More

    ಕರಾವಳಿಯಲ್ಲಿ ಲೋಕಸಭಾ ಮತದಾನ, ಮತದಾರರು ರೆಡಿ, ದಕ್ಷಿಣ ಕನ್ನಡ 9, ಉಡುಪಿಯಲ್ಲಿ 10 ಉಮೇದುವಾರರು

    ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗಾಗಿ ಮತದಾರರು ಏ.26ರಂದು ಮತಗಟ್ಟೆಯತ್ತ ಹೆಜ್ಜೆ ಹಾಕಲಿದ್ದಾರೆ. ದಕ್ಷಿಣ ಕನ್ನಡ ಕಣದಲ್ಲಿ ಒಂಬತ್ತು, ಉಡುಪಿ -ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಉಮೇದುವಾರರು ಅದೃಷ್ಟ ಪರೀಕ್ಷೆಗೆ ಅನುವಾಗಿದ್ದಾರೆ.


    18,18,127 ಮತದಾರರು, 1876 ಮತಗಟ್ಟೆ ಇರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದೆ. ಗುರುವಾರ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಕೊನೇ ಕ್ಷಣದ ಮನೆ ಮನೆ ಭೇಟಿಯಲ್ಲಿ ಮತದಾರರ ಮನವೊಲಿಸಲು ಯತ್ನಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಧ್ಯೆ ನೇರ ಸ್ಪರ್ಧೆ ಇದೆ.


    ದ.ಕ.ಜಿಲ್ಲೆಯಲ್ಲಿ 11,255 ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮಸ್ಟರಿಂಗ್‌ನಲ್ಲಿ ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ, ವಿವಿಪ್ಯಾಟ್‌ಗಳ ಜತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಬಸ್‌ಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದಾರೆ.


    ಈ ಬಾರಿ ಶಾಲಾ ಬಸ್‌ಗಳನ್ನು ಮತಗಟ್ಟೆಗೆ ಕರೆದೊಯ್ಯುವ ಕರ್ತವ್ಯಕ್ಕೆ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೂ ಬಳಸಿಕೊಂಡ ಕಾರಣ ಸರ್ಕಾರಿ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಚುನಾವಣೆ ಉದ್ದೇಶಗಳಿಗೆ ಬಸ್ ಬಳಕೆ, ಬೆಂಗಳೂರು ಮತ್ತು ಮೈಸೂರು ಮಾರ್ಗಗಳಲ್ಲಿ ಹೆಚ್ಚುವರಿ ಸೇವೆಯ ಕಾರಣದಿಂದ ದಕ್ಷಿಣ ಕನ್ನಡದ ವಿವಿಧೆಡೆ ಮತ್ತು ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯಲ್ಲಿ ಶುಕ್ರವಾರ ತುಸು ವ್ಯತ್ಯಯವಾಗಲಿದೆ. ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಕರ್ನಾಟಕದ ಒಟ್ಟು 40 ಬಸ್‌ಗಳು ಸಂಚರಿಸುತ್ತಿದ್ದು, ಇದರಲ್ಲಿ ಶುಕ್ರವಾರ 10 ಬಸ್‌ಗಳ ಸೇವೆ ಕಡಿತವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ. ಸಿಟಿ ಬಸ್‌ಗಳ ಸೇವೆಯಲ್ಲಿ ವ್ಯತ್ಯಯ ಇಲ್ಲ ಎಂದು ಸಿಟಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

    ಬೆಳಗ್ಗೆ 7ರಿಂದ ಸಂಜೆ 6ರ ತನಕ ಮತದಾನ
    ಏ.26ರಂದು ಬೆಳಗ್ಗೆ ಬೆಳಗ್ಗೆ 7ರಿಂದ ಸಂಜೆ 6ರ ತನಕ ಮತದಾನ ನಡೆಯಲಿದೆ. ಮತಗಟ್ಟೆಗೆ ಬೇಕಾದ ಸಿಬ್ಬಂದಿ ಹಾಗೂ ಮತದಾನದ ಸಲಕರಣೆಗಳನ್ನು ಪೂರೈಸುವ ಮಸ್ಟರಿಂಗ್ ಪ್ರಕ್ರಿಯೆ ಬುಧವಾರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಿತು. ಬೆಳ್ತಂಗಡಿ-ಎಸ್‌ಡಿಎಂ ಪಿಯು ಕಾಲೇಜು ಉಜಿರೆ, ಮೂಡುಬಿದಿರೆ- ಮಹಾವೀರ ಕಾಲೇಜು, ಮಂಗಳೂರು ನಗರ ಉತ್ತರ- ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ದಕ್ಷಿಣ -ಕೆನರಾ ಹೈಸ್ಕೂಲ್ ಉರ್ವ, ಮಂಗಳೂರು- ಮಂಗಳೂರು ವಿವಿ ಹ್ಯುಮಾನಿಟೀಸ್ ವಿಭಾಗ ಕೊಣಾಜೆ, ಬಂಟ್ವಾಳ- ಇನ್ಪೆಂಟ್ ಜೀಸಸ್ ಶಾಲೆ ಮೊಡಂಕಾಪು, ಪುತ್ತೂರು- ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ, ಸುಳ್ಯ-ನೆಹರು ಮೆಮೊರಿಯಲ್ ಕಾಲೇಜು ಸುಳ್ಯ ಇಲ್ಲಿ ಮಸ್ಟರಿಂಗ್ ನಡೆಯಿತು. ಶುಕ್ರವಾರ ಬೆಳಗ್ಗೆ 6ಕ್ಕೆ ಎಲ್ಲ ಮತಗಟ್ಟೆಗಳಲ್ಲಿ ಕಲ್ಪಿತ ಮತದಾನ ನಡೆಯಲಿದ್ದು, 6.45ಕ್ಕೆ ಇವಿಎಂ ಸಿದ್ಧವಾಗಲಿದೆ. 7ರಿಂದ ಮತದಾರರಿಗೆ ಹಕ್ಕು ಚಲಾವಣೆಗೆ ಅವಕಾಶ ಸಿಗಲಿದೆ.

    ಮತಗಟ್ಟೆಗೆ ತೆರಳಿದ ಸಿಬ್ಬಂದಿ
    ಎಲ್ಲ ಸಿಬ್ಬಂದಿ ಮಧ್ಯಾಹ್ನದವರೆಗೆ ಮತಯಂತ್ರ, ವಿವಿಪ್ಯಾಟ್ ಹಾಗೂ ಮತದಾರರ ಪಟ್ಟಿಯ ಪರಿಶೀಲನೆ ನಡೆಸಿದರು. ಚುನಾವಣೆ ಕರ್ತವ್ಯಕ್ಕೆ ನೇಮಿಸಲಾದ ಹೆಚ್ಚುವರಿ ಸಿಬ್ಬಂದಿಗೆ ಮತಗಟ್ಟೆ ಹಂಚಿಕೆ ಮಾಡಲಾಯಿತು. ಅನಿವಾರ್ಯ ಕಾರಣಗಳಿಂದ ಗೈರಾದವರ ಬದಲಿಗೆ ಪರ್ಯಾಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಯಿತು. ಮಧ್ಯಾಹ್ನದ ಊಟದ ನಂತರ ಸಿಬ್ಬಂದಿ ಭದ್ರತಾ ಅಧಿಕಾರಿಗಳ ಜತೆ ಮತಗಟ್ಟೆಗಳಿಗೆ ತೆರಳಿದರು. ಮಸ್ಟರಿಂಗ್ ನಡೆದ ಸಂಸ್ಥೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಇರಿಸಿಕೊಳ್ಳಲಾಗಿದ್ದು, ಅಗತ್ಯ ಬಿದ್ದಲ್ಲಿ ಅವರನ್ನೂ ಮತಗಟ್ಟೆಗಳಿಗೆ ಶುಕ್ರವಾರ ಕಳುಹಿಸಲಾಗುತ್ತದೆ. ಮತದಾನ ಅಂತ್ಯಗೊಂಡ ಬಳಿಕ ಶುಕ್ರವಾರ ಸಂಜೆ ಎಲ್ಲ ಮತಗಟ್ಟೆಗಳಿಂದ ಮತಯಂತ್ರಗಳನ್ನು ಮಸ್ಟರಿಂಗ್ ನಡೆದ ಕೇಂದ್ರಗಳಿಗೆ ತಂದು ಸಹಾಯಕ ಚುನಾವಣಾಧಿಕಾರಿಗಳಿಗೆ ಎಲ್ಲ ದಾಖಲಾತಿ ನೀಡಿ ಡಿ ಮಸ್ಟರಿಂಗ್ ಪ್ರಕ್ರಿಯೆ ನಡೆಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts