More

    ಕನ್ನಡ ವಿಧೇಯಕ ಸಲಹೆಗೆ ಭೈರಪ್ಪ ನೇತೃತ್ವದಲ್ಲಿ ಸಮಿತಿ

    ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ’ವು ರಾಜ್ಯದಲ್ಲಿ ಕನ್ನಡ, ಕನ್ನಡಿಗ ಹಾಗೂ ಕನ್ನಡಪರ ವಾತಾವರಣ ಮೂಡಿಸುವ ಜತೆಗೆ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಇದನ್ನು ಇನ್ನಷ್ಟು ವಿಸõತವಾಗಿ ಭಾಷಾ ತಜ್ಞರು ಹಾಗೂ ಕಾನೂನು ಪಂಡಿತರಿಂದ ಪರಾಮರ್ಶೆಗೆ ಒಳಪಡಿಸಿ ತ್ವರಿತವಾಗಿ ಅನುಷ್ಠಾನಕ್ಕೆ ತರುವ ಅಗತ್ಯ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಪ್ರತಿಪಾದಿಸಿದ್ದಾರೆ.

    ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪರಿಷತ್ತು ನಿಜ ಅರ್ಥದಲ್ಲಿ ಕನ್ನಡದ ದೇವಾಲಯ ಆಗಬೇಕು. ಇಲ್ಲಿಗೆ ಎಲ್ಲ ಕನ್ನಡಿಗರು ಸುಲಭವಾಗಿ ಬಂದು ಹೋಗುವಂತಿರಬೇಕು. ಕರುನಾಡಿನ ಹೊರಗಿರುವ ಎಲ್ಲ ಕನ್ನಡ ಜನರನ್ನು ಕನ್ನಡಿಗರೆಂದೇ ಗುರುತಿಸಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಇಂತಹ ಹತ್ತು-ಹಲವು ವಿಚಾರಗಳಲ್ಲಿ ಎದ್ದಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಪರಿಷತ್ತು ಸರ್ಕಾರದೊಂದಿಗೆ ಒಟ್ಟಾಗಿ ಹೆಜ್ಜೆ ಹಾಕಲಿದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು. ‘ವಿಜಯವಾಣಿ’ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಕನ್ನಡ ಹಾಗೂ ಕನ್ನಡಪರ ವಿಚಾರಗಳ ಕುರಿತು ಕಸಾಪದ ನಿಲುವನ್ನು ಅವರು ಸ್ಪಷ್ಟಪಡಿಸಿದರು.

    ಉದ್ದೇಶಿತ ವಿಧೇಯಕದ ಕುರಿತು ಇತ್ತೀಚಿಗೆ ಕಸಾಪ ಕಚೇರಿಯಲ್ಲಿ ಸಾಹಿತಿಗಳು, ತಜ್ಞರ ಸಮ್ಮುಖದಲ್ಲಿ ಚಿಂತನಗೋಷ್ಠಿ ನಡೆದು ಅಭಿಪ್ರಾಯ ಸಂಗ್ರಹಿಸಲಾಗಿದೆ. ವಿಧೇಯಕದ ಸಲಹಾ ಸಮಿತಿಯಲ್ಲಿ ಕಸಾಪ ಅಧ್ಯಕ್ಷರಿಗೆ ಸ್ಥಾನ ನೀಡಬೇಕು. ಇಂತಹ ಇನ್ನಷ್ಟು ಅಂಶಗಳನ್ನು ಸೇರಿಸಿ ನಿರ್ಣಯದ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದೆ. ಸಮಿತಿ ನೀಡುವ ಮಾಹಿತಿಯನ್ನು ತ್ವರಿತವಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಇದರಿಂದ ಈ ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲು ಸಾಧ್ಯವಾಗುತ್ತದೆ. ಇದರ ಹೊರತಾಗಿಯೂ ಅಂಶಗಳನ್ನು ಸೇರಿಸಬೇಕಿದ್ದಲ್ಲಿ ತಿದ್ದುಪಡಿ ರೂಪದಲ್ಲಿ ಸೇರ್ಪಡೆಗೆ ಅವಕಾಶ ಇದ್ದೇ ಇದೆ ಎಂದು ಮಾಹಿತಿ ನೀಡಿದರು.

    ಸಾಹಿತ್ಯ ಸಮ್ಮೇಳನಕ್ಕೆ ಯುದ್ಧೋಪಾದಿ ಕೆಲಸ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಮುಂಬರುವ ಜ.6ರಿಂದ 8ರವರೆಗೆ ಮೂರು ದಿನ ನಿಗದಿಯಾಗಿದೆ. ಮುಖ್ಯಮಂತ್ರಿ ತವರು ಜಿಲ್ಲೆಯಾಗಿರುವ ಕಾರಣ ಸಮ್ಮೇಳವನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೆ ಕನ್ನಡ-ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನೊಳಗೊಂಡಂತೆ ಪೂರ್ವಭಾವಿ ಸಭೆ ನಡೆದಿದ್ದು, ವಿವಿಧ ಸಮಿತಿ ರಚಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಅ.27ರಂದು ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಿಗದಿಯಾಗಿದೆ. ಸರ್ಕಾರದಿಂದ ಅನುದಾನ ಪಡೆದು ಅಗತ್ಯ ಕೆಲಸಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುವುದು ಎಂದು ಮಹೇಶ ಜೋಶಿ ಹೇಳಿದರು.

    ನಾಲ್ವಡಿ, ಸರ್ ಎಂವಿ, ಮಿರ್ಜಾ ಇಸ್ಮಾಯಿಲ್ ಜನ್ಮದಿನಾಚರಣೆ: ಪರಿಷತ್ತಿನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನವನ್ನು ಪ್ರತಿವರ್ಷ ಆಚರಿಸಲಾಗುವುದು. ಇವರಲ್ಲಿ ಮಿರ್ಜಾ ಇಸ್ಮಾಯಿಲ್ ಜನ್ಮದಿನದ ಗೊಂದಲ ಇದ್ದು, ಅವರ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವಂತೆ ಅ.24ನ್ನು ಅಧಿಕೃತ ಎಂದು ಪರಿಗಣಿಸಲಾಗುವುದು.

    ಕನ್ನಡ ಕಲಿಸಲು ವಿಶೇಷ ಕಾರ್ಯಕ್ರಮ: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸಲು ಸದ್ಯದಲ್ಲೇ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮುಖ್ಯವಾಗಿ ಅಪಾರ್ಟ್​ವೆುಂಟ್​ಗಳಲ್ಲಿ ಹೆಚ್ಚು ಕನ್ನಡೇತರರಿರುವ ಕಾರಣ ಅಲ್ಲಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಇದಕ್ಕಾಗಿ ಭಾಷಾ ಪಂಡಿತರು, ಕನ್ನಡ ಪರ ಸಂಘಟನೆಗಳ ಸಹಕಾರ ಪಡೆಯಲಾಗುತ್ತದೆ.

    ಕಸಾಪ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇದು ರಾಜಕೀಯ ಪಕ್ಷ ಅಲ್ಲ. ಎಲ್ಲ ಜನರನ್ನು ಒಗ್ಗೂಡಿಸಿ ಕನ್ನಡದ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಸರ್ಕಾರ ಪರಿಷತ್ತಿನ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದೆ. ಹಾಗಂತ ಸರ್ಕಾರದಿಂದ ಆಗಬೇಕಿರುವ ಕೆಲಸ ಕಾರ್ಯಕ್ಕಾಗಿ ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲಲು ಸಾಧ್ಯವಿಲ್ಲ. ಪರಿಷತ್ತಿನ ಅಧ್ಯಕ್ಷರಿಗೆ ಘನತೆ-ಗೌರವ ಇದ್ದು, ಇದನ್ನು ಕನ್ನಡಿಗರು ನೀಡಿದ್ದಾರೆ. ಈ ಸ್ಥಾನಕ್ಕೆ ಚ್ಯುತಿ ಆಗುವಂತಿದ್ದರೆ ಸಚಿವ ಸ್ಥಾನಮಾನ ತ್ಯಜಿಸಲು ಸಹ ಸಿದ್ಧ.

    | ಡಾ.ಮಹೇಶ ಜೋಶಿ ಕಸಾಪ ಅಧ್ಯಕ್ಷ

    ಕನ್ನಡ ವಿಧೇಯಕ ಸಲಹೆಗೆ ಭೈರಪ್ಪ ನೇತೃತ್ವದಲ್ಲಿ ಸಮಿತಿ
    ಕಸಾಪ ಅಧ್ಯಕ್ಷರೊಂದಿಗೆ, ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಗೌರವ ಖಜಾಂಚಿ ಬಿ.ಎಂ. ಪಟೇಲ್ ಪಾಂಡು

    ಕನ್ನಡ ರಥ: ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡ ರಥ’ಕ್ಕೆ ಚಾಲನೆ ನೀಡುತ್ತಿದೆ. ಇದಕ್ಕಾಗಿ ಕೆಎಸ್​ಆರ್​ಟಿಸಿಯಿಂದ ಬಸ್ ಪಡೆದು ಅದನ್ನು ರಥದ ರೀತಿ ವಿನ್ಯಾಸಗೊಳಿಸಿ ಅದರಲ್ಲಿ ಕನ್ನಡದ ಭುವನೇಶ್ವರಿ ದೇವಿ ಪ್ರತಿಮೆ ಇರಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುವ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸುವಂತೆ ಜನಜಾಗೃತಿ ಮೂಡಿಸಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿ ಕ್ಷೇತ್ರದಲ್ಲಿರುವ ಭುವನೇಶ್ವರಿ ದೇವಾಲಯದಲ್ಲಿ ರಥಕ್ಕೆ ಚಾಲನೆ ನೀಡಲಾಗುವುದು. ಅಲ್ಲಿಂದ ಕೊಂಡೊಯ್ಯುವ ದೀಪದಿಂದ ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ದೀಪ ಬೆಳಗಿಸಲಾಗುತ್ತದೆ ಎಂದು ಡಾ.ಮಹೇಶ ಜೋಶಿ ಮಾಹಿತಿ ನೀಡಿದರು.

    ಸಾಹಿತ್ಯ ಸಮ್ಮೇಳನ ವಿಶೇಷ: 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಚಿಂತನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಗೋಷ್ಠಿಗಳಿಗೂ ಹೊಸ ರೂಪ ನೀಡಲಾಗುತ್ತದೆ. ಹಾವೇರಿ ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿರುವ ಕಾರಣ ಆರಂಭಿಕ ಗೋಷ್ಠಿಗೆ ಭಾವೈಕ್ಯತೆ ವಿಷಯವನ್ನೇ ಆಯ್ಕೆ ಮಾಡಲಾಗುತ್ತದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಉದ್ಯೋಗ ಸೇರಿ ಕನ್ನಡ, ಕನ್ನಡಿಗ, ಕರ್ನಾಟಕದ ಎಂಬ ಧ್ಯೇಯವನ್ನು ಹೊಂದಿರುತ್ತದೆ. ಮುಖ್ಯವಾಗಿ ಇದು ಪರಿಸರಸ್ನೇಹಿ ಸಮ್ಮೇಳನ ಆಗಲಿದ್ದು, ಪ್ಲಾಸ್ಟಿಕ್​ವುುಕ್ತ ಹಾಗೂ ಸ್ವಚ್ಛತೆಯಿಂದ ಕೂಡಿರಲಿದೆ. 86ನೇ ಸಮ್ಮೇಳನ ಆಗಿರುವುದರಿಂದ 86 ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, 86 ಗೌರವಾನ್ವಿತರನ್ನು ಸನ್ಮಾನಿಸಲಾಗುವುದು. ಪ್ರತಿ ಕನ್ನಡದ ಕುಟುಂಬ ಮನೆಗೆ ಕನ್ನಡ ದಿನಪತ್ರಿಕೆ ಹಾಕಿಸಿಕೊಳ್ಳುವ ಜತೆಗೆ ಕನ್ನಡದಲ್ಲೇ ಸಹಿ ಹಾಕುವುದು ಹಾಗೂ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಲು ಹೆಚ್ಚು ಮುತುವರ್ಜಿ ವಹಿಸಲು ಮನವಿ ಮಾಡಿಕೊಳ್ಳಲಾಗುತ್ತದೆ.

    ಕಸಾಪ ಧ್ವಜ ಪರಿಷ್ಕರಣೆ: ಕನ್ನಡ ಸಾಹಿತ್ಯ ಪರಿಷತ್ ಬಾವುಟವನ್ನು ಪರಿಷ್ಕರಿಸುವ ಕೆಲಸಕ್ಕೆ ಚಾಲನೆ ನೀಡಲು ಚಿಂತನೆ ನಡೆದಿದೆ. ಹಾಲಿ ಧ್ವಜವನ್ನು ಯಾವ ಆಧಾರದ ಮೇಲೆ ಮಾಡಲಾಗಿದೆ, ಯಾರು ಮಾಡಿದ್ದು ಎಂಬ ಬಗ್ಗೆ ಯಾವುದೇ ದಾಖಲಾತಿ ಇಲ್ಲ. ಈಗಿನ ಕಾಲಘಟ್ಟದಲ್ಲಿ ಕನ್ನಡ ಅಸ್ಮಿತೆಗೆ ಇನ್ನಷ್ಟು ಇಂಬು ಕೊಡುವ ನಿಟ್ಟಿನಲ್ಲಿ ಪರಿಷ್ಕರಣೆಗೆ ಕನ್ನಡಿಗರಿಂದ ಸಲಹೆ ಸೂಚನೆ ಪಡೆಯಲಾಗುತ್ತದೆ.

    ಪ್ರಮುಖಾಂಶಗಳು

    • ರಾಜ್ಯೋತ್ಸವ ದಿನ ಪ್ರತಿ ಮನೆ ಮೇಲೆ ಕನ್ನಡ ಬಾವುಟ ಹಾರಾಟ.
    • ಕಸಾಪ ಬಾವುಟ ಪರಿಷ್ಕರಣೆ, ಕನ್ನಡ ಬಾವುಟವನ್ನೇ ಹೊಸ ಧ್ವಜವಾಗಿಸಲು ಇಂಗಿತ.
    • ಪರಿಷತ್ತು ನಡೆಸುವ ಕಾವ, ಜಾಣ ಸಹಿತ ವಿವಿಧ ಪರೀಕ್ಷೆಗೆ ಹೊಸ ರೂಪ.
    • ಮುಂದಿನ ಕಸಾಪ ಅಧ್ಯಕ್ಷರ ಚುನಾವಣೆ ಆಪ್ ಮೂಲಕ ಮತದಾನಕ್ಕೆ ವ್ಯವಸ್ಥೆ.
    • ಎಲ್ಲ ಹಂತಗಳಲ್ಲಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ವಿಶೇಷ ಮುತುವರ್ಜಿ.
    • ಕನ್ನಡ ‘ಅನ್ನದ ಭಾಷೆ’ ಆಗಿಸುವ ನಿಟ್ಟಿನಲ್ಲಿ ಸರ್ಕಾರದಿಂದಲೇ ಪರಿಹಾರಕ್ಕೆ ಯತ್ನ.
    • ಹಿಂದಿ ಭಾಷೆ ಹೇರಿಕೆಯಿಂದಾಗುವ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರಕ್ಕೆ ಪಿಐಎಲ್.
    • ಪರಿಷತ್ತಿಗೆ 1 ಕೋಟಿ ಸದಸ್ಯತ್ವ ಗುರಿ ತಲು ಪಲು ವಿವಿಧ ಕಾರ್ಯಕ್ರಮ ಆಯೋಜನೆ.

    ‘ಅಪ್ಪು ಸರ್ ಕ್ಷಮೆ ಇರಲಿ’ ಎಂದ ರಿಷಬ್​ ಶೆಟ್ಟಿ; ದೂರದೂರಿನಿಂದಲೇ ಹೀಗೆನ್ನಲು ಕಾರಣ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts