More

    ಸಂಪೂರ್ಣ ಹದಗೆಟ್ಟುಹೋದ ರಸ್ತೆ

    ಬೋರಗಾಂವ: ಚಿಕ್ಕೋಡಿ-ಇಚಲಕರಂಜಿ ಅಂತಾರಾಜ್ಯ ಮಾರ್ಗ ಮಧ್ಯದ ಬೇಡಕಿಹಾಳ ಸರ್ಕಲ್‌ನಿಂದ ನೇಜ ಕ್ರಾಸ್‌ವರೆಗಿನ ರಸ್ತೆ ಮತ್ತು ಬೋರಗಾಂವವಾಡಿಯಿಂದ ಬೋರಗಾಂವ ವೃತ್ತದ ಪೆಟ್ರೋಲ್ ಬಂಕ್‌ವರೆಗಿನ ರಸ್ತೆ ಸತತ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದೆ. ಶೀಘ್ರ ರಸ್ತ್ತೆ ದುರಸ್ತಿ ಮಾಡುವಂತೆ ಶಮನೇವಾಡಿ, ಬೋರಗಾಂವ ಹಾಗೂ ಬೋರಗಾಂವವಾಡಿ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಬೇಡಕಿಹಾಳ ಸರ್ಕಲ್‌ನಿಂದ ನೇಜ ಕ್ರಾಸ್‌ವರೆಗೆ 3 ಕಿ.ಮೀ. ರಸ್ತೆ ಇದ್ದು, ಅದರಲ್ಲಿ 1200 ಮೀಟರ್ ನಿರ್ಮಾಣವಾಗಿದೆ. ಉಳಿದ ಕಾಮಗಾರಿ 1800 ಮೀಟರ್ ಬಾಕಿ ಉಳಿದಿದೆ. ಇದರಿಂದಾಗಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಅನುಕೂಲವಾಗುತ್ತಿದ್ದು, ಶೀಘ್ರ ರಸ್ತೆ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.

    ಬೋರಗಾಂವವಾಡಿಯಿಂದ ಬೋರಗಾಂವ ವೃತ್ತದ ಪೆಟ್ರೋಲ್ ಪಂಪ್‌ವರೆಗಿನ ಸುಮಾರು 3 ಕಿ.ಮೀ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಬೇಗ ರಸ್ತೆ ದುರಸ್ತಿಗೊಳಿಸುವ ಅಗತ್ಯವಿದೆ. ಕಾಮಗಾರಿ ಕಳಪೆಯಾಗಿದ್ದು, ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

    ಈ ರಸ್ತೆಯಲ್ಲಿ ಹಗಲು-ರಾತ್ರಿ ಬಸ್, ಲಾರಿಗಳು, ಖಾಸಗಿ ವಾಹನಗಳು ಓಡಾಡುತ್ತವೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಕೆಲ ತಿಂಗಳಲ್ಲಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದರಿಂದ ಕಾಮಗಾರಿ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಬೋರಗಾಂವವಾಡಿಯಿಂದ ಬೋರಗಾಂವ ಪೆಟ್ರೋಲ್ ಬಂಕ್‌ವರೆಗಿನ ರಸ್ತೆ ಹದಗೆಟ್ಟಿದ್ದರಿಂದ ರೈತರು, ವಿದ್ಯಾರ್ಥಿಗಳು, ಪ್ರಯಾಣಿಕರ ಜತೆ ವ್ಯಾಪಾರಸ್ಥರಿಗೂ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
    | ಅನಿಲ ಪಾಟೀಲ ಗ್ರಾಮಸ್ಥ

    ರಸ್ತೆಯಲ್ಲಿರುವ ತಗ್ಗು-ಗುಂಡಿ ಮುಚ್ಚಲು ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಮಳೆ ಸುರಿದ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸಲಾಗಿದೆ. ಮಳೆ ನಿಂತ ಮೇಲೆ ಡಾಂಬರೀಕರಣ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
    ವಿಜಯ ಸಂಗಪ್ಪಗೋಳ
    | ಲೋಕೋಪ ಗಿ ಇಲಾಖೆ ಅಧಿಕಾರಿ, ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts