More

  ಗುತ್ತಿಗೆದಾರರ ಸಂಘದಿಂದ ಸಿಎಂ ನಿವಾಸಕ್ಕೆ ಮುತ್ತಿಗೆ ಎಚ್ಚರಿಕೆ; ವಿವಿಧ ಇಲಾಖೆಗಳಲ್ಲಿ 22,000 ಕೋಟಿ ರೂ. ಮೊತ್ತ ಬಾಕಿ

  ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಸಲಾದ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ ಗುತ್ತಿಗೆದಾರರಿಗೆ 2 ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ. ಈ ರೀತಿ ವಿವಿಧ ಇಲಾಖೆಗಳಿಂದ 22,000 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದು, ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಆಗ್ರಹಿಸಿದ್ದಾರೆ.

  ನಗರದ ಪ್ರಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ಪೂರ್ಣಗೊಳಿಸಿರುವ ಕಾಮಗಾರಿಗಳ ಬಾಕಿ ಮೊತ್ತ ಅಂದಾಜು 10,000 ಕೋಟಿ ರೂ. ಮೀರುತ್ತದೆ. ಬಿಬಿಎಂಪಿಯಿಂದಲೂ 3,000 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಕಳೆದ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ವೇಳೆ ಬಾಕಿ ಮೊತ್ತ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಾಲಮಿತಿಯೊಳಗೆ ಹಣ ಬಿಡುಗಡೆ ಮಾಡದಿದ್ದಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

  ಇದನ್ನೂ ಓದಿ: ಬೆಂಗಳೂರು-ಮೈಸೂರು ಕೆಎಸ್​ಆರ್​ಟಿಸಿ ಪ್ರಯಾಣ ದರ ಹೆಚ್ಚಳ: ದಶಪಥದಲ್ಲಿ ಟೋಲ್ ಸಂಗ್ರಹ ಅಡ್ಡಪರಿಣಾಮ

  ಹಣ ಬಿಡುಗಡೆಯಲ್ಲಿ ಪಾಲನೆಯಾಗದ ಜ್ಯೇಷ್ಠತೆ

  ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷಗಳಾದರೂ ಹಣ ಬಿಡುಗಡೆ ಮಾಡಲು ಮೀನ-ಮೇಷ ಎಣಿಸುವ ಸರ್ಕಾರ, ಕೆಲಸ ಮುಗಿಸಿ ಗಡುವಿನೊಳಗೆ ಬಾಕಿ ಬಿಲ್ ಪಾವತಿಸುತ್ತಿಲ್ಲ. ಶೇ.80 ಮೊತ್ತವನ್ನು ಹಿರಿತನದ ಆಧಾರದ ಮೇಲೆ ಮತ್ತು ಶೇ.20 ಮೊತ್ತವನ್ನು ವಿವೇಚನಾ ಕೋಟಾದಡಿಯಲ್ಲಿ ಬಿಡುಗಡೆ ಮಾಡಬೇಕೆಂಬ ನಿಯಮ ಇದೆ. ಇದನ್ನು ಪಾಲಿಸುವ ಬದಲು ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಸೂಚಿಸುವವರಿಗೆ ಮಾತ್ರ ಬಾಕಿ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ. ಜತೆಗೆ ಹಣ ಬಿಡುಗಡೆಗೆ ಲಂಚ ಕೂಡ ಕೇಳಲಾಗುತ್ತಿದೆ. ಜ್ಯೇಷ್ಠತೆ ಪಾಲಿಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಎಂ.ರವೀಂದ್ರ, ಆರ್.ಅಂಬಿಕಾಪತಿ, ಹನುಮಂತಯ್ಯ, ಎಂ.ಎಚ್. ಯತಿರಾಜ್, ರಮೇಶ್ ಎಂ. ಹಾಜರಿದ್ದರು.

  ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

  ವಿಧಾನಸಭಾ ಚುನಾವಣೆಗೆ ಯಾವುದೇ ಸಂದರ್ಭದಲ್ಲಾದರೂ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಚುನಾವಣಾ ವೇಳಾಪಟ್ಟಿ ಬಿಡುಗಡೆಯಾದ ಬಳಿಕ ಸರ್ಕಾರಕ್ಕೆ ಹಣ ಬಿಡುಗಡೆ ಮಾಡುವ ಅವಕಾಶ ಇರುವುದಿಲ್ಲ. ಹೀಗಾಗಿ ತಕ್ಷಣವೇ ಬಾಕಿ ಬಿಲ್ ಪಾವತಿಸುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿ.
  | ಡಿ.ಕೆಂಪಣ್ಣ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ

  ಹೊಸ ತಂತ್ರಜ್ಞಾನ ರೂಪಿಸಲಿ

  ಕಾಮಗಾರಿಗಳು ಪೂರ್ಣಗೊಂಡ ನಂತರ ಬಿಲ್ ಪಾವತಿಗೆ ಹೊಸ ತಂತ್ರಜ್ಞಾನವನ್ನು ಒಳಗೊಂಡ ವ್ಯವಸ್ಥೆಯೊಂದನ್ನು ರೂಪಿಸುವುದು ಸಮಸ್ಯೆಗೆ ಪರಿಹಾರವಾಗಿದೆ. ಆಯಾ ಇಲಾಖೆಗಳ ಕಚೇರಿಗಳಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ನಾಮಫಲಕದಲ್ಲಿ ಬಿಡುಗಡೆಯಾದ ಹಣ, ಬಾಕಿ ಮೊತ್ತದ ವಿವರ ಇರಬೇಕು. ಇಂತಹ ಪಾರದರ್ಶಕತೆ ವ್ಯವಸ್ಥೆ ತರಲು ಸಾಧ್ಯವಿದೆ. ಜತೆಗೆ ಎಲ್ಲ ಇಲಾಖೆಗಳ ಪೂರ್ಣಗೊಳಿಸಿದ, ಚಾಲ್ತಿಯಲ್ಲಿರುವ ಹಾಗೂ ಹೊಸ ಕಾಮಗಾರಿಗಳ ಮೊತ್ತದ ಅಂದಾಜು ಪಟ್ಟಿಯನ್ನು ತಯಾರಿಸಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನು ನಿಗದಿಪಡಿಸುವುದು ಉತ್ತಮ. ಅನುದಾನದ ಲಭ್ಯತೆಯನ್ನು ಆಧರಿಸಿ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿದರೆ ಸರಕಾರ ಮತ್ತು ಗುತ್ತಿಗೆದಾರರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಸರ್ಕಾರಕ್ಕೂ ಹೊರೆ ತಪ್ಪುತ್ತದೆ ಎಂದು ಡಿ.ಕೆಂಪಣ್ಣ ತಿಳಿಸಿದರು.

  ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

  ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಫ್ರೆಂಡ್ ಜತೆ ಮಾತನಾಡುತ್ತಲೇ ಕುಸಿದು ಬಿದ್ದು ಸಾವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts