More

    ಸಂಕಷ್ಟ ಎದುರಾದರೆ ಆಸ್ತಿ ಬೇಡ, ಇಲ್ಲದಿದ್ದರೆ ಬೇಕು!ಕಾಫಿ ತೋಟದಲ್ಲಿ ಗಾಂಜಾ ಗಿಡ ಬೆಳೆದ ಆರೋಪ ಹೈಕೋರ್ಟ್ ತರಾಟೆ 

    ಪವಿತ್ರಾ ಕುಂದಾಪುರ ಬೆಂಗಳೂರು
    ಅಪ್ಪನ ಆಸ್ತಿ ಹಂಚಿಕೆ ಸಂದರ್ಭದಲ್ಲಿ ನನ್ನದು ಎಂದು ಹಕ್ಕು ಚಲಾಯಿಸುತ್ತೀರಾ. ಆದರೆ, ಸಂಕಷ್ಟದಲ್ಲಿ ಸಿಲುಕಿದಾಗ ಮಾತ್ರ ನನ್ನದಲ್ಲ. ಅದು ತಂದೆಗೆ ಸೇರಿದ್ದು ಎಂದು ಸಂಬಂಧ ಕಡಿದುಕೊಂಡಂತೆ ಮಾತನಾಡುತ್ತೀರಾ ಎಂದು ಕ್ರಿಮಿನಲ್ ಪ್ರಕರಣವೊಂದರಲ್ಲಿ ಬಂಧಿತನಾಗಿರುವ ಆರೋಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.

    ಜಮೀನಿನಲ್ಲಿ ಗಾಂಜಾ ಬೆಳೆದಿರುವ ಆರೋಪ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಗುಲ್ಲನ್‌ಪೇಟೆ ಮೂಲದ ಅಬ್ದುಲ್ ಬಷೀರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಸಾಕ್ಷಾೃಧಾರಗಳ ಕೊರತೆ ಹಿನ್ನೆಲೆಯಲ್ಲಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳು, ವಾದ ಮಂಡನೆ ವೇಳೆ ಕೆಲವೊಂದು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.

    ಹೈಕೋರ್ಟ್ ಹೇಳಿದ್ದೇನು?
    -ಪೊಲೀಸರು ಗಾಂಜಾ ಗಿಡ ನೆಟ್ಟು ನಿಮ್ಮ ಮೇಲೆ ಆರೋಪ ಮಾಡಿದ್ದಾರಾ? ನಿಮ್ಮ ಮೇಲೆ ಅವರಿಗ್ಯಾಕೆ ಸಿಟ್ಟು?
    -ನಾನು ಕೂಡ ರೈತ. ಗಿಡ ಕಿತ್ತ ತಕ್ಷಣ ಎಲೆ ಮುದುಡುತ್ತದೆ. ಈ ಚಿತ್ರ ನೋಡಿದರೆ ಹಾಗೆ ಅನಿಸಲ್ಲ.
    -ಗಿಡದ ಬುಡಕ್ಕೆ ಗೊಬ್ಬರ ಹಾಕಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಹೊಸದಾಗಿ ಗುಂಡಿ ತೋಡಿದಂತೆ ಇಲ್ಲ. ಕಾಫಿ ತೋಟದಲ್ಲಿ ಕಪ್ಪು ಮಣ್ಣು ಇರುವುದಿಲ್ಲ.
    -ಅರ್ಜಿದಾರರೇ ಬಳಸಿಕೊಳ್ಳಲು ಗಿಡ ನೆಟ್ಟು ಪೋಷಿಸುತ್ತಿರುವಂತೆ ಇದೆ. ಆತನ ಪತ್ನಿಯೇ ಠಾಣೆಗೆ ತೆರಳಿ ದೂರು ದಾಖಲಿಸಿದಂತಿದೆ.
    – ಸರ್ಕಾರಿ ಪರ ವಕೀಲರು ಆತನಿಗೆ ಗಾಂಜಾ ಸೇವನೆ ಅಭ್ಯಾಸವಿರುವುದಾಗಿ ಹೇಳಿದ್ದಾರೆ. ಆದರೆ ಸೂಕ್ತ ಸಾಕ್ಷ್ಯಧಾರ ಒದಗಿಸಿಲ್ಲ.

    ಅರ್ಜಿದಾರರ ವಾದವೇನು?
    ಆರೋಪಿ ಅಬ್ದುಲ್ ಬಷೀರ್ ಪರ ವಾದ ಮಂಡಿಸಿದ ವಕೀಲರು, ಕಾಫಿ ತೋಟದಲ್ಲಿ ಗಾಂಜಾ ಗಿಡ ಬೆಳೆಸಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಆದರೆ, ಅವರು ಜಮೀನಿನ ಮಾಲೀಕರಲ್ಲ. ಆ ಜಮೀನು ಅರ್ಜಿದಾರರ ತಂದೆಗೆ ಸೇರಿದ್ದಾಗಿದೆ. ಅಲ್ಲದೆ, ಎಲ್ಲೋ ಬೆಳೆಸಿದ ಗಿಡ ಕಿತ್ತು ತಂದು ತೋಟದಲ್ಲಿ ನೆಟ್ಟು ಚಿತ್ರ ತೆಗೆಯಲಾಗಿದೆ.

    ಜಮೀನಿನಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರು ಹೀಗೆ ಮಾಡಿರಬಹುದು ಅಥವಾ ಪೊಲೀಸರೇ ಉದ್ದೇಶ ಪೂರ್ವಕವಾಗಿ ಸಂಚು ರೂಪಿಸಿರುವ ಸಾಧ್ಯತೆಯೂ ಇದೆ. ಈಗಾಗಲೇ ಅವರು 46 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೆಲವೇ ದಿನದಲ್ಲಿ ಅವರ ಕುಟುಂಬ ಸದಸ್ಯರೊಬ್ಬರ ಮದುವೆ ನಿಶ್ಚಯವಾಗಿದೆ. ಇದೆಲ್ಲವನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.

    ಸರ್ಕಾರ ವಕೀಲರ ವಾದವೇನು?
    ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ಅರ್ಜಿದಾರರು ಗಾಂಜಾ ಬೆಳೆಸುತ್ತಿರುವುದು ಸಾಬೀತಾಗಿದೆ. ಈ ವೇಳೆ ಆತ ಓಡಿ ಹೋಗಿ ಕಂಬವನ್ನು ಹಿಡಿದುಕೊಂಡು ಬರಲು ಪ್ರತಿರೋಧ ವ್ಯಕ್ತಪಡಿಸಿದ ವೇಳೆ ಸಿಬ್ಬಂದಿ ಸಹಾಯದಿಂದ ಆತನನ್ನು ಠಾಣೆಗೆ ಕರೆದೊಯ್ಯಲಾಗಿದೆ. ಇದೀಗ ಪ್ರಕರಣ ತನಿಖಾ ಹಂತದಲ್ಲಿದ್ದು, ಆತನಿಗೆ ಜಾಮೀನು ಮಂಜೂರು ಮಾಡದಂತೆ ಸರ್ಕಾರಿ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

    ಪ್ರಕರಣವೇನು?
    ಚಿಕ್ಕಮಗಳೂರು ಜಿಲ್ಲೆಯ ಗುಲ್ಲನ್‌ಪೇಟೆ ನಿವಾಸಿ ಅಬ್ದುಲ್ ಬಷೀರ್ ತೋಟದಲ್ಲಿ ಗಾಂಜಾ ಬೆಳೆಸುತ್ತಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಏ.4ರಂದು ಪೊಲೀಸರು ದಾಳಿ ಮಾಡಿದ್ದರು. ಆತ ಗಾಂಜಾ ಗಿಡಕ್ಕೆ ನೀರೆರೆಯುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದ. 80 ಗ್ರಾಂನ 12 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಪೊಲೀಸರು, ಆರೋಪಿ ಅಬ್ದುಲ್ ಬಷೀರ್‌ನನ್ನು ಆಲ್ದೂರು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ಬಂಧಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts