More

    ಕುದುರೆ ರೇಸ್‌ಗೆ ಷರತ್ತುಬದ್ಧ ಅನುಮತಿ : ನಿರ್ಧಾರ ತಿಳಿಸಲು ಸರ್ಕಾರಕ್ಕೆ ಹೈ ಸೂಚನೆ

     ಬೆಂಗಳೂರು : ಬೆಂಗಳೂರಿನ ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) ಮೇ 25 ಮತ್ತು 26ರಂದು ಕುದುರೆ ರೇಸ್ ಚಟುವಟಿಕೆ ನಡೆಸಲು ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ಸೂಚಿಸಿದೆ.

    ಪರವಾನಗಿ ನವೀಕರಣಕ್ಕೆ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ಟರ್ಫ್ ಕ್ಲಬ್ ಮತ್ತು ರೇಸ್ ಕುದುರೆ ಮಾಲೀಕರ ಸಂಘ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ರಜಾಕಾಲದ ಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿತು.

    ವಿಚಾರಣೆ ವೇಳೆ ಬಿಟಿಸಿ ಮತ್ತು ರೇಸ್ ಕುದುರೆ ಮಾಲೀಕರ ಪರ ವಕೀಲರು, ಮಾರ್ಚ್ ಕೊನೆಯವರೆಗೂ ರೇಸಿಂಗ್ ಚಟುವಟಿಕೆ ನಡೆಸಲು ಪರವಾನಗಿ ಹೊಂದಿತ್ತು. ನಂತರ ಪರವಾನಗಿ ನವೀಕರಣಕ್ಕೆ ಕೋರಿ ಮನವಿ ಪತ್ರ ಸಲ್ಲಿಸಲಾಗಿದೆ. ಮೇ , ಜೂನ್ ಮತ್ತು ಜುಲೈ ತಿಂಗಳಲ್ಲಿ ಆನ್‌ಕೋರ್ಸ್ ಹಾಗೂ ಆಫ್‌ಕೋರ್ಸ್ ರೇಸಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಲು ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಆದರೆ, ಸರ್ಕಾರ ಈವರೆಗೂ ತಮ್ಮ ಮನವಿ ಪರಿಗಣಿಸಿಲ್ಲ. ಇದರಿಂದ ರೇಸ್ ಚಟುವಟಿಕೆ ನಡೆಸಲಾಗುತ್ತಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

    ಅಲ್ಲದೆ, ಮೇ, ಜೂನ್ ಮತ್ತು ಜುಲೈನಲ್ಲಿ ದೇಶದ ಬೇರೆಲ್ಲೂ ರೇಸ್ ನಡೆಯುವುದಿಲ್ಲ. ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಮಾತ್ರ ನಡೆಯುತ್ತದೆ. ದೇಶದೆಲ್ಲಡೆ ಇರುವ ರೇಸ್ ಕುದುರೆಗಳು ಬೆಂಗಳೂರಿಗೆ ಬರುತ್ತವೆ. ಮೈಸೂರು ರೇಸ್ ಕ್ಲಬ್‌ಗೆ ಸರ್ಕಾರ ಅನುಮತಿ ನೀಡಿದ್ದು, ಬಿಟಿಸಿಗೆ ಮಾತ್ರ ನೀಡಿಲ್ಲ. ಸರ್ಕಾರ ಪರವಾನಗಿ ನವೀಕರಿಸದ ಹಾಗೂ ಅನುಮತಿ ನೀಡದ ಕಾರಣಕ್ಕೆ ಆದಾಯ ಸಹ ನಷ್ಟವಾಗುತ್ತಿದೆ. ಈಗಾಗಲೇ ಸುಮಾರು 10 ಕೋಟಿ ರು. ನಷ್ಟ ಉಂಟಾಗಿದೆ. ಟರ್ಫ್ ಕ್ಲಬ್‌ನಲ್ಲಿ 800 ಕುದುರೆಗಳಿವೆ. ಅವುಗಳ ನಿರ್ವಹಣೆ ಮಾಡಬೇಕಿದೆ. ನೂರಾರು ಮಂದಿ ನೌಕರರರು ಇದ್ದಾರೆ. ಸರ್ಕಾರ ನಡೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರ ಜನರ ಜೀವನೋಪಾಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನ್ಯಾಯಪೀಠದ ವಿವರಿಸಿದರು.

    ಬಡಕುಟುಂಬಕ್ಕೆ ಹೊಡೆತ
    ಅರ್ಜಿದಾರರ ಮನವಿಗೆ ಆಕ್ಷೇಪಿಸಿದ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ರೇಸ್ ವೇಳೆ ಬೆಟ್ಟಿಂಗ್‌ನಲ್ಲಿ ಅವ್ಯವಹಾರ ನಡೆಸಲಾಗುತ್ತಿದೆ. ಇದರಿಂದ ಆಟೋಚಾಲಕರು ಸೇರಿ ಆರ್ಥಿಕವಾಗಿ ಬಡಕುಟುಂಬ ದುಡ್ಡು ಕಳೆದುಕೊಳ್ಳುತ್ತಿದ್ದು. ಸಂಕಷ್ಟ ಎದುರಿಸುವ ಸಂದರ್ಭಗಳು ಎದುರಾಗಿವೆ. ಕುದುರೆ ರೇಸ್ ನಿಂದಾಗಿ ಲಾಭ ಏನೂ ಇಲ್ಲವಾಗಿದ್ದು, ತುರ್ತು ನಿರ್ಧಾರ ಕೈಗೊಳ್ಳುವ ಅಗತ್ಯವೇನು ಇಲ್ಲ.

    ಬೆಟ್ಟಿಂಗ್ ಅವ್ಯವಹಾರ ಕುರಿತು ಕ್ಲಬ್ ಸಂಬಂಧಿಸಿದರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ವಾರ್ಷಿಕ 1,300 ಕೋಟಿ ರೂ ಆದಾಯ ಸಂಗ್ರಹಿಸಿದರೂ, ಅದನ್ನು ಸರ್ಕಾರದಿಂದ ಮರೆ ಮಾಚಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೇಸಿಂಗ್ ಚುಟುವಟಿಕೆಗೆ ಮಧ್ಯಂತರ ಅನುಮತಿ ನೀಡುವ ಬದಲು ಪರವಾನಗಿ ನವೀಕರಣದ ಬಗ್ಗೆಯೇ ತೀರ್ಮಾನ ಕೈಗೊಳ್ಳಲಿದೆ. ಅದಕ್ಕಾಗಿ ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts