More

    ರಾಜ್ಯದ ಮೊದಲ ಗಾಂಧಿಗ್ರಾಮ ಸೇವೆಗೆ ಸಜ್ಜು: ಎಚ್.ಮಲ್ಲಿಗೆರೆಯಲ್ಲಿ 20 ಎಕೆರೆಯಲ್ಲಿ ನಿರ್ಮಾಣ

    ಮಂಡ್ಯ: ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗಾಂಧಿಗ್ರಾಮ ಸಾರ್ವಜನಿಕರಿಗೆ ಸೇವೆ ನೀಡಲು ಸಜ್ಜಾಗುತ್ತಿದೆ. ಇದರೊಂದಿಗೆ ಗುಜರಾತ್‌ನ ಅಹಮದಾಬಾದ್ ಹಾಗೂ ತಮಿಳುನಾಡಿನ ಮಧುರೈನ ಬಳಿಕ ದೇಶದಲ್ಲಿ ಮೂರನೇ ಮತ್ತು ರಾಜ್ಯದ ಮೊದಲ ಗಾಂಧಿಗ್ರಾಮ ಎನ್ನುವ ಹೆಗ್ಗಳಿಕೆ ಹೊಂದಲಿದೆ.
    ಮಹಾತ್ಮ ಗಾಂಧೀಜಿ ಅವರೊಂದಿಗೆ ಒಂದು ದಿನ ಎಂಬ ಧ್ಯೇಯದೊಂದಿಗೆ ಮಾಜಿ ಸಂಸದ ಹಿರಿಯ ಗಾಂಧಿವಾದಿ ಡಾ.ಜಿ.ಮಾದೇಗೌಡ ಅವರು ಅಡ್ಡಿಗಲ್ಲು ಇಟ್ಟ ಗಾಂಧಿ ಗ್ರಾಮ ಸೇವೆಗೆಂದು ಸಿದ್ಧವಾಗುತ್ತಿದೆ. ಗಾಂಧೀಜಿ ಅವರ ತತ್ವ, ಸಿದ್ಧಾಂತವನ್ನು ಯುವಜನತೆಗೆ ತಿಳಿಸುವ ಉದ್ದೇಶದೊಂದಿಗೆ ಸಲ್ಲಿಸಿದ ಮನವಿಗೆ 2013ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಎಚ್.ಮಲ್ಲಿಗೆರೆ ಗ್ರಾಮದಲ್ಲಿ 20 ಎಕರೆ ಜಮೀನು ಮಂಜೂರು ಮಾಡಿತ್ತು. ಇದೀಗ ಯೋಜನೆ ಬಹುತೇಕ ಅಂತಿಮ ಘಟ್ಟ ತಲುಪಿದೆ. ನೂರು ಕೋಟಿ ರೂ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಯೋಜನೆಗೆ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಯೋಜನೆಗೆಂದು ಎರಡು ಕೋಟಿ ರೂ ಬಿಡುಗಡೆ ಮಾಡಿದ್ದರು. ಇದರಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣವಾಗಿದೆ.
    ಏನಿದು ಗಾಂಧಿಗ್ರಾಮ ಪರಿಕಲ್ಪನೆ?: ಗ್ರಾಮೀಣ ಜನರ ಬದುಕಿನಲ್ಲಿ ಹೊಸ ಬದಲಾವಣೆ ತರುವುದು ಗಾಂಧಿಗ್ರಾಮದ ಮೂಲ ಪರಿಕಲ್ಪನೆಯಾಗಿದೆ. ಗ್ರಾಮೀಣರು ಬಳಸುವ ಬಹುಪಾಲು ವಸ್ತುಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಿ ಕನಿಷ್ಟ ದರದಲ್ಲಿ ಮಾರಾಟ ಮಾಡುವುದು, ವ್ಯಕ್ತಿ ಮತ್ತು ಗ್ರಾಮಗಳನ್ನು ಸ್ವಾವಲಂಬಿಗಳಾಗಿಸುವುದು ಪ್ರಮುಖ ಆಶಯವಾಗಿದೆ.
    ಖಾದಿ ಗ್ರಾಮೋದ್ಯೋಗ ಗುಡಿ ಕೈಗಾರಿಕೆಗಳ ಸ್ಥಾಪನೆ, ಔಷಧ ಸಸ್ಯ ಬೆಳೆಸುವುದು, ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಸ್ಥಾಪನೆ, ಪಶುಸಂಗೋಪನೆ, ಕರಕುಶಲ ತರಬೇತಿ, ಜೇನುಕೃಷಿ, ಮೀನು ಸಾಕಾಣಿಕೆ, ವಸ್ತು ಸಂಗ್ರಹಾಲಯ, ದೇಸಿ ಕ್ರೀಡೆಗಳು, ವೃದ್ಧಾಶ್ರಮ, ಧಾನ್ಯಮಂದಿರ ಸ್ಥಾಪನೆ ಸೇರಿದಂತೆ ಹಲವಾರು ಕಾರ್ಯಕ್ರಮ ಯೋಜನೆಯಲ್ಲಿ ಒಳಗೊಂಡಿದೆ.
    ಗಾಂಧಿಗ್ರಾಮ ನಿರ್ಮಾಣ ಹಿರಿಯ ಗಾಂಧಿ ದಿವಂಗತ ಜಿ.ಮಾದೇಗೌಡ ಅವರ ಜೀವಿತಾವಧಿಯ ಮಹತ್ವದ ಕನಸಾಗಿತ್ತು ಗಾಂಧೀಜಿ ಅವರ ಬದುಕು ಮತ್ತು ಹೋರಾಟಗಳಿಂದ ಪ್ರೇರಣೆ ಪಡದ ಗೌಡರು ಗಾಂಧೀಜಿ ಅವರ ಕನಸುಗಳನ್ನು ಸಾಕಾರಗೊಳಿಸಲು, ಉದ್ದೇಶದಿಂದ ಗಾಂಧಿಗ್ರಾಮ ಯೋಜನೆಯನ್ನು ಕೈಗೆತ್ತಿಕೊಂಡು ಕಾರ್ಯಾರಂಭ ಮಾಡಿದ್ದು ತಂದೆ ಆಸೆಯನ್ನು ಈಡೇರಿಸಲು ಪುತ್ರ ವಿಧಾನ ಪರಿಷತ್ ಸದಸ್ಯ, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡ ಪಣ ತೊಟ್ಟಿದ್ದಾರೆ.
    ಮಾತ್ರವಲ್ಲದೆ ಯುವಕರು, ಮಹಿಳೆಯರು, ಅಂಗವಿಕಲರಿಗೆ ಸ್ಫೂರ್ತಿ ಕೇಂದ್ರವಾಗಲಿದೆ. ಗ್ರಾಮೀಣ ಯುವ ಜನಾಂಗಕ್ಕೆ ಸ್ವಯಂ ಉದ್ಯೋಗಕ್ಕೆ ಮಾರ್ಗದರ್ಶನ, ತರಬೇತಿ ನೀಡುವುದರ ಜತೆಗೆ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸುವ, ಜೀವನದಲ್ಲಿ ಉತ್ಸಾಹ ತುಂಬುವ, ಸರಳ ಹಾಗೂ ನೈತಿಕತೆಗೆ ಒತ್ತು ನೀಡುವ ಕೇಂದ್ರ ಇದಾಗಬೇಕೆನ್ನುವ ಆಶಯವಿದೆ. ಈ ನಿಟ್ಟಿನಲ್ಲಿ ರಚನಾತ್ಮಕ ಚಟುವಟಿಕೆಗಳನ್ನು ಚಿಂತನೆಗಳನ್ನು ಕಾರ್ಯಗತಗೊಳಿಸಲು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಕಾರ್ಯಕ್ರಮಗಳನ್ನು ರೂಪಿಸಿದೆ. ಅದಕ್ಕೆ ತಕ್ಕಂತೆ ಯೋಜನೆ ಸಿದ್ಧಪಡಿಸಿರುವ ಎಂಎಲ್ಸಿ ಮಧು ಜಿ.ಮಾದೇಗೌಡ, ಗಾಂಧೀಜಿ ಅವರ ಸ್ವದೇಶ ಮಂತ್ರ ಕೈಮಗ್ಗ ನೆಯುವುದನ್ನು ಶೀಘ್ರದಲ್ಲೇ ಆರಂಭಿಸುತ್ತಿದ್ದಾರೆ.
    ಇದೊಂದು ಮಹತ್ವದ ಯೋಜನೆಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ, ಸಂಘ ಸಂಸ್ಥೆ, ಸಾರ್ವಜನಿಕರ ನೆರವಿನಿಂದ ಗಾಂಧಿಗ್ರಾಮದ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಂಡರೆ ದೇಶವ್ಯಾಪ್ತಿ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ ಎನುತ್ತಾರೆ ಟ್ಸಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ.ನನ್ನ ತಂದೆ ಡಾ.ಜಿ.ಮಾದೇಗೌಡರು ತನ್ನ ಜೀವತವಧಿವರೆಗೂ ಗಾಂಧಿ ಗ್ರಾಮ ನಿರ್ಮಾಣಕ್ಕೆ ಪಣ ತೊಟ್ಟಿದ್ದರು. ಅವರ ಕನಸಿನಂತೆ ಹಾಗೂ ಗಾಂಧೀಜಿ ಅವರ ಪರಿಕಲ್ಪನೆಯಂತೆ ಗ್ರಾಮ ನಿರ್ಮಾಣವಾಗುತ್ತಿದೆ. ಶೀಘ್ರದಲ್ಲಿ ಕಾರ್ಯಚಟುವಟಿಕೆಯೂ ಆರಂಭವಾಗಲಿದೆ ಎನ್ನುವುದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts