More

    ಸಕಾಲಕ್ಕೆ ಸಾಲ ಮರುಪಾವತಿಸಿ ಸಹಕರಿಸಿ

    ಚಿಕ್ಕಮಗಳೂರು: ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಸಹಕಾರಿಯಾಗಿದ್ದು, ನಿಗದಿತ ಕಾಲಕ್ಕೆ ಸಾಲ ಹಿಂತಿರುಗಿಸುವ ಮೂಲಕ ಇತರ ಸದಸ್ಯರಿಗೂ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

    ಭಾನುವಾರ ಹಿರೇಮಗಳೂರು ಶ್ರೀ ಮೂಕಾಂಬಿಕಾ ಸ್ತ್ರೀಶಕ್ತಿ ಸಂಘದ ಬೆಳ್ಳಿಹಬ್ಬದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿ ಪರಿವರ್ತನೆಗೆ ಸ್ತ್ರೀಯೇ ಅಧಿಪತಿಯಾಗಿದ್ದಾಳೆ. ಹೆಣ್ಣಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಿಕೊಂಡು ಕುಟುಂಬಕ್ಕೆ ಆರ್ಥಿಕ ಭದ್ರತೆಗೆ ಸಹಕಾರಿಯಾಗಿದ್ದಾರೆ ಎಂದು ಹೇಳಿದರು.
    ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ ಮಾತನಾಡಿ, ಒಂದು ಕಾಲದಲ್ಲಿ ಮಹಿಳೆಯರನ್ನು ನಾನಾ ಕಟ್ಟುಪಾಡುಗಳಲ್ಲಿ ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದಡಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿ ಸಮಾಜದ ಮುಂಚೂಣಿಗೆ ತಂದಿರುವ ಫಲವಾಗಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದರು.
    ಮೂಕಾಂಬಿಕಾ ಸ್ತ್ರೀಶಕ್ತಿ ಸಂಘ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಕಾರ್ಯಚಟುವಟಿಕೆ ರೂಪಿಸಿಕೊಂಡು ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಸುವರ್ಣ ಮಹೋತ್ಸವ ಆಚರಿಸುವಂತಾಗಲಿ ಎಂದು ಆಶಿಸಿದರು.
    ಶ್ರೀ ಮೂಕಾಂಬಿಕಾ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ನೀಲಮ್ಮ ಮಾತನಾಡಿ, ಸಂಘದಲ್ಲಿ 20 ಸದಸ್ಯರಿದ್ದು, 2.40 ಲಕ್ಷ ರೂ. ಉಳಿತಾಯ ಹೊಂದಿದೆ. ಸದಸ್ಯೆಯರಿಗೆ 5 ಸಾವಿರದಿಂದ 30 ಸಾವಿರ ರೂ.ವರೆಗೂ ಸಾಲ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಎಚ್.ಜೆ.ಶಿವಕುಮಾರ್, ಅಂಗನವಾಡಿ ಶಿಕ್ಷಕಿ ಲಕ್ಷ್ಮೀ, ಮೇಲ್ವಿಚಾರಕಿ ಪುಷ್ಪಾವತಿ, ಕಾಂಗ್ರೆಸ್ ಮುಖಂಡ ಎಚ್.ಎಸ್.ಜಗದೀಶ್, ಎಚ್.ಪಿ.ಸುರೇಶ್, ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts