More

  ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗದಿರಿ

  ಅರಸೀಕೆರೆ: ವಿನಯ, ವಿಧೇಯತೆ ಸಾಧನೆಗೆ ಮೆಟ್ಟಿಲಾದರೆ ಅಹಂಕಾರ ಅಧಃಪತನಕ್ಕೆ ತಳ್ಳಲಿದೆ ಎನ್ನುವ ಸಂಗತಿಯನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ಜಿಲ್ಲಾ ಆದಾಯ ತೆರಿಗೆ ವಿಭಾಗದ ಐಆರ್‌ಎಸ್ ಅಧಿಕಾರಿ ಎಚ್.ಜಿ.ದರ್ಶನ್‌ಕುಮಾರ್ ಹೇಳಿದರು.

  ನಗರದ ಹೊಯ್ಸಳೇಶ್ವರ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ,ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಪ್ರತಿಭಾನ್ವಿತರನ್ನು ಸನ್ಮಾನಿಸಿ ಮಾತನಾಡಿದರು.

  ಪದವಿ ನಂತರ ಮುಂದೇನು ಮಾಡಬೇಕು? ಎನ್ನುವ ಕುರಿತು ಆಲೋಚನೆ ನಿಮ್ಮದಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಲ ಕಾಲಕ್ಕೆ ನಡೆಸುವ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ನಾಡಿನ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಲ್ಲಿ ವಿದ್ಯೆ ಕಲಿತದ್ದಕ್ಕೂ ಸಾರ್ಥಕತೆ ಬರಲಿದೆ. ಉನ್ನತ ಹುದ್ದೆ ಪಡೆಯುವುದು, ರಾಜಕಾರಣಿ, ಅತ್ಯುತ್ತಮ ಕೃಷಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥವಾಗಿ ತೊಡಗಿಸಿಕೊಂಡು ಜ್ಞಾನ ಸಂಪಾದನೆ ಪಡೆಯುವ ಕಾಲಘಟ್ಟದಲ್ಲಿ ಇದ್ದೀರಿ ಎನ್ನುವ ಅರಿವಿರಬೇಕು. ಯಾವುದೇ ಕಾರಣಕ್ಕೂ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ವ್ಯಾಸಂಗದ ಅವಧಿಯಲ್ಲಿ ಅನಿರೀಕ್ಷಿತವಾಗಿ ಬಂದೊದಗುವ ಅವಮಾನ, ಸನ್ಮಾನಗಳನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಪಡೆಯುವತ್ತ ದಿಟ್ಟ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು.

  ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಟಿ.ಕೆ.ಚಂದ್ರಶೇಖರ್ ಮಾತನಾಡಿ, ಮಾದಕ ದ್ರವ್ಯ ಸೇವನೆ ಅತ್ಯಂತ ಅಪಾಯಕಾರಿಯಾಗಿದ್ದು ದುರ್ವೆಸನದಿಂದ ದೂರವಿರಬೇಕು. ವಿವಾಹದ ವಯಸ್ಸಿನ ಅಂತರ ತಿಳಿದಿದ್ದರೆ ಮಾತ್ರವೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ. ಬೈಕ್ ವೀಲಿಂಗ್ ಮಾಡುವುದು, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಫೋಟೋ ಹಂಚಿಕೊಳ್ಳುವುದು, ಸಂದೇಶ ರವಾನಿಸುವುದರಿಂದ ಉಂಟಾಗುತ್ತಿರುವ ತೊಂದರೆ ಕುರಿತು ವಿದ್ಯಾರ್ಥಿನಿಯರು ಜಾಗೃತರಾಗಿರಬೇಕು. ಗಾಂಜಾ, ಅಫೀಮು ಸೇರಿದಂತೆ ಯವುದೇ ಬಗೆಯ ಮಾದಕ ವಸ್ತುಗಳ ಮಾರಾಟ ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

  ಪದವಿ ಕಾಲೇಜು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಬಿ.ಶಶಿಧರ್ ಮಾತನಾಡಿ, ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯಾಸಂಗದ ಮಹತ್ವ ಅರಿತು ಹಿರಿಯ ಜಗದ್ಗುರುಗಳು ಶಾಲಾ, ಕಾಲೇಜುಗಳನ್ನು ತೆರೆದಿದ್ದಾರೆ. ಸಮಾರಂಭದಲ್ಲಿ ಸಾಧಕರನ್ನು ಅಹ್ವಾನಿಸಿ ಅಗತ್ಯ ಉಪನ್ಯಾಸ ಕೊಡಿಸುವ ಜತೆಗೆ ಪ್ರತಿಭಾನ್ವಿತರನ್ನು ಗೌರವಿಸುತ್ತಿರುವುದು ಸ್ಮರಣೀಯ ಕಾರ್ಯವಾಗಿದೆ ಎಂದರು.

  ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೇಂದ್ರ ಸಲಹಾ ಸಮಿತಿ ಅಧ್ಯಕ್ಷ ಎಚ್.ಜಿ.ರೇವಣ್ಣ, ಅನುಭವ ಮಂಟಪ ಶಾಲೆಯ ಅಧ್ಯಕ್ಷ ಬಿ.ಮಹಾಲಿಂಗಸ್ವಾಮಿ, ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜು ಅಧ್ಯಕ್ಷ ಶಶಿವಾಳ ಗಂಗಾಧರ್, ಪದವಿ ಕಾಲೇಜು ಪ್ರಾಂಶುಪಾಲ ಎ.ಎಸ್.ವಸಂತಕುಮಾರ್, ಸದಸ್ಯ ಫಿಸಿಯೋ ಮಧು ಮಾತನಾಡಿದರು. ಪದವಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಎ.ಪಿ.ಶ್ವೇತಾ, ಎಂ.ಆರ್.ಸ್ನೇಹಾ ಹಾಗೂ ಕೆ.ಹರ್ಷಿತಾ ಅವರನ್ನು ಸನ್ಮಾನಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts