More

    ಏ.29ರಿಂದ ತಿಪಟೂರಿನಲ್ಲಿ ಕೊಬ್ಬರಿ ಹರಾಜು!

    ತುಮಕೂರು: ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ರೈತರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೊಬ್ಬರಿ ಮಾರಾಟ ಮಾಡಬೇಕಿದೆ.

    ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ನೀಡಿರುವ ಮಾರ್ಗಸೂಚಿ ಅನ್ವಯ ತಿಪಟೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಏ.29ರಿಂದ ಪ್ರತೀ ಬುಧವಾರ ಹಾಗೂ ಶನಿವಾರ ಕೊಬ್ಬರಿ ಆನ್‌ಲೈನ್ ಟೆಂಡರ್ ಪುನರಾರಂಭವಾಗಲಿದೆ. ರೈತರು ಕೊಬ್ಬರಿಯನ್ನು ಬುಧವಾರ ಹಾಗೂ ಶನಿವಾರ ಬೆಳಗ್ಗೆ 8.30ಕ್ಕೆ ಮಾರುಕಟ್ಟೆಗೆ ತಂದಿರಬೇಕು.

    ಕೊಬ್ಬರಿ ಟೆಂಡರ್ ಮಧ್ಯಾಹ್ನ 1ಕ್ಕೆ ಪ್ರಕಟವಾಗಲಿದೆಯಾದರೂ ವರ್ತಕರು ಖರೀದಿಸಿದ ಕೊಬ್ಬರಿಯನ್ನು ಬೇರೆಡೆಗೆ ರವಾನಿಸಲು ಬುಧವಾರ, ಶನಿವಾರ ಅವಕಾಶ ಇರುವುದಿಲ್ಲ. ಬದಲಾಗಿ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಸಾಗಿಸಲು ಅವಕಾಶವಿರುತ್ತದೆ. ಮಾರುಕಟ್ಟೆಯು ಸರ್ಕಾರಿ ರಜಾ ದಿನ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 8.30ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ.

    ಸಾಕಷ್ಟು ದಿನಗಳಿಂದ ಕೊಬ್ಬರಿ ಖರೀದಿಗೆ ಬ್ರೇಕ್ ಬಿದ್ದಿರುವುದರಿಂದ ಸಾಕಷ್ಟು ರೈತರು ಮಾರಾಟಕ್ಕೆ ತುದಿಗಾಲಲ್ಲಿ ನಿಂತಿದ್ದು, ಒಮ್ಮೆಲೆ ಹೆಚ್ಚು ಕೊಬ್ಬರಿ ತರುವ ಆತಂಕವೂ ಇದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ಸವಾಲು ಮಾರುಕಟ್ಟೆ ಅಧಿಕಾರಿಗಳ ಎದುರಿಗಿದೆ. ಅಲ್ಲದೆ ರೈತರು ಹೆಚ್ಚು ಆವಕವನ್ನು ಮಾರುಕಟ್ಟೆಗೆ ತಂದಿಟ್ಟರೆ ಬೆಲೆ ಕುಸಿಯುವ ಆತಂಕವಿದೆ. ಸೀಮಿತ ಮಾರುಕಟ್ಟೆಯನ್ನು ಉಪಾಯವಾಗಿ ಬಳಸಿಕೊಂಡು ಕೊಬ್ಬರಿಗೆ ಬೆಲೆ ಹೆಚ್ಚಿಸಿಕೊಳ್ಳುವ ಕೌಶಲವನ್ನು ರೈತರು, ವರ್ತಕರು ತೋರಬೇಕಿದೆ.

    ಹೆಚ್ಚಾಗುತ್ತಾ ಕೊಬ್ಬರಿ ಬೆಲೆ?: ಕೊಬ್ಬರಿಗೆ ಬೆಲೆಯಲ್ಲಿ ಅನ್ಯಾಯವಾಗಲು ಪ್ರಮುಖ ಕಾರಣ ಮಲೇಷಿಯಾ, ಚೀನಾ, ವಿಯಟ್ನಾಂ ಮತ್ತಿತರರ ದೇಶಗಳಿಂದ ಆಮದಾಗುತ್ತಿರುವ ಸೋಯಾಬಿನ್, ತಾಳೆ ಎಣ್ಣೆ. ಪ್ರಸ್ತುತ ಕರೊನಾ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ದಿಗ್ಬಂಧನ ಹಾಕಿದ್ದು, ಸ್ಥಳೀಯವಾಗಿ ಸಿಗುವ ಕೊಬ್ಬರಿಗೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಪಟೂರು ಮಾರುಕಟ್ಟೆಯ ಕೆಲ ವರ್ತಕರು ಅಭಿಪ್ರಾಯಪಡುತ್ತಾರೆ. ಆದರೆ, ಮಾರುಕಟ್ಟೆ ಲಾಬಿ ಇದಕ್ಕೆ ಅವಕಾಶ ನೀಡುತ್ತದೆಯೇ ಕಾದು ನೋಡಬೇಕು.

    ಲಾರಿ ಚಾಲಕರಿಗೆ ಕ್ವಾರಂಟೈನ್!: ಹೊರರಾಜ್ಯಗಳಿಗೆ ಕೊಬ್ಬರಿ ಕಳುಹಿಸಲು ಹಲವು ಷರತ್ತು ವಿಧಿಸಲಾಗಿದೆ. ಹೊರ ರಾಜ್ಯಗಳಿಗೆ ಕೊಬ್ಬರಿ ತೆಗೆದುಕೊಂಡುವ ಹೋಗುವ ಲಾರಿ ಚಾಲಕರನ್ನು ಆರೋಗ್ಯ ತಪಾಸಣೆಗೊಳಪಡಿಸಬೇಕು. ಸಾರ್ವಜನಿಕರ ಆರೋಗ್ಯದ ಸುರಕ್ಷತೆಯಿಂದ ಲಾರಿ ಚಾಲಕರನ್ನು ಕ್ವಾರಂಟೈನ್ ಮಾಡುವ ಷರತ್ತ್ತಿಗೊಳಪಟ್ಟು ವಹಿವಾಟಿಗೆ ಅನುಮತಿ ನೀಡಲಾಗುತ್ತಿದೆ. ಜಿಲ್ಲೆಯಿಂದ ಹೋಗುವ ಚಾಲಕರಿಗಾಗಿ ಸಹಾಯವಾಣಿ ತೆರೆಯಲಾಗುವುದು. ಕೊಬ್ಬರಿ ಮಾರಾಟ ಮಾಡಲು ಎಸ್‌ಒಪಿ (ಸ್ಟಾಂಡರ್ಡ್ ಆಫ್ ರೆಟಿಂಗ್ ಪ್ರೊಸೀಜರ್ಸ್‌)ಗಳನ್ನು ಜಿಲ್ಲಾಡಳಿತ ರೂಪಿಸಿ ಆದೇಶ ಹೊರಡಿಸಲಿದೆ.

    ಬುಧವಾರ, ಶನಿವಾರ ಎಂದಿನಂತೆ ಟೆಂಡರ್ ನಡೆಯಲಿದೆ. ಪ್ರತಿದಿನ ಮಾರುಕಟ್ಟೆ ತೆರೆದಿರಲಿದ್ದು, ಮುಖ್ಯ ಪ್ರಾಂಗಣದಲ್ಲಿ ರೈತರು, ಪೇಟೆ ಕಾರ್ಯಕರ್ತರು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು.
    ನ್ಯಾಮಗೌಡ ಕಾರ್ಯದರ್ಶಿ ತಿಪಟೂರು ಎಪಿಎಂಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts