More

    ಫಾಜಿಲ್ ಹತ್ಯೆ ಆರೋಪಿಗಳ ಸಮಗ್ರ ವಿಚಾರಣೆ: ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ

    ಮಂಗಳೂರು: ಸುರತ್ಕಲ್‌ನ ಮಹಮ್ಮದ್ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದ್ದು, ಕಸ್ಟಡಿಗೆ ಪಡೆದು ಹತ್ಯೆಗೆ ಕಾರಣ ಸೇರಿದಂತೆ ವಿವಿಧ ವಿಚಾರಗಳ ಕುರಿತಂತೆ ತನಿಖಾಧಿಕಾರಿಗಳು ಆರೋಪಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

    ಪಂಚನಾಮೆ, ಸಾಕ್ಷೃಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರಕರಣದಲ್ಲಿ ಇನ್ನೂ ಎರಡು ವಾಹನಗಳನ್ನು ಬಳಸಲಾಗಿರುವ ಕುರಿತು ಮಾಹಿತಿ ಇದೆ. ಅವುಗಳನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳವಾರ ಅವರು ಸುದ್ದಿಗಾರರಿಗೆ ತಿಳಿಸಿದರು. ಸೋಮವಾರ ಬೆಳಗ್ಗೆ ಫಾಜಿಲ್ ಮನೆಗೆ ಭೇಟಿ ನೀಡಿದ್ದೆ, ಆದರೆ ಅಲ್ಲಿ ಮಹಿಳೆಯರು ಮಾತ್ರ ಇದ್ದಿದ್ದರಿಂದ ಮಾತನಾಡಲು ಸಾಧ್ಯವಾಗಿಲ್ಲ. ಅವರ ಕುಟುಂಬದ ಬಹುತೇಕರಲ್ಲಿ ನನ್ನ ಮತ್ತು ಹಿರಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ ಇದೆ. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವ ಮೊದಲು, ಅಂತಹ ಘಟನೆಗಳು ನಡೆದಿದ್ದರೆ ಗಮನಕ್ಕೆ ತರಬಹುದಿತ್ತು. ನಗರದ ಶಾಂತಿ ಸುವ್ಯವಸ್ಥೆ ಭಂಗ ತರುವ ಪ್ರಕರಣ ಆಗಿರುವುದರಿಂದ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

    ಜೈಲಲ್ಲಿ ರಾಜಾತಿಥ್ಯ ಆರೋಪ ಸುಳ್ಳು: ಹತ್ಯೆ ಪ್ರಕರಣದ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಆರೋಪ ಆಧಾರರಹಿತ ಎಂದು ಶಶಿ ಕುಮಾರ್ ಹೇಳಿದರು. ಸುರತ್ಕಲ್‌ನಲ್ಲಿ ಸೋಮವಾರ ಕೆಲವು ಪ್ರಮುಖರು ರಾಜಾತಿಥ್ಯದ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಕಸ್ಟಡಿಗೆ ಪಡೆದ ಬಳಿಕ ಅವರನ್ನು ಕಾನೂನಿನ ಪ್ರಕಾರ ತನಿಖೆ ನಡೆಸಲಾಗುತ್ತಿದೆ. ವಿಶೇಷ ಆತಿಥ್ಯ ನೀಡುವ ಪ್ರಶ್ನೆಯೇ ಬರುವುದಿಲ್ಲ. ಯಾವ ಆಧಾರದಲ್ಲಿ ಆ ರೀತಿ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts