More

    ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ

    ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವು ಹಲವು ಹೈಡ್ರಾಮಾ ನಡುವೆಯೂ ನಿರಾಯಾಸವಾಗಿ ಕೈ ಪಾಲಾಯಿತು. ಅಧ್ಯಕ್ಷರಾಗಿ ಸಂಜೀವಕುಮಾರ ನೀರಲಗಿ, ಉಪಾಧ್ಯಕ್ಷರಾಗಿ ಜಾಹೀದಾಬಾನು ಜಮಾದಾರ ಅವಿರೋಧವಾಗಿ ಆಯ್ಕೆಯಾಗಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತು.

    ಬೆಳಗ್ಗೆ 10ರಿಂದ 12ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಕಾಂಗ್ರೆಸ್​ನಿಂದ ಸಂಜೀವಕುಮಾರ ನೀರಲಗಿ ಹಾಗೂ ಜಾಹೀದಾಬಾನು ಜಮಾದಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ನಂತರ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪಕ್ಷೇತರವಾಗಿ ಆಯ್ಕೆಯಾಗಿದ್ದ ಬಸವರಾಜ ಬೆಳವಡಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

    ಬಿಗಿ ಪೊಲೀಸ್ ಬಂದೋಬಸ್ತ್: ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರ ಮೇಲೆ ಜಾತಿನಿಂದನೆ ದೂರು ದಾಖಲಾಗಿದ್ದರಿಂದ ಆ ಮೂವರು ಸದಸ್ಯರನ್ನು ನಗರಸಭೆ ಒಳಗೆ ಹೋಗುವ ಮುನ್ನವೇ ಪೊಲೀಸರು ಬಂಧಿಸಲಿದ್ದಾರೆ ಎಂಬ ವದಂತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯ ಹೊರಗಡೆ ಕೈ ಹಾಗೂ ಕಮಲ ಪಕ್ಷದ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ನಗರಸಭೆಗೆ ಪ್ರವೇಶಿಸುವ 2 ಮಾರ್ಗದಲ್ಲಿಯೂ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇಬ್ಬರು ಡಿವೈಎಸ್​ಪಿ, 7 ಸಿಪಿಐ, 13 ಪಿಎಸ್​ಐ ಹಾಗೂ 120 ಕಾನ್ಸ್​ಟೇಬಲ್ ಸೇರಿ 4 ಡಿಎಆರ್, 1 ಕೆಎಸ್​ಆರ್​ಪಿ ತುಕಡಿಯನ್ನು ನಿಯೋಜಿಸಲಾಗಿತ್ತು. ನಿಮ್ಮ ಸದಸ್ಯರನ್ನು ನಗರಸಭೆಯ ಹೊರಗೆ ಬಂಧಿಸಿ ಒಯ್ಯುತ್ತಾರೆ ಎಂದು ಕಮಲ ಪಡೆಯ ಕಾರ್ಯಕರ್ತರು ಕಿಚಾಯಿಸುತ್ತಿದ್ದರೆ, ಇತ್ತ ಕಾಂಗ್ರೆಸ್​ನವರು ನೋಡಿವಿರಂತೆ ತಡೀರಿ, ನಾವು ಎಲ್ಲ ಕಡೆ ಟೈಟ್ ಮಾಡೀವಿ. ಅದ್ಹೇಗೆ ಬಂಧಿಸುತ್ತಾರೆ ಎಂದು ಸವಾಲು ಹಾಕುತ್ತಿದ್ದರು.

    ನಡೆಯದ ಗೊಂದಲ: ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ 15 ಹಾಗೂ 4 ಪಕ್ಷೇತರ ಸದಸ್ಯರೊಂದಿಗೆ ಮಾಜಿ ಸಚಿವ ಬಸವರಾಜ ಶಿವಣ್ಣನವರ ನೇತೃತ್ವದಲ್ಲಿ 19 ಸದಸ್ಯರು ಏಕಕಾಲಕ್ಕೆ ನಗರಸಭೆಗೆ ತೆರಳಲು ಪೊಲೀಸ್ ಬ್ಯಾರಿಕೇಡ್ ಬಳಿ ಬಂದರು. ಆಗ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪೊಲೀಸರ ನಡೆಯನ್ನು ವೀಕ್ಷಿಸುತ್ತಿದ್ದರು. ಆದರೆ, ಪೊಲೀಸರು ಯಾರನ್ನೂ ಬಂಧಿಸದೇ ಒಳಗಡೆ ಬಿಟ್ಟರು. ಆಗ ಬಿಜೆಪಿ ಕಾರ್ಯಕರ್ತರು ಒಬ್ಬೊಬ್ಬರಾಗಿ ಅಲ್ಲಿಂದ ಮರಳಿದರೆ, ಕೈ ಕಾರ್ಯಕರ್ತರು ಹುರುಪಿನೊಂದಿಗೆ ಸ್ಥಳದಲ್ಲಿಯೇ ಬೀಡುಬಿಟ್ಟರು.

    ಮಧ್ಯಾಹ್ನ 12.50ರ ವೇಳೆಗೆ ಬಿಜೆಪಿಯ 8 ಹಾಗೂ ಪಕ್ಷೇತರ 3 ಸದಸ್ಯರು, ಶಾಸಕ ನೆಹರು ಓಲೇಕಾರ, ಸಂಸದ ಶಿವಕುಮಾರ ಉದಾಸಿಯವರು ಒಬ್ಬೊಬ್ಬರಾಗಿ ನಗರಸಭೆಗೆ ಆಗಮಿಸಿದರು.

    ನಾಮಪತ್ರ ವಾಪಸ್​ಗೆ ಮಧ್ಯಾಹ್ನ 1 ಕೊನೆಯ ಸಮಯವಾಗಿತ್ತು. ಈ ವೇಳೆಗೆ ಬಸವರಾಜ ಬೆಳವಡಿ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ಮರಳಿ ಪಡೆದರು. ಮಧ್ಯಾಹ್ನ 1.15ಕ್ಕೆ ಚುನಾವಣಾಧಿಕಾರಿ ಡಾ. ದಿಲೀಪ ಶಶಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೊಷಿಸಿದರು. ಆಗ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರಸಭೆಯಿಂದ ಹೊರಗಡೆ ಬಂದ ಸಂಜೀವಕುಮಾರ ನೀರಲಗಿ ಅವರನ್ನು ಹೆಗಲ ಹೊತ್ತುಕೊಂಡು ಮೆರವಣಿಗೆ ನಡೆಸಿದರು.

    ಕೈ ಕೊಟ್ಟ ಪಕ್ಷೇತರ ಸದಸ್ಯರು: ನಗರಸಭೆಯಲ್ಲಿ ಬಿಜೆಪಿಯ ಗೇಮ್್ಲಾನ್ ಪ್ರಕಾರ ಕಾಂಗ್ರೆಸ್​ನ ಮೂವರು ಸದಸ್ಯರು ಬಂಧನ ಭೀತಿಯಿಂದ ಚುನಾವಣೆಯಿಂದ ಹೊರಗುಳಿಯುತ್ತಾರೆ. ಪಕ್ಷೇತರ 7 ಸದಸ್ಯರಲ್ಲಿ ನಾಲ್ವರು ಸದಸ್ಯರು ಬೆಂಬಲಿಸುತ್ತಾರೆ. ಶಾಸಕ ಹಾಗೂ ಸಂಸದರ ಮತ ಸೇರಿದರೆ ಕೊನೆಪಕ್ಷ ಸಮಬಲ ಸಾಧಿಸಿ ಅದೃಷ್ಟದಾಟದಲ್ಲಾದರೂ ಗೆಲುವು ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ, ಬಿಜೆಪಿಗರು ನಂಬಿದ್ದ ಪಕ್ಷೇತರ ಸದಸ್ಯರೆಲ್ಲ ಕೊನೆಕ್ಷಣದಲ್ಲಿ ಕೈಕೊಟ್ಟರು. ಇದರಿಂದ ಬಿಜೆಪಿಯ ತಂತ್ರಗಾರಿಕೆ ವಿಫಲವಾಗಿ ಮುಖಭಂಗ ಅನುಭವಿಸುವಂತಾಯಿತು.

    26 ತಿಂಗಳ ನಂತರ ಅಧಿಕಾರ ಭಾಗ್ಯ: ನಗರಸಭೆಗೆ ಸದಸ್ಯರಾಗಿ ಆಯ್ಕೆಯಾಗಿ 26 ತಿಂಗಳ ನಂತರ ಸದಸ್ಯರಿಗೆ ಅಧಿಕೃತವಾಗಿ ಅಧಿಕಾರದ ಭಾಗ್ಯ ದೊರೆತಂತಾಯಿತು. 15ಕ್ಕೂ ಅಧಿಕ ಸದಸ್ಯರು ಇದೇ ಮೊದಲ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದರು. ಆದರೆ, ಅಧಿಕಾರ ಭಾಗ್ಯವಿಲ್ಲದೇ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts