More

    ಸಿಗಂದೂರು ದೇವಾಲಯದಿಂದ ಅರಣ್ಯ ಒತ್ತುವರಿ ಆರೋಪ; ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ

    ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಹಸೀಲ್ದಾರರಿಂದ ಸ್ಥಳಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

    ಸಾಗರ ತಾಲೂಕಿನ ಕೆ.ಎಸ್. ಲಕ್ಷ್ಮೀನಾರಾಯಣ ಸೇರಿ ಮೂವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.

    ಅರ್ಜಿಯಲ್ಲಿ ಆರೋಪಿಸಿರುವಂತೆ ದೇವಾಲಯದಿಂದ ಅರಣ್ಯ ಭೂಮಿ ಒತ್ತುವರಿಯಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಸ್ಥಳೀಯ ತಹಸೀಲ್ದಾರರಿಂದ ಪರಿಶೀಲನೆ ನಡೆಸಬೇಕು. ಒಂದು ವೇಳೆ, ಒತ್ತುವರಿಯಾಗಿರುವುದು ಕಂಡು ಬಂದರೆ, ತಕ್ಷಣ ಅದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್ ಎರಡನೇ ವಾರಕ್ಕೆ ಮುಂದೂಡಿತು.

    ಇದೇ ವೇಳೆ, ಅರ್ಜಿ ಸಂಬಂಧ ಕಂದಾಯ ಇಲಾಖೆ, ಮುಜರಾಯಿ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಧಾರ್ಮಿಕ ಇಲಾಖೆಯ ಆಯುಕ್ತರು, ಶಿವಮೊಗ್ಗ ಜಿಲ್ಲಾಧಿಕಾರಿ, ಸಾಗರ ತಾಲೂಕು ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ದೇವಾಲಯದ ಟ್ರಸ್ಟಿ ರಾಮಪ್ಪ ಅವರಿಗೆ ನೋಟಿಸ್ ಜಾರಿಗೊಳಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು.

    ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಸಾಗರ ತಾಲೂಕಿನ ಕಳಸವಳ್ಳಿ ಗ್ರಾಮದ ಸರ್ವೇ ನಂ. 65ರ ಸರ್ಕಾರಿ ಜಮೀನನ್ನು ದೇವಸ್ಥಾನದ ಹೆಸರಿನಲ್ಲಿ ಒತ್ತುವರಿ ಮಾಡಲಾಗಿದೆ. ಈ ಪ್ರದೇಶ ಅಧಿಸೂಚಿತ ಶರಾವತಿ ಕಣಿವೆ ವನ್ಯಜೀವ ಧಾಮವಾಗಿದೆ. ಈ ಜಾಗವನ್ನು ಸರ್ಕಾರದ ವತಿಯಿಂದ ದೇವಾಲಯಕ್ಕೆ ಮಂಜೂರು ಮಾಡಲಾಗಿಲ್ಲ ಎಂದು ಸರ್ಕಾರವೇ ಹೇಳಿದೆ. 2020ರ ಅ.23ರಂದು ಶಿವಮೊಗ್ಗ ಡಿಸಿ ನೀಡಿರುವ ವರದಿಯಲ್ಲಿ ಸಹ ಒತ್ತುವರಿಯಾಗಿರುವುದನ್ನು ಒಪ್ಪಿಕೊಳ್ಳಲಾಗಿದೆ. ಆದರೆ, ಒತ್ತುವರಿ ತೆರವಿಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

    ಅರ್ಜಿದಾರರ ಆಕ್ಷೇಪವೇನು?: ಸಿಗಂದೂರು ಚೌಡೇಶ್ವರಿ ದೇವಾಲಯದ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ಆಡಳಿತ ಮಂಡಳಿಯ ಲೆಕ್ಕಪತ್ರ ಅನುಸಾರ ದೇವಸ್ಥಾನಕ್ಕೆ ವಾರ್ಷಿಕ 5 ಕೋಟಿ ಇದೆ. ಆದರೆ, ಲೆಕ್ಕವಿಲ್ಲದ ಆದಾಯ ನೂರು ಕೋಟಿಗೂ ಅಧಿಕವಿದೆ ಎನ್ನಲಾಗಿದ್ದು, ಆ ಹಣವನ್ನು ಟ್ರಸ್ಟ್ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೆಲ ಸಚಿವರು, ರಾಜಕಾರಣಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸಹ ಟ್ರಸ್ಟ್‌ನೊಂದಿಗೆ ಶಾಮೀಲಾಗಿದ್ದಾರೆ. ಇದರಿಂದ, ಸರ್ಕಾರದ ಅಡಳಿತ ಯಂತ್ರ ಸಹ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

    ಮನವಿ ಏನು?: ದೇವಾಲಯದ ಹೆಸರಿನಲ್ಲಿ ಆಗಿರುವ ಅರಣ್ಯ ಭೂಮಿ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಲು ಹಾಗೂ ದೇವಾಲಯದಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿರುವ ದೇವಾಲಯ ಹಾಗೂ ಅದಕ್ಕೆ ಸೇರಿದ ಆಭರಣ, ಹಣ, ಬ್ಯಾಂಕ್ ಖಾತೆ ಮತ್ತು ಸ್ಥಿರ ಮತ್ತು ಚರಾಸ್ತಿಯನ್ನು ಸುಪರ್ದಿಗೆ ಪಡೆಯಲು ಕಂದಾಯ ಇಲಾಖೆ ಹಾಗೂ ಮುಜರಾಯಿ ಇಲಾಖೆಗೆ ಆದೇಶಿಸಬೇಕು. ಅರಣ್ಯ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಜರುಗಿಸಿ, ನಾಶವಾಗಿರುವ ಅರಣ್ಯ ಪ್ರದೇಶವನ್ನು ಮತ್ತೆ ಅಭಿವೃದ್ಧಿಪಡಿಸಲು ತಪ್ಪಿತಸ್ಥರಿದಂದ ಪರಿಹಾರ ವಸೂಲಿ ಮಾಡಲು ಅರಣ್ಯ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts