More

    ರಾಜ್ಯದ ಮೊದಲ ಕಾಂಗ್ರೆಸ್ ವಿಭಾಗೀಯ ಸಮ್ಮೇಳನ

    ಮಂಗಳೂರು: ರಾಜ್ಯ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯದ ಮೊದಲ ವಿಭಾಗೀಯ ಪ್ರತಿನಿಧಿ ಸಮ್ಮೇಳನ(ಮೈಸೂರು ವಿಭಾಗ) ಜ.6ರಂದು ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

    ರಾಜ್ಯದ ನಾಲ್ಕು ವಿಭಾಗಗಳಲ್ಲಿ ಪ್ರತಿನಿಧಿ ಸಮ್ಮೇಳನ ಆಯೋಜಿಸಲು ಕೆಪಿಸಿಸಿ ತೀರ್ಮಾನಿಸಿದ್ದು, ಅದರಂತೆ ಮೊದಲ ಸಮ್ಮೇಳನವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಸ್ಥಾನ ಬಿಟ್ಟು ಹೊರಭಾಗದಲ್ಲಿ ನಡೆಸಲು ಉದ್ದೇಶಿಸಿರುವುದರಿಂದ ಬಂಟ್ವಾಳ ತಾಲೂಕನ್ನು ಆಯ್ದುಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಮ್ಮೇಳನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖಂಡರಾದ ಸಲೀಂ ಅಹ್ಮದ್, ಎಸ್.ಆರ್.ಪಾಟೀಲ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಸೇರಿದಂತೆ ರಾಜ್ಯ ಮಟ್ಟದ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ 3ರಂದು ಮಂಗಳೂರಿಗೆ ಆಗಮಿಸಿ ಸಿದ್ಧತೆಗಳ ಪರಿಶೀಲನೆ ನಡೆಸಲಿದ್ದಾರೆ. ಡಿ.ಕೆ.ಶಿವಕುಮಾರ್ 5ರಂದು ಸಾಯಂಕಾಲ ಆಗಮಿಸಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಸಿದ್ದರಾಮಯ್ಯ 6ರಂದು ಆಗಮಿಸಲಿದ್ದಾರೆ ಎಂದರು.

    ಶಾಸಕ ಯು.ಟಿ. ಖಾದರ್, ಪಕ್ಷ ಸಂಘಟನೆಯ ಚರ್ಚೆ ಜತೆಗೆ ಬಿಜೆಪಿ ಸರ್ಕಾರದ ವೈಫಲ್ಯ, ಕಾಂಗ್ರೆಸ್‌ನ ಭವಿಷ್ಯದ ದೂರದರ್ಶಿ ಕಾರ್ಯಕ್ರಮಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಮನಪಾ ಸದಸ್ಯ ಶಶಿಧರ ಹೆಗ್ಡೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಥುನ್ ರೈ, ನಾಯಕರಾದ ಸದಾಶಿವ ಉಳ್ಳಾಲ್, ಇಬ್ರಾಹಿಂ ಕೋಡಿಜಾಲ್ ಇದ್ದರು.

    677 ಪ್ರತಿನಿಧಿಗಳು ಭಾಗಿ: ಮೈಸೂರು ವಿಭಾಗಕ್ಕೆ ಒಳಪಡುವ ಮೈಸೂರು, ಚಾಮರಾಜನಗರ, ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಒಟ್ಟು 677 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ನಡೆಯಲಿದೆ. ಸಿದ್ಧತೆಗಳು ನಡೆದಿವೆ. ಪಕ್ಷದ ಅಧಿಕೃತ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಬಂಟ್ವಾಳದಲ್ಲಿ ಮಾಡಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.

    ಕಾಂಗ್ರೆಸ್ ಪ್ರತಿನಿಧಿ ಸಮ್ಮೇಳನ ಈ ಹೊಸ ವರ್ಷದಲ್ಲಿ ಪಕ್ಷದ ಬಲವರ್ಧನೆಗೆ ಮೊದಲ ಹೆಜ್ಜೆ. ಮುಂದಿನ ದಿನಗಳಲ್ಲಿ ಕೆಪಿಸಿಸಿ ನಿರ್ದೇಶನದಂತೆ ಜಿಲ್ಲೆಯಲ್ಲಿ ಸರಣಿ ಕಾರ್ಯಕ್ರಮ ಆಯೋಜಿಸಲಾಗುವುದು.
    – ರಮಾನಾಥ ರೈ
    ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts