More

    ಎಲ್‌ಐಸಿ, ಎಸ್‌ಬಿಐ ಹಾಳು ಮಾಡಲು ಕುಮ್ಮಕ್ಕು: ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

    ಮಂಡ್ಯ: ದೇಶದ ಮಧ್ಯಮ ವರ್ಗದವರೆ ಹೆಚ್ಚಿನ ಪ್ರಮಾಣದಲ್ಲಿ ನೆಚ್ಚಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಹಾಳುಗೆಡವಲು ಅದಾನಿ ಸಮೂಹಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.
    ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಜಮಾವಣೆಗೊಂಡ ಮುಖಂಡರು ಮತ್ತು ಕಾರ್ಯಕರ್ತರು, ಬಳಿಕ ಜೀವ ವಿಮಾ ನಿಗಮದ ಬಳಿ ತೆರಳಿ ಪ್ರತಿಭಟನೆ ನಡೆಸಿ ಮತ್ತು ನಂತರ ಎಸ್‌ಬಿಐ ಕಚೇರಿಗೆ ತೆರಳಿ ಅಲ್ಲಿಯೂ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಎಲ್‌ಐಸಿ ಮತ್ತು ಎಸ್‌ಬಿಐನಲ್ಲಿ ಸಾರ್ವಜನಿಕರು ತಮ್ಮ ಹಣವನ್ನು ಹೂಡಿದ್ದಾರೆ. ಆದರೆ ಆ ಹಣವನ್ನು ಷೇರಿನಲ್ಲಿ ಹೂಡಿಕೆ ಮಾಡಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅದಾನಿಗೆ ಸಹಕಾರ ನೀಡಿದೆ. ಎಸ್‌ಬಿಐ ನಿಂದ ಅಪಾರ ಪ್ರಮಾಣದಲ್ಲಿ ಅದಾನಿ ಸಮೂಹಕ್ಕೆ ಅಕ್ರಮವಾಗಿ ಸಾಲವನ್ನು ನೀಡಲಾಗಿದೆ. ಇದು ಸರ್ಕಾರಿ ಸ್ವಾಮ್ಯದಲ್ಲಿರುವ ಒಂದು ದೊಡ್ಡ ಬ್ಯಾಂಕೊಂದನ್ನು ಹಾಳು ಮಾಡುವ ಕುತಂತ್ರವಾಗಿದೆ ಎಂದು ಆರೋಪಿಸಿದರು.
    ಹಿಂಡನ್ ಬರ್ಗ್ ವರದಿಯ ನಂತರ ಷೇರು ಪೇಟೆಯಲ್ಲಿ ತಲ್ಲಣವಾಗಿದ್ದು, ಅದಾನಿ ಗ್ರೂಪ್ ಸಾವಿರಾರು ಕೋಟಿ ರೂ ನಷ್ಟ ಅನುಭವಿಸಿದೆ. ಈ ಹಣದಲ್ಲಿ ಸಾರ್ವಜನಿಕರು ಹೂಡಿರುವ ಹಣವೂ ಸೇರಿದೆ. ಆದರೆ ಈ ಹಣಕ್ಕೆ ಕೇಂದ್ರ ಸರ್ಕಾರ ಯಾವುದೇ ರಕ್ಷಣೆಯನ್ನು ನೀಡುತ್ತಿಲ್ಲ. ಆದ್ದರಿಂದ ಜನರು ಕಷ್ಟಪಟ್ಟು ದುಡಿದು ಈ ಸಂಸ್ಥೆಗಳಲ್ಲಿ ತೊಡಗಿಸಿರುವ ಹಣವನ್ನು ರಕ್ಷಿಸಬೇಕು. ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕೆ.ಕೆ.ರಾಧಾಕೃಷ್ಣ ಕೀಲಾರ, ಟಿ.ಕೆ.ರಾಮಲಿಂಗು, ಶ್ರೀಧರ್, ನಹೀಂ, ಡಾ.ರವೀಂದ್ರ, ಕೆ.ಸಿ.ಪ್ರಶಾಂತ್‌ಬಾಬು, ವಿಜಯ್ಕುಮಾರ್, ಅಂಜನಾ ಶ್ರೀಕಾಂತ್, ಸಿ.ಎಂ.ದ್ಯಾವಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts