More

    ಬೇಗನೆ ಬೆನ್ನು ಬಿಡುವುದಿಲ್ಲ ಈ ಬೇತಾಳ!

    ಗೋಡೆ ಮೇಲಿನ ಬರಹ ಸ್ಪಷ್ಟ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೊನಾ ನಿಯಂತ್ರಣಕ್ಕೆ ಯತ್ನಿಸುತ್ತಿವೆ. ಜನಜೀವನ ಕ್ರಮೇಣ ಮೊದಲಿನ ಚಟುವಟಿಕೆಗೆ ಮರಳುತ್ತಿದೆ. ಹೀಗಾಗಿ ಇನ್ನು ಜನರ ಪಾತ್ರವೂ ಅಷ್ಟೇ ಮುಖ್ಯ. ಏಕೆಂದರೆ, ಈಗಾಗಲೇ ಸುಮಾರು ಎರಡು ತಿಂಗಳಿಂದ ಸತತವಾಗಿ ಕಾರ್ಯನಿರ್ವಹಿಸಿ ಕರೊನಾ ವಾರಿಯರ್ಸ್ ಹೈರಾಣಾಗಿದ್ದಾರೆ.

    ಬೇಗನೆ ಬೆನ್ನು ಬಿಡುವುದಿಲ್ಲ ಈ ಬೇತಾಳ!ಬೂತಯ್ಯನ ಮಗ ಅಯ್ಯು. ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಸಿದ್ದಲಿಂಗಯ್ಯ ನಿರ್ದೇಶನದಲ್ಲಿ 1974ರಲ್ಲಿ ತೆರೆಗೆ ಬಂದು ಯಶಸ್ಸು ಗಳಿಸಿದ ಈ ಚಲನಚಿತ್ರ ಹಲವು ಕಾರಣಗಳಿಗೆ ವಿಶೇಷವಾದುದು. ಗಟ್ಟಿ ಕಥಾಹಂದರ (ಗೊರೂರು ರಾಮಸ್ವಾಮಿ ಅಯ್ಯಂಗಾರರ ಕಥೆಗಳ ಆಧಾರ), ನಟನಟಿಯರ ಪಕ್ವ ಅಭಿನಯ ಚಿತ್ರದ ಮೆರುಗನ್ನು ಹೆಚ್ಚಿಸಿತ್ತು. ಉಳ್ಳವರಿಂದ ಬಡವರ ಶೋಷಣೆಯ ನಾನಾ ಮುಖಗಳು, ಬಡವರ ಪಡಿಪಾಟಲು, ವ್ಯಕ್ತಿಗಳ ನಡುವಣ ಅಹಮಿಕೆಯ ಪ್ರತಿಷ್ಠೆ-ದ್ವೇಷಾಸೂಯೆಗಳು, ಅದರಿಂದಾಗುವ ಹಲವು ದುಷ್ಪರಿಣಾಮಗಳನ್ನು ಕಟ್ಟಿಕೊಡುತ್ತಲೇ, ಕೊನೆಯಲ್ಲಿ ‘ಕೂಡಿಬಾಳಿದರೆ ಸ್ವರ್ಗ ಸುಖ’ ಎಂಬ ಆದರ್ಶವನ್ನು ಸಾರಿದ ಸಿನಿಮಾ ಇದು. ಒಂದು ಹಂತದಲ್ಲಿ ಸಹನೆ ಮೀರಿದ ಊರವರು ಸಾಹುಕಾರನ ಮನೆಗೆ ನುಗ್ಗಿ, ಅಲ್ಲಿದ್ದ ವಸ್ತುಒಡವೆಗಳು, ಹಣ ಮತ್ತು ಬೇರೆಬೇರೆಯವರ ಆಸ್ತಿಗೆ ಸಂಬಂಧಿಸಿದ ಕಾಗದಪತ್ರಗಳು ಮುಂತಾದ ಎಲ್ಲವನ್ನೂ ತೆಗೆದುಕೊಂಡು ಹೋಗುತ್ತಾರೆ. ಇಷ್ಟಾದರೂ ಪೊಲೀಸರಿಗೆ ತಮ್ಮ ಬಗ್ಗೆ ದೂರು ಹೇಳದ ಸಾಹುಕಾರನ ಮನಸ್ಥಿತಿಗೆ ಕರಗಿ, ಕೊನೆಗೆ ಎಲ್ಲವನ್ನೂ ತಂದೊಪ್ಪಿಸುತ್ತಾರೆ. ಆದರೆ ಒಬ್ಬ ಮಾತ್ರ (ಲೋಕನಾಥ್) ತಾನು ಒಯ್ದಿದ್ದನ್ನು ತಿರುಗಿ ಕೊಡಲಾಗದೆಂದು ಬೇಸರಿಸುತ್ತಾನೆ. ಕಾರಣ- ಆತ ಶ್ರೀಮಂತನ ಮನೆಯಿಂದ ತೆಗೆದುಕೊಂಡು ಹೋದದ್ದು ಉಪ್ಪಿನಕಾಯಿ ಭರಣಿ! ಉಪ್ಪಿನಕಾಯಿ ಎಂದರೆ ಬಾಯಿ ಚಪ್ಪರಿಸುವ ಆತ, ಹಿಂದೆ ಸಾಹುಕಾರನ ಮನೆಯಲ್ಲಿ ಉಪ್ಪಿನಕಾಯಿ ಕೇಳಿ ಬೈಸಿಕೊಂಡಿದ್ದ. ಊರವರು ಸಿರಿವಂತನ ಮನೆಯನ್ನು ದೋಚುವಾಗ ಈತ ಮಾತ್ರ ಉಪ್ಪಿನಕಾಯಿ ಭರಣಿಯನ್ನು ಎತ್ತಿಕೊಂಡು ಹೋಗುತ್ತಾನೆ. ಕೊನೆಗೆ ಊರವರು ಎಲ್ಲವನ್ನು ಮರಳಿ ಕೊಡುವಾಗ, ತಾನು ಉಪ್ಪಿನಕಾಯನ್ನು ಈಗಾಗಲೇ ತಿಂದಿದ್ದರಿಂದಾಗಿ ಖಾಲಿ ಭರಣಿಯನ್ನು ಮಾತ್ರ ವಾಪಸ್ ಕೊಡುತ್ತೇನೆಂಬುದಾಗಿ ಖೇದದ ದನಿಯಲ್ಲಿ ಹೇಳುತ್ತಾನೆ. ಅರೆ, ಒಬ್ಬ ವ್ಯಕ್ತಿ ಉಪ್ಪಿನಕಾಯಿಗಾಗಿ ಇಷ್ಟೆಲ್ಲ ಚಡಪಡಿಸಬಹುದೇ ಎಂದು ಕೆಲವರಿಗೆ ಸಂದೇಹವಾಗಬಹುದು. ಆದರೆ, ಮಲೆನಾಡಿನಲ್ಲಿನ ಅಪ್ಪೆಮಿಡಿ ಉಪ್ಪಿನಕಾಯಿ ರುಚಿನೋಡಿದವರಿಗೆ ಇದರಲ್ಲೇನು ಆಶ್ಚರ್ಯ ಕಾಣಿಸದು ಎಂದರೆ ಅತಿಶಯೋಕ್ತಿಯಲ್ಲ. ಅಪ್ಪೆಮಿಡಿ ಉಪ್ಪಿನಕಾಯಿ ಇದ್ದರೆ ಬರಿ ಮೊಸರನ್ನದಲ್ಲೇ ಊಟ ಮುಗಿಸಬಹುದು. ಅಷ್ಟು ವಿಶಿಷ್ಟ ರುಚಿ ಅದರದು. ಅಪ್ಪೆಮಿಡಿಯಲ್ಲಿ ಅನೇಕ ವೆರೈಟಿಗಳಿವೆ. ಅದರಲ್ಲಿ ‘ಅನಂತ ಭಟ್ಟನ ಅಪ್ಪೆ’ ಎಂಬುದಂತೂ ಬಲು ರುಚಿಕರ. ಇದರಿಂದ ಮಾಡಿದ ಉಪ್ಪಿನಕಾಯನ್ನು ವರ್ಷಗಟ್ಟಲೆ ಇಡಬಹುದು.

    ಇರಲಿ, ಪ್ರಾಸಂಗಿಕವಾಗಿ ಉಪ್ಪಿನಕಾಯಿ ಸನ್ನಿವೇಶ ತರಬೇಕಾಯಿತು. ‘ಬೂತಯ್ಯನ ಮಗ ಅಯ್ಯು’ ಚಿತ್ರದಲ್ಲಿನ ಉಪ್ಪಿನಕಾಯಿಪ್ರಿಯ ಪಾತ್ರಧಾರಿಯಂತೆಯೇ, ಇಂದಿನ ಜಗತ್ತಿನ ಸ್ಥಿತಿಯೂ ಆಗಿದೆ. ಅಂದರೆ, ನಿಸರ್ಗದಿಂದ ನಾವು ಎಲ್ಲವನ್ನೂ ಪಡೆದುಕೊಂಡು ಬರಿದಾಗಿಸಿದ್ದೇವೆ. ಆದರೆ ಭೂಮಾತೆಗೆ ವಾಪಸ್ ಕೊಡಲು ನಮ್ಮ ಬಳಿ ಏನೂ ಉಳಿದಿಲ್ಲ. ಮಾನವನ ಇಂಥ ವಿಪರೀತ ಕೃತ್ಯಗಳಿಂದಾಗಿಯೇ ನಿಸರ್ಗ ಮುನಿಸಿಕೊಂಡು ನಾನಾ ವಿಧದ ವಿಪತ್ತುಗಳು ಬಂದೆರಗುತ್ತಿವೆ ಎಂಬುದರಲ್ಲಿ ಅನುಮಾನವಿಲ್ಲ. ಮಾನವ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ ಎಂದರೂ ಅಷ್ಟು ಸುಲಭವಿಲ್ಲ. ಅಷ್ಟಕ್ಕೂ ಈ ವೈರಸ್ ಜಾತಿ ಇದೆಯಲ್ಲ, ಅದರ ಕಥೆಯೇ ಹಾಗೆ. ಅದು ಒಮ್ಮೆ ವಕ್ಕರಿಸಿತು ಎಂದರೆ ಅಷ್ಟು ಸುಲಭದಲ್ಲಿ ಬಗ್ಗುಬಡಿಯಲಾಗದು. ಒಂದುರೀತಿ ರಕ್ತಬೀಜಾಸುರನ ಹಾಗೆ. ವೈರಾಣುವಿಗೆ ವಾಹಕವೊಂದು ಸಿಕ್ಕರೆ ಸಾಕು, ನಂತರ ಅದರ ನಿಯಂತ್ರಣ ಕಷ್ಟ. ಈಗ ಕರೊನಾ ಹಾವಳಿ ಸಂದರ್ಭದಲ್ಲಿಯೂ ತಜ್ಞರು ಹೇಳುತ್ತಿರುವುದು ಇದನ್ನೇ. ಲಾಕ್​ಡೌನ್ ಅಥವಾ ದಿಗ್ಬಂಧನ ಏನಿತ್ತು, ಅದು ಕರೊನಾ ಪ್ರಸರಣವನ್ನು ಕಂಟ್ರೋಲ್ ಮಾಡುವುದಕ್ಕೆ ಮಾತ್ರ, ಇದರಿಂದ ವೈರಸ್ ನಿಮೂಲನೆಯಾಗುತ್ತದೆ ಎಂದಲ್ಲ. ಹೀಗೆ ಒಮ್ಮೆ ಅದರ ಪ್ರಸರಣವನ್ನು ಕಡಿಮೆ ಮಾಡಿಕೊಂಡರೆ ಅಥವಾ ಅಂಕೆಯಲ್ಲಿಟ್ಟುಕೊಂಡರೆ ಆರೋಗ್ಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಅವಕಾಶವೂ ಸಿಗುತ್ತದೆ. ಒಂದೊಮ್ಮೆ ಭಾರತದಲ್ಲಿ ಲಾಕ್​ಡೌನ್ ವಿಧಿಸದಿದ್ದರೆ ಕೇಸುಗಳ ಪ್ರಮಾಣ ಇನ್ನೂ ಅನೇಕ ಪಟ್ಟು ಹೆಚ್ಚುತ್ತಿತ್ತು. ಈಗ ಭಾರತದಲ್ಲಿ ಕರೊನಾ ಕೇಸುಗಳ ಪ್ರಮಾಣ ಏರಿಕೆಯಾಗುತ್ತಿದ್ದರೂ ಬೇರೆ ದೇಶಗಳ ಹೋಲಿಕೆಯಲ್ಲಿ ನಮ್ಮಲ್ಲಿ ಸೋಂಕು ಪಸರಿಸುವಿಕೆ ಮತ್ತು ಸೋಂಕಿತರ ಮರಣ ಪ್ರಮಾಣ ಎರಡೂ ಕಮ್ಮಿ ಎನ್ನುವುದು ಇದ್ದುದರಲ್ಲಿ ಸ್ವಲ್ಪ ಸಮಾಧಾನದ ಸಂಗತಿ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಒಂದು ಹಂತದ ನಂತರ ಜನರು ವೈರಸ್​ಗೆ ಎಕ್ಸ್ ಪೋಸ್ ಆಗಲೇಬೇಕಾಗುತ್ತದೆ (ಈಜು ಕಲಿಯಬೇಕೆಂದರೆ ನೀರಿಗಿಳಿಯಲೇಬೇಕಲ್ಲವೆ? ಹಾಗೇ.) ಇದು ಯಾವುದೇ ಬಗೆಯ ವೈರಸ್​ಗೆ ಅನ್ವಯಿಸುವ ಮಾತು. ಆ ಕಾಲಘಟ್ಟದಲ್ಲಿ ಕೇಸುಗಳ ಪ್ರಮಾಣ ಕೂಡ ಹೆಚ್ಚುತ್ತದೆ; ಕೆಲ ಕಡೆಗಳಲ್ಲಿ ವಿಪರೀತವಾಗಿ ಹೆಚ್ಚಬಹುದು. ಆದರೆ ಕ್ರಮೇಣ ಜನರಲ್ಲಿ ರೋಗನಿರೋಧಕ ಶಕ್ತಿ ಬೆಳೆಯುತ್ತ, ವೈರಸ್ಸನ್ನು ಎದುರಿಸುವ ಹಂತ ಬರುತ್ತದೆ. ಇದಕ್ಕೆ ‘ಹರ್ಡ್ ಇಮ್ಯೂನಿಟಿ’ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಈಗ ಭಾರತದ ಸಾಂಪ್ರದಾಯಿಕ ಜ್ಞಾನದತ್ತ ಎಲ್ಲರ ಚಿತ್ತ ನೆಟ್ಟಿರುವುದು. ಈಚೆಗೆ ಆಯುಷ್ ಇಲಾಖೆ ಕೂಡ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲ ಸಾಂಪ್ರದಾಯಿಕ ಔಷಧಗಳನ್ನು ಬಿಡುಗಡೆ ಮಾಡಿದೆ. ಇದು ಹೆಚ್ಚೆಚ್ಚು ಜನರನ್ನು ತಲುಪುವಂತಾಗಬೇಕು. ಅಂದರೆ, ನಮ್ಮ ಅಡುಗೆಮನೆಯಲ್ಲಿಯೇ ಆರೋಗ್ಯದ ಗುಟ್ಟು ಅಡಗಿದೆ ಎಂಬುದು ಮನವರಿಕೆಯಾದಷ್ಟು ಹೆಚ್ಚು ಅನುಕೂಲ. ಕೊತ್ತಂಬರಿ ಕಸುವು ನೀಡುತ್ತದೆ; ಅರಿಶಿಣ ಆರೋಗ್ಯಕ್ಕೆ ಮೆರುಗು ತರುತ್ತದೆ.

    ಇದನ್ನೂ ಓದಿ: ಜೂನ್​ 21-28ರ ನಡುವೆ ಗರಿಷ್ಠ ಮಟ್ಟಕ್ಕೆ ಕರೊನಾ ಕೇಸ್​ – ಅಧ್ಯಯನ ವರದಿ ಸುಳಿವು

    ವೈರಸನ್ನು ಕಟ್ಟಿಹಾಕಲು ಲಸಿಕೆ ಅಥವಾ ಔಷಧ ಬರುವವರೆಗೆ ಅದರ ಹಾವಳಿ ಮುಂದುವರಿಯುತ್ತದೆ. ಹೀಗೆಂದೇ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಎಲ್ಲರೂ ‘ಕರೊನಾ ಜತೆಗೆ ಜೀವಿಸುವುದನ್ನು ರೂಢಿಸಿಕೊಳ್ಳಿ’ ಎಂದು ಕಿವಿಮಾತು ಹೇಳುತ್ತಿರುವುದು. ಹೀಗೆ ಹೇಳಿದಾಕ್ಷಣ ಕೆಲವರು ಮುಖ ಕೆಂಪಾಗಿಸಿಕೊಂಡು, ‘ಏನ್ರೀ ಇದರರ್ಥ? ಇದಕ್ಕೆ ಪರಿಹಾರ ಕಂಡುಹಿಡಿಯುವ ಬದಲು ಈ ರೀತಿ ನಿರಾಶಾವಾದದ ಮಾತಾಡಿದರೆ ಜನ ಏನು ಮಾಡಬೇಕು?’ ಎಂದು ಆಕ್ಷೇಪಿಸಿದರು. ಆದರೆ ಕರೊನಾ ಜತೆಗೆ ಸಹಜೀವನ ಎಂಬುದು ಈಗ ವಾಸ್ತವವಾಗುತ್ತಿದೆ. ಇಲ್ಲವಾದಲ್ಲಿ, ಎಲ್ಲೋ ಸಾವಿರಾರು ಕಿಲೋಮೀಟರ್ ದೂರದ ಚೀನಾದ ವುಹಾನ್ ಎಂಬ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ವೈರಸ್, ಇಲ್ಲೆಲ್ಲೊ ನಮ್ಮ ಮೂಲೆಯ ಉತ್ತರ ಕನ್ನಡದ ಯಲ್ಲಾಪುರ, ಶಿರಸಿಗೂ ಹಾಜರಿ ಹಾಕುವುದು ಎಂದರೇನರ್ಥ?

    ಮೊದಲೆಲ್ಲ ಒಂದು ಹೊಸ ಲಸಿಕೆ ಆವಿಷ್ಕರಿಸುವುದು ಎಂದರೆ ಏಳೆಂಟು ವರ್ಷವೇ ಹಿಡಿಯುತ್ತಿತ್ತು. ಆಲ್ಲಿಯವರೆಗೆ ಸಂಬಂಧಿಸಿದ ವೈರಸ್ ಆಡಿದ್ದೇ ಆಟ. ಸಾವುನೋವು ನಿರಂತರ. ಈಗ ವೈದ್ಯಕೀಯದಲ್ಲಿನ ವೈಜ್ಞಾನಿಕ ಪ್ರಗತಿಯಿಂದಾಗಿ ಈ ಅವಧಿ ತಗ್ಗಿದೆ. ಕರೊನಾ ವೈರಸ್​ಗೆ ಔಷಧ ಕಂಡುಹಿಡಿಯುವತ್ತ ವಿಶ್ವದ ನಾನಾ ದೇಶಗಳ ಹಲವು ಸಂಸ್ಥೆಗಳು ತೊಡಗಿಸಿಕೊಂಡಿವೆ; ಭಾರತದಲ್ಲಿಯೇ ಸುಮಾರು ಒಂದು ನೂರು ಸಂಸ್ಥೆಗಳು ಪ್ರಯತ್ನ ನಡೆಸಿವೆ. ಕೆಲವು ಕಡೆ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದೆ. ಈಗಿನ ಪ್ರಯೋಗಗಳ ಆಧಾರದಲ್ಲಿ ನೋಡುವುದಾದರೆ, ಒಂದು ವರ್ಷದಲ್ಲಿ ಲಸಿಕೆ ಸಿದ್ಧವಾಗಬಹುದು ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಹೇಳಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಒಂದು ಹೇಳಿಕೆ ಸ್ವಲ್ಪ ಗಾಬರಿಯನ್ನೂ ತರುವಂತಿದೆ. ‘ಎಚ್​ಐವಿ ರೀತಿಯಲ್ಲಿ ಕರೊನಾ ಕೂಡ ಒಂದು ಸಾಂಕ್ರಾಮಿಕ ಕಾಯಿಲೆಯಾಗಿಯೇ ಉಳಿದುಬಿಡಬಹುದು. ಇದು ನಮ್ಮ ಸಮುದಾಯದಲ್ಲಿ ಮತ್ತೊಂದು ವೈರಸ್ ಆಗಿ ಉಳಿದುಕೊಂಡು ನಿಮೂಲನೆ ಆಗದೆಯೇ ಇರಬಹುದು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞ ಮೈಕ್ ರ್ಯಾನ್ ಹೇಳಿದ್ದಾರೆ. ‘ಕರೊನಾಗೆ ಲಸಿಕೆ ಬರುವುದೇ ಇಲ್ಲ ಎಂದು ನಾನು ಹೇಳಲಾರೆ. ಆ ಸಾಧ್ಯತೆ ಇದ್ದೇ ಇದೆ. ಆದರೂ, ದಡಾರಕ್ಕೆ ಲಸಿಕೆ ಬಂದಿದ್ದರೂ ಅದನ್ನು ಸಂಪೂರ್ಣವಾಗಿ ನಿಮೂಲ ಮಾಡಲು ಆಗಲಿಲ್ಲವಲ್ಲ…’ ಎಂದು ಅವರು ಮತ್ತೊಂದು ಆಯಾಮದತ್ತ ಗಮನಸೆಳೆಯುತ್ತಾರೆ. ವಿಶ್ವಸಂಸ್ಥೆ ಕೂಡ ಕರೊನಾ ಕಾರುಬಾರಿನ ಬಗ್ಗೆ ಎಚ್ಚರಿಕೆಯ ಧಾಟಿಯಲ್ಲೇ  ಮಾತಾಡುತ್ತಿದೆ. ‘ಈ ವೈರಸನ್ನು ನಿಯಂತ್ರಣಕ್ಕೆ ತಂದರೂ ಆತಂಕ, ಖಿನ್ನತೆ, ದುಃಖ ಮುಂತಾದವು ಜನರು ಮತ್ತು ಸಮುದಾಯಗಳನ್ನು ಬಾಧಿಸುತ್ತವೆ’ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶೇಷವಾಗಿ ಮಕ್ಕಳು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಖಿನ್ನತೆ ಅಧಿಕಮಟ್ಟದಲ್ಲಿ ಕಂಡುಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ವಿಭಾಗದ ದೆವೊರ್ ಕೆಸ್ಟಲ್ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಕೊಲೆ ಬೆದರಿಕೆ- ಪ್ರಕರಣ ದಾಖಲಿಸಿದ ಪೊಲೀಸರು

    ಜೂನ್-ಜುಲೈದಲ್ಲಿ ಭಾರತದಲ್ಲಿ ಕರೊನಾ ಕೇಸುಗಳಲ್ಲಿ ಉಬ್ಬರ ಕಂಡುಬರಬಹುದು ಎಂದು ದೆಹಲಿಯ ಏಮ್್ಸ ನಿರ್ದೇಶಕ ಮತ್ತು ಕರೊನಾ ಕಾರ್ಯತಂತ್ರದ ಕುರಿತು ಪ್ರಧಾನಮಂತ್ರಿಗಳಿಗೆ ಸಲಹೆ ನೀಡುವ ತಂಡದಲ್ಲಿರುವ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಈಗ ಪ್ರಕರಣಗಳು ಏರುಗತಿಯಲ್ಲಿವೆ. ಲಾಕ್​ಡೌನ್ ಸಡಿಲಿಕೆ, ಹೊರರಾಜ್ಯದವರ ಮರಳುವಿಕೆ ಹಾಗೂ ಕಾರ್ವಿುಕರ ವಲಸೆಯಿಂದಾಗಿ ಕೇಸುಗಳು ಏರುತ್ತಲೇ ಇವೆ. ಆದರೆ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ಹೋಗಿ ಕ್ರಮೇಣ ಇಳಿಮುಖವಾಗುತ್ತವೆ ಎಂದೂ ಡಾ.ಗುಲೇರಿಯಾ ಹೇಳಿದ್ದಾರೆ. ‘ಇದೊಂದು ಸಮರವೇ ಸರಿ. ವರ್ಷಕಾಲವೂ ದೀರ್ಘವಾಗಬಹುದು. ಹೀಗಾಗಿ ಕೆಲ ಕಾಲ ನಾವು ಕರೊನಾ ಜತೆಗೇ ಜೀವನ ನಡೆಸುವುದು ಅನಿವಾರ್ಯ’ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಹೀಗಾಗಿಯೇ ಮುನ್ನೆಚ್ಚರಿಕೆ ಕುರಿತು ಸರ್ಕಾರ ಹಾಗೂ ತಜ್ಞರು ಪದೇಪದೇ ಹೇಳುತ್ತಿದ್ದಾರೆ. ಅಂದರೆ, ಹೊರಗಡೆ ಹೋದಾಗ ದೈಹಿಕ ಅಂತರ (ಸೋಷಿಯಲ್ ಡಿಸ್ಟನ್ಸ್) ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅತಿ ಅಗತ್ಯವಿರದಿದ್ದರೆ ಹೊರಗಡೆ ಹೋಗದಿರುವುದು… ಇತ್ಯಾದಿ ನಿಯಮಗಳನ್ನು ಪಾಲಿಸುವುದು. ಅಂದರೆ, ಗೋಡೆ ಮೇಲಿನ ಬರಹ ಸ್ಪಷ್ಟ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾನಾ ಕ್ರಮಗಳನ್ನು ಕೈಗೊಂಡು ಕರೊನಾ ನಿಯಂತ್ರಣಕ್ಕೆ ಯತ್ನಿಸುತ್ತಿವೆ. ಬಹುತೇಕ ಕ್ಷೇತ್ರಗಳ ದಿಗ್ಬಂಧನ ತೆರವಾಗಿದೆ. ಜನಜೀವನ ಕ್ರಮೇಣ ಮೊದಲಿನ ಚಟುವಟಿಕೆಗೆ ಮರಳುತ್ತಿದೆ. ಹೀಗಾಗಿ ಸರ್ಕಾರಿ ಇಲಾಖೆಗಳೇ ಮುಂಚಿನಂತೆ ಎಲ್ಲದರ ಮೇಲೂ ಕಣ್ಗಾವಲಿಟ್ಟು ನಿಭಾಯಿಸುವುದು ಅಸಾಧ್ಯ. ಹೀಗಾಗಿ ಇನ್ನು ಜನರ ಪಾತ್ರವೂ ಅಷ್ಟೇ ಮುಖ್ಯ. ಏಕೆಂದರೆ, ಈಗಾಗಲೇ ಸುಮಾರು ಎರಡು ತಿಂಗಳಿಂದ ಸತತವಾಗಿ ಕಾರ್ಯನಿರ್ವಹಿಸಿ ಕರೊನಾ ವಾರಿಯರ್ಸ್-ಅಂದರೆ, ಆರೋಗ್ಯ ವಲಯದ ವೈದ್ಯರು, ನರ್ಸ್, ಇತರ ಸಿಬ್ಬಂದಿ ಹಾಗೂ ಪೊಲೀಸ್, ಆರೋಗ್ಯ ಮತ್ತಿತರ ಇಲಾಖೆಗಳವರು- ಹೈರಾಣಾಗಿದ್ದಾರೆ; ಅವರಲ್ಲಿಯೇ ಕೆಲವರಿಗೆ ಪಾಸಿಟಿವ್ ಬಂದಿದೆ.

    ಕೊನೇ ಮಾತು: ಕರೊನಾ ಕಾರಣಕ್ಕೆ ದೈಹಿಕ ಅಂತರ ಕಾಪಾಡಿಕೊಳ್ಳುವುದು ಸದ್ಯದ ಮಟ್ಟಿಗೆ ಅನಿವಾರ್ಯ. ಆದರೆ ಮುಂದೆ ಇದು ಮಾನಸಿಕ ಅಂತರವಾಗದಂತೆ ನೋಡಿಕೊಳ್ಳಬೇಕಾದುದು ಬಹಳ ಮುಖ್ಯ. ಏಕೆಂದರೆ, ಹತ್ತಿರದಲ್ಲಿದ್ದರೂ ಪರಸ್ಪರರನ್ನು ಅರಿಯಲು ವಿಫಲರಾಗುತ್ತೇವೆ. ಇನ್ನು ದೂರವಿದ್ದರೆ…? ಜಿ.ಎಸ್.ಶಿವರುದ್ರಪ್ಪನವರು ಈ ಮಾನಸಿಕ ಅಂತರವನ್ನು ಬಹು ಮಾರ್ವಿುಕವಾಗಿ ಕಟ್ಟಿಕೊಟ್ಟಿದ್ದಾರೆ-

    ‘ಹತ್ತಿರವಿದ್ದೂ ದೂರ ನಿಲ್ಲುವೆವು

    ನಮ್ಮ ಅಹಂಮಿನ ಕೋಟೆಯಲಿ

    ಎಷ್ಟು ಕಷ್ಟವೋ ಹೊಂದಿಕೆಯೆಂಬುದು

    ನಾಲ್ಕು ದಿನಗಳ ಈ ಬಾಳಿನಲಿ’

    ಈ ಕರೊನಾ ಜಗತ್ತನ್ನು ಇನ್ನಿಲ್ಲದಂತೆ ಬದಲಾಯಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಈ ಸಂಕಷ್ಟ ಸಮಯದಲ್ಲಿ ಮಾನವೀಯತೆ, ಅಂತಃಕರಣ, ಸಾಟಿ ಮಾನವರಲ್ಲಿ ಪ್ರೀತಿ- ಇತ್ಯಾದಿ ಗುಣಗಳು ಎಲ್ಲೆಲ್ಲೂ ಕಂಡುಬರುತ್ತಿವೆ. ಕರೊನೊತ್ತರ ದಿನಗಳಲ್ಲಿ ಈ ಗುಣಗಳು ವರ್ಧಿಸಲಿ ಎಂಬುದು ಈ ಹೊತ್ತಿನ ಆಶಯ-ಹಾರೈಕೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಶೀಘ್ರವೇ ಎಫ್​ಎಂ ಮತ್ತು ಸಮುದಾಯ ರೇಡಿಯೋಗಳಲ್ಲಿ ಸುದ್ದಿ ಪ್ರಸಾರ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts