More

    ಬಿಜೆಪಿ ಬಂಡವಾಳಶಾಹಿಗಳ ಪರ

    ಚಿಕ್ಕಮಗಳೂರು: ದೇಶದ ಸಣ್ಣ ರೈತರ ಸಾಲ ಇರುವುದು ಕೇವಲ 2 ಲಕ್ಷ ಕೋಟಿ ಮಾತ್ರ. ಈ ಸಾಲವನ್ನು ಮನ್ನಾ ಮಾಡುತ್ತೇವೆ ಎಂದಾಕ್ಷಣ ಬಿಜೆಪಿಗರು ದೇಶ ದಿವಾಳಿಯಾಗುತ್ತದೆ ಎನ್ನುತ್ತಾರೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ದೊಡ್ಡ ಉದ್ಯಮಿಗಳ 15 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದಾಗ ದೇಶ ದಿವಾಳಿಯಾಗಲಿಲ್ಲವೇ ಎಂದು ಎಚ್.ಡಿ.ತಮ್ಮಯ್ಯ ಅಕ್ರೋಶ ವ್ಯಕ್ತಪಡಿಸಿದರು.

    ನಗರದ ಹೊರವಲಯದ ಅಲ್ಲಂಪುರದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ. ಅದೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಾರೆ ಎಂದು ದೂರಿದರು.
    ರೈತರ ಪರ, ಬಡವರ ಪರ ಯೋಜನೆ ರೂಪಿಸಿದಾಕ್ಷಣ ಬಿಜೆಪಿಗೆ ಎಲ್ಲಿಲ್ಲದ ಸಿಟ್ಟು ಬಂದುಬಿಡುತ್ತದೆ. ಬಿಜೆಪಿ ಬಂಡವಾಳ ಶಾಹಿಗಳ ಪರವಾಗಿರುವ ಪಕ್ಷ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಬಡವರು ಹಾಗೂ ರೈತರನ್ನು ಹತ್ತಿಕ್ಕುತ್ತಿದೆ. ಇದೇ ಸಂದರ್ಭದಲ್ಲಿ ಬಂಡವಾಳಶಾಹಿ ಉದ್ಯಮಿಗಳನ್ನು ಬೆಳೆಸುವ ಕೆಲಸ ಮಾಡುತ್ತಿದೆ. ದೇಶದ ವಿಮಾನ ನಿಲ್ದಾಣಗಳು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುವ ಕೆಲಸ ನಿರಂತರವಾಗಿ ನಡೆದಿದೆ. ಈ ಮೂಲಕ ದೇಶವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
    ರಾಜ್ಯದ ಕಾಂಗ್ರೆಸ್ ಸರ್ಕಾರ ತಾನು ಹೇಳಿದಂತೆ ಗ್ಯಾರಂಟಿ ಜಾರಿ ಮಾಡಿ ಜನರ ಜೀವನಕ್ಕೆ ಭದ್ರತೆ ಒದಗಿಸಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಬರೀ ಭರವಸೆ ನೀಡಿದೆಯೇ ಹೊರತು ಯಾವುದನ್ನು ಅನುಷ್ಠಾನಕ್ಕೆ ತಂದಿಲ್ಲ. ಬದಲಿಗೆ ಜನರ ಭಾವನೆ ಕೆರಳಿಸಿ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅಲ್ಲಿಯೂ ಗ್ಯಾರಂಟಿ ಅನುಷ್ಠಾನ ಮಾಡುತ್ತೇವೆ. ಈ ಮೂಲಕ ಇಡೀ ದೇಶದ ಜನರ ಬದುಕಿಗೆ ಭದ್ರತೆ ಒದಗಿಸುತ್ತೇವೆ ಎಂದು ತಿಳಿಸಿದರು.
    ಕಳೆದ ಹತ್ತು ವರ್ಷಗಳ ಬಿಜೆಪಿ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನಸಾಮಾನ್ಯರು ಜೀವನ ನಡೆಸಲು ದುಸ್ತರವಾದ ಸ್ಥಿತಿ ನಿರ್ಮಾಣವಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಿ ಜನ ನೆಮ್ಮದಿಯಿಂದ ಜೀವನ ನಡೆಸಲು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಈ ಹಿನ್ನೆಲೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸರಳ ಸಜ್ಜನಿಕೆಯ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಕ್ಷೇತ್ರದ ಹಿಂದಿನ ಬಿಜೆಪಿ ಸಂಸದರು 10 ವರ್ಷ ಅಧಿಕಾರದಲ್ಲಿದ್ದರೂ ಒಂದು ಹಳ್ಳಿಗೂ ಭೇಟಿ ನೀಡಲಿಲ್ಲ. ಕೃಷಿ ಸಚಿವರಾಗಿದ್ದರು ರೈತರಿಗೆ ಸಣ್ಣ ಅನುಕೂಲವನ್ನು ಮಾಡಿಕೊಡಲಿಲ್ಲ. ಹೀಗಿರುವಾಗ ಕ್ಷೇತ್ರದಲ್ಲಿ ಬಿಜೆಪಿ ಯಾವ ಮುಖ ಹೊತ್ತುಕೊಂಡು ಮತ ಕೇಳುತ್ತಿದೆ ಎಂದು ಪ್ರಶ್ನಿಸಿದರು.
    ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ಅತ್ಯಂತ ಸರಳ ರಾಜಕಾರಣಿಯಾಗಿದ್ದು, ಜನಸಾಮಾನ್ಯರು ಅವರನ್ನು ನೇರವಾಗಿ ಭೇಟಿ ಮಾಡಿ ಮಾತನಾಡಬಹುದಾಗಿದೆ. 20 ತಿಂಗಳ ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ತೋರಿಸಿದ್ದಾರೆ ಇಂಥ ದಕ್ಷ ರಾಜಕಾರಣಿಯನ್ನು ಗೆಲ್ಲಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಕರೆ ನೀಡಿದರು.
    ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ ಮಹಮ್ಮದ್, ಜಯರಾಜ್ ಅರಸ್, ಅನಿಲ್ ಕುಮಾರ್, ರಮೇಶ್, ಕುಮಾರ್, ರಾಜೇಶ್, ಸೋಮಶೇಖರ್, ಅನ್ವರ್ ಮತ್ತಿತರರಿದ್ದರು.

    ಬಾಯಿ ಬಡಿದುಕೊಳ್ಳುವುದೇ ಬಿಜೆಪಿ ಕೆಲಸ
    ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಇಡೀ ರಾಜ್ಯವೇ ದಿವಾಳಿಯಾಗುತ್ತದೆ ಎಂದು ಬಿಜೆಪಿ ಬಾಯಿಬಡಿದುಕೊಂಡಿತ್ತು. ಈಗ ಲೋಕಸಭಾ ಚುನಾವಣೆ ವೇಳೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಪಂಚ ನ್ಯಾಯ ಯೋಜನೆ ಜಾರಿಗೊಳಿಸುವುದಾಗಿ ಹೇಳಿದಾಕ್ಷಣ ಮತ್ತೆ ಬಿಜೆಪಿ ಇಡೀ ದೇಶ ದಿವಾಳಿಯಾಗುತ್ತದೆ ಎಂದು ಬಾಯಿ ಬಡೆದುಕೊಳ್ಳಲಾರಂಬಿಸಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಲೇವಡಿ ಮಾಡಿದರು.
    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹೇಳಿದಂತೆ ಪಂಚ ನ್ಯಾಯ ಯೋಜನೆ ಜಾರಿ ಮಾಡಲು ದೇಶದ ಬಜೆಟ್ ಗಿಂತ ನಾಲ್ಕು ಪಟ್ಟು ಅಧಿಕ ಸಾಲ ಮಾಡಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಸಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವೇ ಇಲ್ಲ ಎಂದಿದ್ದರು. ಬಳಿಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಎಂದು ಹೋರಾಟ ನಡೆಸಿದ್ದೂ ಬಿಜೆಪಿಯವರೇ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಕ್ಷಣ ಪಂಚ ನ್ಯಾಯ ಯೋಜನೆ ಜಾರಿಗೊಳಿಸಿ ಎಂದು ಮತ್ತೆ ಬಿಜೆಪಿ ಹೋರಾಟ ಆರಂಭಿಸುತ್ತದೆ ಎಂದು ತಿರುಗೇಟು ನೀಡಿದರು.
    ಕಾಂಗ್ರೆಸ್ ಆರ್‌ಬಿಐನ ನಿವೃತ್ತ ಹಿರಿಯ ಅಧಿಕಾರಿಗಳು, ಅರ್ಥಶಾಸ್ತ್ರಜ್ಞರು ಹಾಗೂ ಕಾನೂನು ತಜ್ಞರ ಸಲಹೆ ಪಡೆದೇ ಗ್ಯಾರಂಟಿ ಘೋಷಣೆ ಮಾಡಿದೆ. ಪಕ್ಷದಲ್ಲಿಯೂ‌ ಸಾಕಷ್ಟು ಜನ ಅರ್ಥಶಾಸ್ತ್ರಜ್ಞರಿದ್ದಾರೆ. ಹೀಗಾಗಿ ಗ್ಯಾರಂಟಿ ಅನುಷ್ಟಾನದಿಂದ ದೇಶ ದಿವಾಳಿಯಾವುದಿಲ್ಲ. ಬದಲಿಗೆ ದೇಶದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts