More

    ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರು ಕಪ್ಪುಪಟ್ಟಿಗೆ

    ಮುದ್ದೇಬಿಹಾಳ: ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿರುವ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಈ ಅವಕಾಶ ಬಳಸಿಕೊಳ್ಳದೇ ಹೋದಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿ ಬೇರೆಯವರಿಗೆ ಗುತ್ತಿಗೆ ಕೆಲಸ ನೀಡಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಸೂಚಿಸಿದರು.

    ಸ್ಥಳೀಯ ಪುರಸಭೆಯಲ್ಲಿ ಬುಧವಾರ ಕರೆದ ಅಧಿಕಾರಿಗಳು, ಸದಸ್ಯರ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅಭಿವೃದ್ಧಿ ಕಾಮಗಾರಿ ಸೇರಿ ಮಹತ್ವದ ವಿಷಯಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ಸೂಚನೆ ನೀಡಿದರು.

    ಗುತ್ತಿಗೆದಾರರು ವಿನಾಕಾರಣ ನನ್ನ ಹೆಸರು ಬಳಸಿಕೊಂಡು ಕೆಲಸ ನಿಲ್ಲಿಸಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ನಾನು ಅಡ್ಡಿಪಡಿಸಿಲ್ಲ. ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದ್ದೇನೆ. ಕೆಲ ಗುತ್ತಿಗೆದಾರರು ತಮ್ಮಷ್ಟಕ್ಕೆ ತಾವೇ ಏನೇನೋ ಕಲ್ಪಿಸಿಕೊಂಡು ಕೆಲಸ ಮಾಡದೆ ಅರ್ಧಕ್ಕೆ ನಿಲ್ಲಿಸಿರುವುದು ಸರಿಯಲ್ಲ ಎಂದರು.

    ಪಟ್ಟಣದಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಾದ ವಿ.ಎಸ್. ನಾಡಗೌಡ, ಬಸನಗೌಡ ಪಾಟೀಲ ವಣಿಕ್ಯಾಳ ಮತ್ತಿತರಿಗೆ ನೋಟಿಸ್ ನೀಡುವಂತೆ ತಿಳಿಸಿದ ಶಾಸಕರು, ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಪರ್ಯಾಯ ವ್ಯವಸ್ಥೆಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ನಿರ್ದೇಶಿಸಿದರು.

    ದ್ವೇಷ ರಾಜಕಾರಣ ಮಾಡುವುದಿಲ್ಲ. ಕೆಲವರು ಸರ್ಕಾರದ ಅನುದಾನದಲ್ಲಿ ರಾಜಕಾರಣ ಮಾಡಲು ಹೋಗಿ ಕೈಸುಟ್ಟುಕೊಂಡಿದ್ದಾರೆ. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡದ ವಿವಿಧ ವೃತ್ತಗಳಲ್ಲಿ ಅಂಬೇಡ್ಕರ್, ಬಸವಣ್ಣ ಇನ್ನಿತರ ಮೂರ್ತಿ ಸ್ಥಾಪನೆ ಕಾಮಗಾರಿಗಳಿಗೆ ಎಷ್ಟು ಕೆಲಸ ಆಗಿದೆಯೋ ಪರಿಶೀಲಿಸಿ ಕೆಲಸ ಮಾಡಿದವರಿಗೆ ಅನುದಾನವನ್ನು ಬಿಡುಗಡೆಗೊಳಿಸಲು ಕ್ರಮ ಜರುಗಿಸಬೇಕು. ಹಿಂದಿನ ಜಿಲ್ಲಾಧಿಕಾರಿ ಮಾಡಿದ್ದನ್ನು ಈಗ ಮುಂದುವರಿಸಬೇಕಾಗಿದೆ. ಇದಕ್ಕೆ ಸದಸ್ಯರೆಲ್ಲ ಒಪ್ಪಿಗೆ ಕೊಡಬೇಕು ಎಂದಾಗ ಸರ್ವ ಸದಸ್ಯರು ಬಿಲ್ ಕೊಡಲು ಒಪ್ಪಿಗೆ ಸೂಚಿಸಿದರು.

    ಪಟ್ಟಣದಲ್ಲಿ ಅತಿಕ್ರಮಣ ಹೆಚ್ಚಾಗಿದೆ. ಸರ್ವೆ ಇಲಾಖೆ ಸಹಾಯದಿಂದ ಪಟ್ಟಣದಲ್ಲಿ ನಡೆದಿರುವ ಅತಿಕ್ರಮಣ ಸಮೀಕ್ಷೆ ನಡೆಸಿ ಕೆಂಪು ಕಲರ್‌ನಿಂದ ಅತಿಕ್ರಮಣದ ಪ್ರಮಾಣ ಗುರ್ತಿಸಬೇಕು. ಮುಂದಿನ ಸಭೆಯಲ್ಲಿ ಅತಿಕ್ರಮಣ ತೆರವುಗೊಳಿಸುವ ಕುರಿತು ತೀರ್ಮಾನ ಕೈಕೊಂಡು ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸುವ ಕುರಿತು ಚಿಂತನೆ ನಡೆಸಬೇಕು ಎಂದರು.

    ಮುಖ್ಯಮಂತ್ರಿಯವರ ವಿಶೇಷ ಅನುದಾನ 10 ಕೋಟಿಯಲ್ಲಿ ಈಗಾಗಲೇ 6.55 ಕೋಟಿ ರೂ. ಅನುದಾನದಲ್ಲಿ ಕೆಲಸಗಳು ಆಗಿವೆ. ಇನ್ನುಳಿದ ಅನುದಾನ ಬಳಕೆ ಬಗ್ಗೆ ಎಲ್ಲರೂ ಚರ್ಚಿಸಿ ತೀರ್ಮಾನಿಸಬೇಕು. ಇನ್ನೂ 2.95 ಕೋಟಿ ರೂ. ಅನುದಾನಕ್ಕೆ ಎಸ್ಟಿಮೇಟ್ ಮಾಡಬೇಕು ಎಂದಾಗ ಮುಖ್ಯಾಧಿಕಾರಿ ಕೋರಿಕೆ ಮೇರೆಗೆ 1 ಕೋಟಿ ಹಣವನ್ನು ಬಜಾರ್‌ನಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ತೆಗೆದಿಟ್ಟು ಇನ್ನುಳಿದ 1.95 ಕೋಟಿ ರೂ.ದಲ್ಲಿ ಮಹೆಬೂಬನಗರದ ಉರ್ದು ಶಾಲೆ ಮೂಲಸೌಕರ್ಯಕ್ಕೆ 30 ಲಕ್ಷ ರೂ. ಉಳಿದ 1.65 ಕೋಟಿ ರೂ.ಗಳನ್ನು 23 ವಾರ್ಡ್‌ಗಳಿಗೆ ಆದ್ಯತೆಗನುಸಾರವಾಗಿ ಹಂಚಿಕೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.

    ಪುರಸಭೆಯ 129 ವಾಣಿಜ್ಯ ಮಳಿಗೆಗಳಲ್ಲಿ 68 ಹರಾಜು ಮಾಡಲಾಗಿದೆ. ಇನ್ನೂ 61 ಮಳಿಗೆ ಹರಾಜಾಗಬೇಕಿದೆ. ಬೇಡಿಕೆದಾರರು ಭಾಗವಹಿಸದ ಕಾರಣ ಇವು ಖಾಲಿ ಉಳಿದಿವೆ ಎಂದು ಮುಖ್ಯಾಧಿಕಾರಿ ತಿಳಿಸಿದಾಗ ಆನ್‌ಲೈನ್ ಹರಾಜು ಪ್ರಕ್ರಿಯೆ ನಡೆಸುವಂತೆ, ಡಿಪಾಜಿಟ್ ಹರಾಜು ಮಾಡದೆ ಮಾಸಿಕ ಬಾಡಿಗೆ ರೂಪದ ಹರಾಜು ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದು ಒಪ್ಪಿಗೆ ಪಡೆದುಕೊಂಡು ಮುಂದುವರಿಯಲು ಶಾಸಕರು ಸೂಚಿಸಿದರು.

    ಪಟ್ಟಣದಲ್ಲಿ ಜಾಹೀರಾತು ಫಲಕಗಳಿಗೆ ಕಡ್ಡಾಯವಾಗಿ ತೆರಿಗೆ ಸಂಗ್ರಹಿಸಲು, ಒಳಚರಂಡಿ ಯೋಜನೆಯನ್ನು ಆದಷ್ಟು ಬೇಗ ಪುರಸಭೆಗೆ ಹಸ್ತಾಂತರಿಸಲು ಸೂಚಿಸಿದ ಶಾಸಕರು, ಕೆಲಸ ಮಾಡದವರಿಗೆ ಬಿಲ್ ನೀಡದಂತೆ ತಿಳಿಸಿದರು.

    ಸಭೆಯಲ್ಲಿ ತಹಸೀಲ್ದಾರ್ ಬಲರಾಮ ಕಟ್ಟೀಮನಿ, ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಇಇ ಎಸ್.ಎಸ್. ಪಟ್ಟಣಶೆಟ್ಟಿ, ಎಇಇ ಶ್ರೀನಿವಾಸ, ಎಇ ರಾಮರಾವ್ ರಾಠೋಡ, ಸದಸ್ಯರು, ಪುರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts