More

    ಕೇಂದ್ರ ಬಿಜೆಪಿ ಸರ್ಕಾರದ ಕ್ರಮಕ್ಕೆ ಖಂಡನೆ

    ವಿಜಯಪುರ: ಲೋಕಸಭೆ ಹಾಗೂ ರಾಜ್ಯಸಭೆಯ ಉಭಯ ಸದನಗಳ 146 ಸಂಸದರನ್ನು ಅಮಾನತುಗೊಳಿಸಿರುವ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿಯ ಜನವಿರೋಧಿ ನೀತಿ ವಿರುದ್ಧ ಹರಿಹಾಯ್ದರು.

    ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದ ಮೇಲೆ ಬಿಜೆಪಿಗೆ ವಿಶ್ವಾಸ ಇಲ್ಲ. ರಾಷ್ಟ್ರದ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಮಾಡುತ್ತಿದೆ. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

    ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಈ ಸರ್ಕಾರ ವಿರೋಧ ಪಕ್ಷಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ. ಲೋಕಸಭೆ ಹಾಗೂ ರಾಜ್ಯಸಭೆಯ ಸಭಾಪತಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ವಿರೋಧ ಪಕ್ಷಗಳನ್ನು ನಿರ್ನಾಮ ಮಾಡಲು ಹೊರಟಿದೆ. ಜನವಿರೋಧಿ ನೀತಿ ಪ್ರಶ್ನೆ ಮಾಡಿದಾಗ ಹಿಂಬಾಗಿಲಿನಿಂದ ಸದಸ್ಯರನ್ನು ಅನರ್ಹಗೊಳಿಸುವ ತಂತ್ರ ಹೂಡುತ್ತಿದೆ. ಈ ಕ್ರಮ ದೇಶದ ದುರಂತಗಳಲ್ಲಿ ಒಂದು ಎಂದರು.

    ಭಾರತದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಸಂಸದರನ್ನು ಅಮಾನತು ಮಾಡಿದ ಉದಾಹರಣೆ ಇರಲಿಲ್ಲ. ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಅಮಾನತುಗೊಳಿಸಿದ್ದು, ಜನ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

    ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರೂ ನೋಡುತ್ತಿಲ್ಲ ಎನ್ನುವಂತೆ ಬಿಜೆಪಿ ಭಾವಿಸುತ್ತಿದೆ. ವಿರೋಧ ಪಕ್ಷಗಳನ್ನು ಹೊರಗಿಟ್ಟು, ಜನವಿರೋಧಿ ಬಿಲ್‌ಗಳನ್ನು ಮಂಡಿಸಿ ಅವುಗಳನ್ನು ಪಾಸ್ ಮಾಡಿಕೊಳ್ಳುವ ಇವರ ಹುನ್ನಾರವನ್ನು ದೇಶ ಗಮನಿಸಿದೆ. ಇವರ ಹುಳುಕನ್ನು ಯಾವಾಗ ಯಾವಾಗ ವಿರೋಧ ಪಕ್ಷ ಪ್ರಶ್ನೆ ಮಾಡಿದೆಯೋ ಆಗ ಇವರು ಈ ತರಹದ ಕೆಲಸ ಮಾಡಿದ್ದಾರೆ. ಇವರು ಈ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಜನವಿರೋಧಿ ನೀತಿಗಳ ಬಿಲ್‌ಗಳನ್ನು ಮಂಡಿಸಿ ಈ ದೇಶದ ಸಾಮರಸ್ಯಕ್ಕೆ ಧಕ್ಕೆ ತಂದೊಡ್ಡುವ ಪ್ರಯತ್ನ ಮಾಡುತ್ತಿದ್ದು, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇವರ ಈ ನೀತಿಯನ್ನು ಜನರ ಮುಂದೆ ಕೊಂಡೊಯ್ದು ಇವರಿಗೆ ತಕ್ಕಪಾಠ ಕಲಿಸುತ್ತದೆ. ಇವರ ಈ ಸರ್ವಾಧಿಕಾರಿ ಧೋರಣೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದರು.

    ಮುಖಂಡರಾದ ಕೆ.ಎಫ್. ಅಂಕಲಗಿ, ಆಜಾದ ಪಟೇಲ, ರಮೇಶ ಗುಬ್ಬೇವಾಡ, ಮಹ್ಮದರಫೀಕ ಟಪಾಲ, ಆರತಿ ಶಹಾಪೂರ, ಶಬ್ಬೀರ ಜಾಗೀರದಾರ, ಸಾಹೇಬಗೌಡ ಬಿರಾದಾರ ಮಾತನಾಡಿ ಬಿಜೆಪಿ ಕ್ರಮ ಖಂಡಿಸಿದರು.

    ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಚಂದ್ರಕಾಂತ ಶೆಟ್ಟಿ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಜಮೀರಅಹ್ಮದ ಬಕ್ಷಿ, ಕಾಂಗ್ರೆಸ್ ಮುಖಂಡ ಡಿ.ಎಲ್. ಚವ್ಹಾಣ, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಅಮಿತ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯ ದಿನೇಶ ಹಳ್ಳಿ, ಅಂಗ ಘಟಕಗಳ ಅಧ್ಯಕ್ಷರಾದ ಕೃಷ್ಣಾ ಕಾಮಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನಮಲ್ಲ ಸಾರವಾಡ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಸೈಯದ ಅಫ್ತಾಬ ಖಾದ್ರಿ, ಭಾರತಿ ಹೊಸಮನಿ, ಭಾರತಿ ನಾವಿ, ಮಂಜುಳಾ ಗಾಯಕವಾಡ, ಫಯಾಜ್ ಕಲಾದಗಿ, ಅಫ್ಜಲ್ ಜಾನವೆಕರ, ಶಂಕರಸಿಂಗ ಹಜೇರಿ, ಕನ್ನಾನ ಮುಶ್ರೀಫ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts