More

    ಮಾವು ಮಂಡಿಯಲ್ಲಿ ಕಮಿಷನ್​ ದಂಧೆ, ಬಿಲ್​ ಕೇಳಿದ್ರೆ ಫಸಲು ಖರೀದಿಸಲ್ಲ!

    | ಗಂಗಾಧರ್​ ಬೈರಾಪಟ್ಟಣ ರಾಮನಗರ

    ಗಾಯದ ಮೇಲೆ ಬರೆ ಎಳೆಯುವುದು ಎಂದರೆ ಇದೇ ಇರಬೇಕು. ಈಗಾಗಲೇ ಇಳುವರಿ, ದರ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರಿಗೆ ಅಘೋಷಿತ ಕಮಿಷನ್​ ಭೂತ ಗಾಯದ ಮೇಲೆ ಉಪ್ಪು ಸುರಿಯುತ್ತಿದೆ. ಇನ್ನು ಮಾವು ಖರೀಸಿದವರಿಂದ ಅಧಿಕೃತ ರಸೀದಿ ಕೇಳಿದ್ರೆ ಕೊಡಲ್ಲ. ಬಿಲ್​ ಬೇಕೆಂದು ಬಲವಂತ ಮಾಡಿದರೆ ಬಿಳಿ ಚೀಟಿಯಲ್ಲಿ ಬರೆದು ಕೊಡ್ತಾರಷ್ಟೆ.

    ಇದು ರಾಮನಗರದ ಎಪಿಎಂಸಿ ಮಾವಿನ ಮಂಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ದಂಧೆ. ಮಾವು ಖರೀದಿಸುವ ವ್ಯಾಪಾರಿಗಳು ಶೇ.10 ಕಮಿಷನ್​ ದಂಧೆಯಲ್ಲಿ ತೊಡಗಿದ್ದಾರೆ. ಇದನ್ನು ಪ್ರಶ್ನಿಸಿದರೆ ಮಾವು ಖರೀದಿಸಲ್ಲ ಎನ್ನುತ್ತಾರೆ. ಬಾಡಿಗೆ ವಾಹನ ಮಾಡಿಕೊಂಡು ಫಸಲು ತರುವ ರೈತರು ವಾಪಸ್​ ಬೇರೆಡೆಗೆ ಕೊಂಡೊಯ್ಯುವ ಸ್ಥಿಯಲ್ಲೂ ಇರುವುದಿಲ್ಲ.

    ಬಿಲ್​ ಕೊಡಲ್ಲ: ಮಾರಾಟ ಮಾಡಿದ ನಂತರ ರೈತರು ಬಿಲ್​ ಕೊಡಿ ಎಂದು ಕೇಳಿದರೆ ಯಾವುದೇ ಮಾವಿನ ಮಂಡಿ ಮಾಲೀಕ ಅಧಿಕೃತ ಚೀಟಿ ನೀಡುವುದಿಲ್ಲ. ಒಂದು ವೇಳೆ ರೈತ ಬಲವಂತ ಮಾಡಿ ಕೇಳಿದರಷ್ಟೇ ಅವರಿಗೆ ರಸೀದಿ ದೊರೆಯುತ್ತದೆ. ಅದೂ ಬಿಳಿ ಚೀಟಿಯಲ್ಲಿ. ಇಲ್ಲಿ ಖರೀದಿಸಿದ ಮಾವಿನ ತೂಕ ಮತ್ತು ಪ್ರತಿ ಕೆ.ಜಿ. ಧಾರಣೆ ಹಾಗೂ ಒಟ್ಟು ಮೊತ್ತವನ್ನು ನಮೂದಿಸಲಾಗಿರುತ್ತದೆ. ಆದರೆ, ಎಲ್ಲಿಯೂ ಕಮಿಷನ್​ ರೂಪದಲ್ಲಿ ಪಡೆದ ಹಣ ನಮೂದಿಸುವುದೇ ಇಲ್ಲ.

    ಇದನ್ನೂ ಓದಿ ಹಿಂದು ಧರ್ಮಕ್ಕೆ ಮರಳುತ್ತಿವೆ ಮುಸ್ಲಿಂ ಕುಟುಂಬಗಳು!

    ತೂಕವೂ ಲೆಕ್ಕವಿಲ್ಲ: ಮತ್ತೊಂದೆಡೆ ಖರೀದಿಸುವ ಮಾವಿನ ತೂಕವೂ ಸರಿಯಾಗಿ ಇರುವುದಿಲ್ಲ ಎನ್ನುವುದು ರೈತರ ಆರೋಪ. ಪ್ರತಿ ಬುಟ್ಟಿಯಲ್ಲಿ ಸುಮಾರು 20ರಿಂದ 25 ಕೆಜಿ ಮಾವು ಇರುತ್ತದೆ. ಪ್ರತಿ ಕ್ರೇಟ್​ನ ಹಣ್ಣಿನ ತೂಕದಲ್ಲಿ ಸುಮಾರು 4 ಕೆ.ಜಿ. ವೇಸ್ಟ್​ ಎಂದು ತೆಗೆದು ಹಾಕಲಾಗುತ್ತದೆ. ಇದರಲ್ಲಿ ಕ್ರೇಟ್​ನ ತೂಕ ಹೆಚ್ಚೆಂದರೆ 2 ಕೆಜಿ. ಮತ್ತೆ 2 ಕೆಜಿ ಮಾವನ್ನು ಕಳಪೆ ಲೆಕ್ಕಾಚಾರಕ್ಕೆ ಸರಿದೂಗಿಸಿಕೊಳ್ಳುತ್ತಾರೆ. ಇನ್ನು ಮಾವು ತುಂಬಿದ ಪ್ರತಿ ಕ್ರೇಟ್ ನಲ್ಲೂ ತೂಕ ಹಾಕುವಾಗ ಅರ್ಧ/ಮುಕ್ಕಾಲು ಕೆಜಿ ಹೆಚ್ಚು ಬಂದರೂ ಅದನ್ನು ಪರಿಗಣಿಸುವುದೇ ಇಲ್ಲ. ಉದಾಹರಣೆಗೆ ಒಂದು ಕ್ರೇಟ್​ ಮಾವು ಇಪ್ಪತ್ತೈದೂವರೆ ಕೆಜಿ ತೂಗಿದರೆ ರೈತರ ಲೆಕ್ಕಕ್ಕೆ ಬರೆಯುವುದು ಕೇವಲ 21 ಕೆಜಿ.

    ಪ್ರಶ್ನಿಸಿದ್ರೆ ಖರೀದಿಸಲ್ಲ!: ಕಣ್ಣೆದುರೇ ನಡೆಯುವ ಕಮಿಷನ್​ ಮತ್ತು ತೂಕದಲ್ಲಿನ ವ್ಯತ್ಯಾಸದ ಬಗ್ಗೆ ರೈತರು ಪ್ರಶ್ನೆ ಮಾಡಿದರೆ ಮುಗಿದೇ ಹೋಯಿತು. ಆ ರೈತನ ಮಾವು ಮಾರಾಟ ಬಹುತೇಕ ಕಷ್ಟ. ಪ್ರಶ್ನೆ ಮಾಡುತ್ತಿದ್ದಂತೆ ಪರಕೀಯನಂತೆ ಕಾಣುವ ವ್ಯಾಪಾರಿಗಳು ಬೇಕಂತಲೇ ಖರೀದಿಗೆ ತಡ ಮಾಡುತ್ತಾರೆ. ಇಲ್ಲವೇ ಕಡಿಮೆ ಬೆಲೆಗೆ ಕೊಂಡುಕೊಳ್ಳುವ ಮೂಲಕ ರೈತರಿಗೆ ನಷ್ಟ ಉಂಟು ಮಾಡುತ್ತಾರೆ. ಈ ಎಲ್ಲ ಭಯದಿಂದ ಬಹುತೇಕ ರೈತರು ಮಾರುಕಟ್ಟೆಯಲ್ಲಿ ರಗಳೆ ನಮಗೇಕೆ ಎಂದು ಯಾವುದನ್ನೂ ಪ್ರಶ್ನೆ ಮಾಡದೆ ಹೋಗುತ್ತಾರೆ. ಚನ್ನಪಟ್ಟಣ, ತುಮಕೂರಿನ ಮಾರುಕಟ್ಟೆಯಲ್ಲೂ ಮಾವು ಬೆಳೆಗಾರರಿಂದ ಶೇ.10 ಕಮಿಷನ್​ ವಸೂಲಿ ಮಾಡುತ್ತಿದ್ದಾರೆ.

    ಮಾವು ಮಂಡಿಯಲ್ಲಿ ಕಮಿಷನ್​ ದಂಧೆ, ಬಿಲ್​ ಕೇಳಿದ್ರೆ ಫಸಲು ಖರೀದಿಸಲ್ಲ!
    ರೈತ ಹೇಮಂತ್​ಗೆ ಮಾವು ಖರೀದಿದಾರರು ಬಿಳಿ ಚೀಟಿಯಲ್ಲಿ ಬಿಲ್​ ನೀಡಿರುವುದು.

    ಪ್ರತಿ ಬುಟ್ಟಿಯಲ್ಲಿ ಹೆಚ್ಚುವರಿಯಾಗಿ ಮಾವು ತೆಗೆದುಕೊಂಡರು. ಒಟ್ಟು ಮಾರಾಟ ಹಣದ ಶೇ.10 ಕಮಿಷನ್​ ಕೊಡಲೇ ಬೇಕೆಂದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಾವು ಬೇಡ ಅಂದ್ರು. ವಿಧಿ ಇಲ್ಲದೆ ಕಮಿಷನ್ ಕೊಡಬೇಕಾಯಿತು. ಅಧಿಕೃತ ಬಿಲ್​ ಕೊಡಲಿಲ್ಲ. ಬಲವಂತ ಮಾಡಿದ್ದಕ್ಕೆ ಬಿಳಿ ಚೀಟಿಯಲ್ಲಿ ಬರೆದು ಕೊಟ್ಟರು.
    | ಹೇಮಂತ್ ಕುಮಾರ್​​, ಮಾವು ಬೆಳೆಗಾರ

    ಮಾರುಕಟ್ಟೆಯಲ್ಲಿ ಶೇ.10 ಕಮಿಷನ್​ ಪಡೆಯುತ್ತಿರುವ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಮಾವಿನ ಮಂಡಿಗಳಲ್ಲಿ ಕಮಿಷನ್​ ಪಡೆಯುತ್ತಿರುವ ಸಂಬಂಧ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.
    | ದೊರೆಸ್ವಾಮಿ ಅಧ್ಯಕ್ಷ, ಎಪಿಎಂಸಿ, ರಾಮನಗರ

    ಕಡಿವಾಣ ಎಂದು?: ರಾಮನಗರ ಎಪಿಎಂಸಿಯಲ್ಲಿ ಹಿಂದಿನಿಂದಲೂ ಬಿಳಿ ಚೀಟಿ ದಂಧೆ ನಡೆಯುತ್ತಿದೆ ಎನ್ನುವ ಆರೋಪವಿದೆ. ಇದನ್ನು ಆಡಳಿತ ಮಂಡಳಿ ನಿರಾಕರಿಸುತ್ತಲೇ ಇದೆ. ಆದರೆ, ಎಪಿಎಂಸಿಯಲ್ಲಿ ರೈತರ ಶೋಷಣೆ ಒಂದೇ ಛತ್ರಿಯಡಿಯಲ್ಲಿ ನಡೆಯುತ್ತಿದೆ. ಅದರಡಿ ನಿಂತವರು ಆರಾಮವಾಗಿದ್ದರೆ, ಬಿಸಿಲ ಝಳಕ್ಕೆ ಸಿಲುಕುವ ರೈತ ಮಾತ್ರ ಬಸವಳಿಯುತ್ತಿದ್ದಾನೆ.

    ಇದನ್ನೂ ಓದಿ ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts