ವ್ಯಕ್ತಿಗೆ ಕರೊನಾ ಇಲ್ಲ
    ಉಡುಪಿ ಹೂಡೆಯ ತೋನ್ಸೆ ಹೆಲ್ತ್ ಸೆಂಟರ್‌ನಲ್ಲಿ ಆಯುರ್ವೇದ ಚಿಕಿತ್ಸೆಗೆ ದಾಖಲಾಗಿದ್ದ, ಕೆನಡಾದಿಂದ ಬಂದಿರುವ ಅನಿವಾಸಿ ಭಾರತೀಯರೊಬ್ಬರು ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಆದರೆ ಅವರ ಸಾವಿಗೆ ಕರೊನಾ ವೈರಸ್ ಕಾರಣವಲ್ಲ ಎಂದು ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡ ಸ್ಪಷ್ಟಪಡಿಸಿದ್ದಾರೆ. ಈ ವ್ಯಕ್ತಿ ಸಾವಿಗೆ ಕರೊನಾ ವೈರಸ್ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಡಲಾಗಿತ್ತು. ಮೃತ ವ್ಯಕ್ತಿಯಲ್ಲಿ ಕರೊನಾ ಲಕ್ಷಣ ಇರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಬೇಡ. ಸುಳ್ಳು ಸುದ್ದಿ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಕಡಬದಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷೃ?
    ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಬಡಬೆಟ್ಟು ಮೂಲಕ್ಕರ ಮನೆಯ ನಿವಾಸಿ ಅಬುದಾಭಿಯಿಂದ ಊರಿಗೆ ಆಗಮಿಸಿ ಅನಾರೋಗ್ಯಗೊಂಡು ಮೂರು ದಿನ ಕಳೆದರೂ ಆರೋಗ್ಯ ಇಲಾಖೆ ನಿರ್ಲಕ್ಷೃ ವಹಿಸಿದೆ. ಅವರು ಎಲ್ಲೆಡೆ ತಿರುಗುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಕಡಬ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಆರೋಗ್ಯ ಕಾರ್ಯಕರ್ತೆ ಆತನನ್ನು ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಡಲು ಹೇಳಿದರೂ ಬಂದಿಲ್ಲವೆಂದು ನುಣುಚಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೊನೆಗೆ ಶನಿವಾರ ಆ ವ್ಯಕ್ತಿಯೇ ಕಡಬ ಆಸ್ಪತ್ರೆಗೆ ಹೋಗಿ ತಪಾಸಣೆಗೊಳಗಾದರು.

    ಕುಂದಾಪುರ ವ್ಯಕ್ತಿ ಮೇಲೆ ನಿಗಾ
    ಅಮೆರಿಕದಲ್ಲಿದ್ದ ಕುಂದಾಪುರ ನಿವಾಸಿಯೊಬ್ಬರು ಊರಿಗೆ ಮರಳಿದ್ದು, ಅವರನ್ನು ಮನೆಯಲ್ಲೇ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರ ತಂಡ ನಿಗಾ ವಹಿಸಿದೆ. ಕರೊನಾ ವೈರಸ್ ಬಗ್ಗೆ ನಿಗಾ ಇಡಲು ತಂಡ ರಚಿಸಿದ್ದು, ಅದರಲ್ಲಿ ವೈದ್ಯರು, ಸಿಸ್ಟರ್, ಲ್ಯಾಬ್ ಟೆಕ್ನಿಶಿಯನ್, ಚಾಲಕ, ಡಿ ದರ್ಜೆ ಸಿಬ್ಬಂದಿ ಇದ್ದಾರೆ. ಈ ಟೀಮ್ 24 ಗಂಟೆ ಕರ್ತವ್ಯ ನಿರ್ವಸುತ್ತಿದೆ. ಅಮೆರಿಕದಿಂದ ಬಂದ ವ್ಯಕ್ತಿಯಲ್ಲಿ ಕರೊನಾ ರೋಗದ ಯಾವ ಲಕ್ಷಣ ಇಲ್ಲದಿದ್ದರೂ ಅವರಿಗೆ ಜ್ವರ, ಕೆಮ್ಮು ಇನ್ನಿತರ ಸಮಸ್ಯೆ ಇದೆಯೇ ಎನ್ನುವ ಬಗ್ಗೆ ಗಮನ ಇಡಲಾಗಿದ್ದು, ಪ್ರತಿದಿನ ವರದಿ ಸಲ್ಲಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸಮಸ್ಯೆ ಕಂಡಬಂದಿಲ್ಲ ಎಂದು ವೈದ್ಯಾದಿಕಾರಿ ಡಾ.ರಾಬರ್ಟ್ ರೊಬೆರೊ ತಿಳಿಸಿದ್ದಾರೆ. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 10 ಬೆಡ್‌ಗಳ ಐಸೊಲೇಶನ್ ವಾರ್ಡ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕರೊನಾ ನಿಗಾ ಕೇಂದ್ರಕ್ಕೆ ವಿರೋಧ
    ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕರಿಂಜೆ ಗ್ರಾಮದಲ್ಲಿ ಕರೊನಾ ನಿಗಾ ಕೇಂದ್ರ ಸ್ಥಾಪನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಕಕ್ಕೆಬೆಟ್ಟು-ಕಜೆಬೈಲು ಎಂಬಲ್ಲಿ ಜೆರಾಲ್ಡ್ ಕ್ರಾಸ್ತಾ ಎಂಬವರಿಗೆ ಸೇರಿದ ಕಟ್ಟಡದಲ್ಲಿ ವಿದೇಶದಿಂದ ಆಗಮಿಸಿದ ವ್ಯಕ್ತಿಗಳನ್ನು ತಪಾಸಣೆ ನಡೆಸುವ ಮೊದಲು ನಿಗಾದಲ್ಲಿ ಇರಿಸಲು ಕೇಂದ್ರ ತೆರೆಯಲು ನಿರ್ಧರಿಸಲಾಗಿತ್ತು. ಇಲ್ಲಿಗೆ ಶನಿವಾರ ತಹಸೀಲ್ದಾರ್ ಅನಿತಾಲಕ್ಷ್ಮಿ ಭೇಟಿ ನೀಡಿದಾಗ ಊರವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಭೆ ನಡೆಸುತ್ತೇವೆ, ವಿರೋಧದ ನಡುವೆಯೂ ಕೇಂದ್ರ ತೆರೆದರೆ ಗ್ರಾಮಸ್ಥರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗ್ರಾಮಸ್ಥ ದಿನೇಶ್ ಎಚ್ಚರಿಕೆ ನೀಡಿದ್ದಾರೆ. ವಿರೋಧದ ಹಿನ್ನೆಲೆಯಲ್ಲಿ ಆ ಕಟ್ಟಡವನ್ನು ಬಳಕೆ ಮಾಡುವುದಿಲ್ಲ ಎಂದು ತಹಸೀಲ್ದಾರ್ ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts