More

    ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ

    ಬ್ಯಾಡಗಿ: ಪಟ್ಟಣದ ಒಳಚರಂಡಿ ಹಾಗೂ 24×7 ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದ್ದು, ತಾಂತ್ರಿಕ ಕೆಲಸಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು ಎಂದು ದಾವಣಗೆರೆ ಯುಜಿಡಿ ಯೋಜನಾ ನಿರ್ದೇಶಕ ರವೀಂದ್ರ ಮಲ್ಲಾಡದ ಸೂಚಿಸಿದರು.

    ಬುಧವಾರ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ನಿರ್ವಿುಸಿರುವ ಒಳಚರಂಡಿ, 24×7 ಯೋಜನೆ ಕಾಮಗಾರಿ ಹಾಗೂ ನೀರಿನ ಜಲಾಗಾರ ವೀಕ್ಷಿಸಿ ಮಾತನಾಡಿದರು.

    ನಾಲ್ಕು ವರ್ಷಗಳಿಂದ ಒಳಚರಂಡಿ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗಿದ್ದು, 65.45 ಕೋಟಿ ರೂ. ಅನುದಾನದಲ್ಲಿ ಸುಮಾರು 40 ಕೋಟಿ ರೂ. ಖರ್ಚಾಗಿದೆ. ಇನ್ನುಳಿದ ಹಣದಲ್ಲಿ ವಿವಿಧ ಯಂತ್ರಗಳನ್ನು ಅಳವಡಿಸಬೇಕಿದ್ದು, ಕೂಡಲೆ ಅಂದಾಜು ಪಟ್ಟಿಯಲ್ಲಿ ನಮೂದಿಸಿದಂತೆ ಪೂರ್ಣಗೊಳಿಸಬೇಕು. ಗುತ್ತಿಗೆದಾರರು ಯಾವುದೆ ಸಬೂಬು ಹೇಳದೆ 2021 ಸಂಕ್ರಾಂತಿ ಹಬ್ಬದ ಮುನ್ನ ಸಾರ್ವಜನಿಕರ ಬಳಕೆಗೆ ಸಿಗುವಂತೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

    ಸಹಾಯಕ ಕಾರ್ಯಪಾಲಕ ಅಧಿಕಾರಿ ನವೀನಕುಮಾರ ಎಚ್.ವಿ. ಮಾತನಾಡಿ, ಪಟ್ಟಣದ 23 ವಾರ್ಡ್​ಗಳು ಹಾಗೂ ಹೊಸ ಬಡಾವಣೆ ಸೇರಿ ಒಳಚರಂಡಿ ಕಾಮಗಾರಿಗೆ 65.47 ಕೋಟಿ ರೂ. ಮಂಜೂರಾಗಿದೆ. ಬಹುತೇಕ ಕಾಮಗಾರಿ ಮುಗಿದಿದ್ದು, ನೀರು ಚಾಲನೆ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. 23 ವಾರ್ಡ್​ಗಳಲ್ಲಿ ಪೈಪ್​ಲೈನ್ ಹಾಗೂ ಚೆಂಬರ್ ನಿರ್ವಿುಸಿದ್ದು, ಗಾಂಧಿನಗರ, ವಿದ್ಯಾನಗರ, ಬಸವೇಶ್ವರ ನಗರ, ನೆಹರು ನಗರಗಳಲ್ಲಿ ಪ್ರಾಯೋಗಿಕವಾಗಿ ನಳಗಳಿಗೆ ಸಂಪರ್ಕ ಕಲ್ಪಿಸಿ ಒಳಚರಂಡಿ ನೀರು ಹರಿಸಲು ಚಾಲನೆ ನೀಡಲಾಗಿದೆ. ಪಟ್ಟಣದ ಒಳಚರಂಡಿ ನೀರು ಹರಿದು ಸಂಗ್ರಹವಾಗಲು ದೊಡ್ಡ ಮಟ್ಟದ ನೀರು ಶುದ್ಧೀಕರಣ ಘಟಕವನ್ನು ತೆರೇದಹಳ್ಳಿ ಬಳಿ ನಿರ್ವಿುಸಲಾಗಿದೆ ಎಂದರು.

    ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಇಂಜಿನಿಯರ್ ಎಂ. ಉಮೇಶ, ಎ. ವೀರಾಚಾರ್ಯ, ಪುರಸಭೆ ಇಂಜಿನಿಯರ್ ಸಂಗಮೇಶ ಹಾದಿಮನಿ, ಸ್ವಚ್ಛತಾ ವಿಭಾಗದ ಮುಖ್ಯಸ್ಥ ರವಿಕೀರ್ತಿ ಶೆಟ್ಟಿ, ಮಹಾಂತೇಶ ಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts