More

    ಶೈಲಿ ಬದಲಾಯಿಸಿದರಷ್ಟೇ ಜೀವನ

    ಭರತ್ ಶೆಟ್ಟಿಗಾರ್ ಮಂಗಳೂರು
    ಇಂದಿನ ಜೀವನ ಶೈಲಿಯೂ ಕರೊನಾ ಸೋಂಕು ವ್ಯಾಪಕವಾಗಿ ಹರಡುವಲ್ಲಿ ತನ್ನದೇ ಆದ ಪಾತ್ರವಹಿಸಿದೆ ಎನ್ನುವುದರಲ್ಲಿ ತಪ್ಪಿಲ್ಲ. ಮುಂದಿನ ದಿನಗಳಲ್ಲಿ ದೈನಂದಿನ ಜೀವನ ವಿಧಾನದಲ್ಲಿ ಹಲವು ರೀತಿಯ ಬದಲಾವಣೆ ತರದಿದ್ದರೆ ಉಳಿಗಾಲವಿಲ್ಲ ಎನ್ನುವ ಪಾಠ ಕರೊನಾ ವೈರಸ್ ನಮಗೆ ಕಲಿಸಿದೆ.
    ಲಾಕ್‌ಡೌನ್ ತೆರವಾದರೂ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಿದರೆ ಮಾತ್ರ ಕರೊನಾ ವಿರುದ್ಧದ ಹೋರಾಟ ಯಶಸ್ವಿಯಾಗಲು ಸಾಧ್ಯ. ಇಲ್ಲಿಯವರೆಗೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದವರು, ಇನ್ನು ಮುಂದೆ ಶಿಸ್ತಿನ ಜೀವನ ನಡೆಸಿದರಷ್ಟೇ ಹೆಚ್ಚುಕಾಲ ಬದುಕಬಹುದಾಗಿದೆ.

    ಕರೊನಾ ಸೋಂಕಿನ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆ ಅಥವಾ ಕೇಂದ್ರ ಸರ್ಕಾರದ ಸೂಚನೆಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಅಥವಾ ದಿನಕ್ಕೆ ಹಲವು ಬಾರಿ ಸಾಬೂನು ಬಳಸಿ ಕೈತೊಳೆಯುವುದು ಮೊದಲಾದವುಗಳನ್ನು ಇನ್ನೂ ಹಲವು ತಿಂಗಳ ಕಾಲ ಮುಂದುವರಿಸಬೇಕಿದೆ. ಇವುಗಳ ಜತೆಗೆ ಸಾಮಾಜಿಕ ಅಂತರವನ್ನೂ ಕಡ್ಡಾಯವಾಗಿ ಪಾಲಿಸಬೇಕು ಎನ್ನುವುದು ವೈದ್ಯರ ಅಭಿಪ್ರಾಯ.
    ಕರೊನಾ ಮಾತ್ರವಲ್ಲದೆ, ಎಲ್ಲ ರೀತಿಯ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೋಗುವುದು ತುಂಬಾ ಅವಶ್ಯ. ಟಿಬಿ, ಎಚ್1ಎನ್1, ವಿವಿಧ ರೀತಿಯ ಸಾಂಕ್ರಾಮಿಕ ಜ್ವರು, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಒಬ್ಬರಿಂದ ಒಬ್ಬರಿಗೆ ಹರಡಬಾರದು ಎಂದಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು.

    ಹಸ್ತಲಾಘವಕ್ಕಿಂತ ನಮಸ್ಕಾರವೇ ಸೂಕ್ತ
    ವಿದೇಶಿ ಸಂಸ್ಕೃತಿಯ ಹಸ್ತಲಾಘವಕ್ಕಿಂತ ಸನಾತನ ಸಂಸ್ಕೃತಿಯ ನಮಸ್ಕಾರಕ್ಕೆ ಇನ್ನು ಹೆಚ್ಚು ಮಹತ್ವ ಸಿಗುತ್ತಿದೆ. ಹಲವು ದೇಶಗಳು ಭಾರತದ ನಮಸ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲೆಡೆ ನಮಸ್ಕಾರವೇ ಪ್ರಸಿದ್ಧಿಗೆ ಬಂದರೂ ಅಚ್ಚರಿಯಿಲ್ಲ. ನಮ್ಮಲ್ಲೂ ಕೈಕುಲುಕುವ ಪದ್ಧತಿಯಿಂದ ಜನರು ದೂರ ಸರಿದಿದ್ದು, ನಮಸ್ಕಾರ ಎನ್ನುವುದು ಮತ್ತೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ ಎನ್ನುತ್ತಾರೆ ವೈದ್ಯರು.

    ಸಾಮಾಜಿಕ ಅಂತರ ಭಾರತದ ಮಟ್ಟಿಗೆ ಹೊಸ ಪದ ಪ್ರಯೋಗವಲ್ಲ. ಅದು ನಮ್ಮ ಸಂಸ್ಕೃತಿಯ ಭಾಗವೇ ಆಗಿತ್ತು. ಪಾಶ್ಚಾತ್ಯ ಸಂಸ್ಕೃತಿಯಡೆಗೆ ಆಕರ್ಷಿತರಾದ ನಾವು ಭಾರತೀಯತೆಯನ್ನು ಮರೆತೆವು. ಈಗ ಕರೊನಾ ಸೋಂಕು ಮತ್ತೆ ನಮಗೆ ಸಾಮಾಜಿಕ ಅಂತರವನ್ನು ನೆನಪಿಸಿದೆ. ಮಾಸ್ಕ್, ಗ್ಲೌಸ್‌ಗಳನ್ನು ಎಷ್ಟು ಸಮಯ ಧರಿಸಲು ಸಾಧ್ಯ? ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ನಮ್ಮ ಜೀವನ ಶೈಲಿಯಲ್ಲಿರಬೇಕು.
    -ಡಾ.ಅಣ್ಣಯ್ಯ ಕುಲಾಲ್, ಐಎಂಎ ಮಂಗಳೂರು ಅಧ್ಯಕ್ಷ

    ಕೇವಲ ಕರೊನಾ ಮಾತ್ರವಲ್ಲದೆ, ಎಲ್ಲ ಸಾಂಕ್ರಾಮಿಕ ರೋಗಗಳಿಂದ ದೂರ ಇರಬೇಕು ಎಂದಾದರೆ ಸಾಮಾಜಿಕ ಅಂತರವನ್ನು ಪಾಲಿಸಲೇ ಬೇಕು. ಕರೊನಾ ಸೋಂಕು ನಮಗೆ ಸಾಮಾಜಿಕ ಅಂತರದ ಮಹತ್ವವನ್ನು ತಿಳಿಸಿಕೊಟ್ಟಿದೆ.
    -ಡಾ. ಸುಧೀರ್‌ಚಂದ್ರ ಸೂಡ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts