More

    ಸಂವಿಧಾನದ 341(3) ತಿದ್ದುಪಡಿ ಶಿಫಾರಸ್ಸನ್ನು ಹಿಂತೆಗೆದುಕೊಳ್ಳಿ: ರವಿಕಾಂತ ಅಂಗಡಿ

    ಗದಗ: ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಪ್ರಮುಖವಾದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳು ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದಾರೆ ಎಂಬ ವರದಿ ಬಹಿರಂಗ ಮಾಡದೇ ಒಳಗಿಂದೊಳಗೆ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ತರಲು ಕಾಂಗ್ರೆಸ್ ಸರಕಾರ ಮುಂದಾಗಿದ್ದು, ನಮ್ಮ ಸಮುದಾಯಗಳು ವಾಸವಿರುವ ಸ್ಥಳಗಳಿಗೆ ತನಿಖಾ ತಂಡ ಖುದ್ದಾಗಿ ಹೋಗಿ ತನಿಖೆ ಮಾಡದೇ ಇರುವುದು ಸದಾಶಿವ ಆಯೋಗದ ವರದಿ ಜಾರಿಗೆ ತರಲು ಮುಂದಾಗಿರುವುದು ನೋವಿನ ಸಂಗತಿ ಎಂದು ಗೋರ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದರು.
     ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದ ದಲಿತ ಸಮುದಾಯಗಳಿಗೆ ಅಗತ್ಯ ಸೌಲಭ್ಯಗಳ ಕುರಿತು ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಬೆಳಕು ಚೆಲ್ಲಬಹುದೆಂದು ನಿರೀಕ್ಷಿಸಿದ್ದೇವು. ಆದರೆ ಸೋರಿಕೆಯಾಗಿರುವ ವರದಿಯ ಅಂಶಗಳು ದಲಿತ ಸಮುದಾಯದ ಒಳಗೆ ಪರಸ್ಪರ ದ್ವೇಷ, ಅನುಮಾನ, ವೈಭವೀಕರಣ, ಅಪಮಾನ, ಅವಹೇಳನ, ಇತ್ಯಾದಿ ತಪ್ಪು ಕಲ್ಪನೆ ಬಿತ್ತುತ್ತಿರುವುದು ಒಂದು ಕಡೆ ಆದರೆ ರಾಜಕೀಯ ಪಕ್ಷಗಳು ಒಡೆದಾಳುವ ನೀತಿಯಿಂದ ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ಪರಿಶಿಷ್ಟ ಜಾತಿಯ 101 ಜಾತಿಗಳ ಜನಾಂಗಕ್ಕೆ ಅನ್ಯಾಯದ ಆಯೋಗ ವಾಗಿದಂತು ಅಕ್ಷರಶಃ ಸತ್ಯ.
     ಪರಿಶಿಷ್ಟ ಪಟ್ಟಿಯಿಂದ ಸಹೋದರ ಜಾತಿಗಳನ್ನು ಕೈಬಿಡುವುದು, ವರ್ಗೀಕರಿಸುವದು ವರದಿಯ ಅಪಾಯಕಾರಿ ಅಂಶ, ಸದಾಶಿವ ಆಯೋಗ ವಿರೋಧಿಸಿ ಸುಮಾರು ವರ್ಷಗಳಿಂದ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದು. ಕಳೆದ ವರ್ಷ ಅಂದರೆ ವಿಧಾನ ಸಭೆ ಚುನಾವಣೆ ಹೊಸ್ತಿಲಲ್ಲಿ ಆಗಿನ ಸರ್ಕಾರ ಅಂದರೆ ಬಿಜೆಪಿ ಸರ್ಕಾರವು ಸಚಿವ ಸಂಪುಟದಲ್ಲಿ ಚರ್ಚಿಸಿ ಸದಾಶಿವ ಆಯೋಗದ ವರದಿಯನ್ನು ಕೈ ಬಿಟ್ಟು ಒಳ ಮೀಸಲಾತಿ ಜಾರಿಗೆ ನಿರ್ಣಯವನ್ನು ತೆಗೆದುಕೊಂಡಿತ್ತು.
    ಒಳಮಿಸಲಾತಿಗಾಗಿ ಕಾನೂನು ಸಚಿವರ ನೇತೃತ್ವದಲ್ಲಿ ಉಪ ಸಮಿತಿಯನ್ನು ರಚನೆ ಮಾಡಿ ಅದರ ವರದಿಯಂತೆ ಒಳಮಿಸಲಾತಿಯನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿ ಮಿಸಲಾತಿಯನ್ನು ಶೇ. 15 ರಿಂದ ಶೇ.17ರಷ್ಟನ್ನು ಹೆಚ್ಚಿಸಿ ಎಡಗೈ ಸಮುದಾಯಕ್ಕೆ ಶೇ.5.5, ಬಲಗೈ ಸಮುದಾಯಕ್ಕೆ ಶೇ.5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ.4.5, ಮತ್ತು ಅಲೆಮಾರಿ ಸಮುದಾಯಕ್ಕೆ ಶೇ.1.5 ಒಳಮಿಸಲಾತಿಯನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳು ಈ ಅನ್ಯಾಯದ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಿ ಚುನಾವಣೆಯಲ್ಲಿ ಬಿಜೆಪಿಗೆ ತಿರಸ್ಕಾರ ಮಾಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯದ ಮತಗಳಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಯಿತೋ ಅದೇ ಕಾಂಗ್ರೆಸ್ ಸರ್ಕಾರ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಸದಾಶಿವ ಆಯೋಗ ವರದಿ ಜಾರಿಗಾಗಿ ಸಂವಿಧಾನದ 341(3) ತಿದ್ದುಪಡಿಗಾಗಿ ಶಿಫಾರಸ್ಸು ಮಾಡಿ ಮರಣ ಶಾಸನ ಬರೆದಿದೆ ಎಂದರು.
     ಈ ಹಿಂದಿನ ಬಿಜೆಪಿ ಸರ್ಕಾರವು ಸದಾಶಿವ ಆಯೋಗವನ್ನು ರದ್ದು ಪಡಿಸಿ ಮಿಸಲಾತಿಯನ್ನು ಹೆಚ್ಚಿಸಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ.4.5ರಷ್ಟನ್ನು ನೀಡಿತ್ತು.ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ರದ್ದು ಪಡಿಸಿದ ಸದಾಶಿವ ಆಯೋಗವನ್ನು ಮತ್ತೆ ಮುನ್ನಲೆಗೆ ತಂದು ಸಚಿವ ಸಂಪುಟದಲ್ಲಿ ಸಂವಿಧಾನದ 341(3) ತಿದ್ದುಪಡಿಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಇದು ಪರೋಕ್ಷವಾಗಿ ಸದಾಶಿವ ಆಯೋಗ ವರದಿ ಜಾರಿಯಾಗಿದೆ. ಹಿಂದಿನ ಸರ್ಕಾರ ಅಂದರೆ ಬಿಜೆಪಿ ಸರ್ಕಾರದ ಒಳಮಿಸಲಾತಿ ಜಾರಿ ಶಿಫಾರಸ್ಸು ಎಂದು ಹೇಳುತ್ತಾ ಜನರಿಗೆ ಸಳ್ಳು ಹೇಳುತ್ತಿದೆ.
     ಸದಾಶಿವ ಆಯೋಗ ಅಂಶಗಳನ್ನೆ ಶಿಫಾರಸ್ಸು ಮಾಡಿದ್ದು ಅದರಲ್ಲಿ ಎಡಗೈ ಸಮುದಾಯಕ್ಕೆ ಶೇ.6.5, ಬಲಗೈ ಸಮುದಾಯಕ್ಕೆ ಶೇ.5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ.3 ಮತ್ತು ಅಲೆಮಾರಿ ಸಮುದಾಯಕ್ಕೆ ಶೇ.1 ಒಳಮಿಸಲಾತಿ ಅಂದರೆ ಇದು ಸದಾಶಿವ ಆಯೋಗ ಅಂಶಗಳೆ,ಇದರಿAದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯದ ಬದುಕಿಗೆ ಕೊಳ್ಳೆ ಇಟ್ಟಿದೆ. ಯಾವ ಸಮುದಾಯದ ಮತಗಳಿಂದ ಬಹುಮತಕ್ಕೆ ಬಂತೊ ಆ ಸಮುದಾಯಗಳಿಗೆ ಘೋರ ಅನ್ಯಾಯವನ್ನು ಮಾಡಿರುವ ಕಾಂಗ್ರೆಸ್ ಸರ್ಕಾರದ ನೀತಿಗೆ ನಮ್ಮದೊಂದು ಧಿಕ್ಕಾರವಿದೆ.
     ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಸಮುದಾಯದ ಜನಪ್ರತಿನಿಧಿಗಳಿಗೆ ಯಾವುದೇ ಹುದ್ದೆಯನ್ನು ನೀಡದೆ ನೆಪಕ್ಕೆ ಮಾತ್ರ ಸರ್ವರಿಗೂ ಸಮಪಾಲು ಸಮಬಾಳು ಎನ್ನುವಂತಾಗಿ. ಈ ಕೂಡಲೇ ಸಂವಿಧಾನದ 341(3) ತಿದ್ದುಪಡಿಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದನ್ನ ಹಿಂತೆಗೆದುಕೊಳ್ಳಬೇಕು. ಹಿಂತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಯಾವುದೇ ಅಹಿತಕರ ಘಟನೆಗೆ ಈ ಸರ್ಕಾರವೇ ಹೊಣೆಯಾಗುತ್ತದೆ.
     ಈ ಎಲ್ಲ ಸಮುದಾಯಗಳು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಮತ ನೀಡಿದ್ದು ಈಗ ಮರೆತಂತಿದೆ. ಸದಾಶಿವ ಆಯೋಗ ಜಾರಿಗೆ ತರಲು ಪತ್ರ ವ್ಯವಹಾರ ನಡೆಸಿದ್ದು, ನಾಚಿಕೆ ಗೆಡಿನ ಸಂಗತಿ. ನಮ್ಮ ಸಮಯದಾಯಗಳು ವಾಸ ಇರುವಲ್ಲಿ ಭೇಟಿ ನೀಡಿ ನಂತರ ವರದಿ ಸಲ್ಲಿಸಿ ಜಾರಿಗೆ ತರುವಂತೆ ಕೋರಿಕೆ. ರದ್ದಾಗಿರುವ ವರದಿಗೆ ಮತ್ತೆ ಚಾಲನೆ ನೀಡಿದ್ದು ನೋವಿನ ಸಂಗತಿ.
     ಮುಂದಿನ ದಿನಗಳಲ್ಲಿ ಮಂತ್ರಿಗಳು, ಸಚಿವರು, ಶಾಸಕರುಗಳ ನಿವಾಸಕ್ಕೆ ತೆರಳಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ. ಏನೆ ಅನಾಹುತಗಳಾದರು ಅದಕ್ಕೆ ನೇರವಾಗಿ ಸರಕಾರವೇ ಹೊಣೆ ಆಗುತ್ತದೆ. ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡದೇ ನಮ್ಮ ಬೆಂಬಲಕ್ಕೆ ಸರಕಾರ ನಿಲ್ಲಲಿ, ಕಾನೂನು ಮಂತ್ರಿ ಡಾ.ಎಚ್.ಕೆ.ಪಾಟೀಲ ಅವರಲ್ಲಿ ವಿನಂತಿಸಿದರು. ಯಾವುದಕ್ಕು ನಾವು ಹೆದರದೆ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ನಮ್ಮ ಹೋರಾಟ ನಡೆಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಕಾನೂನು ಸಚಿವರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರವಿಕಾಂತ ಅಂಗಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
     ಪತ್ರಿಕಾ ಗೋಷ್ಠಿ ವೇಳೆ ಪರಮೇಶ ನಾಯಕ, ದಯಾನಂದ ಪವಾರ, ಪಾಂಡು ಚವ್ಹಾಣ, ನಿಲ ರಾಠೋಡ, ಸೋಮಪ್ಪ ಲಮಾಣಿ, ಟಿ.ಡಿ.ಪೂಜಾರ, ವಿಠ್ಠಲ ತೋಟದ, ಶಿವಪ್ಪ ಸನಾರ, ಮುತ್ತಣ್ಣ ಸಂದಕದ, ಸೋಮು ಗುಡಿ, ಶ್ರೀಕಾಂತ ಪಾಪನಾಶಿ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts