More

    ಸಹಕಾರಿ ಸಂಘಗಳ ಬಂಡವಾಳ ಸದೃಢವಾಗಿರಲಿ

    ಹುಕ್ಕೇರಿ: ರೈತರ ಅಭ್ಯುದಯಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆರ್ಥಿಕ ಸದೃಢಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ವೈಯಕ್ತಿಕ ಬಂಡವಾಳ ಸಹಿತ ಸದೃಢವಾಗಿರಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಹೇಳಿದ್ದಾರೆ.

    ಸ್ಥಳೀಯ ವಿಶ್ವರಾಜ ಭವನದಲ್ಲಿ ಶುಕ್ರವಾರ ತಾಲೂಕಿನ ಪಿಕೆಪಿಎಸ್ ಪದಾಧಿಕಾರಿಗಳು ಆಯೋಜಿಸಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಸರ್ಕಾರ ಸಾಲಮನ್ನಾ ಸೌಲಭ್ಯಕ್ಕಿಂತ ಸಮಗ್ರ ಕೃಷಿ ನೀತಿ ಮತ್ತು ಬೆಳೆಗೆ ಯೋಗ್ಯ ಬೆಲೆ, ನೀರು ವಿದ್ಯುತ್ ನೀಡಿದಾಗ ರೈತರ ಆತ್ಮಹತ್ಯೆ ತಡೆಗಟ್ಟಬಹುದು. ರೈತರಿಗೆ ಆಧುನಿಕ ಕೃಷಿ ಪದ್ಧತಿ ಪರಿಚಯಿಸಲು ಹೋಬಳಿ ಮಟ್ಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೂಲಕ ಕೃಷಿ ಅಧಿಕಾರಿಗಳ ನೇಮಕವಾಗಬೇಕು. ಪಿಕೆಪಿಎಸ್‌ನ ಪಾರದರ್ಶಕ ಆಡಳಿತಕ್ಕಾಗಿ ಆನ್‌ಲೈನ್ ವ್ಯವಹಾರ ಕಡ್ಡಾಯಗೊಳಿಸಿದೆ. ಇದರಿಂದ ಇನ್ನು ಮುಂದೆ ಪ್ರತಿದಿನ ಮಧ್ಯಾಹ್ನ 3 ಗಂಟೆಯೊಳಗೆ ಜಿಲ್ಲೆಯಲ್ಲಿನ ಎಲ್ಲ ಪಿಕೆಪಿಎಸ್‌ಗಳ ದಿನದ ವ್ಯವಹಾರ ನೇರವಾಗಿ ನನಗೆ ಮತ್ತು ಬಿಡಿಸಿಸಿ ಬ್ಯಾಂಕಿನ ಅಧಿಕಾರಿಗಳಿಗೆ ದೊರಕುತ್ತದೆ ಎಂದರು. ಒಟ್ಟಾರೆ ಅನ್ನದಾತನ ಬದುಕಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದೇ ನಮ್ಮ ಮನೆತನದ ಆಶಯ ಎಂದರು. ಸಂಗಮ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ ಹಾಗೂ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಅಶೋಕ ಚಂದಪ್ಪಗೋಳ ಮಾತನಾಡಿ, ಕಿರಿಯ ವಯಸ್ಸಿನಲ್ಲಿ ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ಚುಕ್ಕಾಣಿ ವಹಿಸಿಕೊಂಡು ಆರ್ಥಿಕವಾಗಿ ಬಲಿಷ್ಠಗೊಳಿಸಿದ ಶ್ರೇಯಸ್ಸು ರಮೇಶ ಕತ್ತಿ ಅವರಿಗೆ ಸಲ್ಲುತ್ತದೆ. ಅವರಲ್ಲಿಯ ಸಹಕಾರಿ ಗುಣ, ಸಮರ್ಥ ನಾಯಕತ್ವದಿಂದ ಜಿಲ್ಲೆ ಹಾಗೂ ತಾಲೂಕಿನ ಸಹಕಾರಿ ಸಂಸ್ಥೆಗಳು ಹಾಗೂ ಪಿಕೆಪಿಎಸ್‌ನಿಂದ ರೈತರಿಗೆ ಹೆಚ್ಚಿನ ಲಾಭ ದೊರಕಿದೆ ಎಂದರು.

    ತಾಲೂಕಿನ ಪಿಕೆಪಿಎಸ್ ಪದಾಧಿಕಾರಿಗಳು ಹಾಗೂ ಸದಸ್ಯರ ಪರವಾಗಿ ಸಹಕಾರಿ ನಾಯಕ ರಮೇಶ ಕತ್ತಿ ಹಾಗೂ ಗಣ್ಯರು, ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿಯನ್ನು ಸತ್ಕರಿಸಿದರು. ಹಿರಾ ಶುಗರ್ಸ್‌ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಅಧ್ಯಕ್ಷತೆ ವಹಿಸಿದ್ದರು. ಶಿವನಾಯಿಕ ನಾಯಿಕ, ಕಲ್ಲಣ್ಣ ಚೌಗಲಾ, ಕೆ.ಜಿ.ಪಾಟೀಲ, ರಾಚಯ್ಯ ಹಿರೇಮಠ, ಬಾಳಾಸಾಹೇಬ ನಾಯಿಕ, ಸುನೀಲ ಪರ್ವತರಾವ, ಸುಹಾಸ ಜೋಶಿ, ಮಲ್ಲಪ್ಪ ನಾಯಿಕ ಇತರರು ಇದ್ದರು.

    ಸಾಲ ಮನ್ನಾ ಹಣ ಬಿಡುಗಡೆ

    ಬೆಳಗಾವಿ ಜಿಲ್ಲೆಯ ಸುಮಾರು 2,48,953 ಸದಸ್ಯರಿಗೆ 973.58 ಕೋಟಿ ರೂ.ಸಾಲ ಮನ್ನಾ ಹಣ ಬಿಡುಗಡೆಯಾಗಿದ್ದು, ಇನ್ನೂ 37116 ಸದಸ್ಯರ 182.88 ಕೋಟಿ ರೂ.ಬಾಕಿ ಉಳಿದಿದೆ. ಹುಕ್ಕೇರಿ ತಾಲೂಕಿನ 31403 ಸದಸ್ಯರ 117.91 ಕೋಟಿ ರೂ.ಸಾಲ ಮನ್ನಾ ಹಣ ಬಿಡುಗಡೆಯಾಗಿದ್ದು, 4782 ಸದಸ್ಯರ 22.17 ಕೋಟಿ ರೂ.ಬರಬೇಕಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts