More

    ಸಂವಿಧಾನ ಪ್ರತಿಯೊಬ್ಬ ಪ್ರಜೆಯ ದೊಡ್ಡ ಅಸ್ತ್ರ

    ಲಕ್ಷ್ಮೇಶ್ವರ: ಜಿಲ್ಲೆಯಾದ್ಯಂತ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ರಥ ಬುಧವಾರ ಪಟ್ಟಣಕ್ಕೆ ಆಗಮಿಸಿತು. ತಾಲೂಕಾಡಳಿತ, ತಾಪಂ, ಶಿಕ್ಷಣ ಇಲಾಖೆ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

    ಪಟ್ಟಣದ ಗದಗ ನಾಕಾ ಬಳಿ ರಥಕ್ಕೆ ತಹಸೀಲ್ದಾರ್ ವಾಸುದೇವ ಸ್ವಾಮಿ ಪುಷ್ಪಮಾಲೆ ಹಾಕಿದರು. ಮಹಿಳೆಯರ ಪೂರ್ಣಕುಂಭ, ಆರತಿ, ಕಲಾತಂಡ, ಶಾಲಾ ವಿದ್ಯಾರ್ಥಿಗಳ ನೃತ್ಯ ವೈಭವದೊಂದಿಗೆ ಸ್ವಾಗತಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳನ್ನು ಧರಿಸಿ ಎತ್ತಿನ ಬಂಡಿಯನ್ನೇರಿ ಸಾಗಿದರು. ಕೋಲಾಟ, ಜಾನಪದ ನೃತ್ಯ, ಪಥಸಂಚಲನದೊಂದಿಗೆ ಹೊಸ ಬಸ್‌ನಿಲ್ದಾಣದ ಮೂಲಕ ಸಾಗಿ ಉಮಾವಿದ್ಯಾಲಯದಲ್ಲಿ ಸಭೆಯಾಗಿ ಮಾರ್ಪಟ್ಟಿತು.

    ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾರ್ವಭೌಮ, ಜಾತ್ಯತೀತ, ಭ್ರಾತೃತ್ವ, ಸಮಾನತೆಯನ್ನೊಳಗೊಂಡ ಭಾರತದ ಅಭಿವೃದ್ಧಿಗೆ ಪೂರಕವಾಗಿ ರಚಿತವಾದ ವಿಶ್ವಮಾನ್ಯವಾದ ಸಂವಿಧಾನ ಪ್ರತಿಯೊಬ್ಬ ಪ್ರಜೆಯ ದೊಡ್ಡ ಅಸ್ತ್ರವೇ ಆಗಿದೆ. ಎಲ್ಲರೂ ಸಂವಿಧಾನದ ಪೀಠಿಕೆಯನ್ನು ನಿತ್ಯ ಜೀವನದ ಮಂತ್ರವಾಗಿಸಿಕೊಂಡು ಮುನ್ನಡೆಯಬೇಕು. ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಸಂವಿಧಾನದ ಆಶಯ, ಮೌಲ್ಯ, ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದಾಗಿದೆ. ಪ್ರತಿಯೊಬ್ಬರ ಜೀವನದ ಹೃದಯ ಭಾಗದಂತಿರುವ ಸಂವಿಧಾನದ ಆಶಯಗಳನ್ನರಿತು ನಡೆದರೆ ತಂದೆ-ತಾಯಿಯಂತೆ ಬದುಕಿಗೆ ಮಾರ್ಗದರ್ಶನ ಮಾಡುತ್ತದೆ ಎಂದರು.

    ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಸಿಡಿಪಿಒ ಮೃತ್ಯುಂಜಯ ಜಿ., ಡಾ.ಎನ್.ಎಂ. ಹವಳದ, ಬಿ.ಎಂ. ಕಾತರಾಳ, ಎಂ.ಬಿ. ಹೊಸಮನಿ, ಬಿ.ಎಸ್. ಹರ್ಲಾಪೂರ, ಸಿಪಿಐ ನಾಗರಾಜ ಮಾಡಳ್ಳಿ, ಮುಖ್ಯೋಪಾಧ್ಯಾಯ ಎಸ್.ಎಚ್. ಪೂಜಾರ, ಪುರಸಭೆಯ ಸದಸ್ಯರು, ಶಿಕ್ಷಣ ಇಲಾಖೆಯ ಬಿಆರ್‌ಪಿಗಳು, ಸಿಆರ್‌ಪಿಗಳು, ವಿವಿಧ ಶಾಲೆಗಳ ಶಿಕ್ಷಕರು, ಇದ್ದರು. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ತಾ.ಪಂ. ಇಒ ಕೃಷ್ಣಪ್ಪ ಧರ್ಮರ ಸ್ವಾಗತಿಸಿದರು. ಈಶ್ವರ ಮೇಡ್ಲೇರಿ ನಿರೂಪಿಸಿದರು. ಒಡೆಯರ ಮಲ್ಲಾಪುರ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಕೋಲಾಟ ಮತ್ತು ಸಂವಿಧಾನ ಪೀಠಿಕೆಯ ರೂಪಕ ಮತ್ತು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ-4 ರ ಮಕ್ಕಳ ಕೋಲಾಟ ಸೇರಿ ವಿವಿಧ ಶಾಲಾ ಮಕ್ಕಳ ವಿಶೇಷ ಪಾಲ್ಗೊಳ್ಳುವಿಕೆ ಗಮನ ಸೆಳೆಯಿತು. ಹುಯಿಲಗೋಳದ ಜೇನುಗೂಡು ಕಲಾತಂಡದಿಂದ ಸಂವಿಧಾನ ಗೀತೆಗಳು ಮೊಳಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts