More

    ಕೆಸಿಎನ್ ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ: ಹಕ್ಕೊತ್ತಾಯ ಮಂಡಿಸಿದ ಕೆ.ಆರ್.ಪೇಟೆ ಕಾಂಗ್ರೆಸ್ಸಿಗರು

    ಮಂಡ್ಯ: ಸಚಿವ ಕೆ.ಸಿ.ನಾರಾಯಣಗೌಡ ಪಕ್ಷಕ್ಕೆ ಬರುತ್ತಾರೆನ್ನುವ ಮಾತು ಜೋರಾಗಿದೆ. ಆದರೆ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದು ಬೇಡ. ಬಿ ಫಾರ್ಮ್‌ಗೆ ಅರ್ಜಿ ಸಲ್ಲಿಸಿರುವವರ ಪೈಕಿ ಯಾರಿಗೆ ಅವಕಾಶ ಕೊಟ್ಟರೂ ಉಳಿದವರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಕೆ.ಆರ್.ಪೇಟೆ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಸದಸ್ಯ ಎನ್.ಚಲುವರಾಯಸ್ವಾಮಿ ಎದುರು ಹಕ್ಕೊತ್ತಾಯ ಮಂಡಿಸಿದರು.
    ಮೈಸೂರಿನ ಜಲದರ್ಶಿನಿಯಲ್ಲಿ ಆಯೋಜಿಸಿದ್ದ ಮಂಡ್ಯ, ಕೆ.ಆರ್.ಪೇಟೆ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳ ಸ್ಪರ್ಧಾಕ್ಷಾಂಕ್ಷಿತರ ಸಭೆಯಲ್ಲಿ ಸಚಿವ ಕೆಸಿಎನ್ ಕುರಿತು ಜೋರು ಚರ್ಚೆ ನಡೆಯಿತು. ಈಗಾಗಲೇ ಇತ್ತೀಚೆಗೆ ಕೆ.ಆರ್.ಪೇಟೆಯಲ್ಲಿ ನಡೆದಿದ್ದ ಸಭೆಯಲ್ಲಿ ಪಕ್ಷ ಸೇರ್ಪಡೆ ಬಗ್ಗೆ ಸ್ಪಷ್ಟ ನಿಲುವು ಮಂಡಿಸಿದ್ದ ಮುಖಂಡರು, ಅವರು ಬಂದರೆ ಸೋಲಿಸುತ್ತೇವೆಂದು ಸ್ಪಷ್ಟಪಡಿಸಿದ್ದರು. ಇದೀಗ ಅದೇ ನಿಲುವನ್ನು ರಾಜ್ಯ ನಾಯಕರ ಎದುರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆಶಿ, ಕೆ.ಆರ್.ಪೇಟೆ ಕ್ಷೇತ್ರದ 6 ಜನ ಆಕಾಂಕ್ಷಿತರು ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ನೀವೆಲ್ಲ ಒಗ್ಗಟ್ಟಿನ ಕೆಲಸ ಮಾಡಿದರೆ ಯಾರಿಗೂ ಪಕ್ಷ ಸೇರ್ಪಡೆಗೆ ಅಸ್ಪದ ನೀಡಿಲ್ಲ ಎಂದು ಹೇಳಿದ್ದಾರೆ.
    ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್ಚು ಜನರು ಆಕಾಂಕ್ಷಿತರಿದ್ದಾರೆ. ಆದರೆ ಒಬ್ಬರಿಗೆ ಅವಕಾಶ ಕಲ್ಪಿಸಲು ಸಾಧ್ಯ. ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿ ಪರವಾಗಿ ಕಾರ್ಯನಿರ್ವಹಿಸಿದರೆ ಗೆಲುವು ಸಾಧ್ಯ. ಮಾ.12ರಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನ ತಾಂಡವಪುರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸಲು ಸ್ಥಳೀಯ ಮುಖಂಡರು ಹೊಣೆಗಾರಿಕೆ ಹೊರಬೇಕು. ಪಕ್ಷವನ್ನು ಬಲಪಡಿಸಲು ಕಾರ್ಯತಂತ್ರ ರೂಪಿಸಬೇಕು. ಅಭ್ಯರ್ಥಿಯ ಆಯ್ಕೆ ವಿಚಾರ ಅಥವಾ ಬೆಂಬಲಿಸುವ ವಿಚಾರವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಅದರಂತೆ ಎಲ್ಲರೂ ಹೊಂದಾಣಿಕೆಯಿಂದ ಇರುವಂತೆ ಒಗ್ಗಟ್ಟಿನ ಮಂತ್ರ ಬೋಧಿಸಿದ್ದಾರೆ.
    ಸಭೆಯಲ್ಲಿ ಎಐಸಿಸಿ ವೀಕ್ಷಕ ರೋಜಿ ಜಾನ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಗಣಿಗ ರವಿಕುಮಾರ್, ಯು.ಸಿ.ಶಿವಕುಮಾರ್(ಶಿವಪ್ಪ), ಕೆ.ಕೆ.ರಾಧಾಕೃಷ್ಣ ಕೀಲಾರ, ಕೆ.ಬಿ.ಚಂದ್ರಶೇಖರ್, ವಿಜಯ್‌ರಾಮೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts