More

    ಕಾಂಗ್ರೆಸ್‌ನಿಂದ ದಲಿತರಿಗೆ ನಿರಂತರ ಅನ್ಯಾಯ


    ಮಂಡ್ಯ : ಕಾಂಗ್ರೆಸ್ ನಾಯಕರು ದಲಿತರಿಗೆ ನಿರಂತರವಾಗಿ ಅನ್ಯಾಯ ಮಾಡಿಕೊಂಡೇ ಬಂದಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎರಡು ಬಾರಿ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಿದರು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

    ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.


    2004 ಮತ್ತು 2018ರಲ್ಲಿ ಎಚ್.ಡಿ.ದೇವೇಗೌಡರು ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ಸಲಹೆ ನೀಡಿದರೂ ಕಾಂಗ್ರೆಸ್ ನಾಯಕರು ಇದಕ್ಕೆ ಒಪ್ಪಲಿಲ್ಲ. ಪರಮೇಶ್ವರ್ ಮುಖ್ಯಮಂತ್ರಿ ಆಗ್ತಾರೆ ಎಂಬ ಒಂದೇ ಕಾರಣಕ್ಕೆ ತುರುವೆಕೆರೆಯಲ್ಲಿ ಅವರನ್ನು ಸೋಲಿಸಲಾಯಿತು. ಮಮತಾ ಬ್ಯಾನರ್ಜಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಸಿದ್ದರಾಮಯ್ಯ ಅದು ಸಾಧ್ಯವೇ ಇಲ್ಲ ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿ ಎನ್ನುತ್ತಾರೆ. ಇಂತಹವರಿಗೆ ದಲಿತರ ಮೇಲೆ ಕಾಳಜಿ ಎಲ್ಲಿದೆ ಎಂದು ಪ್ರಶ್ನಿಸಿದರು.


    ಎರಡು ಬಾರಿ ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ಸಿಗರಿಗೆ ಅವರ ಹೆಸರು ಹೇಳುವ ನೈತಿಕತೆ ಇಲ್ಲ. ನೆಹರು, ರಾಜೀವ್ ಗಾಂಧಿ ಅವರಿಗೆ 50 ಎಕರೆ ಜಮೀನಿನಲ್ಲಿ ಸಮಾಧಿ ನಿರ್ಮಿಸಿರುವ ಕಾಂಗ್ರೆಸ್ಸಿಗರು ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೂ ಜಾಗ ನೀಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಿದ್ದಾರೆ. ಏಳು ದಶಕಗಳ ಆಡಳಿತ ನಡೆಸಿರುವ ಕಾಂಗ್ರೆಸ್ ದಲಿತರನ್ನು ಕಟ್ಟಕಡೆಯ ಸ್ಥಾನದಲ್ಲಿ ಇರಿಸಿದ್ದಾರೆ. ಸಿದ್ದಾರಾಮಯ್ಯ ಅವರು ದಲಿತರಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ. ಅನ್ನು ಪುಕ್ಕಟೆ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದು, ಗ್ಯಾರಂಟಿಗಳಿಗೆ ದಲಿತರ ಹಣವೇ ಬೇಕಿತ್ತೆ? ಬೇರೆ ಸಮುದಾಯಗಳ ಹಣ ಇರಲಿಲ್ಲವೇ? ಎಚ್‌ಡಿಕೆ ದಲಿತರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಮ ವಾಸ್ತವ್ಯ ಮಾಡಿದ್ದರು. ನೀವು ಇಂತಹ ಕೆಲಸ ಮಾಡಿ ಎಂದು ಸವಾಲು ಹಾಕಿದರು.


    ನಕಲಿ ಗ್ಯಾರಂಟಿ ಕಾರ್ಡ್‌ಗಳನ್ನು ಹಿಡಿದು ಮನೆ ಬಾಗಿಲಿಗೆ ಬರುತ್ತಿರುವ ಕಾಂಗ್ರೆಸ್‌ನವರನ್ನು ಯಾರು ನಂಬಬಾರದು. ನಾವೆಲ್ಲ ಒಂದೇ ತಾಯಿ ಮಕ್ಕಳು ಎಂಬುದನ್ನು ನಿರೂಪಿಸಲು ಸಾಮೂಹಿಕ ಸರಳ ವಿವಾಹದಲ್ಲಿ ದಲಿತರರೊಂದಿಗೆ ನನ್ನ ಒಬ್ಬಳೇ ಮಗಳ ಮದುವೆಯನ್ನೂ ಮಾಡಿಕೊಟ್ಟೆ. ಇಂದಿನ ಸಮಾವೇಶ ಆತ್ಮಸ್ಥೈರ್ಯ ತಂದಿದ್ದು, ಎಚ್‌ಡಿಕೆ ಪರವಾಗಿ ದಲಿತರು ಇದ್ದಾರೆ ಎಂಬುದು ಸಾಬೀತಾಗಿದೆ ಎಂದರು.


    ಮಾಜಿ ಸಚಿವ ಆಲ್ಕೋಡು ಹನುಮಂತಪ್ಪ ಮಾತನಾಡಿ, ದಲಿತರಿಗೆ ಅಧಿಕಾರ ನೀಡಿದ ಪಕ್ಷ ಯಾವುದಾದರೂ ಇದ್ದರೆ ಜೆಡಿಎಸ್ ಮಾತ್ರ. ಎಚ್.ಡಿ.ದೇವೇಗೌಡರು ಇರದಿದ್ದರೆ ಎಸ್ಸಿ, ಎಸ್‌ಟಿ ಸಮುದಾಯದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷಗಾದಿ ಅನುಭವಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಗಂಗಾ ಕಲ್ಯಾಣ ಯೋಜನೆ ಮೂಲಕ ದಲಿತರ ಜಮೀನುಗಳಿಗೆ ನೀರು ಹರಿಯಲು ದೇವೇಗೌಡರು ಕಾರಣಕರ್ತರು ಎಂದು ವಿವರಿಸಿದರು.


    ಪರಿಶಿಷ್ಟ ಜಾತಿ ವಿಭಾಗದ ತಾಲೂಕು ಅಧ್ಯಕ್ಷ ಕನಗನಮರಡಿ ಬೊಮ್ಮರಾಜು ಮಾತನಾಡಿ, ದಲಿತರು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಬೇಕು. ದೇಶದಲ್ಲಿ ನಿಜವಾದ ಕೋಮುವಾದಿ ಪಕ್ಷ ಎಂದರೆ ಅದು ಕಾಂಗ್ರೆಸ್. ದಲಿತರಿಗೆ ಮೀಸಲಾಗಿದ್ದ ಅನುದಾನವನ್ನು ಬಳಕೆ ಮಾಡಿಕೊಂಡು ಆ ಹಣವನ್ನು ಗ್ಯಾರಂಟಿಗಳಿಗೆ ಹಂಚುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಡುತ್ತಿರುವ 5ಕೆಜಿ ಅಕ್ಕಿಯನ್ನು ನಮ್ಮದು ಎಂದುಕೊಂಡು ಬೀಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ ಕೊಡಬಾರದು. ಎಚ್‌ಡಿಕೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದೇ ಕ್ಷೇತ್ರದ ಜನತೆಗೆ ಗೊತ್ತಿಲ್ಲ ಎಂದು ಹೇಳಿದರು.


    ಸಮಾವೇಶದಲ್ಲಿ ಮುಖಂಡರಾದ ಪುರಸಭೆ ಮಾಜಿ ಅಧ್ಯಕ್ಷೆ ಅರ್ಚನಾ ಚಂದ್ರು, ಸದಸ್ಯ ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಶ್ವೇತಾ ಸುರೇಶ್, ಎಚ್.ಮಂಜುನಾಥ್, ಎಸ್.ಎ.ಮಲ್ಲೇಶ್, ಟಿಎಪಿಸಿಎಂಎಸ್ ನಿರ್ದೇಶಕ ಕಣಿವೆ ಯೋಗೇಶ್, ಹರಳಕುಪ್ಪೆ ಪ್ರಶಾಂತ್, ಚಂದ್ರು, ಪಾಪಣ್ಣ, ಕರಿಯಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts