More

    ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಗೆಲುವು ನಿಶ್ಚಿತ

    ಮುಧೋಳ: ಜನತೆಗೆ ನೀಡಿದ ಭರವಸೆ ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಈ ಕಾರಣದಿಂದಾಗಿ ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

    ಗೃಹಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರದ ಬಿಜೆಪಿ ಆಡಳಿತದಲ್ಲಿ ನಿರುದ್ಯೋಗ, ಭೀಕರ ಬರಕ್ಕೆ ಹಣ ಬಿಡುಗಡೆ ಮಾಡಿಲ್ಲ. ಹಲವಾರು ವೈಲ್ಯಗಳಿದ್ದರೂ ಜಾತಿ, ಜಾತಿಗಳ ಮಧ್ಯೆ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

    ಬಾಗಲಕೋಟೆ ಸಂಸದರು ನಾಲ್ಕು ಅವಧಿಗೆ ಆರಿಸಿ ಬಂದರೂ ಈ ಭಾಗದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕೇಂದ್ರದಿಂದ ಮಹತ್ತರ ಯೋಜನೆ ತಂದಿಲ್ಲ. ರೈಲ್ವೆ ಯೋಜನೆ ಕಾರ್ಯಗತಗೊಳ್ಳುತ್ತಿಲ್ಲ. ಹೆದ್ದಾರಿಗಳ ಕಾಮಗಾರಿ ನಡೆಯುತ್ತಿಲ್ಲ. ಇಂತಹ ನಾಯಕರನ್ನು ಆಯ್ಕೆ ಮಾಡಿರುವುದು ನಮ್ಮ ದುರಂತ ಎಂದು ಹೇಳಿದರು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಸಂಯುಕ್ತ ಪಾಟೀಲ ಅವರ ಗೆಲುವು ಗ್ಯಾರಂಟಿ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು, ಮಹಿಳೆಯರಿಗೆ ಬಸ್ ಫ್ರೀ, ಪ್ರತಿ ತಿಂಗಳು ಮನೆ ಯಜಮಾನಿಗೆ 2 ಸಾವಿರ ರೂ., ಪಡಿತರದಾರರಿಗೆ ಅಕ್ಕಿ ಬದಲಾಗಿ ಅವರ ಖಾತೆಗಳಿಗೆ ಹಣ, ಉಚಿತ ವಿದ್ಯುತ್ ಹೀಗೆ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಈ ಬಾರಿ ರಾಜ್ಯದಲ್ಲಿ ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ಹೇಳಿದರು.

    ಈ ಹಿಂದೆ ಬಿಜೆಪಿ ಸರ್ಕಾರ 600ಕ್ಕೂ ಅಧಿಕ ಭರವಸೆ ನೀಡಿ, ಅದರಲ್ಲಿ ಇದನ್ನು ಸಹ ಈಡೇರಿಸಿಲ್ಲ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿಲ್ಲ. ಯುವಕರಿಗೆ ಉದ್ಯೋಗ ನೀಡುತ್ತೇವೆಂದು ಹೇಳಿ ಅವರಿಗೆ ಯಾವುದೇ ಉದ್ಯೋಗ ನೀಡದೆ ಯುವಕರನ್ನು ನಿರಾಶೆಯ ಕೂಪಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಲೋಕಾಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಶೋಕ ಕಿವಡಿ, ಸಂಜಯ ನಾಯಕ, ರಾಜುಗೌಡ ಪಾಟೀಲ, ಉದಯ ಸಾರವಾಡ, ಪ್ರೇಮಾನಂದ ಕುಟರಟ್ಟಿ, ಮುದಕಣ್ಣ ಅಂಬಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts