More

    ನೀರಿನ ಸಮಸ್ಯೆ ದೂರು ಬಂದರೆ ಪಿಡಿಒಗಳೇ ಹೊಣೆ

    ಲಿಂಗಸುಗೂರು: ತಾಲೂಕಿನಾದ್ಯಂತ ಬರಗಾಲ ಆವರಿಸಿ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಬೇಸಿಗೆ ಬಿಸಿಲ ಬೇಗೆ ದಿನೇ ದಿನೆ ಹೆಚ್ಚುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ನೀಗಿಸಲು ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಅಧಿಕಾರಿಗಳಿಗೆ ಶಾಸಕ ಮಾನಪ್ಪ ವಜ್ಜಲ್ ತಾಕೀತು ಮಾಡಿದರು.

    ತಾಪಂ ಸಭಾಂಗಣದಲ್ಲಿ ನಾನಾ ಇಲಾಖೆ ಅಧಿಕಾರಿಗಳು ಮತ್ತು ಪಿಡಿಒಗಳ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳು, ತಾಂಡಾ, ದೊಡ್ಡಿಗಳ ಬಗ್ಗೆ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಮತ್ತು ಇಂಜಿನಿಯರ್‌ಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ತಹಸೀಲ್ದಾರ್ ಮತ್ತು ತಾಪಂ ಇಒಗೆ ವರದಿ ಸಲ್ಲಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಬಂದರೆ ಗ್ರಾಪಂ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 45 ಲಕ್ಷ ರೂ. ಅನುದಾನ ಲಭ್ಯವಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿ, ದೊಡ್ಡಿ, ತಾಂಡಾಗಳಲ್ಲಿ ಬೋರ್‌ವೆಲ್ ದುರಸ್ತಿ, ಹೊಸ ಬೋರ್‌ವೆಲ್ ಕೊರೆಯಿಸುವುದು ಅಥವಾ ಖಾಸಗಿಯಾಗಿ ನೀರು ಪಡೆಯುವುದು, ಯಾವುದೇ ಜಲಮೂಲವಿಲ್ಲದಿದ್ದರೆ ಅಂತಹ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಪಂ ಅಧಿಕಾರಿಗಳು ಸಮೀಕ್ಷೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.

    ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಏಪ್ರಿಲ್‌ವರೆಗೆ ಪೂರೈಸಲು ಕೆರೆಯಲ್ಲಿ ನೀರು ಲಭ್ಯವಿದೆ ಎಂದು ಪುರಸಭೆ ಸಿಬ್ಬಂದಿ ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಂಡು ಬಂದರೆ ಜಲಾಶಯದಿಂದ ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಹೇಳಿದರು.

    ಹಟ್ಟಿ ಮತ್ತು ಮುದಗಲ್‌ನಲ್ಲಿ ಕನಿಷ್ಠ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲು ಗಮನ ಹರಿಸಬೇಕೆಂದು ಅಲ್ಲಿನ ಮುಖ್ಯಾಧಿಕಾರಿಗಳಿಗೆ ಶಾಸಕ ವಜ್ಜಲ್ ತಾಕೀತು ಮಾಡಿದರು. ಹಟ್ಟಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು 50 ಎಚ್‌ಪಿ ಮೋಟಾರ್ ಪಂಪ್ ಇರುವುದರಿಂದ ನಾಲ್ಕೈದು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. 80 ಎಚ್‌ಪಿ ಮೋಟಾರ್ ಪಂಪ್ ಅಳವಡಿಸಲು ಅನುಮತಿ ನೀಡಬೇಕೆಂದು ಮುಖ್ಯಾಧಿಕಾರಿ ಮನವಿ ಮಾಡಿದರು. ಬರಗಾಲ ನಿರ್ವಹಣೆ ಮತ್ತು ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳು ಗಮನ ಹರಿಸಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts